ಆಮ್ಲಜನಕ ಘಟಕ ಸ್ಥಾಪನೆಗೆ ಪಿಎಂ ಕೇರ್ಸ್ ಹಣ: ಸತ್ಯವೆಷ್ಟು? ಸುಳ್ಳೆಷ್ಟು?

[Sassy_Social_Share]

ದೇಶದಲ್ಲಿ ಸಂಭವಿಸುತ್ತಿರುವ ಕರೋನಾ ಮಾರಣಹೋಮಕ್ಕೆ ವಾಸ್ತವವಾಗಿ ಕರೋನಾ ವೈರಸ್ ದಾಳಿಯ ತೀವ್ರತೆಗಿಂತ, ಸಕಾಲದಲ್ಲಿ ಆಮ್ಲಜನಕ ಸಿಗದಿರುವುದು, ಆಸ್ಪತ್ರೆಯಲ್ಲಿ ಹಾಸಿಗೆ ಮತ್ತು ಚಿಕಿತ್ಸೆ ಸಿಗದಿರುವುದು ಸೇರಿದಂತೆ ವ್ಯವಸ್ಥೆಯ ಲೋಪವೇ ಕಾರಣ ಎಂಬುದನ್ನು ಯಾರೂ ತಳ್ಳಿಹಾಕಲಾಗದು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಕರೋನಾ ಬಿಕ್ಕಟ್ಟು ನಿರ್ವಹಣೆಯ ವಿಷಯದಲ್ಲಿ ಹೆಜ್ಜೆ ಹೆಜ್ಜೆಗೂ ಎಡವಿದ, ಹೊಣೆಗೇಡಿತನ ಪ್ರದರ್ಶಿಸಿದ ಪರಿಣಾಮ ಇಂದು ಇಡೀ ದೇಶ ಸೂತಕದ ಮನೆಯಾಗಿ ಪರಿವರ್ತನೆಯಾಗಿದೆ. ಇತಿಹಾಸದಲ್ಲೇ ಕಂಡುಕೇಳರಿಯದ ಪ್ರಮಾಣ ಜೀವ ಹಾನಿ ಮತ್ತು ಆಸ್ತಿಪಾಸ್ತಿ ಹಾನಿ(ಅವೈಜ್ಞಾನಿಕ ಮತ್ತು ಅವಿವೇಕಿತನದ ಲಾಕ್ ಡೌನ್ ನಿಂದಾಗಿ)ಯ ಬೆಲೆ ತೆರಬೇಕಾಗಿದೆ. ಕರೋನಾ ವೈರಾಣು ದಾಳಿಗೆ ಪ್ರತಿಯಾಗಿ ದೇಶದ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸುವುದನ್ನು ಮರೆತು ಚುನಾವಣಾ ರ್ಯಾಲಿಗಳಲ್ಲಿ ಮುಳುಗಿದ ಪ್ರಧಾನಿ ಮೋದಿ ಮತ್ತು ಸಿಎಂ ಯಡಿಯೂರಪ್ಪ ಅವರ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನಕ್ಕೆ ಇಂದು ದೇಶವ್ಯಾಪಿ ಸಾವಿನ ರ್ಯಾಲಿಗಳು ಕೇಕೆ ಹಾಕುತ್ತಿವೆ. ಆ ವೈಫಲ್ಯ ಮುಚ್ಚಿಕೊಳ್ಳಲು ಗಾಯದ ಮೇಲೆ ಬರೆ ಎಳೆದಂತೆ ಲಾಕ್ ಡೌನ್ ಘೋಷಿಸಿ ಜನರ ಜೀವದ ಜೊತೆ ಬದುಕು, ದುಡಿಮೆಯನ್ನೂ ಕಿತ್ತುಕೊಳ್ಳುವ ಪಾಶಾವೀಕೃತ್ಯ ಪ್ರದರ್ಶಿಸಲಾಗುತ್ತಿದೆ.

