ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣ ಪ್ರಕರಣದಲ್ಲಿ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪದ ಮೇಲೆ ಭಾರತಕ್ಕೆ ಬೇಕಾಗಿದ್ದ, ಸದ್ಯ ದೇಶ ಬಿಟ್ಟು ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿಯನ್ನು ಹಸ್ತಾಂತರಿಸುವ ಪರವಾಗಿ ಯುಕೆ ನ್ಯಾಯಾಲಯ ತೀರ್ಪು ನೀಡುವುದರೊಂದಿಗೆ ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿ ಆತನನ್ನು ದಾಖಲಿಸಲು ವಿಶೇಷ ಕೋಣೆಯನ್ನು ಸಿದ್ಧಪಡಿಸಲಾಗಿದೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೀರವ್ ಮೋದಿಯನ್ನು ಮುಂಬೈಗೆ ಕರೆತಂದ ನಂತರ, ಅವರನ್ನು ಬರಾಕ್ ಸಂಖ್ಯೆ 12 ರ ಮೂರು ಕೋಣೆಗಳಲ್ಲಿ ಯಾವುದಾದರೊಂದು ಕೋಣೆಯಲ್ಲಿ ಇರಿಸಲಾಗುವುದು, ಇದು ಹೆಚ್ಚಿನ ಭದ್ರತೆಯ ಬ್ಯಾರಕ್ ಆಗಿದೆ ಎಂದು ಜೈಲಿನ ಅಧಿಕಾರಿ ಹೇಳಿದ್ದಾರೆ.
“ನೀರವ್ ಮೋದಿಯವರನ್ನು ಜೈಲಿನಲ್ಲಿ ದಾಖಲಿಸುವ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ” ಎಂದು ಅವರು ಹೇಳಿದ್ದಾರೆ.

“ನೀರವ್ ಮೋದಿ ಎದುರಿಸುತ್ತಿರುವ ವಂಚನೆಯ ಆರೋಪಗಳಿಗೆ ಮನವರಿಕೆಯಾಗುವಂತಹ ಸಾಕ್ಷ್ಯಗಳಿವೆ, ಅವರನ್ನು ಭಾರತಕ್ಕೆ ಕಳಿಸಿದರೆ ಅವರಿಗೆ ನ್ಯಾಯದಾನದ ನಿರಾಕರಣೆಯಾಗುವುದಿಲ್ಲ” ಎಂದು ಕೋರ್ಟ್ ತನ್ನ ತೀರ್ಪು ನೀಡುವ ವೇಳೆ ಹೇಳಿತ್ತು. ಇದರೊಂದಿಗೆ, ಭಾರತಕ್ಕೆ ಹಸ್ತಾಂತರದ ವಿರುದ್ಧ ನೀರವ್ ಮೋದಿ ಸುಮಾರು ಎರಡು ವರ್ಷಗಳ ಕಾಲ ನಡೆಸಿದ ಕಾನೂನು ಹೋರಾಟ ಫಲಪ್ರದವಾಗಲಿಲ್ಲ.
ಮೋದಿಗೆ, ಆತನ ವಿರುದ್ಧದ ಆರೋಪಗಳ ಗಂಭೀರತೆಯಿಂದಾಗಿ ಪದೇ ಪದೇ ಜಾಮೀನು ನಿರಾಕರಿಸಲಾಗಿದೆ. 2019 ರ ಮಾರ್ಚ್ ನಲ್ಲಿ ಬಂಧನಕ್ಕೊಳಗಾದ ಮೋದಿಯನ್ನು ಲಂಡನ್ ಜೈಲಿನಲ್ಲಿ ಇರಿಸಲಾಗಿದೆ.
ಮಹಾರಾಷ್ಟ್ರ ಕಾರಾಗೃಹ ಇಲಾಖೆಯು 2019 ರಲ್ಲಿ ಜೈಲಿನ ಸ್ಥಿತಿ ಮತ್ತು ನೀರವ್ ಮೋದಿಯವರಿಗೆ ವಸತಿ ಸೌಲಭ್ಯಗಳ ಬಗ್ಗೆ ಕೇಂದ್ರದೊಂದಿಗೆ ಮಾಹಿತಿಯನ್ನು ಹಂಚಿಕೊಂಡಿತ್ತು. ನೀರವ್ ಮೋದಿಯವರ ಹಸ್ತಾಂತರ ಪ್ರಕ್ರಿಯೆಯು ಯುಕೆ ಯ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದರಿಂದ ಕೇಂದ್ರವು ಅದರ ಬಗ್ಗೆ ರಾಜ್ಯ ಗೃಹ ಇಲಾಖೆಯಿಂದ ಮಾಹಿತಿ ಕೋರಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ನೀರವ್ ಮೋದಿಗೆ ಒದಗಿಸಬಹುದಾದ ಸೌಲಭ್ಯಗಳ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಭರವಸೆ ಪತ್ರವನ್ನು ಸಲ್ಲಿಸಿತ್ತು, ನೀರವ್ ಮೋದಿಯವರನ್ನು ಇರಿಸುವ ಸೆಲ್‌ನಲ್ಲಿ ಬಂಧಿತರ ಸಂಖ್ಯೆ ಕಡಿಮೆ ಇರುತ್ತದೆ ಎಂದು ಜೈಲು ಇಲಾಖೆ ಭರವಸೆ ನೀಡಿತ್ತು.
ಬ್ಯಾರಕ್‌ನಲ್ಲಿ ದಾಖಲಾದರೆ, ನೀರವ್ ಮೋದಿಯವರಿಗೆ ಮೂರು ಚದರ ಮೀಟರ್ ವೈಯಕ್ತಿಕ ಜಾಗ ಸಿಗುವ ಸಾಧ್ಯತೆ ಇದೆ, ಅಲ್ಲಿ ಹತ್ತಿ ಚಾಪೆ, ದಿಂಬು, ಬೆಡ್‌ಶೀಟ್ ಮತ್ತು ಕಂಬಳಿ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
“ನೀರವ್ ಮೋದಿ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ನೀರವ್ ಮೋದಿ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಮತ್ತು ಮಾನಸಿಕ ಆರೋಗ್ಯ ಆರೈಕೆ ಸಿಗಲಿದೆ ” ಎಂದು ಬ್ರಿಟನ್ ಕೋರ್ಟ್ ನ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಜಿ ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದ ಆದೇಶದಲ್ಲಿ ತಿಳಿಸಿದ್ದರು.





