ಜಿಲ್ಲೆಯಲ್ಲಿ ಜಾರಿಯಲ್ಲಿರುವ ಕಠಿಣ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ, ಮೋಜುಮಸ್ತಿಗೆ ಬಂದಿದ್ದ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಹತ್ತಾರು ಮಂದಿ ಉನ್ನತ ಅಧಿಕಾರಿಗಳನ್ನು ಗ್ರಾಮಸ್ಥರೇ ತಡೆದು, ವಾಪಸು ಕಳಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶಾಂತವೇರಿಯಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಏರುತ್ತಿರುವ ಕರೋನಾ ಪ್ರಕರಣಗಳಿಗೆ ಕಡಿವಾಣ ಹಾಕುವ ಸಲುವಾಗಿ ಜಿಲ್ಲಾಡಳಿತ ಮೇ 20ರಿಂದ 24ರವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದೆ. ಈ ಅವಧಿಯಲ್ಲಿ ತುರ್ತು ಮೆಡಿಕಲ್ ಸೇವೆ ಹೊರತುಪಡಿಸಿ ಇನ್ನಾವುದೇ ಬಗೆಯ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಅಲ್ಲದೆ ಹೊರ ಜಿಲ್ಲೆಗಳಿಂದ ಬರುವವರಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಇಂತಹ ಕಟ್ಟುನಿಟ್ಟಿನ ಲಾಕ್ ಡೌನ್ ನಡುವೆ, ಬೆಂಗಳೂರಿನ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಸಂದೀಪ್ ದವೆ, ಪಿಸಿಸಿಎಫ್ ಸಂಜಯ್ ಮೋಹನ್(ಟೆರಿಟೆರಿ) ಸೇರಿದಂತೆ ಅರಣ್ಯಭವನದ ಉನ್ನತ ಹುದ್ದೆಯಲ್ಲಿರುವ ಕೆಲವು ಅಧಿಕಾರಿಗಳು, ಹಾಗೂ ಚಿಕ್ಕಮಗಳೂರು ಸಿಸಿಎಫ್ ಸುನಿಲ್ ಪನ್ವಾರ್, ಸಿಸಿಎಫ್ ರವಿಶಂಕರ್, ಡಿಸಿಎಫ್ ಜಗನ್ನಾಥ್, ಕೊಡಗು ಸಿಸಿಎಫ್ ತಾಕತ್ ಸಿಂಗ್, ಮತ್ತು ಶಿವಮೊಗ್ಗ ಮತ್ತು ಭದ್ರಾವತಿ ವಲಯಗಳ ಹಲವು ಮಂದಿ ಡಿಸಿಎಫ್, ಎಸಿಎಫ್ ಮತ್ತು ಆರ್ ಎಫ್ ಒಗಳ ತಂಡ ಕೆಮ್ಮಣ್ಣುಗುಂಡಿ ಗೇಮ್ ಫಾರೆಸ್ಟ್ ಗೆ ಹೊರಟಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ಧಾರೆ.