ಈ ನಡುವೆ, ಆಮ್ಲಜನಕದ ಕೊರತೆಯಿಂದ ನಿತ್ಯ ದೇಶಾದ್ಯಂತ ಸಾವಿರಾರು ಮಂದಿ ಜೀವ ಬಿಡುತ್ತಿದ್ದರೆ; ಕರೋನಾ ಎರಡನೇ ಅಲೆಯ ಹೊತ್ತಿಗೆ ದೇಶದ ಎಷ್ಟು ಮಂದಿಗೆ ಸೋಂಕು ತಗಲಬಹುದು? ಎಷ್ಟು ಜನರಿಗೆ ಆಸ್ಪತ್ರೆಯ ಚಿಕಿತ್ಸೆ ಬೇಕಾಗಬಹುದು? ಆ ಪೈಕಿ ಎಷ್ಟು ಜನರಿಗೆ ಆಮ್ಲಜನಕದ ಅಗತ್ಯ ಬೀಳಬಹುದು? ಎಂಬ ಎಲ್ಲಾ ವಿವರಗಳನ್ನು ತಜ್ಞರು ಮೊದಲೇ ನೀಡಿದ್ದರೂ, ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರಗಳಾಗಲೀ ಆ ಬಗ್ಗೆ ಗಮನ ಹರಿಸಲೇ ಇಲ್ಲ. ಆದರೆ, ಆಗ ಮೈಮರೆತು ಮತಬೇಟೆಯಲ್ಲಿ ತೊಡಗಿದ್ದ ಸರ್ಕಾರಗಳು, ಈಗ ಆಮ್ಲಜನಕದ ವಿಷಯದಲ್ಲಿ ರಾಜಕೀಯ ಕೆಸರೆರಚಾಟದಲ್ಲಿ ಮುಳುಗಿವೆ. ಅದರಲ್ಲೂ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮೇಲೆ ಸುಳ್ಳು ಸುದ್ದಿಗಳು, ನಕಲಿ ಮಾಹಿತಿಯನ್ನು ಬಳಸಿ ಗೂಬೆ ಕೂರಿಸುವ ಪ್ರಯತ್ನವನ್ನು ಸ್ವತಃ ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಅದರ ಬೆಂಬಲಿಗರು ನಡೆಸಿದ್ದಾರೆ.

