ಕೋವಿಡ್‌ ನಿಯಂತ್ರಣ ಸಾದ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಹೊರಡಿ ಎಂದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್

ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ  ಸ್ಟಿಂಗ್ ಆಪರೇಷನ್ ಮೂಲಕ ಬಯಲಾದ ವೈದ್ಯರ, ಸಿಬ್ಬಂದಿಗಳ ಲಂಚಾವತಾರಕ್ಕೆ ಇಡೀ ಜಿಲ್ಲೆಯೇ ಬೆಚ್ಚಿ ಬಿದ್ದಿದೆ. ಈ ಆಪರೇಷನ್ನಿಂದಾಗಿ  ಇಲ್ಲಿ ಹಣ ನೀಡಿದವರಿಗೆ ಮಾತ್ರ ಚಿಕಿತ್ಸೆ ಎಂಬ ಆರೋಪಕ್ಕೆ ಸ್ಪಷ್ಟ ಸಾಕ್ಷ್ಯವೇ ಸಿಕ್ಕಿತ್ತು. ಮೊನ್ನೆ ಬುಧವಾರ ಮಾಧ್ಯಮವೊಂದರಲ್ಲಿ  ಕರ್ತವ್ಯನಿರತ ವೈದ್ಯರು 5000 ರೂಪಾಯಿಗಳ ಲಂಚ ಸ್ವೀಕರಿಸಿದ್ದು ಮತ್ತು ಲಂಚಕ್ಕಾಗಿ ಒತ್ತಾಯಿಸಿದ ವಿವರದ ಸ್ಟಿಂಗ್ ಆಪರೇಷನ್  ಮಾಹಿತಿ  ಪ್ರಕಟಗೊಳ್ಳುತಿದ್ದಂತೆಯೇ  ಜಿಲ್ಲಾಡಳಿತ ಚುರುಕಾಯಿತು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು  ಮೆಡಿಕಲ್ ಕಾಲೇಜು ಆಸ್ಪತ್ರೆಯ ಡೀನ್ ಅವರಿಂದ ಅಂದೇ ವರದಿ ತರಿಸಿಕೊಂಡು ಅಂದು ಸಂಜೆಯೇ ಲಂಚ ಸ್ವೀಕರಿಸಿದ್ದ ವೈದ್ಯ  ಎ.ಸಿ  ಶಿವಕುಮಾರ್ ಅವರನ್ನು ಅಮಾನತ್ತುಗೊಳಿಸಿದ್ದಾರೆ.

