-ಕೃಷ್ಣಮಣಿ
ಮಾರ್ಚ್ 1, 2024ರ ಮಧ್ಯಾಹ್ನ 12.55ಕ್ಕೆ ಬಾಂಬ್ ಸ್ಫೋಟ ನಡೆದಿತ್ತು. ಮಟ ಮಟ ಮಧ್ಯಾಹ್ನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಬೆಂಗಳೂರಿಗರನ್ನು ಅಷ್ಟಾಗಿ ಕಾಡದೆ ಇದ್ದರೂ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ. ಪ್ರಕರಣ ನಡೆದು 5 ದಿನಗಳು ಕಳೆದರೂ ಆರೋಪಿಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇನ್ನು ಇದನ್ನು ದೊಡ್ಡ ದೊಡ್ಡ ಉಗ್ರ ಸಂಘಟನೆಗಳು ಮಾಡಿಸಿರುವ ಕೃತ್ಯ ಎಂದು ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ಉಗ್ರ ಸಂಘಟನೆಗಳು ಬಾಂಬ್ ಸ್ಫೋಟ ಸೇರಿದಂತೆ ಯಾವುದೇ ಕೃತ್ಯ ನಡೆಸಿದರೂ ಅದನ್ನು ಬಹಿರಂಗ ಮಾಡಿಕೊಂಡು ಕುಖ್ಯಾತಿ ಪಡೆಯುವ ಹಂಬಲದಲ್ಲಿ, ನಾವೇ ವಿಧ್ವಂಸಕ ಕೃತ್ಯ ಎಸಗಿದ್ದು ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಆದರೆ ಈ ಕೇಸ್ನಲ್ಲಿ ಇಲ್ಲೀವರೆಗೂ ಯಾವುದೇ ಸಂಘಟನೆ ಕೃತ್ಯವನ್ನು ಒಪ್ಪಿಕೊಳ್ಳಲು ಮುಂದೆ ಬಂದಿಲ್ಲ.
NIA ತನಿಖೆಯಲ್ಲಿ ಆರೋಪಿ ಸಿಕ್ಕಿ ಬೀಳ್ತಾನಾ..?
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (Notional Investigation Agency) ವಹಿಸಿಕೊಂಡಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ ಆಗಿರುವ ಕಾರಣಕ್ಕೆ ಆರೋಪಿ ಪತ್ತೆ ಹಚ್ಚುವ ಸಲುವಾಗಿ NIA ಅಖಾಡಕ್ಕೆ ಎಂಟ್ರಿ ಕೊಟ್ಟಿದೆ. ಕೇಂದ್ರ ಗೃಹ ಇಲಾಖೆ ಸೂಚನೆ ಅನ್ವಯ FIR ದಾಖಲು ಮಾಡಿಕೊಂಡಿರುವ NIA ಅಧಿಕಾರಿಗಳು, ಈಗಾಗಲೇ ಸ್ಫೋಟ ನಡೆದ ಸ್ಥಳಕ್ಕೆ ಆಗಮಿಸಿ ಹೆಚ್ಎಎಲ್ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಅಲ್ಲಾವುದ್ದೀನ್ ಬಳಿ ಮಾಹಿತಿ ಪಡೆಯುತ್ತಿದ್ದಾರೆ. ಜೊತೆಗೆ ರಾಮೇಶ್ವರಂ ಕೆಫೆಯಲ್ಲಿ ಸ್ಥಳ ಮಹಜರು ಕೂಡ ನಡೆಸಿದ್ದಾರೆ. ಆದರೆ ಆರೋಪಿ ಮಾಡಿರುವ ಮಾಸ್ಟರ್ ಪ್ಲ್ಯಾನ್ ತನಿಖೆಗೆ ಹಿನ್ನಡೆ ತಂದೊಡ್ಡಿದೆ ಎನ್ನುವುದು ತನಿಖಾ ಹೊಣೆ ಹೊತ್ತಿದ್ದ ಸಿಸಿಬಿ ಪೊಲೀಸ್ ಮೂಲಗಳ ಮಾಹಿತಿ.

