ಬರುವ ಉತ್ತರಪ್ರದೇಶದ ಚುನಾವಣೆ ನಿಮಿತ್ತ ಮೊದಲನೇ ಹಂತದ ಮತದಾನಕ್ಕು ಮುನ್ನ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತದಾರರು ಮತದಾನದ ವೇಳೆ ತಪ್ಪು ಮಾಡಿದರೆ ಮುಂದಿನ ದಿನಗಳಲ್ಲಿ ಉತ್ತರಪ್ರದೇಶ ಕೇರಳ, ಕಾಶ್ಮೀರ ಹಾಗೂ ಪಶ್ಚಿಮ ಬಂಗಾಳವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಯೋಗಿ ಸಂಯಮದಲ್ಲಿರುವ ಗಲಭೆಕೋರರು ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಭಯೋತ್ಪಾದಕರು ಬೆದರಿಕೆಗಳನ್ನು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರ್ಕಾರ ಎಲ್ಲ ಕಾರ್ಯಗಳನ್ನು ಬದ್ದತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಒತ್ತಿ ಹೇಳಿದ್ದಾರೆ.
ಮುಂದುವರೆದು, ಬಹಳ ದಿನಗಳಿಂದ ನನ್ನ ಮನದಾಳದಲ್ಲಿರುವ ಒಂದು ಸಂಗತಿಯನ್ನು ಹೇಳ ಬಯಸುತ್ತೇನೆ. ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಬಹಳಷ್ಟು ಬೆಳವಣಿಗೆಗಳು ನಡೆದಿವೆ, ನೀವು ಮತದಾನ ಮಾಡುವ ವೇಳೆ ಜಾಗರೂಕರಾಗಿ ಮತದಾನ ಮಾಡಿಲ್ಲ ಅಂದರೆ ಐದು ವರ್ಷಗಳ ಕಾಲ ಮಾಡಿದ್ದ ಶ್ರಮ ವ್ಯರ್ಥವಾಗುತ್ತದೆ ಎಂದು ಹೇಳಿದ್ದಾರೆ.
ನಿಮ್ಮ ಒಂದು ಮತ ನಮ್ಮ ಐದು ವರ್ಷಗಳ ಪ್ರಯತ್ನಕ್ಕೆ ಆರ್ಶೀವಾದವಾಗಿದೆ ನೀವು ಬಿಜೆಪಿಗೆ ನೀಡುವ ಒಂದೊಂದು ಮತವು ಭಯಮುಕ್ತ ಜೀವನಕ್ಕೆ ಭರವಸೆ ನೀಡುತ್ತದೆ ಎಂದು ಹೇಳಿದ್ದಾರೆ.
ಜಾಟ್ ಸಮುದಾಯದ ಪ್ರಾಬಲ್ಯ ಹೊಂದಿರುವ ಪಶ್ಚಿಮ ಯುಪಿಯ 58 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದ್ದು ಒಟ್ಟು 11 ಜಿಲ್ಲೆಗಳನ್ನು ಒಳಗೊಂಡಿದೆ.
403 ಸದಸ್ಯ ಬಲದ ಉತ್ತರಪ್ರದೇಶ ವಿಧಾನಸಭೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 10, 14, 20, 23, 27 ಮಾರ್ಚ್ 3 ಮತ್ತು 7ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಪಲಿತಾಂಶ ಹೊರ ಬೀಳಲಿದೆ.