ಈ ಕ್ಷಿಪ್ರ ಕ್ರಮ ಜನತೆಯಲ್ಲಿ  ಅಧಿಕಾರಿಗಳ ಬಗ್ಗೆ ಒಂದಷ್ಟು ಭರವಸೆ ಮೂಡುವಂತೆ ಮಾಡಿದ್ದು ಮೆಚ್ಚುಗೆಯನ್ನೂಗಳಿಸಿದೆ. ಆದರೂ ಕೂಡ  ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ  ಸೋಂಕಿತರನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ  , ಸೋಂಕಿತರ ಮರಣ ಪ್ರಮಾಣವನ್ನು ತಗ್ಗಿಸಲು  ಶ್ರಮಿಸುತ್ತಿಲ್ಲ ಎಂಬ ಆರೋಪಗಳ ಹಿನ್ನೆಲೆಯಲ್ಲಿ  ಶುಕ್ರವಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು  ಖುದ್ದಾಗಿ  ಧಿಡೀರ್ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿನ ಅವ್ಯವಸ್ಥೆಯನ್ನು ಕಣ್ಣಾರೆ ಕಂಡು  ವೈದ್ಯಾಧಿಕಾರಿಗಳ ವಿರುದ್ದ ಕೆಂಡಾಮಂಡಲರಾದರು. ಅಷ್ಟೇ ಅಲ್ಲ ಕೋವಿಡ್ ನಿಯಂತ್ರಣ ಮಾಡಲು ನಿಮ್ಮ ಕೈಲಾಗದಿದ್ದರೆ ರಾಜೀನಾಮೆ ಕೊಟ್ಟು ಹೊರಡಿ ಎಂದು ವೈದ್ಯರ  ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೋವಿಡ್ ಆಸ್ಪತ್ರೆಯ ಪ್ರತೀ ವಾರ್ಡ್ಗೆ ತೆರಳಿದ ಜಿಲ್ಲಾಧಿಕಾರಿ ರೋಗಿಗಳ ಆರೋಗ್ಯ ವಿಚಾರಿಸಿ, ರೋಗಿಗಳ ಸಮಸ್ಯೆಗಳನ್ನು ಆಲಿಸಿದ್ದಾರೆ. ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಕೊವಿಡ್ ರೋಗಿಗಳನ್ನು ನೋಡಲು ಅವರ ಸಂಬಂಧಿಕರು ವಾರ್ಡ್ಗಳಿಗೆ ಬಂದು ಹೋಗುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಆಸ್ಪತ್ರೆಯ ಸಿಬ್ಬಂದಿ ಮತ್ತು ಡೀನ್ ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  ಜೊತೆಗೆ ಕೆಲವು ವಾರ್ಡಿನಲ್ಲಿ ಸೋಂಕಿತರು ಮಾಸ್ಕ್ ಹಾಕದೇ ಇರುವುದನ್ನು  ಗಮನಿಸಿದ ಜಿಲ್ಲಾಧಿಕಾರಿ, ವೈದ್ಯರನ್ನು ಕರೆದು ನೀವೆಲ್ಲ ಏನು ಮಾಡುತ್ತಿದ್ದೀರಿ ನಿಮಗೆ ಸಾಮರ್ಥ್ಯವಿಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೊರಟು ಹೋಗಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚಾರುಲತಾ ಸೋಮಲ್, ಸೋಂಕಿತರ ಸಂಬಂಧಿಗಳು ಕೇವಲ ಬಟ್ಟೆ ಮಾಸ್ಕ್ ನ್ನು ಧರಿಸಿ ವಾರ್ಡ್ಗಳಿಗೆ ಬಂದು ಹೋಗುತ್ತಿರುವುದು ಗೊತ್ತಾಗಿದೆ. ಇದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆಗಳು ಇದೆ. ಈ ಬಗ್ಗೆ ಅಸ್ಪತ್ರೆಯ ಸಿಬ್ಬಂದಿಗಳು ಗಮನ ಕೊಡಬೇಕು. ಮುಂದಿನ ದಿನಗಳಲ್ಲಿ ಹೀಗೆ ಮುಂದುವರಿದರೆ ಆಸ್ಪತ್ರೆಯ ಸಿಬ್ಬಂದಿ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ನಡುವೆ  ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 31 ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಅದರಲ್ಲಿ 8 ವೈದ್ಯರಿಗೆ ಕೋವಿಡ್ ಸೋಂಕು ದೃಢ ಪಟ್ಟಿದ್ದು, ಡಿ ಗ್ರೂಪ್ ನೌಕರರು, ನರ್ಸ್, ಮೆಡಿಕಲ್ ಆಫೀಸರ್ಸ್ ಸೇರಿ 31 ಜನರಿಗೆ ಕರೋನಾ ತಗುಲಿದೆ. ಕೋವಿಡ್ ಆಸ್ಪತ್ರೆಯಲ್ಲಿ ನಿತ್ಯ ಕೆಲಸ ಮಾಡುವ ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಮೊದಲ ಅಲೆಯಲ್ಲಿ ಇಷ್ಟು ಪ್ರಮಾಣದಲ್ಲಿ ಪಾಸಿಟಿವ್ ಬಂದಿರಲ್ಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಸೋಂಕಿತರ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ವೈದ್ಯರು ಮತ್ತು ಸಿಬ್ಬಂದಿ ಒಟ್ಟು 31 ಜನರನ್ನು 14 ದಿನ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.

ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ ತರಬೇತಿ ನಿರತ ಮತ್ತು ಖಾಯಂ ವೈದ್ಯರು ಸೇರಿ 123 ವೈದ್ಯರು ಕರ್ತವ್ಯ ಮಾಡುತ್ತಿದ್ದಾರೆ. ಒತ್ತಡ ಇದ್ದರೂ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡುತ್ತಿದ್ದೇವೆ, ಸಿಬ್ಬಂದಿ ಕೊರತೆಯಿಂದ ಈಗ ಕೆಲಸ ಮಾಡುತ್ತಿರುವವರೇ ಅನಿವಾರ್ಯತೆ ಬಂದಿದೆ. ಕೋವಿಡ್-19 ಆಸ್ಪತ್ರೆಯಲ್ಲಿ ಇರುವ ಸೋಂಕಿತರಿಗೆ ಯಾವುದೇ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಇರುವ ಸಿಬ್ಬಂದಿಗೆ ಮನವಿ ಮಾಡಿಕೊಂಡರು ಕರ್ತವ್ಯ ನಿರ್ವಹಣೆ ಮಾಡುತ್ತಿದೇವೆ ಎಂದು ಮೆಡಿಕಲ್ ಸೂಪರಿನ್ಟೆಂಡೆಂಟ್  ಲೋಕೇಶ್  ಹೇಳಿದರು.

