ಬೆಂಗಳೂರು:ಏ.೦9: ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಯುತ್ತಿದೆ. ಏಪ್ರಿಲ್ 7 ಮತ್ತು 8ರಂದು ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿ, ಅಂತಿಮವಾಗಿ ಪಟ್ಟಿ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿ ಸಿಕ್ಕಿತ್ತು. ಒಂದು ಕ್ಷೇತ್ರಕ್ಕೆ ಮೂವರಂತೆ ಅಭ್ಯರ್ಥಿಗಳನ್ನು ರಾಜ್ಯ ಸಮಿತಿ ಆಯ್ಕೆ ಮಾಡಿದ್ದು, ಅಂತಿಮ ಆಯ್ಕೆ ನಿರ್ಧಾರವನ್ನು ಹೈಕಮಾಂಡ್ಗೆ ಬಿಡಲಾಗಿತ್ತು. ಆದರೆ ಇದೀಗ ದಿಲ್ಲಿಯಲ್ಲೂ ಬಿಜೆಪಿ ಅಭ್ಯರ್ಥಿ ಆಯ್ಕೆ ಕಬ್ಬಿಣದ ಕಡಲೆ ಎನ್ನುವಂತಾಗಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಏಪ್ರಿಲ್ 8ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಬಿಜೆಪಿ ನಾಯಕರು ಬಿಡುಗಡೆ ಮಾಡಲು ವಿಫಲರಾಗಿದ್ದಾರೆ. ಇದಕ್ಕೆ ಕಾರಣ ಬಿಜೆಪಿಯಲ್ಲಿ ಬಂಡಾಯ ಭುಗಿಲೇಳುವ ಮುನ್ಸೂಚನೆ ಹಾಗು ಸಂತೋಷ್ ಹಾಗು ಬಿ.ಎಸ್ ಯಡಿಯೂರಪ್ಪ ಸಂಸದೀಯ ಮಂಡಳಿ ಸಭೆಯಲ್ಲಿ ಹಗ್ಗಾಜಗ್ಗಾಟ ಮಾಡುತ್ತಿರುವುದು.
ಆಪ್ತರಿಗೆ ಟಿಕೆಟ್ ಕೊಡಿಸಲು ನಾಯಕರ ಪಟ್ಟು..!
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹಾಗು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಡುವೆ ಟಿಕೆಟ್ಗಾಗಿ ಪೈಪೋಟಿ ಏರ್ಪಟ್ಟಿತ್ತು ಎನ್ನಲಾಗಿದೆ. ಸಂಸದೀಯ ಮಂಡಳಿ ಸಭೆಯಲ್ಲಿ ಟಿಕೆಟ್ಗಾಗಿ ಜಟಾಪಟಿ ನಡೆದಿದೆ ಎನ್ನಲಾಗಿದೆ. ತಮ್ಮ ಆಪ್ತರಿಗೆ ಟಿಕೆಟ್ ಕೊಡಬೇಕು ಎನ್ನುವ ಪಟ್ಟಿಯನ್ನು ಹೈಕಮಾಂಡ್ ಎದುರು ಇಟ್ಟಿದ್ದು, ಇಬ್ಬರನ್ನೂ ಸಮಾಧಾನ ಮಾಡುವ ಜೊತೆಗೆ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸವಾಗಿ ಏರ್ಪಟ್ಟಿದೆ. ಇಂದು ಭಾನುವಾರ ಕೂಡ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿ ಇಂದು ಅಥವಾ ನಾಳೆ (ಏಪ್ರಿಲ್ 10) ಟಿಕೆಟ್ ಘೋಷಣೆ ಮಾಡಲು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದೆ ಎನ್ನಲಾಗಿದೆ. ಆದರೂ ಬಂಡಾಯ ಸ್ಫೋಟ ಆಗುವ ಮುನ್ಸೂಚನೆ ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಸಿಕ್ಕಿದ್ದು ಬಂಡಾಯ ಶಮನಕ್ಕೆ ಯೋಜನೆ ರೂಪಿಸಲಾಗಿದೆ.
ಟಿಕೆಟ್ ಘೋಷಣೆಗೂ ಮುನ್ನವೇ ಸಂಧಾನಕ್ಕೆ ಚಾಲನೆ..!