ಕರೋನಾದ ಹೆಸರಲ್ಲಿ ಪ್ರಧಾನಿ ಮೋದಿಯವರು ದೇಶದ ವಿವಿಧ ಸರ್ಕಾರಿ ಮತ್ತು ಖಾಸಗೀ ಕಾರ್ಪೊರೇಟ್ ಕಂಪನಿಗಳು, ಉದ್ಯಮಿಗಳು ಮತ್ತು ಸಾರ್ವಜನಿಕರಿಂದ ಸಂಗ್ರಹಿಸಿದ ಪಿಎಂ ಕೇರ್ಸ್ ಎಂಬ ನಿಧಿಗೆ ಸಾರ್ವಜನಿಕ ಮನ್ನಣೆ ಪಡೆಯುವ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ನಿರಂತರ ಯತ್ನಗಳು ನಡೆಯುತ್ತಿವೆ. ಒಂದು ಕಡೆ ಮಾಹಿತಿ ಹಕ್ಕಿನಡಿ ಪಿಎಂ ಕೇರ್ಸ್ ನಿಧಿಯ ಮೊತ್ತ, ಬಳಕೆ, ದೇಣಿಗೆ ನೀಡಿದವರ ವಿವರ ಮತ್ತಿತರ ಮಾಹಿತಿ ನೀಡಲು ನಿರಾಕರಿಸುವ ಮೋದಿ, ಆ ನಿಧಿಯನ್ನು ಖಾಸಗೀ ನಿಧಿ ಎನ್ನುತ್ತಾರೆ. ಅದೇ ಹೊತ್ತಿಗೆ ಆ ನಿಧಿಗೆ ಸಾರ್ವಜನಿಕ ಮನ್ನಣೆ ಪಡೆಯಲೂ ಯತ್ನಿಸುತ್ತಾರೆ! ಇಂತಹ ವಿಪರ್ಯಾಸಕ್ಕೆ ಈಗ ಆಮ್ಲಜನಕ ತಯಾರಿಕಾ ಘಟಕ ಸ್ಥಾಪನೆ ಯೋಜನೆಯೂ ಸಾಕ್ಷಿಯಾಗಿದ್ದು, ಪಿಎಂ ಕೇರ್ಸ್ ನಿಧಿಯಿಂದ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಿಗೆ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಅನುದಾನ ನೀಡಲಾಗಿದೆ ಎಂಬ ಹಸೀಸುಳ್ಳನ್ನು ಬಿಜೆಪಿ ಮತ್ತು ಅದರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ತೇಲಿಬಿಟ್ಟಿದ್ದಾರೆ. ದೇಶಾದ್ಯಂತ ಸರ್ಕಾರಿ ಮತ್ತು ಖಾಸಗೀ ಆಸ್ಪತ್ರೆಗಳು, ಸಾರ್ವಜನಿಕರು ಆಮ್ಲಜನಕಕ್ಕಾಗಿ ಗೋಳಿಡುತ್ತಿರುವ ವೀಡಿಯೋ, ಆಡಿಯೋಗಳು ಹರಿದಾಡುತ್ತಿದ್ದು, ಕೇಂದ್ರ ಸರ್ಕಾರದ ಹೊಣೆಗೇಡಿತನ ಬಟಾಬಯಲಾಗುತ್ತಿದೆ. ಅಂತಹ ಕಟುವಾಸ್ತವದ ದಾರುಣ ಸ್ಥಿತಿಗೆ ಪ್ರತಿಯಾಗಿ ಹಸೀ ಸುಳ್ಳುಗಳ ಮೂಲಕ ವಾಸ್ತವಾಂಶ ತಿರುಚಿ, ಪ್ರತಿಪಕ್ಷಗಳ ಮೇಲೆ ಗೂಬೆ ಕೂರಿಸುವ ಯತ್ನದಲ್ಲಿ ಬಿಜೆಪಿ ಸಮರೋಪಾದಿಯಲ್ಲಿ ‘ಫೇಕ್ ನ್ಯೂಸ್’ ಹಂಚತೊಡಗಿದೆ.

