ಹಣದುಬ್ಬರ ಸತತ ಏರುಹಾದಿಯಲ್ಲಿ ಸಾಗಿದ್ದರೂ ಬಡ್ಡಿದರ ಏರಿಕೆ ಮಾಡದಿರಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ಧರಿಸಿದೆ. ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ ಸಮಿತಿ ದ್ವೈಮಾಸಿಕ ಸಭೆಯಲ್ಲಿ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರವನ್ನು ಒಮ್ಮತದಿಂದ ಕೈಗೊಳ್ಳಲಾಗಿದೆ. ಪ್ರಸ್ತುತ ರೆಪೊದರ ಶೇ.4ರಷ್ಟು ಮತ್ತು ರಿವರ್ಸ್ ರೆಪೊದರ ಶೇ.3.35ರಷ್ಟಿದ್ದು, ಈ ದರವೇ ಮುಂದುವರೆಯಲಿದೆ.
ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಅನಿರೀಕ್ಷಿತವೇನೂ ಆಗಿರಲಿಲ್ಲ. ಮಾರುಕಟ್ಟೆ ತಜ್ಞರು ಡಿಸೆಂಬರ್ ತಿಂಗಳ ಸಭೆಯಲ್ಲೇ ಬಡ್ಡಿದರ ಏರಿಕೆ ನಿರೀಕ್ಷಿಸಿದ್ದರು. ಆದರೆ, ಆ ಹೊತ್ತಿಗೆ ಓಮಿಕ್ರಾನ್ ಸೋಂಕಿನ ಪರಿಣಾಮದ ಅಂದಾಜು ಇರಲಿಲ್ಲವಾದ್ದರಿಂದ ಬಡ್ಡಿದರ ಏರಿಕೆ ಮಾಡಿರಲಿಲ್ಲ. ಈ ಎರಡು ತಿಂಗಳ ಅವಧಿಯಲ್ಲಿ ಹಣದುಬ್ಬರ ಏರಿಕೆಯಾಗಿರುವುದರ ಜತೆಜತೆಗೆ ಆರ್ಥಿಕತೆ ಚೇತರಿಕೆಯು ಇನ್ನೂ ಸ್ಥಿರಗೊಂಡಿಲ್ಲ. ಹೀಗಾಗಿ ಆರ್ಥಿಕತೆ ಸ್ಥಿರವಾಗುವವರೆಗೂ ಬಡ್ಡಿದರ ಏರಿಕೆ ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಹಣಕಾಸು ಸಮಿತಿ ಸಭೆ ಬಂದಿದೆ.
ಆದರೆ, ಅಗತ್ಯ ಬಂದಾಗ ಬಡ್ಡಿದರವನ್ನು ಏರಿಕೆ ಮಾಡುವ ಮುಕ್ತ ಅವಕಾಶ ಇರುವ ನಿಲವನ್ನು ಮುಂದುವರೆಸಿದೆ. ಇದರರ್ಥ, ಒಂದು ವೇಳೆ ಹಣದುಬ್ಬರ ತೀವ್ರವಾಗಿ ಏರಿಕೆಯಾದರೆ, ಮುಂದಿನ ಹಣಕಾಸು ನೀತಿ ಸಮಿತಿ ಸಭೆಯವರೆಗೆ ಕಾಯದೇ, ಅದಕ್ಕೂ ಮುನ್ನವೇ ಬಡ್ಡಿದರವನ್ನು ಏರಿಸಲಿದೆ.
2023ನೇ ವಿತ್ತೀಯ ವರ್ಷದಲ್ಲಿ ಜಿಡಿಪಿ ಶೇ.7.8ರಷ್ಟಾಗಲಿದೆ. 2023ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ.17.2 ರಷ್ಟು, ದ್ವಿತೀಯ ತ್ರೈಮಾಸಿಕದಲ್ಲಿ ಶೇ.7 ತೃತೀಯ ತ್ರೈಮಾಸಿಕದಲ್ಲಿ ಶೇ.4.3 ನಾಲ್ಕನೇ ತ್ರೈಮಾಸಿಕದಲ್ಲಿ ಶೇ.4.5ರಷ್ಟಾಗಲಿದೆ ಎಂದು ಆರ್ಬಿಐ ಮುನ್ನಂದಾಜು ಮಾಡಿದೆ.
