ಕಲುಷಿತ ನೀರು ಸೇವನೆಯಿಂದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದಸ್ತಾಪುರ ಗ್ರಾಮದ ಇಬ್ಬರು ಮಹಿಳೆಯರು ಬುಧವಾರ ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳು ಸೇರಿದಂತೆ ಹಲವಾರು ಜನರು ತೀವ್ರ ಅಸ್ವಸ್ಥರಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,
ಊರಲ್ಲಿ ಅಸ್ವಸ್ಥರಾದವರ ಸಂಖ್ಯೆ ದೊಡ್ಡದಿದೆ. ವಾರದಿಂದಲೂ ವಾಂತಿ ಭೇಧಿ ಸಂಭವಿಸುತ್ತಿದ್ದರೂ ಜಿಲ್ಲಾ ಆರೋಗ್ಯಾಧಿಕಾರಿ (DHO) ಡಾ. ಶರಣ ಬಸಪ್ಪ ಗಂಡಭೇರುಂಡ, ತಹಸೀಲ್ದಾರ್ ಅಂಜುಮ್ ತುಸುಮ್, ತಾಲೂಕು ಆರೋಗ್ಯಾಧಿಕಾರಿ ಡಾ. ಮಾರುತಿ ಕಾಂಬಳೆ, ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾ ಅಧಿಕಾರಿ ಡಾ. ವಿಜಯನಾಥ್ ದಸ್ತಾಪುರಕ್ಕೆ ಬುಧವಾರ ಮಧ್ಯಾಹ್ನ ಆಗಮಿಸಿದ್ದಾರೆ. ಅಷ್ಟರಲ್ಲಿ ಇಬ್ಬರು ಮಹಿಳೆಯರು ಪ್ರಾಣ ಬಿಟ್ಟಿದ್ದರು.
ಇದು ಪದೇ ಪದೇ ಸಂಭವಿಸುತ್ತಿದ್ದರೂ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ತಾಲೂಕು ಆಡಳಿತದ ಬೇಜವಾಬ್ದಾರಿಗೆ ಇಡೀ ಊರೇ ಅಸ್ವಸ್ಥವಾಗಿದೆ. ಕಮಲಾಪುರ ಶಾಸಕ ಬಸವರಾಜ್ ಮುತ್ತುಗೋಡ್ ಸೇರಿದಂತೆ ಹಿಂದಿನ ಶಾಸಕರೆಲ ಕೂಡ ಅಲಕ್ಷ್ಯ ಮಾಡಿದ್ದೂ ಕೂಡ ತಾಲೂಕು ಆಡಳಿತದ ಬೇಜವಾಬ್ದಾರಿಗೆ ಕಾರಣವಾಗಿದೆ. ಈ ಗ್ರಾಮಕ್ಕೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ. ಸದ್ಯ ಸಮುದಾಯ ಭವನದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಒಂದು ವಾರದಿಂದ ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಆರಂಭವಾಗಿದೆ. ಮಂಗಳವಾರ ರಾತ್ರಿ ಪರಿಶಿಷ್ಟರ ಕಾಲೋನಿಯ 15 ಮಹಿಳೆಯರು ಮತ್ತು 6 ಮಕ್ಕಳು ಸೇರಿ ಹಲವರು ಜಿಲ್ಲಾಸ್ಪತ್ರೆಗೆ ದಾಖಲಾದರು. ಬುಧವಾರ ಬೆಳಿಗ್ಗೆ ದ್ರೌಪದಿ (65) ಆಸ್ಪತ್ರೆಯಲ್ಲಿ ಮೃತರಾದರು. ದಸ್ತಾಪುರದಲ್ಲಿ ತೀವ್ರ ಅಸ್ಯಸ್ಥಗೊಂಡಿದ್ದ ಕಮಲಾಬಾಯಿ (56) ಅವರನ್ನು ಆಸ್ಪತ್ರೆಗೆ ಸೇರಿಸಲು ಅಂಬುಲೆನ್ಸ್‍ಗೆ ಕಾಲ್ ಮಾಡಿದರೂ ಅದು ಬರಲಿಲ್ಲ. ತಾಲೂಕು ವೈದ್ಯಾಧಿಕಾರಿಗಳೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಪಾಗೋಡು ಗ್ರಾಮದ ಕಮಲಾಬಾಯಿ ಎರಡು ದಿನದ ಹಿಂದಷ್ಟೇ ದಸ್ತಾಪುರದ ಮಗಳ ಮನೆಗೆ ಬಂದಿದ್ದರು. ಮೂಕಿಯಾಗಿರುವ ಅವರು ಯಾವ ಚಿಕಿತ್ಸೆ ಸಿಗದ ಕಾರಣ ಗ್ರಾಮದ ಸಮುದಾಯ ಭವನದ ಎದುರು ನರಳಾಡಿ ಪ್ರಾಣ ಬಿಟ್ಟರು. ಆಗಷ್ಟೇ ಎಂಎಲ್ಎ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಂಡಿತು.