ಬಿಜೆಪಿ ಪಟ್ಟಿಯಲ್ಲಿ ಯಾರ ಹೆಸರು ಇರುವುದಿಲ್ಲವೋ ಅಂತಹ ನಾಯಕರಿಗೆ ಕರೆ ಮಾಡಿ, ಪಕ್ಷದ ನಿರ್ಧಾರ ಹೇಳುವ ಜೊತೆಗೆ ಮುಂದಿನ ದಿನಗಳಲ್ಲಿ ಪಕ್ಷ ನಿಮ್ಮ ಜೊತೆಗೆ ಇರಲಿದೆ. ಯಾವ ಕಾರಣಕ್ಕ ಟಿಕೆಟ್ ಸಿಕ್ಕಿಲ್ಲ ಎಂದು ಮನವರಿಕೆ ಮಾಡುವ ಜೊತೆಗೆ ರಾಜ್ಯ ಹಾಗು ಕೇಂದ್ರ ನಾಯಕರು ಮಾಡಿಸಿರುವ ಸರ್ವೆ ರಿಪೋರ್ಟ್ ಏನು ಹೇಳುತ್ತಿದೆ, ಪಕ್ಷದ ಪಧಾಧಿಕಾರಿಗಳ ಮತದಾನದಲ್ಲಿ ಏನಾಗಿದೆ..? ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು. ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿದ ವಿಚಾರಗಳ ಬಗ್ಗೆಯೂ ತಿಳಿಸಲು ಸೂಚನೆ ಕೊಡಲಾಗಿದೆ. ಟಿಕೆಟ್ ಘೋಷಣೆ ಆದ ಬಳಿಕ ಬಂಡಾಯವೆದ್ದು ಪ್ರತಿಭಟನೆ ಆಕ್ರೋಶ ಹೊರಬಿದ್ದರೆ ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆ ಇದ್ದು, ಟಿಕೆಟ್ ಘೋಷಣೆಗೂ ಮುನ್ನವೇ ಕರೆ ಮಾಡಿ ಮಾತನಾಡಿ, ಟಿಕೆಟ್ ವಂಚಿತರನ್ನು ಸಮಾಧಾನ ಮಾಡಿ ಎಂದು ಹೈಕಮಾಂಡ್ ಸಲಹೆ ನೀಡಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಟಿ ರವಿಗೆ ಜವಾಬ್ದಾರಿ ನೀಡಲಾಗಿದೆ ಎನ್ನಲಾಗಿದೆ.
ಹೈಕಮಾಂಡ್ ಅಂಗಳದಲ್ಲಿ 150 ಕ್ಷೇತ್ರಗಳಲ್ಲಿ ಬಿಕ್ಕಟ್ಟು..!
ಒಟ್ಟು 224 ಕ್ಷೇತ್ರಗಳ ಪೈಕಿ ಬರೋಬ್ಬರಿ 150 ಕ್ಷೇತ್ರದಲ್ಲಿ ಇಬ್ಬರು ಆಕಾಂಕ್ಷಿಗಳಿದ್ದಾರೆ. ಆ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟಾಗ ಮತ್ತೋರ್ವ ಟಿಕೆಟ್ ತಪ್ಪಿದ ಬೇಸರಲ್ಲಿ ಬಂಡಾಯ ಮಾಡುವುದು ಸಹಜ. ಇಬ್ಬರಲ್ಲಿ ಯಾರಿಗೇ ಟಿಕೆಟ್ ಕೊಟ್ಟರು ಬಂಡಾಯ ಸಹಜ. ಚುನಾವಣೆಗೂ ಮುನ್ನ ಬಂಡಾಯ ಹೆಚ್ಚಾದ್ರೆ ಕಾಂಗ್ರೆಸ್, ಜೆಡಿಎಸ್ ಅದರ ಲಾಭ ಪಡೆಯುತ್ತವೆ. ಅಧಿಕಾರದಲ್ಲಿರುವ ಬಿಜೆಪಿ ಸುಳಬವಾಗಿ ಅಧಿಕಾರ ಬಿಟ್ಟುಕೊಡಬೇಕಾಗುತ್ತದೆ. ಸಂಧಾನ ಯಶಸ್ವಿಯಾದರೆ ಬಿಜೆಪಿ ಸರಳ ಬಹುಮತ ತಲುಪಬಹುದು ಎಂದು ನಾಯಕರು ಮಾತುಕತೆ ನಡೆಸಿದ್ದಾರೆ. ಬಹುಮುಖ್ಯವಾಗಿ ಬೆಳಗಾವಿಯಲ್ಲಿ ಸೃಷ್ಟಿಯಾಗಿರುವ ರಮೇಶ್ ಜಾರಕಿಹೊಳಿ ಹಾಗು ಲಕ್ಷ್ಮಣ ಸವದಿ ನಡುವಿನ ಸಮರದ ಬಗ್ಗೆ ಚರ್ಚೆ ಮಾಡಲಾಗಿದೆ. ಆದಷ್ಟು ಎಲ್ಲರನ್ನೂ ಸಮಾಧಾನ ಮಾಡಿ, ಮುಂದೆ ಪಕ್ಷದಲ್ಲಿ ಸ್ಥಾನಮಾನ ಸಿಗುವ ಭರವಸೆ ನೀಡುವುದಕ್ಕೂ ಹೈಕಮಾಂಡ್ ಹುಕ್ಕುಂ ಕೊಟ್ಟಿದೆಯಂತೆ. ಆದರೂ ಟಿಕೆಟ್ ಹಂಚಿಕೆಗೂ ಮುನ್ನವೇ ಬಂಡಾಯದ ಬಿಸಿ ತಟ್ಟಿರೋದು ಚುನಾವಣೆಯನ್ನು ಹಿನ್ನಡೆ ಉಂಟು ಮಾಡುವ ಭೀತಿ ಸೃಷ್ಟಿಸಿದೆ.
ಕೃಷ್ಣಮಣಿ