ಅಷ್ಟೇ ಅಲ್ಲ; ಕರ್ನಾಟಕವೂ ಸೇರಿದಂತೆ ಬಿಜೆಪಿ ಆಡಳಿತದ ಕೆಲವು ರಾಜ್ಯಗಳ ಸಚಿವರು ಮತ್ತು ಮುಖ್ಯಮಂತ್ರಿಗಳು ಕೂಡ ಪಿಎಂ ಕೇರ್ಸ್ ನಿಂದ ಆಮ್ಲಜನಕ ಘಟಕ ಸ್ಥಾಪನೆಗೆ ಅನುದಾನ ನೀಡಲಾಗಿದೆ ಎಂದು ಹೇಳಿದ್ದಾರೆ. ನಟಿ ಕಂಗನಾ ರನಾವತ್ ಅವರಂಥ ‘ಭಕ್ತರು’ ಇನ್ನೊಂದು ಹೆಜ್ಜೆ ಮುಂದೆ ಹೋಗಿ, “ಮಹಾರಾಷ್ಟ್ರಕ್ಕೆ 10 ಮತ್ತು ದೆಹಲಿಗೆ 8 ಆಮ್ಲಜನಕ ಘಟಕಗಳ ಸ್ಥಾಪನೆಗಾಗಿ ಪಿಎಂ ಕೇರ್ಸ್ ನಿಧಿಯಿಂದ ಕಳೆದ ವರ್ಷವೇ ಹಣ ನೀಡಲಾಗಿದೆ. ಆದರೆ, ಆ ರಾಜ್ಯಗಳ ಮುಖ್ಯಮಂತ್ರಿಗಳಾದ ಉದ್ಭವ್ ಠಾಕ್ರೆ ಮತ್ತು ಅರವಿಂದ್ ಕೇಜ್ರಿವಾಲ್, ಕೇವಲ ಒಂದೊಂದು ಘಟಕ ಸ್ಥಾಪಿಸಿ, ಮೋದಿ ಸರ್ಕಾರದ ವಿರುದ್ಧ ಆರೋಪ ಮಾಡುವುದರಲ್ಲೇ ಮೈಮರೆತಿದ್ದಾರೆ. ಪಿಎಂ ಕೇರ್ಸ್ ಹಣ ಏನಾಯಿತು?, ನಮಗೆ ಉತ್ತರಕೊಡಿ..” ಎಂದು ಟ್ವೀಟ್ ಮಾಡಿದ್ದಾರೆ. ಕಂಗನಾಳ ಇದೇ ಮಾಹಿತಿ ಮತ್ತು ಪ್ರಶ್ನೆಯನ್ನು ಬಿಜೆಪಿಯ ಐಟಿ ಸೆಲ್ ಮತ್ತು ಟ್ರೋಲ್ ಪಡೆಗಳು ಕೇಳುತ್ತಿವೆ. ಆ ಮೂಲಕ, ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಧಿಯನ್ನು ಆಮ್ಲಜನಕ ಘಟಕ ಸ್ಥಾಪನೆಗಾಗಿ ರಾಜ್ಯಗಳಿಗೆ ನೀಡಿದ್ದರೂ, ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳು ಆ ನಿಧಿಯನ್ನು ಬಳಸಿ ಆಮ್ಲಜನಕ ಘಟಕಗಳನ್ನು ಸ್ಥಾಪಿಸಿಲ್ಲ ಎಂದು ಬಿಂಬಿಸುವ ಮೂಲಕ, ಆಮ್ಲಜನಕ ಕೊರತೆಯಿಂದ ಸಂಭವಿಸುತ್ತಿರುವ ಸಾವಿನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಯತ್ನ ಮಾಡಲಾಗುತ್ತಿದೆ.

ಆದರೆ, ವಾಸ್ತವವಾಗಿ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಂದ ರಾಜ್ಯಗಳಿಗೆ ಈ ಉದ್ದೇಶಕ್ಕೆ ಹಣ ನೀಡಿದೆಯೇ? ಯಾವ ರಾಜ್ಯಕ್ಕೆ ಎಷ್ಟು ಘಟಕ ಸ್ಥಾಪನೆಗೆ ಹಣ ನೀಡಲಾಗಿದೆ? ಆ ರಾಜ್ಯಗಳು ಸದ್ಯ ಎಷ್ಟು ಘಟಕ ಸ್ಥಾಪಿಸಿವೆ? ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸತ್ಯ ಸಂಗತಿ ಪರಿಶೀಲಿಸಿದರೆ; ಕೇಂದ್ರ ಸರ್ಕಾರ ಮತ್ತು ಬಿಜೆಪಿ ಬೆಂಬಲಿಗರ ಮಾತುಗಳು ಎಷ್ಟು ಹಸೀ ಸುಳ್ಳು ಎಂಬುದು ಬಯಲಾಗದೇ ಇರದು.