ಹಿಂದೆಯೂ ನಾಲ್ವರು ಸತ್ತಿದ್ದರು
ಈ ದುರಂತ ಇಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಸಂಭವಿಸುತ್ತಿದೆ. 2016ರಲ್ಲಿ ಕಲುಷಿತ ನೀರು ಸೇವಿಸಿ ನಾಲ್ವರು ಪ್ರಾಣ ಬಿಟ್ಟಿದ್ದರು. ನೂರಾರು ಜನ ಕಾಲರಾಕ್ಕೆ ಗುರಿಯಾಗಿದ್ದರು. 2010ರಲ್ಲೂ ದಸ್ತಾಪುರ ವಾಂತಿ-ಭೇದಿಯಿಂದ ನಲುಗಿ ಹೋಗಿತ್ತು. ಇಂಥದ್ದು ಸಂಭವಿಸಿದಾಗ ಮಾತ್ರ ಹಾಜರಾಗುವ ತಾಲೂಕು ಆಡಳಿತ ಚಿಕಿತ್ಸೆಯ ವ್ಯವಸ್ಥೆ ಮಾಡಿ ಪಲಾಯನ ಮಾಡುತ್ತ ಬಂದಿದ್ದರ ಫಲವೇ ಸದ್ಯದ ದುರಂತಕ್ಕೆ ಕಾರಣ. ಇದಕ್ಕೆ ಒಂದು ಶಾಶ್ವತ ಪರಿಹಾರ ರೂಪಿಸಲು ಹಿಂದಿನ ಮತ್ತು ಈಗಿನ ಶಾಸಕರು ಪ್ರಯತ್ನಿಸಲಿಲ್ಲ. ಜಿಪಂ ಮತ್ತು ತಾಪಂ ಸದಸ್ಯರೂ ಕೂಡ ಯಾವ ಪ್ರಯತ್ನ ಮಾಡಲಿಲ್ಲ. ಇನ್ನು ಗ್ರಾಪಂ ಸದಸ್ಯರಂತೂ ಅಸಹಾಯಕರಂತೆ ಕೈಕಟ್ಟಿ ಕುಳಿತರು. ಇಲ್ಲಿಗೆ ಬಂದ ಪಿಡಿಒಗಳ ಕಣ್ಣಿಗೆ ಇದು ಒಂದು ಗಂಭೀರ ಸಮಸ್ಯೆ ಎನಿಸಲೇ ಇಲ್ಲ.
ಅನಗತ್ಯವಾಗಿ ಗ್ರಾಮದ ಒಳ ಭಾಗಗಳಲ್ಲಿ ಸಿಮೆಂಟ್ ರಸ್ತೆ ಎಂದೆಲ್ಲ ಹಣ ಪೋಲು ಮಾಡುವ ಪಂಚಾಯತ್ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು, ಹಲವಾರು ವರ್ಷಗಳ ಹಿಂದೆ ಅಳವಡಿಸಿರುವ ಕಬ್ಬಿಣದ ನೀರಿನ ಪೈಪ್‍ಗಳನ್ನು ಬದಲಿಸಿದ್ದರೆ ಸಾಕಿತ್ತು. ಆದರೆ ಸಿಮೆಂಟ್ ರಸ್ತೆಯಲ್ಲಿ ಸಿಗುವ ಪರ್ಸೆಂಟೆಜ್ ಇದರಲ್ಲಿ ಇಲ್ಲವಲ್ಲ?