ಕಳೆದ ವರ್ಷ ದ ಕೋವಿಡ್ ಸಂದರ್ಭದಲ್ಲಿ ಅತ್ಯಂತ ಕಡಿಮೆ ಪ್ರಕರಣಗಳು , ಸಾವಿನ ಸಂಖ್ಯೆಯೊಂದಿಗೆ ಹಸಿರು ಪಟ್ಟಿಯಲ್ಲಿಯೇ ಇದ್ದ ಜಿಲ್ಲೆ ಈ ವರ್ಷ ಕಳೆದ ತಿಂಗಳಿನಿಂದಲೇ  ಆರೆಂಜ್ ಪಟ್ಟಿಯಲ್ಲಿದ್ದು ರಾಜ್ಯದಲ್ಲಿ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಈ ದಿಸೆಯಲ್ಲಿ ಜಿಲ್ಲಾಡಳಿತ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಕಳೆದ ತಿಂಗಳು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಮೃತರಾದವರ ಮೊಬೈಲ್ ಫೋನ್ಗಳು ಕಳ್ಳತನವಾಗಿವೆ. ಈ ಕಳ್ಳತನದ ಹಿಂದೆ ಯಾರಿದ್ದಾರೆಂದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಏಕೆಂದರೆ ಕಳ್ಳರು ಹೊರಗಿನಿಂದ ಬಂದಿರುವವರಲ್ಲ. ಈಗ ಆ ನಂಬರ್‌ಗೆ ಕರೆ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿದೆ. ಆದರೆ ಪೋಲೀಸ್ ದೂರು ನೀಡಿದರೆ  ಕಳ್ಳತನ ಮಾಡಿರುವವರ ಹೆಡೆಮುರಿ ಕಟ್ಟುತ್ತಾರೆ. ಯಾವುದೇ ಕಾರಣಕ್ಕೂ ಸಿಮ್ ಬದಲಿಸಿ ಗೊತ್ತಾಗದಂತೆ ಮೊಬೈಲ್ ಬಳಸಲೂ ಸಾದ್ಯವಾಗುವುದಿಲ್ಲ. ಅದರೆ ರೋಗಿಗಳ ಸಂಬಂದಿಕರು  ಜೀವವೇ ಹೋದ ಮೇಲೆ ಮೊಬೈಲ್ ಏಕೆ ಎಂದು ನಿರ್ಲಿಪ್ತ ಧೋರಣೆ ತಾಳಿದ್ದಾರೆ. 

ಈ ಕುರಿತು ಜಿಲ್ಲಾಡಳಿತವೇ ಪೊಲೀಸ್ ದೂರು ನೀಡಿ ತನಿಖೆ ಮಾಡಿಸಬೇಕಿದೆ. ಏಕೆಂದರೆ ಈ ತನಿಖೆಯಿಂದ ಇಲ್ಲಿ ರಾತ್ರಿ ಸಂಭವಿಸುತಿದ್ದ  ಹೆಚ್ಚಿನ ಕೋವಿಡ್ ರೋಗಿಗಳ ಸಾವುಗಳಿಗೆ ನಿಖರ ಕಾರಣವೂ   ತಿಳಿಯುವ ಸಾಧ್ಯತೆ ಇದೆ.  ಬೇರೆಯವರಿಂದ ಹಣ  ಪಡೆದು   ವೆಂಟಿಲೇಟರ್ ಬೆಡ್ ನೀಡುವುದಕ್ಕೆ ಮತ್ತು ಮೊಬೈಲ್  ಕಳ್ಳತನ ಮಾಡಲು ರೋಗಿಗಳನ್ನೇ ಸಾಯಿಸಲಾಗುತಿತ್ತೇ ಎಂಬ ಬಗ್ಗೆ ಅಮೂಲಾಗ್ರ ತನಿಖೆ ನಡೆಸಬೇಕಿದೆ ಎಂದು ಮೃತ ರೋಗಿಗಳ ಸಂಬಂಧಿಕರು ಒತ್ತಾಯಿಸುತಿದ್ದಾರೆ. 

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...