2022ನೇ ಸಾಲಿನಲ್ಲಿ ಹಣದುಬ್ಬರ ಪ್ರಮಾಣವು ಒಟ್ಟಾರೆ ಶೇ.5.3ರಷ್ಟು ಇರಲಿದೆ., 2023ರಲ್ಲಿ ಹಣದುಬ್ಬರ ಶೇ.4.5ರಷ್ಟಾಗಲಿದೆ ಎಂದು ಮುನ್ನಂದಾಜಿಸಿದೆ.
ಸಭೆ ನಂತರ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ವಿಷಯ ಪ್ರಕಟಿಸಿದರು. ಓಮಿಕ್ರಾನ್ ರೂಪಾಂತರಿಯಿಂದಾಗಿ ಜಾಗತಿಕ ಆರ್ಥಿಕತೆ ಚೇತರಿಕೆಯ ಅಸ್ಥಿರತೆ ಮುಂದುವರೆದಿದೆ. ಜಾಗತಿಕ ರಾಜಕೀಯ ಅಸ್ಥಿರತೆ, ಸರಕುಗಳ ದರ ಏರಿಕೆ ಮತ್ತಿತರ ಕಾರಣಗಳಿಂದಾಗಿ ಆರ್ಥಿಕ ಅಸ್ಥಿರತೆಯು ಮತ್ತಷ್ಟು ಕಾಲ ಮುಂದುವರೆಯಲಿದೆ. ಇವೆಲ್ಲದರ ನಡುವೆಯೂ ಭಾರತವು ಜಗತ್ತಿನಲ್ಲೇ ಅತ್ಯಂತ ತ್ವರಿತವಾಗಿ ಚೇತರಿಸಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜು ಮಾಡಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು.
ಕಳೆದ 21 ತಿಂಗಳಿಂದಲೂ ಬಡ್ಡಿದರ ಸಾರ್ವಕಾಲಿಕ ಕನಿಷ್ಠಮಟ್ಟದಲ್ಲೇ ಇದೆ. ಸುಧೀರ್ಘ ಅವಧಿಗೆ ಕನಿಷ್ಠ ಮಟ್ಟದ ಬಡ್ಡಿದರ ಕಾಯ್ದುಕೊಳ್ಳುವುದು ಅತ್ಯಪರೂಪ. ಈಗ ಕೋವಿಡ್ ಸಂಕಷ್ಟದಿಂದ ಆರ್ಥಿಕತೆ ಪಾರಾಗಲಿ ಎಂಬ ಕಾರಣಕ್ಕೆ ಕನಿಷ್ಠ ಮಟ್ಟದ ಬಡ್ಡಿದರ ಕಾಯ್ದುಕೊಳ್ಳಲಾಗಿತ್ತು. ಈಗಾಗಲೇ ಕಡಮೆ ಬಡ್ಡಿದರದ ಪರಿಣಾಮ ಮಾರುಕಟ್ಟೆಯಲ್ಲಿ ನಗದು ಹರಿವು ಹೆಚ್ಚಿದ್ದು, ಹಣದುಬ್ಬರ ಅಪಾಯ ಮಟ್ಟ ಮುಟ್ಟಿದೆ. ಚಿಲ್ಲರೆ ದರ ಹಣದುಬ್ಬರು ಶೇ.5.6ರಷ್ಟಿದ್ದು, ಸಗಟು ದರ ಹಣದುಬ್ಬರವು ಶೇ.13.5ರಷ್ಟಿದೆ. ಹಣದುಬ್ಬರ ಈ ಪ್ರಮಾಣದಲ್ಲಿ ಏರಿಕೆಯಾಗಿದ್ದಾಗಲೂ ಕನಿಷ್ಠ ಪ್ರಮಾಣದ ಬಡ್ಡಿದರ ಕಾಯ್ದುಕೊಳ್ಳುವುದು ದೇಶದ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆದರೆ, ಕೋವಿಡ್ ಸಂಕಷ್ಟದಿಂದ ಆರ್ಥಿಕತೆ ಪಾರಾಗುತ್ತಿರುವ ಹೊತ್ತಿನಲ್ಲಿ ಬಡ್ಡಿದರ ಏರಿಕೆ ಮಾಡಿದರೆ ಚೇತರಿಕೆಗೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ.