ಸಮಸ್ಯೆಯ ಮೂಲ
ಊರಿನ ಮಧ್ಯದಲ್ಲಿ ಗಂಡೋರಿ ನಾಲಾದ ಪುಟ್ಟ ಹೊಳೆ ಹರಿಯುತ್ತದೆ. ಎಡಕ್ಕೆ ಪರಿಶಿಷ್ಟರ ಕಾಲೋನಿ ಮತ್ತು ಬಲಕ್ಕೆ ಹಳೆ ಊರು ಇದೆ. ಈ ಹೊಳೆಯ ಪಕ್ಕದಲ್ಲಿ ಬೋರವೆಲ್ ಕೊರೆಸಲಾಗಿದ್ದು, ಕಬ್ಬಿಣದ ಪೈಪ್‍ಗಳ ಮೂಲಕ ನೀರು ಸರಬರಾಜು ಮಾಡಿ ಊರಿನಲ್ಲಿ ಕುಡಿಯುವ ನೀರಿನ ಟ್ಯಾಂಕ್‍ಗೆ ಲಿಫ್ಟ್ ಮಾಡಲಾಗುತ್ತಿದೆ. ಹೊಳೆ ನೀರು ಮಲೀನಾವಾಗಿದೆ. ನೀರಿನ ಪೈಪ್‍ಗಳಲ್ಲಿ ಕಿಂಡಿಗಳಾಗಿದ್ದು ಕಲುಷಿತ ನೀರು ಪೈಪ್ ಹೊಕ್ಕು ಕುಡಿಯುವ ನೀರಿನ ಟ್ಯಾಂಕ್‍ಗೆ ಸೇರುತ್ತಿದೆ. ಈ ಪೈಪ್‍ಗಳ ಸುತ್ತಲೂ ಸಾಕಷ್ಟು ಕಸ ಬೆಳೆದಿದ್ದು ಅಲ್ಲಿಯೂ ನೀರು ಸಂಗ್ರಹವಾಗಿ ಕೊಚ್ಚೆಯಂತಾಗಿದೆ. ಈ ಪೈಪ್‍ಗಳನ್ನು ಬದಲಿಸುವ ಒಂದು ಸಣ್ಣ ಆದರೆ ಜನರ ಆರೋಗ್ಯದ ದೃಷ್ಟಿಯಿಂದ ಮಹತ್ವದ ಕೆಲಸವನ್ನು ಜಿಲ್ಲಾಡಳಿತ, ತಾಲೂಕು ಆಡಳಿತ ಕೈಗೊಂಡಿದ್ದರೆ ಸಾಕಿತ್ತು. ಜನಪ್ರತಿನಿಧಿಗಳೂ ಈ ಬಗ್ಗೆ ಗಮನ ಕೊಡಲೇ ಇಲ್ಲ. ಇವರೆಲ್ಲರ ಉಢಾಪೆ ಮನೋಭಾವಕ್ಕೆ ಈಗ ಇಬ್ಬರು ಮಹಿಳೆಯರು ಮೃತರಾಗಿದ್ದಾರೆ.
ಈ ದುರಂತದ ನಂತರವೂ ಅದೇ ಟ್ಯಾಂಕಿನ ನೀರನ್ನೇ ಕುಡಿಯುವ ಅನಿವಾರ್ಯತೆ ಇದೆ. ಕಾಯಿಸಿ ಆರಿಸಿ ಕುಡಿಯಿರಿ ಎಂಬ ಪುಕ್ಕಟ ಸಲಹೆಯನ್ನು ತಾಲೂಕು ವೈದ್ಯಾಧಿಕಾರಿ ಡಾ. ಮಾರುತಿ ಕಾಂಬಳೆ ನೀಡಿದ್ದಾರೆ. ಈಗ ಪರಿಸ್ಥಿತಿಯ ಗಂಭೀರತೆ ಅರಿತ ಶಾಸಕ ಬಸವರಾಜ ಮುತ್ತುಗೋಡ್ ಅವರು ಪ್ರತಿ ಮನೆಗೂ ಶುದ್ಧ ನೀರಿನ ಕ್ಯಾನ್ ಒದಗಿಸುವೆ ಎಂದಿದ್ದಾರೆ.
