Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ರಾಜಕೀಯ ಸಭ್ಯತೆಯೂ ಸಾಮಾಜಿಕ ಪ್ರಜ್ಞೆಯೂ : ಸಭ್ಯತೆ ಸೌಜನ್ಯ ಮತ್ತು ಪ್ರಾಮಾಣಿಕತೆಯ ಹುಡುಕಾಟದಲ್ಲಿ ಜನತೆ

ನಾ ದಿವಾಕರ

ನಾ ದಿವಾಕರ

October 28, 2021
Share on FacebookShare on Twitter

“ ರಾಜಕಾರಣ ಪುಂಡರ/ಫಟಿಂಗರ/ದುಷ್ಟರ/ನೀಚರ/ಠಕ್ಕರ ಅಂತಿಮ ಆಶ್ರಯ ತಾಣ ” ಎಂಬ ಜಾರ್ಜ್ ಬರ್ನಾರ್ಡ್ ಷಾ ಅವರ ಮಾರ್ಮಿಕ ಹೇಳಿಕೆಯನ್ನು ಸುಳ್ಳು ಎಂದು ನಿರೂಪಿಸುವ ನಿಟ್ಟಿನಲ್ಲಿ ಯಾವುದೇ ದೇಶದ ರಾಜಕಾರಣ ರೂಪುಗೊಳ್ಳದಿರುವುದು ಆ ಖ್ಯಾತ ಚಿಂತಕರ ದಾರ್ಶನಿಕತೆಗೆ ಸಾಕ್ಷಿ. ಇದೊಂದು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಹೇಳಿಕೆಯಾಗಿದೆ. ಮತ್ತೋರ್ವ ಚಿಂತಕ ಆಂಗ್ಲ ನಿಘಂಟಿನ ಕರ್ತೃ ಸ್ಯಾಮೆಯಲ್ ಜಾನ್ಸನ್  “ ದೇಶ ಪ್ರೇಮ ಎನ್ನುವುದು ಪುಂಡರ/ಫಟಿಂಗರ/ದುಷ್ಟರ/ನೀಚರ/ಠಕ್ಕರ ಅಂತಿಮ ಆಶ್ರಯ ತಾಣ ” ಎಂದು ಹೇಳುತ್ತಾರೆ.

ಹೆಚ್ಚು ಓದಿದ ಸ್ಟೋರಿಗಳು

ಬ್ರಾಹ್ಮಣ್ಯದ ಕ್ರೌರ್ಯ.. ದಲಿತರ ಮಾನವತಾವಾದ.. ನಂಗೇಲಿಯ ʼಪುಝುʼ : ಮಲಯಾಳಂನಲ್ಲಿ ಮತ್ತೊಂದು ʻಅಸ್ಪ್ರಶ್ಯ ಕಥಾʼಹಂದರ ಹೊಂದಿರುವ ಸಿನಿಮಾ !

ಸಿಕ್ಕುಗಳಲ್ಲಿ ಶಾಲಾ ಉಡುಪು

ಸಾಂತ್ವನದ ನೆಲೆಗಳ ಸಾಂಸ್ಥೀಕರಣವೂ ಸೌಹಾರ್ದತೆಯ ಹಂಬಲವೂ

ಈ ಇಬ್ಬರೂ ಬಳಸಿರುವ  ‘Scoundrel’ ಎಂಬ ಪದಕ್ಕೆ ಸಾಮಾನ್ಯವಾಗಿ ಠಕ್ಕರು ಎಂದು ಬಳಸಲಾಗುವುದಾದರೂ, ಕನ್ನಡ ನಿಘಂಟಿನಲ್ಲಿ ಇಷ್ಟು ಅರ್ಥಗಳಿವೆ. ಬರ್ನಾರ್ಡ್ ಷಾ ತಮ್ಮ ಹೇಳಿಕೆಗೆ ಹೆಚ್ಚಿನ ವಿವರಗಳನ್ನು ನೀಡುವುದಿಲ್ಲ. ಆದರೆ ಸ್ಯಾಮುಯೆಲ್ ಜಾನ್ಸನ್ ಹೀಗೆ ಹೇಳುತ್ತಾರೆ : “ಒಬ್ಬ ವ್ಯಕ್ತಿಯು ತನ್ನ ದೇಶಪ್ರೇಮದ ಬಗ್ಗೆ ಹೆಮ್ಮೆಯಿಂದ ಘೋಷಿಸಿಕೊಳ್ಳುತ್ತಿರುವವರೆಗೂ ಅಂತಹ ವ್ಯಕ್ತಿಯ ಎಲ್ಲ ಅಪರಾಧಗಳೂ, ದುರ್ನಡತೆಗಳೂ ಸಹನೀಯವಾಗಿಬಿಡುತ್ತವೆ ”.