ಇಂಗ್ಲಿಷ್ ಸುದ್ದಿ ಜಾಲತಾಣ ‘ದ ಬೂಮ್’ ರಾಜ್ಯಗಳಿಗೆ ಆಮ್ಲಜನಕ ಘಟಕ ಸ್ಥಾಪನೆಗೆ ‘ಪಿಎಂ ಕೇರ್ಸ್ ನಿಧಿ’ಯ ಹಂಚಿಕೆ ಕುರಿತ ಸಾಮಾಜಿಕ ಜಾಲತಾಣಗಳ ಮಾಹಿತಿಗಳ ವಾಸ್ತವಾಂಶ ಒರೆಗೆ ಹಚ್ಚಿ ವರದಿ ಮಾಡಿದೆ. ಆ ವರದಿಯ ಪ್ರಕಾರ, ಕಂಗನಾ ರನಾವತ್ ಅವರಂಥ ಭಕ್ತರು ಮತ್ತು ಕರ್ನಾಟಕವೂ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳ ಹೇಳಿಕೆಯಂತೆ ಪಿಎಂ ಕೇರ್ಸ್ ನಿಧಿಯಿಂದ ಆಮ್ಲಜನಕ ಘಟಕ ಸ್ಥಾಪನೆಗೆ ರಾಜ್ಯಗಳಿಗೆ ಅನುದಾನ ನೀಡಲಾಗಿದೆ ಎಂಬುದೇ ಸುಳ್ಳು. ವಾಸ್ತವವಾಗಿ ಪಿಎಂ ಕೇರ್ಸ್ ನಿಧಿಯಿಂದ ದೇಶದ ವಿವಿಧ ರಾಜ್ಯಗಳಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಹಣ ನೀಡಿರುವುದು ರಾಜ್ಯ ಸರ್ಕಾರಗಳಿಗೆ ಅಲ್ಲ. ಬದಲಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಆ ಹಣ ನೀಡಿದ್ದು, ಆ ಇಲಾಖೆಯ ಮೂಲಕೇ ಗುರುತಿಸಿರುವ ಖಾಸಗೀ ಏಜೆನ್ಸಿ ಮೂಲಕವೇ ಆಮ್ಲಜನಕ ಘಟಕಗಳ ಸ್ಥಾಪನೆ ಕಾರ್ಯ ನಡೆಯುತ್ತಿದೆ. ಈ ಇಡೀ ಯೋಜನೆಯಲ್ಲಿ ರಾಜ್ಯ ಸರ್ಕಾರಗಳ ಪಾತ್ರ, ಕೇವಲ ಘಟಕ ಸ್ಥಾಪನೆಗೆ ಸೂಕ್ತ ಆಸ್ಪತ್ರೆಗಳನ್ನು ಗುರುತಿಸಿ ಪಟ್ಟಿ ನೀಡುವುದು ಮಾತ್ರ!

ಕಳೆದ ಜನವರಿಯಲ್ಲಿ ಪಿಎಂ ಕೇರ್ಸ್ ನಿಧಿಯಿಂದ ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿರುವ ಸೆಂಟ್ರಲ್ ಮೆಡಿಕಲ್ ಸಪ್ಲೆ ಸ್ಟೋರ್(ಸಿಎಂಎಸ್ ಎಸ್) ಎಂಬ ಸ್ವಾಯತ್ತ ಸಂಸ್ಥೆಗೆ 162 ಪ್ರೆಷರ್ ಸ್ವಿಂಗ್ ಅಬ್ಸಾರ್ಪ್ಷನ್ (ಪಿಎಸ್ ಎ) ವೈದ್ಯಕೀಯ ಆಮ್ಲಜನಕ ಉತ್ಪಾದನೆ ಘಟಕಗಳ ಸ್ಥಾಪನೆಗಾಗಿ 201.58 ಕೋಟಿ ಹಣ ನೀಡಲಾಗಿದೆ. ಸಿಎಂಎಸ್ ಎಸ್ ಸಂಸ್ಥೆಯೇ ಈ ಘಟಕಗಳ ಸ್ಥಾಪನೆಗೆ ಏಜೆನ್ಸಿ ಗುರುತಿಸಿ ಅವರ ಮೂಲಕ ಕಾಮಗಾರಿ ಜಾರಿಗೊಳಿಸಿದೆ ಎಂಬುದನ್ನು ಪ್ರಧಾನಮಂತ್ರಿಗಳ ಕಾರ್ಯಾಲಯವೇ(ಪಿಎಂಒ) ಹೊರಡಿಸಿದ ಪತ್ರಿಕಾ ಹೇಳಿಕೆಯಲ್ಲೂ ಉಲ್ಲೇಖಿಸಲಾಗಿದೆ. ಈ ಇಡೀ ಪ್ರಕ್ರಿಯೆಯಲ್ಲಿ ರಾಜ್ಯಗಳ ಪಾತ್ರ, ಯಾವ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಸ್ಥಾಪಿಸಬಹುದು ಎಂಬ ಸಲಹೆ ನೀಡಲು ಮಾತ್ರ ಸೀಮಿತ. ರಾಜ್ಯಗಳು ನೀಡಿದ ಪಟ್ಟಿಯನ್ನು ಪಡೆದು, ಅಂತಿಮವಾಗಿ ಆಯಾ ಆಸ್ಪತ್ರೆಗಳೊಂದಿಗೆ ಸಮಾಲೋಚಿಸಿ ಘಟಕ ಸ್ಥಾಪಿಸುವುದು ಕೇಂದ್ರ ಸರ್ಕಾರದ ಸಿಎಂಎಸ್ ಎಸ್ ಸಂಸ್ಥೆಗೇ ಬಿಟ್ಟದ್ದು!