ಈ ಕುರಿತು ಶಾಸಕ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಅವರನ್ನು ಸಂಪರ್ಕಿಸಲು ‘ಪ್ರತಿಧ್ವನಿ’ ಹಲವು ಸಲ ಪ್ರಯತ್ನಿಸಿತು. ಅವರು ಕಾಲ್ ಪಿಕ್ ಮಾಡಲೇ ಇಲ್ಲ.
ಸಂಕಷ್ಟದಲ್ಲಿರುವ ದಸ್ತಾಪುರದ ಜನ ಫೋನ್ ಮಾಡಿದರೂ ಇವರೇನೂ ಕಾಲ್ ರಿಸೀವ್ ಮಾಡಲಾರರು.
ಪ್ರತಿಧ್ವನಿಯೊಂದಿಗೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ. ಮಾರುತಿ ಕಾಂಬಳೆಯವರಿಗೆ ಇದೊಂದು ಗಂಭೀರ ಪ್ರಕರಣ ಎನಿಸಿಯೇ ಇಲ್ಲ ಅನಿಸಿತು. ‘ಕ್ಯಾಲ್ಸಿಯಂ ಮಾತ್ರೆಗಳನ್ನು ವಿತರಿಸಿದ್ದೇವೆ. ನೀರನ್ನು ಕುದಿಸಿ ಆರಿಸಿ ಕುಡಿಯಲು ಸೂಚಿಸಿದ್ದೇವೆ’ ಎಂದು ಅವರು ಹೇಳುತ್ತಾರೆ. ಪದೇ ಪದೇ ಇದು ಸಂಭವಿಸಿದ್ದರೂ ತಾಲೂಕು ಆರೋಗ್ಯ ಇಲಾಖೆ ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷೆ ನಡೆಸಿಲ್ಲ. ಪರೀಕ್ಷೆ ನಡೆಸಿ ಈ ಸಮಸ್ಯೆಯನ್ನು ತಾಪಂ ಮತ್ತು ಗ್ರಾಪಂಗಳ ಜೊತೆಗೆ ತಹಶೀಲ್ದಾರ್ ಮತ್ತು ಶಾಸಕರ ಗಮನಕ್ಕೆ ತಂದಿಲ್ಲ.
ಗುರುವಾರ ಕಲಬುರಗಿಯಲ್ಲಿ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳರು ಸೌಜನ್ಯಕ್ಕಾದರೂ ದಸ್ತಾಪುರ ಗ್ರಾಮಕ್ಕೆ ಭೇಟಿ ನೀಡಲಿಲ್ಲ. ಈಕುರಿತು ಮಾತೇ ಆಡಲಿಲ್ಲ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿಯವರು ತಮಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ಇದ್ದಾರೆ.
ವಿಚಿತ್ರ ನೋಡಿ, ತಾಲೂಕು ವೈದ್ಯಾಧಿಕಾರಿ ಬಳಿ ದಸ್ತಾಪುರವನ್ನು ಒಳಗೊಂಡ ಹೊಳೆಗುಂದ ಗ್ರಾಪಂ ಪಿಡಿಒ ನಂಬರೇ ಇಲ್ಲವಂತೆ! ಇಂತಹ ಸಂದರ್ಭದಲ್ಲಿ ಪಿಡಿಒ ನೆರವು ಪಡೆದು ಕೆಲಸ ಮಾಡಬೇಕಿದ್ದ ಅವರು, ಪಿಡಿಒ ನಂಬರನ್ನೇ ಇಟ್ಟುಕೊಂಡಿಲ್ಲ.
