ಸಾರ್ವಜನಿಕ ಪಾರ್ಕ್‌ಗಳಿಗೆ ಸಾಕು ನಾಯಿಗಳನ್ನು ಕರೆತರುವ ಅದರ ಪಾಲಕರು ಜೈವಿಕ ವಿಘಟನೀಯ ಮಲ ಚೀಲ (ಪೂಪ್ ಬ್ಯಾಗ್) ತರುವುದನ್ನು ಕಡ್ಡಾಯಗೊಳಿಸುವಂತೆ ಬಿಬಿಎಂಪಿ ಗೆ ನಿರ್ದೇಶನ ನೀಡಬೇಕು ಎಂದಿದ್ದ ಮನವಿಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ನಗರ ಪಾಲಿಕೆಗೆ ಕರ್ನಾಟಕ ಉಚ್ಛ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ಮನವಿಯನ್ನು ವಿಚಾರಣೆಯನ್ನು ನಡೆಸಿದರು. ಪ್ರಾಣಿಗಳ ಹಕ್ಕುಗಳನ್ನು ಪ್ರತಿಪಾದಿಸುವ ಸರ್ಕಾರೇತರ ಸಂಸ್ಥೆ ಕಂಪ್ಯಾಷನ್ ಅನ್‌ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕ್ಯುಪಾ) ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಸಲ್ಲಿಸಿತ್ತು.
“ಸಾರ್ವಜನಿಕ ಸ್ಥಳ ಅಥವಾ ಉದ್ಯಾನ ಪ್ರವೇಶಿಸುವ ಸಂಬಂಧ ಕಡ್ಡಾಯವಾದ ಪೂರ್ವಷರತ್ತುಗಳು ಅಥವಾ ದಂಡ ವಿಧಿಸಲು ನಿರ್ದಿಷ್ಟ ನಿಯಮ ಇಲ್ಲದಿರುವುದರಿಂದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಲಾಗುತ್ತಿಲ್ಲ” ಎಂದು ಅರ್ಜಿದಾರರ ಪರ ವಕೀಲ ಅಲ್ವಿನ್ ಸೆಬಾಸ್ಟಿಯನ್ ವಾದಿಸಿದ್ದಾರೆ.
“ಸಾರ್ವಜನಿಕ ಸ್ಥಳಗಳಲ್ಲಿ ಸಾಕು ಪ್ರಾಣಿಗಳು ಮಾಡುವ ಮಲ-ಮೂತ್ರವು, ವಾಯು ವಿಹಾರಕ್ಕೆಂದು ಬರುವ ಇತರರಿಗೆ ತೊಂದರೆಯುಂಟು ಮಾಡುತ್ತದೆ. ಹಾಗೂ ಅದನ್ನು ಶುದ್ಧೀಕರಿಸದ ಅವುಗಳ ಮಾಲಿಕರಿಗೂ ದಂಡ ಹಾಕಬೇಕು. ಸಾಕು-ಪ್ರಾಣಿಗಳ ಮಲವನ್ನು ಬಯೋಡಿಗ್ರೇಡೆಬಲ್ ಚೀಲಗಳಲ್ಲಿ ವಿಲೇವಾರಿ ಮಾಡಲು ತೊಟ್ಟಿಗಳನ್ನು ಉದ್ಯಾನಗಳಲ್ಲಿ ಹಾಕಬೇಕು.” ಎಂದು ಅರ್ಜಿದಾರರು ಮನವಿ ಮಾಡಿದ್ದರು.






