ಬೆಂಗಳೂರಿನಲ್ಲಿ ನಡೆದ ದೊಡ್ಡ ಪ್ರಮಾಣದ ಮತದಾರರ ಡೇಟಾ ಕಳ್ಳತನದ ಪ್ರಕರಣದ ಬಗ್ಗೆ ʼಪ್ರತಿಧ್ವನಿʼ ಮತ್ತು ದಿ ನ್ಯೂಸ್ ಮಿನಿಟ್ ತಂಡವು ಜಂಟಿಯಾಗಿ ನಡೆಸಿದ ತನಿಖಾ ವರದಿಯನ್ನು ಪ್ರಕಟಿಸಿದ ಐದು ತಿಂಗಳ ನಂತರ, ಭಾರತೀಯ ಚುನಾವಣಾ ಆಯೋಗದ (ಇಸಿಐ) ತನಿಖೆಯು ನಮ್ಮ ಸಂಶೋಧನೆಗಳನ್ನು ಸಮರ್ಥಿಸಿದೆ.
ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಐಎಎಸ್ ಅಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಅವರು ನಡೆಸಿದ ತನಿಖೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಹಲವು ಅಧಿಕಾರಿಗಳು ಚಿಲುಮೆ ಎಂಬ ಖಾಸಗಿ ಟ್ರಸ್ಟ್ಗೆ ಅಕ್ರಮ ಅನುಕೂಲಗಳನ್ನು ಮಾಡಿಕೊಟ್ಟು, ಮತದಾರರ ಮಾಹಿತಿ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಅಂಶ ಬಹಿರಂಗಗೊಂಡಿದೆ. ಟ್ರಸ್ಟ್ ವಿರುದ್ಧ ನೀಡಿದ ದೂರನ್ನು ವಿಫಲಗೊಳಿಸಲೂ ಯತ್ನಿಸಿದ್ದರು ಎಂಬ ಅಂಶವು ತನಿಖೆಯಲ್ಲಿ ಬಹಿರಂಗಗೊಂಡಿದೆ.
ಮಾತ್ರವಲ್ಲದೆ, ಚಿಲುಮೆ ಮತ್ತು ಬಿಜೆಪಿ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಕನ್ನಡದ ಪ್ರಮುಖ ಚಿತ್ರನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಡುವಿನ ನಂಟು ಕೂಡಾ ಈ ತನಿಖೆಯಲ್ಲಿ ಬಯಲುಗೊಂಡಿದೆ. ಈ ಅಕ್ರಮಗಳೊಡನೆ ʼಕಾಂತಾರʼ ಮತ್ತು ʼಕೆಜಿಎಫ್ʼ ನಿರ್ಮಾಣ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ನ ಪಾಲುದಾರಿಕೆಯೂ ಅಚ್ಚರಿಯನ್ನು ಉಂಟುಮಾಡಿದೆ.
ಮತದಾರರಿಂದ ಸಂಗ್ರಹಿಸಿರುವ ದತ್ತಾಂಶ ಎಲ್ಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಚೀನಾ ಅಥವಾ ಪೂರ್ವ ಯುರೋಪಿಯನ್ ಸರ್ವರ್ಗಳಲ್ಲಿ ಇದನ್ನು ಸಂಗ್ರಹಿಸಿರಬಹುದು ಎಂದು ತನಿಖಾ ವರದಿ ಹೇಳಿದೆ.
ಬೆಂಗಳೂರು ಮೂಲದ ಉದ್ಯಮಿ ರವಿಕುಮಾರ್ ಕೃಷ್ಣಪ್ಪ ಸ್ಥಾಪಿಸಿದ ಚಿಲುಮೆ ಟ್ರಸ್ಟ್, ಕ್ಷೇತ್ರ ಏಜೆಂಟರನ್ನು ಚುನಾವಣಾ ಅಧಿಕಾರಿಗಳಂತೆ ಬಿಂಬಿಸಿ ಬೆಂಗಳೂರಿನ ಮತದಾರರ ಡೇಟಾವನ್ನು ರಹಸ್ಯವಾಗಿ ಸಂಗ್ರಹಿಸಿರುವುದನ್ನು ನಮ್ಮ ತಂಡವು ಬಹಿರಂಗಗೊಳಿಸಿತ್ತು. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದು, ವಿಪಕ್ಷಗಳು ಈ ವರದಿ ಆಧಾರದಲ್ಲಿ ಸರ್ಕಾರವನ್ನು ತರಾಟೆಗೆ ಎಳೆದಿತ್ತು.
ಮತದಾರರ ಹಕ್ಕುಗಳ ಕುರಿತು ‘ಜಾಗೃತಿ ಮೂಡಿಸಲು’ ಖಾಸಗಿ ಟ್ರಸ್ಟ್ಗೆ ಅವಕಾಶ ನೀಡಿದ ಹೆಸರಿನಲ್ಲಿ ಮತದಾರರ ದತ್ತಾಂಶ ಕಳ್ಳತನಕ್ಕೆ ಅನುವು ಮಾಡಿಕೊಡಲಾಗಿತ್ತು.