ಇದು ವಿವಿಧ ಇಲಾಖೆಗಳ ನಡುವೆ ಇರುವ ಸಮನ್ಬಯದ ಕೊರತೆ. ಇಲಾಖೆಗಳು ಕೈ ಜೋಡಿಸಿದಾಗ ಮಾತ್ರ ಇಂತಹ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಇಲಾಖೆಗಳ ನಡುವೆ ಸಮನ್ವಯ ಮೂಡಿಸಬೇಕಿದ್ದ ಜನಪ್ರತಿನಿಧಿಗಳಿಗೆ ಇದ್ಯಾವುದೂ ಮುಖ್ಯವಾಗಲೇ ಇಲ್ಲ. ಇಲ್ಲಿ ನೀರಿನ ಸಮಸ್ಯೆ ಇದ್ದರೂ ಒಂದೇ ಒಂದು ಶುದ್ಧ ನೀರಿನ ಘಟಕ ಇಲ್ಲ!

ಶುದ್ಧ ಕುಡಿಯುವ ನೀರಿನ ಸರಬರಾಜು ಕುರಿತು ಸಾಕಷ್ಟು ಕೆಲಸ ಮಾಡಿದ ಮಾಜಿ ಸಚಿವ ಮತ್ತು ಗದಗ ಶಾಸಕ ಎಚ್.ಕೆ. ಪಾಟೀಲರು ಪ್ರತಿಧ್ವನಿಗೆ ಪ್ರತಿಕ್ರಿಯೆ ನೀಡಿ, ‘ಗುಣಮಟ್ಟದ ನೀರಿನ ಅಲಭ್ಯತೆಯ ಕಾರಣಕ್ಕೆ ಜನ ಸಾಯುವುದು ಒಂದು ದೊಡ್ಡ ದುರಂತ ಮತ್ತು ಒಟ್ಟು ಆಡಳಿತದ ವೈಫಲ್ಯ. ಶುದ್ಧ ನೀರು ಪ್ರತಿಯೊಬ್ಬನ ಹಕ್ಕು ಎಂಬ ಭಾವನೆ ಜನರಲ್ಲಿ ಮೂಡಬೇಕು. ಜನಪ್ರತಿನಿಧಿಗಳಿಗೆ ಶುದ್ಧ ನೀರು, ಪಡಿತರ ಪೂರೈಸುವುದು ಆದ್ಯತೆಯಾಗಬೇಕು’ ಎಂದರು.
ಈ ದೇಶದ ಲಕ್ಷಾಂತರ ಗ್ರಾಮಗಳು ಮತ್ತು ನಗರಗಳ ಸ್ಲಂಗಳಿಗೆ ಇಂದಿಗೂ ಶುದ್ಧ ಹುಡಿಯುವ ನೀರು ಒಂದು ಮರೀಚಿಕೆಯಾಗಿಯೇ ಉಳಿದಿದೆ. ದಡಾರ, ಅತಿಸಾರ ಮತ್ತು ಕಾಲರಾದಿಂದ ಪ್ರತಿ ವರ್ಷ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಿದ್ದಾರೆ.
ಆದರೆ ನಮ್ಮ ಅಭಿವೃದ್ಧಿಯ ಲೆಕ್ಕ ಇರುವುದು ಜಿಡಿಪಿ ಗ್ರಾಫ್‍ನಲ್ಲಿ ಅಲ್ಲವೇ? ದಸ್ತಾಪುರದಂತಹ ಗ್ರಾಮಗಳ ಸಮಸ್ಯೆ ಹಿನ್ನೆಲೆಗೆ ಸರಿಯುವುದು ಇದೇ ಕಾರಣಕ್ಕೆ. ಪ್ರಭುತ್ವದ ಮೈಂಡ್‍ಸೆಟ್ ಬದಲಾಗದ ಹೊರತು ಇದಕ್ಕೆಲ್ಲ ಪರಿಹಾರವಿಲ್ಲ.