ಈ ಎರಡೂ ಹೇಳಿಕೆಗಳು ಸಮಕಾಲೀನ ಸಂದರ್ಭದಲ್ಲಿ ಜಾಗತಿಕ ಸತ್ಯ ಎನಿಸಿದರೆ ಭಾರತದ ಸಂದರ್ಭದಲ್ಲಿ ಸತ್ಯ ಎನಿಸುವುದು ಖಚಿತ. ಭಾರತದ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ ಈ ಎಲ್ಲ ಪದಗಳೂ ಒಂದಲ್ಲಾ ಒಂದು ಸಂದರ್ಭದಲ್ಲಿ ಹೊಂದಾಣಿಕೆಯಾಗುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಚಿಂತಕರ ಮಾತುಗಳನ್ನು ಅಲ್ಲಗಳೆಯುವ ರೀತಿಯಲ್ಲೇ ರಾಜಕೀಯ ಬೆಳೆದುಬಂದಿದ್ದರೆ ಬಹುಶಃ ಈ ಎರಡೂ ಹೇಳಿಕೆಗಳು ಜನಸಾಮಾನ್ಯರ ಪಾಲಿಗೆ ಘೋಷವಾಕ್ಯಗಳಾಗಿ ಕಾಣುತ್ತಿರಲಿಲ್ಲ. ಕೆಸರಿನಲ್ಲಿ ಹುಟ್ಟುವ ಕಮಲವನ್ನು ಮಾಲಿನ್ಯದ ನಡುವೆ ಮೂಡುವ ಸೌಂದರ್ಯ ಎಂದು ಅರ್ಥೈಸಲಾಗುತ್ತದೆ. ಆದರೆ ಭಾರತದ ರಾಜಕಾರಣದಲ್ಲಿ ಸಾಂಕೇತಿಕವಾಗಿ, ಕಮಲದ ಪಕಳೆಗಳೆಲ್ಲವೂ ಕೆಸರುಮಯವಾಗುತ್ತಿವೆ. ಕಳೆದ ಮೂರು ದಶಕಗಳ ರಾಜಕಾರಣದಲ್ಲಿ ಈ ಹೇಳಿಕೆಗಳಲ್ಲಿರುವ ಎಲ್ಲ ಗುಣವಿಶೇಷಣಗಳನ್ನೂ ಸಾರ್ಥಕಪಡಿಸುವಲ್ಲಿ ಭಾರತದ ರಾಜಕಾರಣಿಗಳು ಯಶಸ್ವಿಯಾಗಿದ್ದಾರೆ. ಇದು ನವ ಭಾರತದ ಹೆಗ್ಗಳಿಕೆಯೇ ಸರಿ!

ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತವನ್ನು ನಿರ್ವಹಿಸುವ ಯಂತ್ರಗಳನ್ನು ಜನಪ್ರತಿನಿಧಿಗಳ ಕೈಗೆ ಒಪ್ಪಿಸಲಾಗುತ್ತದೆ. ಪ್ರಜಾರಾಜ್ಯ ಎನ್ನುವ ಉದಾತ್ತ ಕಲ್ಪನೆಯ ಹಿಂದೆ, ಪ್ರಜೆಗಳ ದನಿಗೆ ಮಾತ್ರವೇ ಪ್ರಾತಿನಿಧ್ಯವಿರುವುದನ್ನು ಗಮನಿಸಬೇಕು. ಇಲ್ಲಿ ರಾಜ್ಯ ಎನ್ನುವುದು ಕೇವಲ ಭೌಗೋಳಿಕ ಸ್ವರೂಪ ಮಾತ್ರ. ಭೂಪಟದಲ್ಲಿ ಕಾಣುವ ಗಡಿ ರೇಖೆಗಳನ್ನು ಹೊರತುಪಡಿಸಿ ನೋಡಿದಾಗ ಪ್ರಜಾತಂತ್ರ ಅಥವಾ ಪ್ರಜಾಪ್ರಭುತ್ವದ ನಿಜಾರ್ಥವನ್ನು ಗ್ರಹಿಸಬಹುದು. ಆಡಳಿತ ನಿರ್ವಹಣೆಯ ಮಾರ್ಗದಲ್ಲಿ ರೂಪಿಸಲಾಗುವ ಶಾಸನಗಳು, ಕಾಯಿದೆಗಳು, ನಿಯಮಗಳು ಮತ್ತು ಕಟ್ಟಲೆಗಳು ವಿಧಾನಸಭೆ/ಲೋಕಸಭೆ/ರಾಜ್ಯಸಭೆ ಎನ್ನುವ ಶಾಸನ ಸಭೆಗಳಲ್ಲಿ ನಿರ್ಧಾರವಾಗುವುದಾದರೂ ಇವುಗಳ ಮೂಲ ಉದ್ದೇಶ ಪ್ರಜೆಗಳ ಹಿತಾಸಕ್ತಿಯನ್ನು ಕಾಪಾಡುವುದೇ ಆಗಿರುತ್ತದೆ.