ಹಣದುಬ್ಬರ ನಿಯಂತ್ರಣ ಹೇಗೆ?
ಆದರೆ, ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡ ನಂತರವೂ ಸಂಭವನೀಯ ಹಣದುಬ್ಬರ ಪ್ರಮಾಣವನ್ನು ತಗ್ಗಿಸಿರುವುದು ಆರ್ಥಿಕತಜ್ಞರಲ್ಲಿ ಅಚ್ಚರಿ ಮೂಡಿಸಿದೆ. ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವುದೆಂದರೆ, ಹಣದುಬ್ಬರ ಏರಿಕೆಗೆ ಮುಕ್ತ ಅವಕಾಶ ಮಾಡಿಕೊಟ್ಟಂತೆಯೇ. ಹೀಗಾಗಿ 2023ರಲ್ಲಿ ಚಿಲ್ಲರೆ ದರ ಹಣದುಬ್ಬರ ಶೇ.4.5ರಷ್ಟೇ ಇರಲು ಚಮತ್ಕಾರ ನಡೆಯಬೇಕಷ್ಟೇ! ಇಲ್ಲವೇ ಬೇರೇನಾದರೂ ಮಾರ್ಗೋಪಾಯಗಳನ್ನು ಪ್ರಕಟಿಸಬೇಕು.
ಬಡ್ಡಿದರ ಯಥಾಸ್ಥಿತಿ ಪರಿಣಾಮಗಳೇನು?
ಆರ್ಬಿಐ ರೆಪೊದರ ಯಥಾಸ್ಥಿತಿ ಕಾಯ್ದುಕೊಂಡಿರುವುದರಿಂದ ಜನಸಾಮಾನ್ಯರಿಗೆ ಸಹಜವಾಗಿಯೇ ಅನುಕೂಲ ಆಗಲಿದೆ. ಮುಂದೆ ಪಡೆಯಲಿರುವ ಸಾಲಗಳ ಮೇಲಿನ ಬಡ್ಡಿದರ ಕನಿಷ್ಠಮಟ್ಟದಲ್ಲೇ ಇರಲಿದೆ. ಈಗ ಹಾಲಿ ಪಡೆದಿರುವ ಸಾಲಗಳ ಮೇಲಿನ ಬಡ್ಡಿದರವೂ ರೆಪೊದರಕ್ಕನುಗುಣವಾಗಿ ಇರುವುದರಿಂದ ಪಾವತಿಸಬೇಕಿರುವ ಮಾಸಿಕ ಸಮಾನ ಕಂತುಗಳ (ಇಎಂಐ) ಮೊತ್ತವು ಯಥಾಸ್ಥಿತಿ ಇರಲಿದೆ. ಅಂದರೆ, ಮಾಸಿಕ ಆದಾಯದಲ್ಲಿ ಬಡ್ಡಿ ಪಾವತಿಸುವ ಮೊತ್ತವನ್ನು ಹೆಚ್ಚಿಸಬೇಕಾದ ಅಗತ್ಯವಿಲ್ಲ. ಗೃಹ ಸಾಲ, ವಾಹನಸಾಲ, ವೈಯಕ್ತಿಕ ಸಾಲ, ಗೃಹೋಪಯೋಗಿ ವಸ್ತುಗಳ ಮೇಲಿನ ಸಾಲ ಸೇರಿದಂತೆ ಬಹುತೇಕ ಎಲ್ಲಾ ಸಾಲಗಳ ಮೇಲಿನ ಬಡ್ಡಿದರ ಯಥಾಸ್ಥಿತಿಯಲ್ಲಿರಲಿದ್ದು, ಜನಸಾಮಾನ್ಯರ ಅನುಭೋಗ ಹೆಚ್ಚಲಿದ್ದು, ಆರ್ಥಿಕತೆ ಚೇತರಿಕೆಗೆ ಪೂರಕವಾಗಲಿದೆ.