ಮುಂಬೈ: ಏರುಹಾದಿಯಲ್ಲೇ ಸಾಗಿರುವ ಹಣದುಬ್ಬರ ನಿಯಂತ್ರಣಕ್ಕೆ ತರಲು ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಐವತ್ತು ಮೂಲ ಅಂಶಗಳಷ್ಟು ಬಡ್ಡಿದರ (ಶೇ.0.50) ರಷ್ಟು ಏರಿಕೆ ಮಾಡಿದೆ. ಒಂದು ತಿಂಗಳಲ್ಲೇ ಆರ್ಬಿಐ ಎರಡನೇ ಬಾರಿಗೆ ಬಡ್ಡಿದರ ಏರಿಕೆ ಮಾಡುತ್ತಿದೆ.
ಶೇ.0.50ರಷ್ಟು ಏರಿಕೆಯೊಂದಿಗೆ ರೆಪೊದರ (ಆರ್ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಶೇ.4.90ಕ್ಕೆ ಏರಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಬಡ್ಡಿದರ ಏರಿಕೆ ಮಾಡುವ ಇಂಗಿತ ವ್ಯಕ್ತಪಡಿಸಿದೆ.
ಉಕ್ರೇನ್ – ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಸರಕುಗಳ ದರ ತೀವ್ರಗತಿಯಲ್ಲಿ ಏರುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಸರಕು ಸೇವೆಗಳ ದರ ಏರಿರುವುದರಿಂದ ಹಣದುಬ್ಬರ ಏರುಗತಿಯಲ್ಲಿದೆ. ಹಣದುಬ್ಬರ ತಗ್ಗಿಸುವ ಸಲುವಾಗಿ ರೆಪೊದರವನ್ನು ಶೇ.0.50ರಷ್ಟು ಏರಿಕೆ ಮಾಡಿರುವುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತದಾಸ್ ಪ್ರಕಟಿಸಿದರು.
ಇದಕ್ಕು ಮುನ್ನ ಆರ್ಬಿಐನ ಹಣಕಾಸು ನೀತಿ ಸಮಿತಿಯು ಮೂರು ದಿನಗಳ ಕಾಲ ದೇಶದ ಆರ್ಥಿಕತೆ, ಮುಖ್ಯವಾಗಿ ಏರುತ್ತಿರುವ ಹಣದುಬ್ಬರ ಕುರಿತಂತೆ ಸಮಾಲೋಚನೆ ನಡೆಸಿತು. ಗವರ್ನರ್ ಶಕ್ತಿಕಾಂತ್ ದಾಸ್ ಸೇರಿದಂತೆ ಸಮಿತಿಯ ಎಲ್ಲಾ ಆರು ಸದಸ್ಯರು ರೆಪೊದರ ಏರಿಕೆ ಮಾಡಲು ಒಮ್ಮತದಿಂದ ನಿರ್ಧರಿಸಿದ್ದಾರೆ. ಸದ್ಯಕ್ಕೆ ನಗದು ಮೀಸಲು ಪ್ರಮಾಣವನ್ನು ಯಥಾಸ್ಥಿತಿ ಕಾಪಾಡಿಕೊಂಡಿದೆ.
ರೆಪೊದರ ಏರಿಕೆಯೊಂದಿಗೆ ಗ್ರಾಹಕರು ಪಡೆದಿರುವ ಗೃಹಸಾಲ, ವಾಹನಸಾಲ, ವೈಯಕ್ತಿಕ ಸಾಲ, ಗೃಹೋಪಯೋಗಿ ವಸ್ತುಗಳ ಸಾಲ ಸೇರಿದಂತೆ ಎಲ್ಲಾ ಸಾಲಗಳ ಮೇಲಿನ ಬಡ್ಡಿದರ ಏರಿಕೆಯಾಗಲಿದೆ. ಅಂದರೆ, ಗ್ರಾಹಕರು ಈಗಾಗಲೇ ಪಡೆದಿರುವ ಸಾಲಗಳ ಮೇಲಿನ ಮಾಸಿಕ ಸಮಾನ ಕಂತುಗಳ (ಇಎಂಐ) ಮೊತ್ತವು ಹೆಚ್ಚಾಗಲಿದೆ.