ಬೆಂಗಳೂರಲ್ಲಿ ಸಿಸಿಟಿವಿಗಳಿಗೆ ಕಡಿಮೆ ಏನಿಲ್ಲ. ಪ್ರತಿಯೊಂದು ಅಂಗಡಿ ಮಳಿಗೆಗಳು, ಮನೆಗಳಲ್ಲೂ ಹೊರಭಾಗದಲ್ಲಿ ಸಿಸಿಟಿವಿ ಹಾಕಿರುತ್ತಾರೆ. ರಸ್ತೆಗಳಲ್ಲಿ ಪೊಲೀಸ್ರು ಹಾಕಿರುವ ಸಿಸಿಟಿವಿಗಳು ಕೂಡ ದೃಶ್ಯಗಳನ್ನು ಸೆರೆ ಹಿಡಿದಿರುತ್ತವೆ. ಆದರೂ ಬಾಂಬರ್ ಎಂದು ಶಂಕಿಸಲಾದ ವ್ಯಕ್ತಿ ಮೂರ್ನಾಲ್ಕು ಕಡೆಗಳಲ್ಲಿ ಮಾತ್ರ ಸೆರೆ ಸಿಕ್ಕಿದ್ದಾನೆ. ಅದೂ ಕೂಡ ಅಸ್ಪಷ್ಟ ಚಿತ್ರ. ಎಲ್ಲಿಯೂ ಸ್ಪಷ್ಟ ಮುಖಚರ್ಯೆ ಸಿಗದಂತೆ ಎಚ್ಚರಿಕೆ ವಹಿಸಿದ್ದಾನೆ. ಇನ್ನು ನೂರಾರು ಸಿಸಿಟಿವಿ ಪರಿಶೀಲಿಸಿದರೂ ಆತನ ಸುಳಿವಿಲ್ಲ. ಬಸ್ ನಿಲ್ದಾಣದ ಕಡೆಗೆ ಹೋದವನು ಮುಂದೆ ಎಲ್ಲಿ ಹೋದ ಅನ್ನೋದೇ ತಿಳಿಯದಾಗಿದೆ. ಬಿಎಂಟಿಸಿ ಬಸ್ನಲ್ಲಿ ಸಂಚಾರ ಮಾಡಿರಬಹುದು ಎನ್ನಲಾಗ್ತಿದೆ. ಆದರೆ ಸಿಸಿಟಿವಿ ಇಲ್ಲದ ಬಸ್ನಲ್ಲಿ ಹೋಗಿರುವ ಸಾಧ್ಯತೆಯೇ ಹೆಚ್ಚಾಗಿದೆ. ಆದರೂ ಆತನ ಪತ್ತೆಗೆ ಇಲ್ಲೊಂದು ಮಾರ್ಗವಿದೆ.
ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವ ಲಕ್ಷಾಂತರ ಮಂದಿಯಲ್ಲಿ ಸಾವಿರಾರು ಜನರ ವಾಹನದ ಡ್ಯಾಷ್ಬೋರ್ಡ್ ಹಾಗು ಹೆಲ್ಮೇಟ್ನಲ್ಲಿ ಕ್ಯಾಮೆರಾ ಹಾಕಿಕೊಂಡಿರುತ್ತಾರೆ. ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಮಾರ್ಗದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30 ರ ಒಳಗೆ ಓಡಾಡಿರುವ ವಾಹನ ಮಾಲೀಕರನ್ನು ಸಂಪರ್ಕ ಮಾಡಿ, ಕಾರಿನ ಡ್ಯಾಷ್ಬೋರ್ಡ್ನಲ್ಲಿರುವ ಕ್ಯಾಮೆರಾ ಪರಿಶೀಲಿಸಬೇಕಿದೆ. ಈ ಬಾಂಬರ್ ರಾಮೇಶ್ವರಂ ಕೆಫೆಗೆ ಬಾಂಬ್ ಇಡುವ ಮೂರ್ನಾಲ್ಕು ತಿಂಗಳ ಮುಂಚಿತವಾಗಿಯೇ ಬಂದು ಎಲ್ಲವನ್ನು ಗಮನಿಸಿ ಹೋಗಿರುವ ಸಾಧ್ಯತೆಯಿದೆ. ಅದೇ ಕಾರಣದಿಂದ ಪೊಲೀಸರಿಗೆ ಈ ಹಿಂದಿನ ಸಿಸಿಟಿವಿಗಳು ಲಭ್ಯ ಇಲ್ಲದೆ ಇರಬಹುದು. ಇನ್ನು ಎಲ್ಲಾ ಸಿಸಿಟಿವಿಗಳನ್ನು ಗಮನಿಸಿಯೇ ಆತ ತಪ್ಪಿಸಿಕೊಳ್ಳಲು ಯೋಜನೆ ರೂಪಿಸಿದ್ದಾನೆ. ಎಲ್ಲಿ ಕ್ಯಾಮೆರಾ ಇದೆ.. ಎಲ್ಲಿ ಕ್ಯಾಮೆರಾ ಇಲ್ಲಾ ಅನ್ನೋದನ್ನು ನೋಡಿಯೇ ಬ್ಲ್ಯೂ ಪ್ರಿಂಟ್ ಮಾಡಿರುವ ಸಾಧ್ಯತೆಯಿದೆ. ಆದರೆ ವಾಹನದಲ್ಲಿ ಇರುವ ಕ್ಯಾಮೆರಾ ಬಗ್ಗೆ ಆತ ಏನನ್ನೂ ಮಾಡಲು ಸಾಧ್ಯವಿಲ್ಲ. ಕುಂದಲಹಳ್ಳಿ ಮುಂಭಾಗ ಓಡಾಡಿರುವ ಜನರನ್ನು ಆಹ್ವಾನಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದರೆ ಅನುಕೂಲ ಆದೀತು.