ಒಂದು ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಜೆಗಳ ಹಿತಾಸಕ್ತಿ ಎಂದರೆ ಕೇವಲ ರೋಟಿ ಕಪಡಾ ಮಕಾನ್ ಆಗಿರುವುದಿಲ್ಲ. ಅದನ್ನೂ ಮೀರಿದ ಅಥವಾ ಎರಡು ಹೊತ್ತಿನ ಕೂಳು, ಮೈಮುಚ್ಚುವ ಉಡುಪು ಮತ್ತು ತಲೆಯ ಮೇಲಿನ ಸೂರನ್ನು ದೊರಕಿಸಿಕೊಳ್ಳಲು ಪೂರಕವಾಗಿ ಒಂದು ಸಾಮಾಜಿಕ ಭೂಮಿಕೆಯನ್ನು ಸಿದ್ಧಪಡಿಸಬೇಕಾಗುತ್ತದೆ. ಈ ಭೂಮಿಕೆಯಲ್ಲಿ ಜನತೆಯ ಆರೋಗ್ಯ, ಶಿಕ್ಷಣ, ಸಾಮಾಜಿಕ ಸ್ವಾಸ್ಥö್ಯ, ಸಾಂಸ್ಕೃತಿಕ ಚಲನಶೀಲತೆ ಇವೆಲ್ಲವೂ ಸುಸ್ಥಿತಿಯಲ್ಲಿದ್ದಾಗ ಮಾತ್ರವೇ ಅಂತಹ ಸಮಾಜ ಪರಿಪೂರ್ಣವೆನಿಸಿಕೊಳ್ಳುತ್ತದೆ. ಇವೆಲ್ಲವೂ ಪರಸ್ಪರ ಪೂರಕ ಅಂಶಗಳಾಗಿರುವುದರಿAದಲೇ ಗಾಂಧಿ, ಅಂಬೇಡ್ಕರರನ್ನೂ ಸೇರಿದಂತೆ ವಿಶ್ವದ ಎಲ್ಲ ದಾರ್ಶನಿಕರೂ ಶಿಕ್ಷಣ ಮತ್ತು ಮನುಜ ಸಂಸ್ಕೃತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಭಾರತದಂತಹ ಸಾಂಪ್ರದಾಯಿಕ ದೇಶಗಳಲ್ಲಿ ಸಂಸ್ಕೃತಿ ಎನ್ನುವ ವಿಶಾಲಾರ್ಥದ ಕಲ್ಪನೆಯನ್ನು ಒಂದು ನಿರ್ದಿಷ್ಟ ಮತದ ಚೌಕಟ್ಟಿನಲ್ಲಿ ಅಳವಡಿಸುವುದರಿಂದ ಅದು ಮೂಲ ಅರ್ಥವನ್ನೇ ಕಳೆದುಕೊಂಡಿದೆ.

ಇಂತಹ ಒಂದು ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿಯೇ ಒಂದು ಭೌಗೋಳಿಕ ರಾಷ್ಟ್ರ ತನ್ನದೇ ಆದ ರಾಜಕೀಯ ನೆಲೆಗಳನ್ನು ರೂಪಿಸಿಕೊಳ್ಳುತ್ತದೆ. ಆಡಳಿತ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಳು ಯಾವುದೇ ಇದ್ದರೂ ಈ ಸ್ವಸ್ಥ ಸಮಾಜದ ಉದ್ದೇಶ ಬದಲಾಗಲು ಸಾಧ್ಯವಿಲ್ಲ. ಹಾಗೊಮ್ಮೆ ಆದರೆ ಅಲ್ಲಿ ನಾಗರಿಕ ಪ್ರಜ್ಞೆ ನಶಿಸುತ್ತಾ ಹೋಗುತ್ತದೆ. ಮನುಜ ಪ್ರಜ್ಞೆ ಶಿಥಿಲವಾಗುತ್ತಾ ಹೋಗುತ್ತದೆ. ಹಾಗಾಗಿಯೇ ಒಂದು ದೇಶದ ರಾಜಕೀಯ ವ್ಯವಸ್ಥೆಗೆ ತನ್ನದೇ ಆದ ಸ್ವಸ್ಥ ಬೌದ್ಧಿಕ ಮತ್ತು ಭೌತಿಕ ನೆಲೆ ಅಗತ್ಯವಾಗಿರುತ್ತದೆ. ಬರ್ನಾರ್ಡ್ ಷಾ ಮತ್ತು ಸ್ಯಾಮುಯೆಲ್ ಜಾನ್ಸನ್ ಅವರ ಹೇಳಿಕೆಗಳಲ್ಲಿ ಕಂಡುಬರುವ ಸಾತ್ವಿಕ ಸಿಟ್ಟು ಮತ್ತು ತಾತ್ವಿಕ ಆಕ್ರೋಶವನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಬಂಡವಾಳ ವ್ಯವಸ್ಥೆ ರೂಪಿಸುವ ಲಾಭಕೋರ ಮನಸ್ಥಿತಿಯಲ್ಲಿ ಯಾವುದೇ ಸಮಾಜವೂ ಈ ಸುಸ್ಥಿತಿಯನ್ನು ತಲುಪುವುದು ಕಷ್ಟ ಸಾಧ್ಯ ಎನ್ನುವ ಕಠೋರ ವಾಸ್ತವದ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಸಾರ್ವಕಾಲಿಕ ಪ್ರಸ್ತುತತೆ ಪಡೆಯುತ್ತವೆ.