2020ರ ಅಕ್ಟೋಬರಿನಲ್ಲಿ ಸಿಎಂಎಸ್ ಎಸ್ 150 ಆಮ್ಲಜನಕ ಘಟಕ ಸ್ಥಾಪನೆಗಾಗಿ ಅರ್ಹ ಏಜೆನ್ಸಿಗಾಗಿ ಟೆಂಡರ್ ಕರೆದಿತ್ತು. ಅದೇ ವೇಳೆ ಈ 150 ಘಟಕಗಳನ್ನು ಸ್ಥಾಪಿಸಲಿರುವ ದೇಶದ ವಿವಿಧ ರಾಜ್ಯಗಳ ಆಸ್ಪತ್ರೆಗಳನ್ನು ಗುರುತಿಸಲಾಗಿತ್ತು. ಆ ಪ್ರಕಾರ, ಕರ್ನಾಟಕದಲ್ಲಿ ಆರು ಆಮ್ಲಜನಕ ಘಟಕ, ಮಹಾರಾಷ್ಟ್ರದಲ್ಲಿ ಹತ್ತು, ದೆಹಲಿಯಲ್ಲಿ ಎಂಟು, ಉತ್ತರಪ್ರದೇಶದಲ್ಲಿ 14, ಕೇರಳದಲ್ಲಿ ಐದು, ಗುಜರಾತಿನಲ್ಲಿ ಎಂಟು ಸೇರಿದಂತೆ ವಿವಿಧ ರಾಜ್ಯಗಳಿಗೆ ಅಲ್ಲಿನ ಜನಸಂಖ್ಯೆಯ ಆಧಾರದ ಮೇಲೆ ಹಂಚಿಕೆ ಮಾಡಲಾಗಿತ್ತು.

ಆ ಪೈಕಿ ಏಪ್ರಿಲ್ 18ರ ಹೊತ್ತಿಗೆ ದೇಶಾದ್ಯಂತ ಕೇವಲ 33 ಘಟಕಗಳನ್ನು ಮಾತ್ರ ಸ್ಥಾಪಿಸಲಾಗಿದ್ದು, ಮಧ್ಯಪ್ರದೇಶದಲ್ಲಿ 5, ಹಿಮಾಚಲಪ್ರದೇಶದಲ್ಲಿ 4, ಗುಜರಾತಿನಲ್ಲಿ 3 ಮತ್ತು ಕರ್ನಾಟಕದಲ್ಲಿ ಎರಡು ಹಾಗೂ ಮಹಾರಾಷ್ಟ್ರ, ದೆಹಲಿ, ಉತ್ತರಪ್ರದೇಶ, ಕೇರಳ, ಆಂಧ್ರಪ್ರದೇಶದಲ್ಲಿ ತಲಾ ಒಂದು ಈಗಾಗಲೇ ಸ್ಥಾಪನೆಯಾಗಿವೆ ಎಂದು ಸ್ವತಃ ಕೇಂದ್ರ ಆರೋಗ್ಯ ಸಚಿವಾಲಯ ಸರಣಿ ಟ್ವೀಟ್ ನಲ್ಲಿ ಅಧಿಕೃತವಾಗಿ ಘೋಷಿಸಿದೆ.

