ಬೆಂಗಳೂರು : ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸುವುದರ ಜೊತೆಗೆ ವಿಪಕ್ಷಗಳ ಮುಂದಿನ ನಡೆಯ ಕುರಿತು ಮಹತ್ವದ ಚರ್ಚೆ ನಡೆಸಲು ನಾಳೆ ರಾಷ್ಟ್ರ ರಾಜಧಾನಿ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಇಂಡಿಯಾ ಮೈತ್ರಿಕೂಟದ (INDIA) ಜನಬಂಧನ್’ ಸಭೆಯನ್ನು ಆಯೋಜಿಸಲಾಗಿದೆ.

ಪ್ರಮುಖವಾಗಿ ಈ ಸಭೆಯಲ್ಲಿ ಭಾಗವಹಿಸಲು ದೇಶದ ಇಪ್ಪತ್ತಕ್ಕೂ ಅಧಿಕ ರಾಜಕೀಯ ಪಕ್ಷಗಳ ನಾಯಕರ ದೆಹಲಿಯತ್ತ ಈಗಾಗಲೇ ಮುಖ ಮಾಡಿದ್ದಾರೆ.
ದೇಶದ ವಿಪಕ್ಷಗಳ ಮೈತ್ರಿಕೂಟವಾಗಿರುವ ಇಂಡಿಯಾ ಬ್ಲಾಕ್‌ನಲ್ಲಿ ಪಕ್ಷಗಳು ತಮ್ಮ ವೈವಿಧ್ಯತೆಯ ಮೂಲಕ ಒಗ್ಗಟ್ಟಿನಿಂದ ಹೋರಾಟವನ್ನು ರೂಪಿಸಲು ಮುಂದಾಗಲಿವೆ. ಅಲ್ಲದೆ ಕಳೆದ ಪಂಚ ರಾಜ್ಯಗಳ ಚುನಾವಣೆಯ ಸೋಲಿನ ಬಗ್ಗೆ ಆತ್ಮಾವಲೋಕನವೂ ಇಲ್ಲಿ ನಡೆಯಲಿದೆ. ತಮ್ಮದೇ ಆದ ಕಾರಣಗಳಿಗಾಗಿ ಈ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿರುವ ಕೆಲವು ಪಕ್ಷಗಳಿವೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮೆಟ್ರೋದಲ್ಲಿ ಪ್ರಯಾಣಿಸಿದ ಸಿಎಂ ಡಿಕೆ ಶಿವಕುಮಾರ್ : ಕಾರಣ ಇಲ್ಲಿದೆ ನೋಡಿ..!
ಜೂನ್ 8, 2026 ರಂದು ಸೋಮವಾರ ಮಧ್ಯಾಹ್ನ 12 ಗಂಟೆಗೆ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆಯಲಿರುವ ಇಂಡಿಯಾ ಜನಬಂಧನ್ ಸಭೆಯಲ್ಲಿ 23 ರಾಜಕೀಯ ಪಕ್ಷಗಳು ಭಾಗವಹಿಸುವುದನ್ನು ದೃಢಪಡಿಸಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.

ಲಕ್ಷಾಂತರ ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಳ್ಳುವ, ಪ್ರತಿದಿನ ಸಂವಿಧಾನದ ಮೇಲೆ ದಾಳಿ ಮಾಡುವ, ತನಿಖಾ ಸಂಸ್ಥೆಗಳ ಮೂಲಕ ವಿರೋಧ ಪಕ್ಷದ ನಾಯಕರ ಮೇಲೆ ದಾಳಿ ಮಾಡುವ, ಕೋಟ್ಯಂತರ ಭಾರತೀಯರ ಜೀವನೋಪಾಯಕ್ಕೆ ಗಂಭೀರ ಹಾನಿ ಮಾಡುವ ಕೇಂದ್ರ ಸರ್ಕಾರದ ನಿಲುವುಗಳನ್ನು ಸಭೆಯಲ್ಲಿ ಖಂಡಿಸಲಾಗುವುದು ಎಂದಿದ್ದಾರೆ.
ನಿರಂತರ ಬೆಲೆ ಏರಿಕೆ ಮಾಡಿ ಮನೆಯ ಬಜೆಟ್ ಹಾಳು ಗೆಡವುವ, ಲಕ್ಷಾಂತರ ಯುವಕರ ಭರವಸೆ ಮತ್ತು ಆಕಾಂಕ್ಷೆಗಳಿಗೆ ದ್ರೋಹ ಬಗೆಯುವ, ಹೂಡಿಕೆ ವಾತಾವರಣವನ್ನು ಕುಗ್ಗಿಸುವ ಮತ್ತು ತನ್ನ ವಿದೇಶಾಂಗ ನೀತಿಯಿಂದ ರಾಷ್ಟ್ರೀಯ ಹಿತಾಸಕ್ತಿಯನ್ನು ರಾಜಿ ಮಾಡಿಕೊಳ್ಳುವ ನರೇಂದ್ರ ಮೋದಿ ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳಿಗೆ ತೀವ್ರ ವಿರೋಧವನ್ನು ಇಂಡಿಯಾ ಬ್ಲಾಕ್ ವ್ಯಕ್ತಪಡಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಇನ್ನೂ ಇದಕ್ಕೆ ಪ್ರತಿಕ್ರಿಯಿಸಿರುವ (ಟಿಎಂಸಿ) ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್, “ಒಂದೇ ಉದ್ದೇಶ ಮತ್ತು ಸ್ಪಷ್ಟ ಗುರಿಯೊಂದಿಗೆ ಈ ಸಭೆ ನಡೆಯುತ್ತಿದೆ. ಭಾರತ ಒಗ್ಗಟ್ಟಾಗಿದೆ. ಹಲವು ಪಕ್ಷಗಳು ಸೌಹಾರ್ದ ಭಾವದಿಂದ ಭೇಟಿಯಾಗಲು ಎದುರು ನೋಡುತ್ತಿವೆ ಜೈರಾಂ ಎಂದು ಹೇಳಿದ್ದಾರೆ. ನಾಳಿನ ಸಭೆಯಲ್ಲಿ ಭಾಗಿಯಾಗಲು ವಿಪಕ್ಷಗಳ ಬಹುತೇಕ ನಾಯಕರು ದೆಹಲಿಗೆ ಬಂದಿಳಿದಿದ್ದಾರೆ.