ಭಾರತದ ರಾಜಕಾರಣದಲ್ಲಿ ಬಹುಶಃ ಮೊದಲ ಮೂರು ದಶಕಗಳ ಕಾಲ ಈ ಪದಗಳನ್ನು ಬಳಸಬಹುದಾದ ಸನ್ನಿವೇಶಗಳು ಇದ್ದುದಾದರೂ, ಸಾಮಾನ್ಯೀಕರಿಸಿ ಅನ್ವಯಿಸುವಂತಿರಲಿಲ್ಲ. ಅಸಭ್ಯತೆ, ಅಶ್ಲೀಲತೆ, ಸೌಜನ್ಯರಹಿತ ಮಾತುಗಳು ಅಪವಾದವಾಗಿಯೇ ಕಾಣುತ್ತಿದ್ದವು. ಸಂಸತ್ತಿನಲ್ಲಿ, ವಿಧಾನ ಸಭೆಗಳಲ್ಲಿ ರಾಜಕೀಯವಾಗಿ ಬದ್ಧ ವೈರಿಗಳಂತೆ ಸೆಣಸುತ್ತಿದ್ದವರೂ, ಸದನಗಳ ನೈತಿಕತೆಯನ್ನು ಮತ್ತು ಪಾವಿತ್ರ್ಯತೆಯನ್ನು ಕಾಪಾಡುವ ಹೆಜ್ಜೆ ತಪ್ಪುತ್ತಿರಲಿಲ್ಲ. ಸೈದ್ಧಾಂತಿಕ ವಿರೋಧ, ರಾಜಕೀಯ ಭಿನ್ನಾಭಿಪ್ರಾಯ ಮತ್ತು ತಾತ್ವಿಕ ಪ್ರತಿರೋಧಗಳು ವ್ಯಕ್ತಿಗತ ನೆಲೆಯಲ್ಲಿ ಪ್ರಕಟಗೊಳ್ಳುತ್ತಿರಲಿಲ್ಲ. ಇಷ್ಟರ ನಡುವೆಯೂ ಕಾಣಬಹುದಾಗಿದ್ದ ಕೆಲವೇ ಅಪಭ್ರಂಶಗಳನ್ನು ಹೊರತುಪಡಿಸಿದರೆ, ಭಾರತದ ರಾಜಕಾರಣದಲ್ಲಿ ‘ ನೈತಿಕ ಮೌಲ್ಯ’ ಗಳಿಗೆ ಒಂದು ಪ್ರಶಸ್ತ ಜಾಗವಂತೂ ಇತ್ತು. ಮೌಲ್ಯಾಧಾರಿತ ರಾಜಕಾರಣದ ಪರಿಭಾಷೆಯೇ ರಾಜಕೀಯ ನೈತಿಕತೆಯ ಮಾಪಕವಾಗಿದ್ದ ಕಾಲವೂ ಒಂದಿತ್ತು.

ಬಹುಶಃ ಇನ್ನು ಎರಡು ದಶಕಗಳ ನಂತರದ ಪೀಳಿಗೆಗೆ ಇದು ಚಂದಮಾಮ ಕತೆಯಂತೆ ಕಾಣಬಹುದು. ಏಕೆಂದರೆ ಭಾರತದ ರಾಜಕಾರಣ ನೈತಿಕವಾಗಿ ಪಾತಾಳ ತಲುಪಿದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಎಲ್ಲವೂ ವಾಣಿಜ್ಯೀಕರಣಕ್ಕೊಳಗಾಗುವುದು ಸಹಜ ಆದರೆ ಭಾರತದ ಸಂದರ್ಭದಲ್ಲಿ‘ ಮೌಲ್ಯ’ವೂ  ವ್ಯಾಪಾರದ ವಸ್ತುವಾಗಿದೆ. ಶಾಸಕರು, ಸಂಸದರು, ಸಾಮಾನ್ಯ ಜನಪ್ರತಿನಿಧಿಗಳನ್ನು ಬಿಕರಿ ಮಾಡುತ್ತಲೇ ಇಡೀ ರಾಜಕೀಯ ವ್ಯವಸ್ಥೆಯನ್ನು ಒಂದು ಹರಾಜು ಮಾರುಕಟ್ಟೆಯನ್ನಾಗಿ ಪರಿವರ್ತಿಸುವಲ್ಲಿ ರಾಜಕೀಯ ಪಕ್ಷಗಳು ಯಶಸ್ವಿಯಾಗಿವೆ. ನಮ್ಮ ಸಮಾಜವೂ ಬೌದ್ಧಿಕವಾಗಿ ಎಂತಹ ಹೀನ ಸ್ಥಿತಿ ತಲುಪಿದೆ ಎಂದರೆ, “ ಆಪರೇಷನ್ ಕಮಲ ” ಎನ್ನುವ ಒಂದು ಭ್ರಷ್ಟ ಮಾರುಕಟ್ಟೆ ವ್ಯವಹಾರವನ್ನೂ ಮೌನವಾಗಿ ಸ್ವೀಕರಿಸಿಬಿಟ್ಟಿದೆ. ಇಲ್ಲಿ ಸ್ಯಾಮುಯೆಲ್ ಜಾನ್ಸನ್ ಅವರು ದೇಶಪ್ರೇಮದ ಬಗ್ಗೆ ನೀಡಿರುವ ವ್ಯಾಖ್ಯಾನ ಅನ್ವಯಿಸುತ್ತದೆ. ಹಾಗೆಯೇ ಅಪಮೌಲ್ಯಕ್ಕೊಳಗಾಗಿರುವ ‘ಸಂಸ್ಕೃತಿ’ಯ ಪರಿಕಲ್ಪನೆಯೂ ನಿಷ್ಕರ್ಷೆಗೊಳಗಾಗಬೇಕಾಗುತ್ತದೆ.