ಸುಮಾರು 12ಕ್ಕೂ ಹೆಚ್ಚು ಕಾರು- ಜೀಪುಗಳಲ್ಲಿ ಈ ತಂಡ ಯಾವ ನಿರ್ಬಂಧವಿಲ್ಲದೆ ಬರುತ್ತಿರುವುದನ್ನು ಕಂಡ ತರೀಕೆರೆ- ಚಿಕ್ಕಮಗಳೂರು ಗಡಿ ಭಾಗದ ಶಾಂತವೇರಿ ಗ್ರಾಮದ ಪಂಚಾಯ್ತಿ ಸದಸ್ಯರು ಮತ್ತು ಇತರೆ ಗ್ರಾಮಸ್ಥರು, ಅಧಿಕಾರಿಗಳ ವಾಹನಗಳನ್ನು ತಡೆದು ಎಲ್ಲಾ ಕಡೆ ಕರೋನಾ ಇದೆ. ಜನ ಸಾಯ್ತಿದಾರೆ. ನೀವು ದೊಡ್ಡ ದೊಡ್ಡ ಅಧಿಕಾರಿಗಳಾಗಿ ಸರ್ಕಾರದ ಕಾನೂನು ಜಾರಿಗೆ ತರುವವರಾಗಿ ನೀವೇ ಹೀಗೆ ಬೆಂಗಳೂರಿನಿಂದ ಇಲ್ಲಿಗೆ ಬಂದು ಇಲ್ಲಿ ಮೋಜು ಮಸ್ತಿ ಮಾಡುವುದು ಎಷ್ಟು ಸರಿ? ಜಿಲ್ಲೆಯಲ್ಲಿ ಒಂದೇ ಒಂದು ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಆದರೆ ನೀವು ಹೀಗೆ ದಂಡುದಂಡು ವಾಹನಗಳಲ್ಲಿ ಬಂದು ಇಲ್ಲಿ ಮೋಜು ಮಾಡಲು ಮಾತ್ರ ಕಾನೂನು ಅಡ್ಡಬರುವುದಿಲ್ಲವೆ? ಜನಸಾಮಾನ್ಯರಿಗೆ ಒಂದು ಕಾನೂನು, ನಿಮಗೆಲ್ಲಾ ಒಂದು ಕಾನೂನು ಇದೆಯಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಆಗ, ಅಧಿಕಾರಿಗಳು ತಾವು ಕರ್ತವ್ಯದ ಮೇಲೆ ಬಂದಿರುವುದಾಗಿ ಹೇಳಿ, ಜನರನ್ನು ಮನವೊಲಿಸಲು ಯತ್ನಿಸಿದ್ದು, ಅಂತಹ ಮನವರಿಕೆಗೆ ಜಗ್ಗದ ಜನ, ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರು ಸ್ಥಳಕ್ಕೆ ಬರುವವರೆಗೆ ತಾವು ವಾಹನಗಳನ್ನು ಬಿಡುವುದಿಲ್ಲ. ನಮ್ಮ ಶವದ ಮೇಲೆ ನೀವು ಹೋದರೂ ಸರಿ. ರಸ್ತೆಯನ್ನು ತೆರವು ಮಾಡುವುದಿಲ್ಲ ಎಂದು ಪಟ್ಟು ಹಿಡಿದು ವಾಗ್ವಾದ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಸ್ಥಳೀಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಅಧಿಕಾರಿಗಳು ಸರ್ಕಾರದ ಉನ್ನತ ಅಧಿಕಾರಿಗಳಿಂದ ಕರೆ ಮಾಡಿಸಿ ಗ್ರಾಮಸ್ಥರ ಮನವೊಲಿಸುವ ಯತ್ನವನ್ನೂ ಮಾಡಿದರು. ಆದರೆ, ಅಂತಿಮವಾಗಿ ಜನರು ಪಟ್ಟು ಸಡಿಸಲಿಲ್ಲ. ಹಾಗಾಗಿ, ಅಂತಿಮವಾಗಿ ಬೇರೆ ದಾರಿ ಕಾಣದೆ ಅಧಿಕಾರಿಗಳು ಅಲ್ಲಿಂದ ವಾಪಸ್ಸಾಗಿದ್ದಾರೆ.
ಹೈದರಾಬಾದ್ ನಲ್ಲಿ ವನ್ಯಜೀವಿಗಳಲ್ಲೂ ಕರೋನಾ ವೈರಾಣು ಕಾಣಿಸಿಕೊಂಡಿದ್ದು, ರಾಜ್ಯದಲ್ಲಿಯೂ ಅಂತಹ ಪರಿಸ್ಥಿತಿ ಎದುರಾಗಬಾರದು ಎಂಬ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವನ್ಯಜೀವಿ ಧಾಮಗಳು, ಮೃಗಾಲಯ, ಚಾರಣ ಅರಣ್ಯಗಳನ್ನು, ನೇಚರ್ ಕ್ಯಾಂಪುಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಯಾವುದೇ ರೀತಿಯ ಮಾನವ ಪ್ರವೇಶಕ್ಕೂ ಅವಕಾಶವಿಲ್ಲದಂತೆ ಅಭಯಾರಣ್ಯಗಳನ್ನು ಮುಚ್ಚಲಾಗಿದೆ. ಹಾಗಿರುವಾಗ, ಅಂತಹ ವಿಷಯದಲ್ಲಿ ಕಾನೂನು ಮಾಡುವ ಮತ್ತು ಜಾರಿಗೆ ತರುವ ಅರಣ್ಯ ಇಲಾಖೆಯ ಅಧಿಕಾರಿಗಳೇ ಮೋಜುಮಸ್ತಿಗಾಗಿ ವನ್ಯಜೀವಿ ವಲಯಗಳಲ್ಲಿ, ಅರಣ್ಯಪ್ರದೇಶಕ್ಕೆ ನುಗ್ಗುವುದು ಎಷ್ಟು ಸರಿ? ಅಂತಹ ನಡೆ ರಾಜ್ಯದ ಜನತೆಗೆ ಯಾವ ಸಂದೇಶ ನೀಡುತ್ತದೆ? ಮತ್ತು ಮುಖ್ಯವಾಗಿ ಒಂದು ವೇಳೆ ಈ ಅಧಿಕಾರಿಗಳೇ ಕರೋನಾ ವೈರಾಣು ವಾಹಕರಾಗಿದ್ದರೆ ಆಗಬಹುದಾದ ಸಮಸ್ಯೆಗಳಿಗೆ ಯಾರು ಹೊಣೆ? ಎಂಬ ಹಿನ್ನೆಲೆಯಲ್ಲಿ ಅಧಿಕಾರಿಗಳ ಈ ನಡೆ ಆಘಾತಕಾರಿ.
ಜೊತೆಗೆ, ಮೂಲಗಳ ಪ್ರಕಾರ, ಅಧಿಕಾರಿಗಳ ತಂಡ ಬೆಂಗಳೂರಿನಿಂದ ಗುರುವಾರವೇ ಬಂದು ಚಿಕ್ಕಮಗಳೂರಿನಲ್ಲಿ ತಂಗಿದ್ದರು. ಬಳಿಕ ಶುಕ್ರವಾರ ಕೆಮ್ಮಣ್ಣುಗುಂಡಿಯತ್ತ ಹೊರಟ್ಟಿದ್ದರು. ವಾಸ್ತವವಾಗಿ ಅವರಾರೂ ಅಧಿಕೃತ ಕರ್ತವ್ಯದ ಮೇಲೆ ಬಂದಿರಲಿಲ್ಲ. ಕೆಮ್ಮಣ್ಣುಗುಂಡಿಯಲ್ಲಿ ಕೆಲವು ದಿನ ಆರಾಮವಾಗಿ ಕಾಲ ಕಳೆಯಲು ಬಂದಿದ್ದರು. ಮಾರ್ಗಮಧ್ಯದಲ್ಲಿ ಶಾಂತವೇರಿಯ ಜನ ಅವರನ್ನು ತಡೆದಿದ್ದರಿಂದ ಅವರ ಗೇಮ್ ಫಾರೆಸ್ಟ್ ಮೋಜು-ಮಸ್ತಿಯ ಯೋಜನೆ ತಲೆಕೆಳಗಾಗಿದೆ.
