ಮುಂದಿನ ಕೆಲವು ದಶಕಗಳವರೆಗೆ ಬಿಜೆಪಿ (ಕೇಂದ್ರ ರಾಜಕಾರಣದಿಂದ) ಎಲ್ಲಿಗೂ ಹೋಗುವುದಿಲ್ಲ, ಆದರೆ ರಾಹುಲ್ ಗಾಂಧಿ ಅವರ ಸಮಸ್ಯೆ ಏನೆಂದರೆ ಅವರು ಈ ಸತ್ಯವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಚುನಾವಣಾ ಪ್ರಚಾರ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಗೋವಾದಲ್ಲಿ ಬುಧವಾರ ಮಾತನಾಡಿದ ಪ್ರಶಾಂತ್ ಕಿಶೋರ್ ಅವರ ಈ ಹೇಳಿಕೆಯು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಸದಸ್ಯರೊಂದಿಗೆ ಅವರುೀ ಹಿಂದೆ ನಡೆಸಿದ ಮಾತುಕತೆಗಳು ಸಫಲವಾಗಿಲ್ಲ ಎಂಬ ಅನುಮಾನ ಹುಟ್ಟುವಂತೆ ಮಾಡಿದೆ.
ಭಾರತದ ರಾಜಕೀಯದಲ್ಲಿ ಇನ್ನು ಹಲವು ದಶಕಗಳ ಕಾಲ ಬಿಜೆಪಿ ಅಧಿಕಾರ ಮುಂದುವರೆಯಲಿದ್ದು, ಕೇಂದ್ರ ಬಿಂದುವಾಗಿ ಪಕ್ಷ ಇರಲಿದೆ. ಚುನಾವಣೆಯಲ್ಲಿ ಗೆಲ್ಲಲಿ, ಬಿಡಲಿ, ಬಿಜೆಪಿ ಭಾರತದ ರಾಜಕೀಯ ಪ್ರಮುಖ ಪಕ್ಷವಾಗಿ ಹೊರ ಹೊಮ್ಮಲಿದೆ. ಹೇಗೆಂದರೆ ಸ್ವಾಂತಂತ್ರ್ಯದ ಬಳಿಕ 40 ವರ್ಷಗಳ ಕಾಲ ಭಾರತದ ರಾಜಕೀಯದಲ್ಲಿ ಕಾಂಗ್ರೆಸ್ ಸಾಧಿಸಿದ ಹಿಡಿತದಂತೆ ಬಿಜೆಪಿ ಕೂಡ ಮುಂದಿನ ದಶಕಗಳ ಕಾಲ ತನ್ನ ಪ್ರಾಬಲ್ಯ ಮೆರೆಯಲಿದೆ. ಭಾರತದಲ್ಲಿ ಒಂದು ಸಲ ಶೇ 30 ರಷ್ಟು ಮತವನ್ನು ಪಡೆದರೆ ಸಾಕು, ಅಂತಹ ಪಕ್ಷಗಳು ರಾಜಕೀಯ ಪುಟದಿಂದ, ಜನರ ಮನಸ್ಸಿನಿಂದ ಅಷ್ಟು ಬೇಗ ಹೊರ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಕೆಲವು ನೀತಿಗಳ ಬಗ್ಗೆಗ್ಗೆ ಜನರು ಕೋಪಗೊಂಡಿದ್ದಾರೆ ಎಂಬ ಮಾತ್ರಕ್ಕೆ ಬಿಜೆಪಿ ರಾಜಕೀಯದಿಂದ ಹೊರಗುಳಿಯಲಿದೆ ಎಂಬ ಭ್ರಮೆಗೆ ಸಿಲುಕಬೇಡಿ. ಜನರ ಅಸಮಾಧಾನದಿಂದ ಮೋದಿ ಅವರು ಅಧಿಕಾರ ಕಳೆದುಕೊಳ್ಳಬಹುದು. ಆದರೆ, ಬಿಜೆಪಿ ರಾಜಕೀಯ ಅಸ್ತಿತ್ವದಲ್ಲಿ ಇರಲಿದೆ. ಈ ಸತ್ಯವನ್ನು ರಾಹುಲ್ ಗಾಂಧಿ ಅರ್ಥ ಮಾಡಿಕೊಂಡಿಲ್ಲ. ಜನರು ನರೇಂದ್ರ ಮೋದಿಯವರನ್ನು ದೂರ ತಳ್ಳುತ್ತಾರೆ. ಮೋದಿ ಬಗ್ಗೆ ಜನರಿಗೆ ಕೋಪ ಇದೆ ಎಂದು ರಾಹುಲ್ ಗಾಂಧಿ ಭಾವಿಸಿಕೊಂಡಿದ್ದಾರೆ. ಆದರೆ, ಆ ರೀತಿ ಎಂದಿಗೂ ಆಗುವುದಿಲ್ಲ ಎಂದು ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಮತ್ತು ಬಿಜೆಪಿಯ ಶಕ್ತಿಯನ್ನು ಪರೀಕ್ಷಿಸಿ, ಅರ್ಥಮಾಡಿಕೊಳ್ಳಿ. ಅದನ್ನು ಅರಿಯದಿದ್ದರೆ, ಅವರನ್ನು ಸೋಲಿಸಲು ಎಂದಿಗೂ ಪ್ರತಿತಂತ್ರ ಹೂಡಲು ಸಾಧ್ಯವಾಗುವುದಿಲ್ಲ ಎಂದು ಅವರು ಸಲಹೆ ನೀಡಿದ್ದಾರೆ.
ಪ್ರಶಾಂತ್ ಕಿಶೋರ್ ಅವರ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹಾಗೂ ತಮಿಳೂನಾಡಿನಲ್ಲಿ ಎಂಕೆ ಸ್ಟಾಲಿನ್ ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕಿಶೋರ್, ಕಾಂಗ್ರೆಸ್ ಸೇರುವ ಬಗ್ಗೆ ವದಂತಿಗಳು ಹಬ್ಬಿದ್ದವು. ಪ್ರಶಾಂತ್ ಅವರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪಕ್ಷದ ಇತರೆ ನಾಯಕರ ಜತೆ ಹಲವು ಬಾರಿ ಮಾತುಕತೆ ನಡೆಸಿರುವುದು ಈ ವದಂತಿಗಳಿಗೆ ಪುಷ್ಟಿ ನೀಡಿದ್ದವು. ಆದರೆ ಅದರಲ್ಲಿ ಯಾವುದೇ ಫಲ ಕಂಡಿಲ್ಲ ಅನ್ನುವ ಅನುಮಾನ ಪ್ರಶಾಂತ್ ಅವರ ಈ ಹೇಳಿಕೆಯಿಂದ ವ್ಯಕ್ತವಾಗಿದೆ.
ಸುದೀರ್ಘ ರೈತ ಹೋರಾಟ, ನಿರಂತರ ಬೆಲೆ ಏರಿಕೆ, ನಿರುದ್ಯೋಗ ಮೊದಲಾದ ಜ್ವಲಂತ ಸಮಸ್ಯೆಗಳು ನರೇಂದ್ರ ಮೋದಿ ಅಲೆಯನ್ನು ಕುಗ್ಗಿಸಿದೆ ಹಾಗೂ ಮುಂದಿನ ಬಾರಿ ಬಿಜೆಪಿಗೆ ಇದರಿಂದ ಹಿನ್ನಡೆಯಾಗಲಿದೆ ಎಂಬ ಪ್ರತಿಪಕ್ಷಗಳ ನಂಬಿಕೆಯನ್ನೇ ಪ್ರಶಾಂತ್ ಕಿಶೋರ್ ಅವರ ಈ ಹೇಳಿಕೆ ಬುಡಮೇಲುಗೊಳಿಸಿದೆ.