ಕೋವಿಡ್ ಸೋಂಕಿತರ ಸಂಖ್ಯೆ ನೀಡುವಾಗ ಪಾರದರ್ಶಕವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.
ಕೋವಿಡ್ ಸೋಂಕಿನ ಕುರಿತು ಸರ್ಕಾರಗಳು ತಪ್ಪಾದ ಅಂಕಿ ಅಂಶಗಳು ನೀಡುತ್ತಿವೆಯೆಂಬ ಅನುಮಾನಗಳು ಶಕ್ತವಾಗುತ್ತಿರುವಂತೆಯೇ ಪ್ರಧಾನಿ ಮೋದಿ ಅವರು ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಸಲಹೆ ನೀಡಿದ್ದಾರೆ. ಗುಜರಾತಿನಲ್ಲಿ ಮರಣ ಪ್ರಮಾಣ ಪತ್ರ ವಿತರಿಕೆಯಾದ ಸಂಖ್ಯೆಗೂ ಕೋವಿಡ್ ಸಾವುಗಳಲ್ಲಿ ನಮೂದಾಗಿರುವ ಸಾವಿನ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸ ಇರುವುದು ಪತ್ತೆಯಾದ ಬೆನ್ನಲ್ಲೇ ಪ್ರಧಾನಿಯ ಈ ಸಲಹೆ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಲಸಿಕೆ ನೀಡಿಕೆ ಮತ್ತು ಕೋವಿಡ್ ಪರಿಸ್ಥಿತಿಗೆ ಸಂಬಂಧಿಸಿ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ, ಸೋಂಕಿತರ ಸಂಖ್ಯೆ ಹೆಚ್ಚಿದ್ದಲ್ಲಿ ಕಾರ್ಯನಿರ್ವಹಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಭೀತಿಯಿಂದ ಅದನ್ನು ಮರೆಮಾಚಬಾರದು. ಯಾವುದೇ ಒತ್ತಡಕ್ಕೆ ಒಳಗಾಗದೆ ಪಾರದರ್ಶಕವಾಗಿ ಕೋವಿಡ್ ಕುರಿತಾದ ಅಂಕಿಅಂಶಗಳನ್ನು ನೀಡಬೇಕು ಎಂದಿದ್ದಾರೆ.
ಅಲ್ಲದೆ, ಸೋಂಕು ಪತ್ತೆ ಪರೀಕ್ಷೆಯನ್ನು ಹೆಚ್ಚಿಸುವಂತೆಯೂ ಮೋದಿ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ. ಹೆಚ್ಚು ಪ್ರಕರಣಗಳು ಪತ್ತೆಯಾಗುವ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕು ಎಂದೂ ಅವರು ಹೇಳಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಆಮ್ಲಜನಕ ಪೂರೈಕೆಯನ್ನು ಖಾತ್ರಿಗೊಳಿಸುವ ವಿತರಣಾ ಯೋಜನೆಯನ್ನು ರೂಪಿಸಬೇಕು ಎಂದು ನಿರ್ದೇಶಿಸಿದ ಮೋದಿ, ಆಮ್ಲಜನಕ ಸಾಂದ್ರಕಗಳಂತಹ ವೈದ್ಯಕೀಯ ಸಲಕರಣೆಗಳ ಕಾರ್ಯಾಚರಣೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯ ತರಬೇತಿ ನೀಡಬೇಕು ಎಂದು ಹೇಳಿದ್ದಾರೆ. ಅಂತಹ ವೈದ್ಯಕೀಯ ಸಾಧನಗಳ ಸುಗಮ ಕಾರ್ಯಾಚರಣೆಗೆ ವಿದ್ಯುತ್ ಸರಬರಾಜನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿದೆ.
ಕೋವಿಡ್-19 ಮೊದಲ ಅಲೆಯಲ್ಲಿ ಗ್ರಾಮೀಣ ಪ್ರದೇಶಗಳು ಹೆಚ್ಚಿನ ಭಾದಿತವಾಗಿರಲಿಲ್ಲ. ಆದರೆ, ಎರಡನೇ ಅಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಗ್ರಾಮೀಣ ಪ್ರದೇಶಗಳೂ ಗಂಭೀರ ಪರಿಣಾಮ ಎದುರಿಸುತ್ತಿವೆ. ಎಲ್ಲಾ ಅಗತ್ಯ ಸಲಕರಣೆಗಳೊಂದಿಗೆ ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರನ್ನು ಬಲಪಡಿಸಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.