ಕಳೆದ ಒಂದೆರಡು ದಶಕಗಳ ಭಾರತದ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ದೇಶದ ಜನಪ್ರತಿನಿಧಿಗಳಿಗೆ ಸಾಮಾಜಿಕ ಸ್ವಾಸ್ಥ್ಯದ ಪರಿವೆಯೇ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ದೇಶದ ಸಮಗ್ರ ಆಡಳಿತ ನಿರ್ವಹಣೆಗಾಗಿ ತಾವು ಚುನಾಯಿಸಿ ಕಳುಹಿಸಿದ ಪ್ರತಿನಿಧಿಗಳ ವರ್ತನೆಯನ್ನು, ಧೋರಣೆಯನ್ನು ಮತ್ತು ಚಟುವಟಿಕೆಗಳನ್ನು ಜನಸಾಮಾನ್ಯರು ಗಮನಿಸುತ್ತಿರುತ್ತಾರೆ ಎಂಬ ಪರಿಜ್ಞಾನವನ್ನೇ ಕಳೆದುಕೊಂಡ ಸಾವಿರಾರು ಜನಪ್ರತಿನಿಧಿಗಳು ಇಂದು ನಮ್ಮ ನಡುವೆ ಅಧಿಕಾರ ಪೀಠಗಳಲ್ಲಿ ರಾರಾಜಿಸುತ್ತಿದ್ದಾರೆ. ರಾಜಕಾರಣಿಗಳನ್ನು ಆದರ್ಶಪ್ರಾಯರಾಗಿ ನೋಡುವ ಅವಕಾಶವನ್ನೇ ಭಾರತದ ಯುವ ಪೀಳಿಗೆ ಕಳೆದುಕೊಂಡಿರುವುದು ದುರಂತವಲ್ಲವೇ ? ಸಭ್ಯತೆ, ಸೌಜನ್ಯದ ಪರಿವೆಯೇ ಇಲ್ಲದೆ, ಲಿಂಗ ಸೂಕ್ಷ್ಮತೆಯ ಪರಿಜ್ಞಾನವಿಲ್ಲದೆ ಮಾತನಾಡುವ ರಾಜಕೀಯ ನಾಯಕರನ್ನು, ಎಡಪಕ್ಷಗಳನ್ನು ಹೊರತುಪಡಿಸಿ. ಉಳಿದೆಲ್ಲಾ ಪಕ್ಷಗಳೂ ಸಹಿಸಿಕೊಂಡೇ ಬಂದಿವೆ. ಇದು ಈ ನಾಡಿನ ದುರಂತ.

ರಾಜಕೀಯ ರಂಗದಲ್ಲಿ ಪರಸ್ಪರ ದೋಷಾರೋಪಣೆ ಮತ್ತು ಕೆಸರೆರಚಾಟಗಳು ಸಹಜವಾಗಿಯೇ ಇರುತ್ತವೆ. ಜನಾಭಿಪ್ರಾಯವನ್ನು ಗೆಲ್ಲುವ ನಿಟ್ಟಿನಲ್ಲಿ ಮತ್ತೊಬ್ಬರ ತಪ್ಪುಗಳನ್ನೇ ಎತ್ತಿ ತೋರಿಸುತ್ತಾ ಮತಗಳಿಕೆಯತ್ತ ಗಮನ ಹರಿಸುವುದು ಒಂದು ಸಹಜ ರಾಜಕೀಯ ಪ್ರಕ್ರಿಯೆ. ಆದರೆ ಈ ಆರೋಪ-ಪ್ರತ್ಯಾರೋಪಗಳು ಆಡಳಿತದ ಚೌಕಟ್ಟಿಗೆ ಮತ್ತು ಪಕ್ಷಗಳ ತಾತ್ವಿಕ ಚೌಕಟ್ಟುಗಳನ್ನು ದಾಟಿ ವ್ಯಕ್ತಿಗತ ಚಾರಿತ್ರ್ಯವಧೆಯತ್ತ ಸಾಗಿದಾಗ ರಾಜಕಾರಣ ಹೊಲಸು ಮೈದಾನವಾಗುತ್ತದೆ. ಜಾತಿಮತಗಳ ಅಸ್ಮಿತೆಯ ರಾಜಕಾರಣ ಈ ಚಾರಿತ್ರ್ಯವಧೆಗೆ ಮತೀಯ ಆಯಾಮವನ್ನೋ, ಜಾತಿ ಆಯಾಮವನ್ನೋ ನೀಡುವ ಮೂಲಕ ವ್ಯಕ್ತಿಯನ್ನು ಸಮುದಾಯದೊಡನೆ ಸಮೀಕರಿಸಿ ಮಾತನಾಡುವ ಒಂದು ವಿಕೃತ ಮಾದರಿ ಸೃಷ್ಟಿಯಾಗುತ್ತದೆ. ಕಳೆದ ಮೂರು ದಶಕಗಳಲ್ಲಿ ದೇಶದಲ್ಲಿ ಉಲ್ಬಣಿಸಿರುವ ಜಾತಿ ಮತ್ತು ಮತೀಯ ರಾಜಕಾರಣದ ಪಿಡುಗು ಈ ವಿಕೃತಿಗೆ ಪೂರಕವಾದ ಸನ್ನಿವೇಶಗಳನ್ನು ಸೃಷ್ಟಿಸುತ್ತಲೇ ಇದೆ.