ಗ್ರಾಮಸ್ಥರ ವಿರೋಧದ ಬಳಿಕ ಅಧಿಕಾರಿಗಳು, ಭದ್ರಾ ಅಭಯಾರಣ್ಯದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಹುಲಿ ಸಾವಿನ ಪ್ರಕರಣದ ಕುರಿತು ಪರಿಶೀಲನೆಗೆ ಬಂದಿರುವುದಾಗಿ ಹೇಳಿದ್ದಾರೆ. ಆದರೆ, ವಾಸ್ತವವಾಗಿ ಹುಲಿ ಸಾವಿನ ಕುರಿತ ವಿಷಯ 10-12 ದಿನಗಳಷ್ಟು ಹಳತಾಗಿದೆ. ಜೊತೆಗೆ ಹುಲಿ ಕುರಿತು ಅಧ್ಯಯನಕ್ಕೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಪರಿಶೀಲಿಸಬೇಕಿತ್ತೇ ವಿನಃ, ಸಾಮಾನ್ಯ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಅಲ್ಲಿ ಏನು ಕೆಲಸ ಎಂಬುದು ಅರ್ಥವಾಗುತ್ತಿಲ್ಲ! ಅಲ್ಲದೆ, ಕೊಡಗು ವಲಯದ ಸಿಸಿಎಫ್, ಶಿವಮೊಗ್ಗ ವಲಯದ ಡಿಎಫ್ ಒ ಮತ್ತು ಡಿಸಿಎಫ್ ಗಳು ಕೂಡ ತಮ್ಮ ವ್ಯಾಪ್ತಿಗೆ ಸಂಬಂಧವೇ ಪಡದ ಪ್ರದೇಶಕ್ಕೆ ಹೋಗುವ ಜರೂರು ಏನಿತ್ತು? ಎಂಬ ಪ್ರಶ್ನೆ ಕೂಡ ಇದೆ. ಹಾಗಾಗಿ ಇಡೀ ಘಟನೆಯ ಕುರಿತು ತನಿಖೆಯಾಗಬೇಕಿದೆ. ರಾಜ್ಯಾದ್ಯಂತ ಬಿಗಿ ನಿರ್ಬಂಧವಿರುವಾಗ, ಕರೋನಾ ಆತಂಕದ ನಡುವೆ ಹೀಗೆ ಹದಿನೈದು ಇಪ್ಪತ್ತು ವಾಹನಗಳಲ್ಲಿ ಅಧಿಕಾರಿಗಳು ದಂಡುದಂಡಾಗಿ ತಮಗೆ ಸಂಬಂಧವೇ ಪಡದ ವಿಷಯವನ್ನು ಮುಂದಿಟ್ಟುಕೊಂಡು ನಿಜಕ್ಕೂ ಯಾವ ಉದ್ದೇಶಕ್ಕೆ ಹೋಗಿದ್ದರು ಎಂಬುದು ಬಹಿರಂಗವಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಆದರೆ ಪ್ರಶ್ನೆ ಇರುವುದು ಪಿಸಿಸಿಎಫ್ ಸಂಜಯ್ ಮೋಹನ್, ಎಸಿಎಸ್ ಸಂದೀಪ್ ದವೆಯಂತಹ ಹಿರಿಯ ಅಧಿಕಾರಿಗಳ ಜನಪರ ಬದ್ದತೆ ಮತ್ತು ಕಾನೂನು ಪಾಲನೆಯ ವಿಷಯದಲ್ಲಿ ಅವರಿಗಿರುವ ಕಾಳಜಿಯದ್ದು. ಇಡೀ ರಾಜ್ಯ ಕರೋನಾ ಸಾವುನೋವಿನ ನಡುವೆ ಸಂಕಷ್ಟದಲ್ಲಿ ನರಳಾಡುತ್ತಿರುವಾಗ, ಪರಿಸರ ಮತ್ತು ಅರಣ್ಯ ಇಲಾಖೆಯಂತಹ ಸೂಕ್ಷ್ಮ ಇಲಾಖೆಗಳ ಹೊಣೆಗಾರಿಕೆ ಹೊತ್ತ ಈ ಅಧಿಕಾರಿಗಳು ಹೀಗೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಸೋಂಕು ತಡೆ ಮತ್ತು ಜೀವ ರಕ್ಷಣೆಯ ಮಾರ್ಗಸೂಚಿಗಳನ್ನು ಮೀರಿ, ಗುಂಪುಗೂಡಿಕೊಂಡು ಹತ್ತಾರು ವಾಹನಗಳಲ್ಲಿ ಹೀಗೆ ಪ್ರವಾಸ ಹೋಗುವುದು ಮತ್ತು ಮೋಜು ಮಸ್ತಿಗಾಗಿ ಗೇಮ್ ಫಾರೆಸ್ಟ್ ಯಾತ್ರೆ ನಡೆಸುವುದು ಎಷ್ಟು ಸರಿ? ಎಂಬುದು ಈಗ ಎದ್ದಿರುವ ಪ್ರಶ್ನೆ!