ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೇರಿದ ಬಳಿಕ ಭಾರತದ ಭದ್ರತೆಗೆ ಬೆದರಿಕೆಯಾಗಿ ಪರಿಣಮಿಸಿದೆ. ಭಯೋತ್ಪಾದನೆ ವಿಚಾರದಲ್ಲಿ ಭಾರತ ಮಾತ್ರವಲ್ಲದೆ ದಕ್ಷಿಣ ಏಷ್ಯಾದ ಪ್ರಾದೇಶಿಕ ಭದ್ರತೆ ಹಾಗೂ ಶಾಂತಿಗೂ ಭಂಗ ತರೋ ಆತಂಕವಿದೆ. ಹೀಗಾಗಿ ಭಾರತ ತೆಗೆದುಕೊಂಡ ಮತ್ತೊಂದು ದಿಟ್ಟ ಕ್ರಮ ತಾಲಿಬಾನಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದಂತಾಗಿದೆ.
ಅಫ್ಘಾನಿಸ್ತಾನ… 20 ವರ್ಷಗಳ ಬಳಿಕ ಮತ್ತೆ ತಾಲಿಬಾನಿಗಳ ತೆಕ್ಕೆಗೆ ಬಿದ್ದಿದೆ. 2 ದಶಕಗಳಿಂದ ಅಮೆರಿಕ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಅಫ್ಘಾನಿಸ್ತಾನದಲ್ಲಿ ಜಾರಿಯಲ್ಲಿತ್ತು. ಅದ್ಯಾವಾಗ ಅಮೆರಿಕ ಸೇನೆ ಅಫ್ಘಾನ್ ನೆಲದಿಂದ ಜಾಗ ಖಾಲಿ ಮಾಡಿತೋ ತಾಲಿಬಾನಿಗಳು ಮತ್ತೆ ದೇಶವನ್ನು ತಮ್ಮ ಕೈವಶಮಾಡಿಕೊಂಡ್ರು. ಮಂಗನ ಕೈಗೆ ಸಿಕ್ಕ ಮಾಣಿಕ್ಯದಂತೆ ಅಧಿಕಾರ ಸಿಕ್ಕಿದ್ದೇ ತಡ ಹುಚ್ಚುಚ್ಚಾಗಿ ವರ್ತಿಸತೊಡಗಿದ್ರು. ಇವನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸ್ತಿದ್ದ ಭಾರತ ಸಮಯಕ್ಕೆ ತಕ್ಕಂತೆ ಎಚ್ಚರಿಕೆಗಳನ್ನು ಕೊಡುತ್ತಲೇ ಬಂದಿತ್ತು. ಯಾವಾಗ ಪ್ರಾದೇಶಿಕ ಭದ್ರತೆ ಅದ್ರಲ್ಲೂ ಪಾಕಿಸ್ತಾನದ ಜೊತೆ ಸೇರಿ ಭಾರತದ ಆಂತರಿಕ ಭದ್ರತೆಗೆ ಬೆದರಿಕೆಯಾಗುವಂಥಾ ಚಟುವಟಿಕೆಗಳ ಆರಂಭವಾಯ್ತೋ ಮೋದಿ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನಿಟ್ಟಿದೆ.
ಹೌದು, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಮರುಸ್ಥಾಪನೆಯಾದ ಬಳಿಕ ಪ್ರಾದೇಶಿಕ ಭದ್ರತೆಯದ್ದೇ ತಲೆನೋವಾಗಿದೆ. ಉಗ್ರ ಕೃತ್ಯಗಳ ಮೂಲಕ ಜಗತ್ತನ್ನೇ ನಡುಗಿಸಿದ್ದ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬರ್ತಿದ್ದಂತೆ ದಕ್ಷಿಣ ಏಷಿಯಾ ರಾಷ್ಟ್ರಗಳಿಗೆ ಅಭದ್ರತೆ ಕಾಡ್ತಿದೆ. ಅದ್ರಲ್ಲೂ ಭಾರತದ ಜೊತೆ ಸದಾ ಕಾಲುಕೆರೆದು ಜಗಳಕ್ಕೆ ನಿಲ್ಲೋ ಪಾಕಿಸ್ತಾನ ತಾಲಿಬಾನ್ ಜೊತೆ ಕೈಜೋಡಿಸೋ ಭೀತಿ ಭಾರತದ ಭದ್ರತೆಗೆ ಬೆದರಿಕೆ ಒಡ್ಡುವಂತಿದೆ. ಹೀಗಾಗಿ ಅಫ್ಘಾನಿಸ್ತಾನವನ್ನು ಬಳಸಿಕೊಂಡು ಮುಂದೆ ನಡೆಯಬಹುದಾದ ಎಲ್ಲಾ ದಾಳಿಯನ್ನು ಮನಸ್ಸಲ್ಲಿಟ್ಟಕೊಂಡ ಭಾರತ 8 ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಹತ್ವದ ಸಭೆ ನಡೆಸಿದೆ.