ಅಧಿಕಾರವಂಚಿತರಾಗುವ ಆತಂಕ, ಸೋಲನುಭವಿಸುವ ಹತಾಶೆ ಮತ್ತು ಅಸ್ತಿತ್ವ ಕಳೆದುಕೊಳ್ಳುವ ಆಕ್ರೋಶ ರಾಜಕೀಯ ನಾಯಕರನ್ನು ಈ ವಿಕೃತಿಯ ಕೂಪಕ್ಕೆ ತಳ್ಳುತ್ತದೆ. ಕಳೆದ ಮೂರು ದಶಕಗಳಲ್ಲಿ ಇದನ್ನು ಗಮನಿಸುತ್ತಾ ಬಂದಿದ್ದೇವೆ. ಮೊದಲು ನಿರ್ದಿಷ್ಟ ಜಾತಿಗಳೇ ರಾಜಕೀಯ ವಾಗ್ವಾದಗಳ ಕೇಂದ್ರವಾಗಿದ್ದರೆ ಈಗ ಜಾತಿ ಸೂಚಕ ಸಂಕೇತಗಳು ಮುನ್ನೆಲೆಗೆ ಬರುತ್ತಿವೆ. ಕುರುಬರ ಕಂಬಳಿ, ಮುಸ್ಲಿಮರ ಟೊಪ್ಪಿ, ಹಿಂದೂಗಳ ಸಿಂಧೂರ ಹೀಗೆ ಜಾತಿ ಮತಗಳ ಸಂಕೇತಗಳು ಪರಸ್ಪರ ಧಾಳಿಯ ಅಸ್ತ್ರಗಳಾಗಿ ಪರಿಣಮಿಸುತ್ತವೆ. ಅಧಿಕಾರ ರಾಜಕಾರಣದ ನೈತಿಕ ಅಧಃಪತನಕ್ಕೆ ಇದು ಸುಸ್ಪಷ್ಟ ಸೂಚನೆಯಷ್ಟೆ. ಅಧಿಕಾರ ಮೋಹ, ರಾಜಕೀಯ ವೈರತ್ವ,  ಮತೀಯ ದ್ವೇಷ ಮತ್ತು ಜಾತಿ ಶ್ರೇಷ್ಠತೆಗಳು ರಾಜಕೀಯ ನಾಯಕರನ್ನು ಗಟಾರ ವಾಸಿಗಳನ್ನಾಗಿ ಮಾಡಿಬಿಟ್ಟಿವೆ.

ಅಸಭ್ಯತೆ, ಅಶ್ಲೀಲತೆ ಮತ್ತು ಸೌಜನ್ಯ ರಹಿತ ಮಾತುಗಳನ್ನು ಮೂರನೆಯ ದರ್ಜೆಯ ಸಿನಿಮಾಗಳಲ್ಲೋ, ಬೀದಿ ಬದಿಯ ಜಗಳಗಳಲ್ಲೋ ಕೇಳಬೇಕಾಗಿದ್ದ ಜನತೆಗೆ ಈಗ ರಾಜಕೀಯ ವಾಗ್ವಾದಗಳಲ್ಲೇ ಕೇಳುವ ಅವಕಾಶವೂ ಲಭಿಸಿದೆ. “ ಸೋನಿಯಾ ಗಾಂಧಿ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುತ್ತೇನೆ ” ಎಂದು ಸಾರ್ವಜನಿಕವಾಗಿ ಸಾರಿ ಹೇಳಿದ ಸುಷ್ಮಾ ಸ್ವರಾಜ್ ಅವರಿಂದ ಹಿಡಿದು,“ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ” ಎಂದು ಕೇಳುವ ಸಿ ಟಿ ರವಿಯವರವರೆಗೂ ಈ ಅಸಭ್ಯತೆಯ ರಾಜಕಾರಣ ಚಾಚಿಕೊಂಡಿದೆ. ಈ ರೀತಿಯ ಅಸಭ್ಯ ಭಾಷೆಯ ಬಳಕೆ ಮತ್ತು ಸೌಜನ್ಯ, ಸಂವೇದನೆಯಿಲ್ಲದ ಮಾತುಗಳನ್ನಾಡಲು ಕಾರಣಗಳನ್ನು ಶೋಧಿಸಲು ಹೊರಟಾಗ ಬರ್ನಾರ್ಡ್ ಶಾ ಮತ್ತು ಸ್ಯಾಮುಯೆಲ್ ಜಾನ್ಸನ್ ಇಬ್ಬರೂ ನೆನಪಾಗುತ್ತಾರೆ. ಜಾತಿ ಮತಗಳ ಶ್ರೇಷ್ಠತೆ ಮತ್ತು ಅಧಿಕಾರದ ಅಹಮಿಕೆಯ ಮೂಲಕ ಹರಿದುಬರುವ ಇಂತಹ ಅಸಭ್ಯ ಭಾಷೆ ಪಕ್ಷಾತೀತವಾಗಿ ದೇಶಾದ್ಯಂತ ಚಾಲ್ತಿಯಲ್ಲಿರುವುದನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ.