ಹಾಗೇ ಏಪ್ರಿಲ್ ಅಂತ್ಯದ ಹೊತ್ತಿಗೆ ಪೂರ್ಣ ಸ್ಥಾಪನೆಯಾದ ಘಟಕಗಳ ಸಂಖ್ಯೆಯನ್ನು 59ಕ್ಕೆ ಏರಿಸಲಾಗುವುದು. ಮೇ ಅಂತ್ಯದ ಹೊತ್ತಿಗೆ ಆ ಪ್ರಮಾಣ 80 ಆಗಲಿದೆ ಎಂದು ಕೂಡ ಸಚಿವಾಲಯ ಹೇಳಿದೆ.

ಅಂದರೆ, ಪಿಎಂ ಕೇರ್ಸ್ ನಿಧಿಯಿಂದ ಕೇಂದ್ರ ಸರ್ಕಾರ ಆಮ್ಲಜನಕ ಘಟಕಗಳ ಸ್ಥಾಪನೆಗೆ ರಾಜ್ಯಗಳಿಗೆ ನೇರವಾಗಿ ಒಂದೇ ಒಂದು ಪೈಸೆಯನ್ನೂ ಕೊಟ್ಟಿಲ್ಲ. ಕೊಟ್ಟಿರುವುದು ಕೇಂದ್ರ ಸರ್ಕಾರದ್ದೇ ಆದ ಆರೋಗ್ಯ ಸಚಿವಾಲಯದಡಿ ಇರುವ ಸ್ವಾಯತ್ತ ಸಂಸ್ಥೆ ಸಿಎಂಎಸ್ ಎಸ್ ಗೆ ಮತ್ತು ಆ ಸಂಸ್ಥೆ ಖಾಸಗೀ ಏಜೆನ್ಸಿ ಮೂಲಕ ಯೋಜನೆಯನ್ನು ಜಾರಿಗೆ ತರುತ್ತಿದೆ. ದೆಹಲಿ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕೂಡ ಇದನ್ನೇ ಹೇಳಿವೆ. ಜೊತೆಗೆ ಸಿಎಂಎಸ್ ಎಸ್ ನಿಂದ ಕಾಮಗಾರಿ ಗುತ್ತಿಗೆ ಪಡೆದಿರುವ ಸಂಸ್ಥೆಯೇ ಆಮ್ಲಜನಕ ಘಟಕ ಸ್ಥಾಪನೆ ವಿಳಂಬಕ್ಕೆ ಕಾರಣ. ರಾಜ್ಯದಲ್ಲಿ ಒಂದು ಘಟಕ ಸ್ಥಾಪಿಸಿ ಆ ಸಂಸ್ಥೆ ನಾಪತ್ತೆಯಾಗಿದೆ. ಇನ್ನುಳಿದ ಏಳು ಘಟಕ(ಒಟ್ಟು ಮಂಜೂರಾಗಿದ್ದು 8) ಸ್ಥಾಪಿಸುವಂತೆ ಎಷ್ಟು ಪತ್ರ ಬರೆದರೂ ಆ ಸಂಸ್ಥೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಆಸ್ಪತ್ರೆಗಳ ಪಟ್ಟಿ ಕೊಟ್ಟು ತಿಂಗಳು ಉರುಳಿದರೂ ಕಾಮಗಾರಿಯನ್ನೂ ಆರಂಭಿಸಿಲ್ಲ ಎಂದು ದೆಹಲಿ ಸರ್ಕಾರ ಗಂಭೀರ ಆರೋಪ ಮಾಡಿದೆ.