ಇನ್ನು ದೆಹಲಿಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ನೇತೃತ್ವದಲ್ಲಿ ನಡೆದ ಮಹತ್ವದ ಸಮಾವೇಶದಲ್ಲಿ ರಷ್ಯಾ, ಇರಾನ್, ಕಜಕಿಸ್ತಾನ್, ಕಿರ್ಗಿಸ್ತಾನ್, ಉಜ್ಬೆಕಿಸ್ತಾನ್ ತುರ್ಕ್ಮೆನಿಸ್ತಾನ್ ಹಾಗೂ ತಜಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಾಗವಹಿಸಿದ್ರು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಕಮ್ ಬ್ಯಾಕ್ ಆದ ಬಳಿಕ ಸಹಜವಾಗೇ ಭಯೋತ್ಪಾದನೆ, ಮೂಲಭೂತವಾದ ಹಾಗೂ ಡ್ರಗ್ಸ್ ಸಾಗಾಟ ಹೆಚ್ಚಾಗೋ ಆತಂಕ ಇರೋದ್ರಿಂದ ಪ್ರದೇಶಿಕ ಭದ್ರತೆ ಬಗ್ಗೆ ಎಲ್ಲಾ ದೇಶಗಳ ಭದ್ರತಾ ಸಲಹೆಗಾರರು ಆತಂಕ ವ್ಯಕ್ತಪಡಿಸಿದ್ರು. ಅಲ್ಲದೆ ಭಯೋತ್ಪಾದನಾ ಕೃತ್ಯಗಳಿಗೆ ಅಫ್ಘಾನಿಸ್ತಾನದ ನೆಲ ಬಳಕೆಯಾಗಬಾರದು ಅಂತಾ ಎಂಟು ರಾಷ್ಟ್ರಗಳ ಭದ್ರತಾ ಸಲಹೆಗಾರರು ಘೋಷಣೆ ಮಾಡಿದ್ರು.
ಆಗಸ್ಟ್ ತಿಂಗಳಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಕೈ ವಶ ಮಾಡಿಕೊಳ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ಆತಂಕ ಮನೆಮಾಡಿತ್ತು. ಉಗ್ರ ಸಂಘಟನೆಯಾದ ತಾಲಿಬಾನ್ ತೆಕ್ಕೆಗೆ ಅಫ್ಘಾನಿಸ್ತಾನ ಸಿಕ್ಕರೆ ಭಯೋತ್ಪಾದನೆ, ಮೂಲಭೂತವಾದ, ಡ್ರಗ್ಸ್ ಸಾಗಟಕ್ಕೆ ಯಾವುದೇ ನಿಯಂತ್ರಣ ಇರಲ್ಲ ಅನ್ನೋದು ದಕ್ಷಿಣ ಏಷ್ಯಾ ರಾಷ್ಟ್ರಗಳ ಆತಂಕ. ಈ ಎಲ್ಲಾ ಆತಂಕ ದೂರ ಮಾಡೋ ನಿಟ್ಟಿನಲ್ಲಿ ಭಾರತ ಸರ್ಕಾರ ಮಹತ್ವದ ಹೆಜ್ಜೆ ಮುಂದಿಟ್ಟಿದ್ದು, ತಾಲಿಬಾನ್ ಹಿಂಸೆಯ ಹಾದಿ ತುಳಿದ್ರೆ ಮೂಗು ದಾರ ಹಾಕಲು ಈಗಿಂದಲೇ ಸಿದ್ಧತೆ ನಡೆಸಿದೆ.