ತಲೆ ಕಡಿಯುವ, ಕೈಕಾಲು ಕತ್ತರಿಸುವ, ಕೊಲೆ ಮಾಡುವ ಹಿಂಸೆಯ ಪರಿಭಾಷೆಯನ್ನೂ ರಾಜಕೀಯ ನಾಯಕರು ರೂಢಿಸಿಕೊಂಡೇ ಬಂದಿದ್ದಾರೆ. ಈ ಅಸಭ್ಯತೆಯನ್ನು ವ್ಯಕ್ತಿಗತ ನೆಲೆಯಲ್ಲಿ ನೋಡಲಾಗುವುದಿಲ್ಲ ಏಕೆಂದರೆ ಈ ಹೊಲಸು ನಾಲಿಗೆಯ ಸರದಾರರು, ಹಿಂಸೆಯ ಪ್ರಚೋದಕರು ಒಂದು ಪಕ್ಷವನ್ನು ರಾಜ್ಯ ಮಟ್ಟದಲ್ಲೋ, ರಾಷ್ಟ್ರ ಮಟ್ಟದಲ್ಲೋ ಪ್ರತಿನಿಧಿಸುತ್ತಿರುತ್ತಾರೆ. ಆಯಾ ಪಕ್ಷಗಳ ಹೈಕಮಾಂಡ್‌ಗಳೂ ಸಹ ಇಂತಹವರ ವಿರುದ್ಧ ಯಾವುದೇ ಶಿಸ್ತುಕ್ರಮ ಜರುಗಿಸುವುದಿಲ್ಲ ಎನ್ನುವುದು ಮತ್ತೂ ಗಂಭೀರ ವಿಚಾರ. ಭಾರತದ ರಾಜಕಾರಣ ಹೊಲಸು ತುಂಬಿದ ದೊಡ್ಡ ಚರಂಡಿಯಂತೆ ಕಾಣುತ್ತಿರುವುದಾದರೆ ಅದರ ನೈತಿಕ ಹೊಣೆಯನ್ನು ಈ ಪಕ್ಷಗಳ ಹೈಕಮಾಂಡ್‌ಗಳು, ಹಿರಿಯ ನಾಯಕರು ಹೊರಬೇಕಾಗುತ್ತದೆ. ಈ ಅನೈತಿಕತೆಗೆ ಕಡಿವಾಣ ಹಾಕುವುದಾದರೂ ಯಾರು ?

ಇಲ್ಲಿ ಸಾಮಾಜಿಕ ಪ್ರಜ್ಞೆ ಮುನ್ನೆಲೆಗೆ ಬರುತ್ತದೆ. ಸ್ಯಾಮುಯೆಲ್ ಜಾನ್ಸನ್ ಹೇಳಿದಂತೆ ‘ದೇಶಪ್ರೇಮ’ ದ  ಹಣೆಪಟ್ಟಿ ಎಲ್ಲ ಹೊಲಸುಗಳನ್ನೂ, ಎಲ್ಲ ಅಸಾಂವಿಧಾನಿಕ ನಡೆಯನ್ನೂ, ಎಲ್ಲ ರೀತಿಯ ಪ್ರಚೋದನಕಾರಿ ಪ್ರವೃತ್ತಿಯನ್ನೂ ಮುಚ್ಚಿಹಾಕಿಬಿಡುತ್ತದೆ. ಆದರೆ ಅಧಿಕಾರ ರಾಜಕಾರಣದಿಂದ ದೂರ ಇರುವ, ಸಾಮಾಜಿಕ ಸ್ವಾಸ್ಥ್ಯ ಮತ್ತು ನೈತಿಕ ಮೌಲ್ಯಗಳನ್ನು ಸಂರಕ್ಷಿಸಲು ಬಯಸುವ ಸುಶಿಕ್ಷಿತ ಸಮಾಜ ಮೌನ ವಹಿಸಲಾಗುವುದಿಲ್ಲ, ವಹಿಸಲೂಬಾರದು. ಭಾರತದ ರಾಜಕೀಯ ನಿಘಂಟಿನಿಂದ ಮೌಲ್ಯ, ನೈತಿಕತೆ, ಸಭ್ಯತೆ, ಲಿಂಗ ಸೂಕ್ಷ್ಮತೆ, ಸಂವೇದನೆ ಮತ್ತು ಸೌಜನ್ಯ ಎಂಬ ಪದಗಳು ಅಳಿಸಿಹೋದರೆ, ಮುಂದಿನ ಪೀಳಿಗೆ, ಇಂದಿನ ಇಡೀ ಪೀಳಿಗೆಯನ್ನೇ ತುಚ್ಚವಾಗಿ ಕಾಣಬಹುದಲ್ಲವೇ ? ಈ ಅಮೂಲ್ಯ ಪದಗಳು ಅಳಿಸಿಹೋಗದಂತೆ ಎಚ್ಚರ ವಹಿಸಬೇಕಾದ ನೈತಿಕ ಹೊಣೆ ಸಮಾಜದ ಮೇಲಿದೆ.

“ ಅನಕ್ಷರಸ್ಥರು ಸಮಾಜಕ್ಕೆ ಹೊರೆ ” ಎಂದು ಹೇಳುವ ಕೇಂದ್ರ ಗೃಹಸಚಿವರು ಅರಿಯಬೇಕಾದ ಒಂದು ಸೂಕ್ಷ್ಮಇಲ್ಲಿದೆ. ಹೊರೆಯಾಗಿರುವುದು ಈ ಅಸೂಸೂಕ್ಷ್ಮ ರಾಜಕಾರಣಿಗಳು ಮತ್ತು ಅವರನ್ನು ಪೋಷಿಸುವ ಪಕ್ಷಗಳು. ಮತ್ತು ಈ ಅಸೂಕ್ಷ್ಮತೆಯನ್ನು ಕಂಡೂ ಕಾಣದಂತೆ ಮೌನ ವಹಿಸುವ ಭಾರತದ ಅಕ್ಷರಸ್ಥ-ಸುಶಿಕ್ಷಿತ ಆಧುನಿಕ ಸಮಾಜ. ಸಭ್ಯತೆ, ಸೌಜನ್ಯ, ಮನುಜ ಸೂಕ್ಷ್ಮತೆ ಮತ್ತು ಸಂವೇದನೆ ಇಲ್ಲದ ಒಂದು ವ್ಯವಸ್ಥೆಯನ್ನು ನಾವು ಪೋಷಿಸುತ್ತಿದ್ದೇವೆ ಎಂಬ ಪರಿಜ್ಞಾನ ಜನಸಾಮಾನ್ಯರಲ್ಲಿದ್ದರೆ ಸಾಕು. ನಾಳಿನ ವಾತಾವರಣ ಶುಭ್ರವಾಗಿರಲು ಸಾಧ್ಯ.