ಸತ್ಯ ಇಷ್ಟು ಸರಳವಾಗಿರುವಾಗ, ಸ್ವತಃ ಆರೋಗ್ಯ ಸಚಿವಾಲಯವೇ ಎಲ್ಲಾ ವಿವರಗಳನ್ನು ಟ್ವೀಟ್ ಮೂಲಕ ಸಾರ್ವಜನಿಕಗೊಳಿಸಿರುವಾಗಲೂ ಕಂಗನಾಳಂತ ಮತಿಗೇಡಿ ಭಕ್ತರು, ಕರೋನಾದಂತಹ ಸಂಕಷ್ಟವನ್ನು ಕೂಡ ಪ್ರತಿಪಕ್ಷಗಳ ಮೇಲೆ ಕೆಸರು ಎರಚಲು ಬಳಸಿಕೊಳ್ಳುತ್ತಿರುವುದು ಮತ್ತು ಬಿಜೆಪಿ ಐಟಿ ಸೆಲ್ ಮತ್ತು ಟ್ರೋಲ್ ಪಡೆಗಳು ಇಂತಹ ಹಸೀ ಸುಳ್ಳಿನ ಮೇಲೆಯೇ ಪಕ್ಷದ ಮತ್ತು ಪ್ರಧಾನಿ ಮೋದಿಯ ಮಾನ ಉಳಿಸಲು ಹೆಣಗಾಡುತ್ತಿರುವುದು ತೀರಾ ಅಪಹಾಸ್ಯಕರ. ಆದರೆ, ಹಸೀ ಸುಳ್ಳುಗಳ ಬಣ್ಣ ಮೆತ್ತಿ ಕಟ್ಟಿದ ಮೋದಿಯ ವರ್ಚಸ್ಸು ಕರೋನಾ ಸಾವು ನೋವಿನ ಸತ್ಯ ನಿಗಿನಿಗಿ ಕಣ್ಣೀರಿಗೆ ಕರಗದೇ ಉಳಿದೀತೆ? ಎಂಬುದು ಪ್ರಶ್ನೆ.

Related posts

Latest posts

ಮೈಸೂರು, ಚಾಮರಾಜನಗರ ಡಿಸಿ ಕಚೇರಿ, ಆಸ್ಪತ್ರೆಯ ಎಲ್ಲ ದಾಖಲೆ ಜಪ್ತಿ: ಹೈಕೋರ್ಟ್ ಆದೇಶ

ಕರೋನಾ ಸಂದರ್ಭದಲ್ಲಿ ರಾಷ್ಟ್ರದ ನಾನಾ ಸರಕಾರಗಳ ನಿಷ್ಕ್ರಿಯತೆಗಳ ಬಗ್ಗೆ ಚಾಟಿ ಬೀಸುತ್ತಿರುವ ದೇಶದ ನ್ಯಾಯಾಲಯಗಳ ಸಾಲಿಗೆ ರಾಜ್ಯದ ಹೈಕೋರ್ಟ್ ಕೂಡ ಸೇರ್ಪಡೆಗೊಂಡಿದ್ದು, ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತರಾಗಿರುವ...

ಚಾಮರಾಜನಗರ ಆಕ್ಸಿಜನ್ ‌ದುರಂತ ಮರೆ ಮಾಚಲು ಬೆಡ್ ಬ್ಲಾಕಿಂಗ್ ನಾಟಕ‌ – ಹೆಚ್‌ಡಿ ಕುಮಾರಸ್ವಾಮಿ

ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ...

ಆಕ್ಸಿಜನ್‌ ಕೊರತೆ: ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್ ಪೂರೈಸಲು ಕ್ರಮ ಕೈಗೊಳ್ಳಬೇಕು -ಸಿದ್ದರಾಮಯ್ಯ

ರಾಜ್ಯದಲ್ಲಿ ಆಕ್ಸಿಜನ್‌ ಕೊರತೆ ಹಿನ್ನಲೆ, ಕರ್ನಾಟಕದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ಅನ್ನು ರಾಜ್ಯದ ಬಳಕೆಗೇ ಮೀಸಲಿಡಬೇಕು, ಈಗ ರಾಜ್ಯಕ್ಕೆ ನಿಗದಿ ಮಾಡಿರುವ ಆಕ್ಸಿಜನ್ ಪ್ರಮಾಣ ಬೇಡಿಕೆಯ ಶೇ. 50ರಷ್ಟು ಸಹ ಇಲ್ಲ. ಬೇಡಿಕೆಗೆ...