RS 500
RS 1500

SCAN HERE

don't miss it !

ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿ ರಫ್ತು ನಿರ್ಬಂಧಿಸಿದ ಕೇಂದ್ರ!
ದೇಶ

ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿ ರಫ್ತು ನಿರ್ಬಂಧಿಸಿದ ಕೇಂದ್ರ!

by ರಮೇಶ್ ಎಸ್‌.ಆರ್
May 14, 2022
ಮುಜರಾಯಿ ಮತ್ತು ಪೊಲೀಸ್ ಇಲಾಖೆ ಕತ್ತೆ ಕಾಯುತ್ತಿದೆಯಾ..? : ಪ್ರಮೋದ್‌ ಮುತ್ತಾಲಿಕ್‌ ಕಿಡಿ
ಕರ್ನಾಟಕ

ಮುಜರಾಯಿ ಮತ್ತು ಪೊಲೀಸ್ ಇಲಾಖೆ ಕತ್ತೆ ಕಾಯುತ್ತಿದೆಯಾ..? : ಪ್ರಮೋದ್‌ ಮುತ್ತಾಲಿಕ್‌ ಕಿಡಿ

by ಪ್ರತಿಧ್ವನಿ
May 17, 2022
ಮಿಡಿ ಬಸ್ ಬೆಂಕಿಗಾಹುತಿ ಪ್ರಕರಣ : ನಷ್ಟದ ಮೊತ್ತವನ್ನು ಸಿಬ್ಬಂದಿಗಳಿಂದ ವಸೂಲಿಗೆ ಇಳಿದ BMTC !
ಕರ್ನಾಟಕ

ಮಿಡಿ ಬಸ್ ಬೆಂಕಿಗಾಹುತಿ ಪ್ರಕರಣ : ನಷ್ಟದ ಮೊತ್ತವನ್ನು ಸಿಬ್ಬಂದಿಗಳಿಂದ ವಸೂಲಿಗೆ ಇಳಿದ BMTC !

by ಕರ್ಣ
May 16, 2022
ಶೇ.15ರ ಗಡಿದಾಟಿದ ಸಗಟು ದರ ಹಣದುಬ್ಬರ, ಬಡ್ಡಿದರ ಏರಿಕೆಯಿನ್ನು ಅನಿವಾರ್ಯ!
ದೇಶ

ಶೇ.15ರ ಗಡಿದಾಟಿದ ಸಗಟು ದರ ಹಣದುಬ್ಬರ, ಬಡ್ಡಿದರ ಏರಿಕೆಯಿನ್ನು ಅನಿವಾರ್ಯ!

by ಪ್ರತಿಧ್ವನಿ
May 17, 2022
ಕರ್ನಾಟಕ

ರಥೋತ್ಸವದ ವೇಳೆ ಭಕ್ತರ ತಳ್ಳಾಟ, ಚಕ್ರಕ್ಕೆ ಸಿಲುಕಿ ಇಬ್ಬರು ಸಾವು

by ಪ್ರತಿಧ್ವನಿ
May 16, 2022
Next Post
ಬಿಜೆಪಿ ಶಕ್ತಿ ಬಗ್ಗೆ ತಿಳಿಯದಿರುವುದೇ ರಾಹುಲ್‌ ಸಮಸ್ಯೆ, ಜನರ ಕೋಪ ಬಿಜೆಪಿಯನ್ನು ಸೋಲಿಸಲು ಸಾಕಾಗುವುದಿಲ್ಲ– ಪ್ರಶಾಂತ್‌ ಕಿಶೋರ್

ಬಿಜೆಪಿ ಶಕ್ತಿ ಬಗ್ಗೆ ತಿಳಿಯದಿರುವುದೇ ರಾಹುಲ್‌ ಸಮಸ್ಯೆ, ಜನರ ಕೋಪ ಬಿಜೆಪಿಯನ್ನು ಸೋಲಿಸಲು ಸಾಕಾಗುವುದಿಲ್ಲ– ಪ್ರಶಾಂತ್‌ ಕಿಶೋರ್

ಸವಾಲಿನ ಸಮರಕ್ಕೆ ಮುಂದಾದ ಸಮೀರ್ ವಾಂಖೆಡೆ ಮತ್ತು ನವಾಬ್ ಮಲಿಕ್

ಸವಾಲಿನ ಸಮರಕ್ಕೆ ಮುಂದಾದ ಸಮೀರ್ ವಾಂಖೆಡೆ ಮತ್ತು ನವಾಬ್ ಮಲಿಕ್

ಏನಿದು ಪೆಗಾಸಸ್ ಸ್ಪೈವೇರ್ ವಿವಾದ: ಈ ವೈರಸ್ ಹೇಗೆ ಕಾರ್ಯನಿರ್ವಹಿಸುತ್ತೇ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಏನಿದು ಪೆಗಾಸಸ್ ಸ್ಪೈವೇರ್ ವಿವಾದ: ಈ ವೈರಸ್ ಹೇಗೆ ಕಾರ್ಯನಿರ್ವಹಿಸುತ್ತೇ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist