ಬೆಂಗಳೂರು : ನೂತನವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿಕೆ ಶಿವಕುಮಾರ್ ಇಂದು ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ತೆರಳಿ ಮತದಾರರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಬೆಳಿಗ್ಗೆ ನಗರದ ಸದಾಶಿವ ನಗರದಲ್ಲಿನ ನಿವಾಸದಿಂದ ನೇರವಾಗಿ ವಿಧಾನಸೌಧದ ಮೆಟ್ರೋ ನಿಲ್ದಾಣದಿಂದ ಕನಕಪುರ ರಸ್ತೆಯವರೆಗೆ ಪ್ರಯಾಣಿಸಿ ಅಲ್ಲಿಂದ ಭರ್ಜರಿ ರೋಡ್ ಶೋ ನಡೆಸಿದ್ದಾರೆ.

ಇದಕ್ಕೂ ಮುನ್ನ ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿ ಸಿಎಂ, ಜನರು ನನ್ನನ್ನು ದೊಡ್ಡಾಲಹಳ್ಳಿಯಿಂದ ಇಲ್ಲಿಯವರೆಗೆ ಕರೆತಂದಿದ್ದಾರೆ. ದೊಡ್ಡಾಲಹಳ್ಳಿ, ಸಾತನೂರು, ಕನಕಪುರ ಮತ್ತು ಬೆಂಗಳೂರು ದಕ್ಷಿಣ ಭಾಗದ ಜನರ ಬೆಂಬಲದಿಂದ ನಾನು ಈ ಹಂತಕ್ಕೆ ಬಂದಿದ್ದೇನೆ. ಮುಖ್ಯಮಂತ್ರಿ ಆದ ನಂತರ ನನ್ನನ್ನು ನೋಡಲು ಅಲ್ಲಿನ ಜನರು ಬಯಸಿದ್ದರು. ಆದರೆ ಅವರಿಗೆ ಸಮಯ ಕೊಡಲು ಸಾಧ್ಯವಾಗಿರಲಿಲ್ಲ. ಬೆಂಗಳೂರಿಗೆ ಬಾರದಂತೆ ನಾನು ಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದು ಕ್ಷೇತ್ರದ ಜನರ ಪ್ರೀತಿಯನ್ನು ಸ್ಮರಿಸಿದ್ದಾರೆ.
ಇನ್ನೂ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕನಕಪುರದ ಹಾರೋಹಳ್ಳಿಗೆ ಆಗಮಿಸಿದ ಡಿ ಕೆ ಶಿವಕುಮಾರ್‌ಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರಕಿದೆ. ರಾಜ್ಯದ ಮಹತ್ವದ ಜವಾಬ್ದಾರಿ ಹೊತ್ತ ನಂತರ ಕನಕಪುರಕ್ಕೆ ಸಿಎಂ ಕೈಗೊಂಡ ಮೊದಲ ಭೇಟಿ ಇದಾಗಿದ್ದು, ಇದಕ್ಕೆ “ಕೃತಜ್ಞತಾ ಯಾತ್ರೆ” ಎಂದು ಕರೆಯಲಾಗಿದೆ.
ಇದನ್ನೂ ಓದಿ : “8PM ಪ್ರಧಾನಿ ಮತ್ತೆ ಟಿವಿಯಲ್ಲಿ ದೇಶದ ಜನತೆಗೆ “ಕಡಿಮೆ ಊಟ ಮಾಡಿ” ಎಂಬ ಆತ್ಮನಿರ್ಬರತೆಯ ಉಚಿತ ಸಲಹೆ ನೀಡಬಹುದೇನೋ!”
ಅಲ್ಲದೆ ನೆರೆದಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ನಾನು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಇಲ್ಲಿ ಮುಖ್ಯಮಂತ್ರಿ ಅಲ್ಲ, ನಿಮ್ಮ ಮನೆ ಮಗ ಎಂದು ಭಾವುಕರಾಗಿ ನುಡಿದಿದ್ದಾರೆ.
ನಾನು ನಿಮ್ಮನ್ನೇ ಭೇಟಿ ಮಾಡಲು ಬರುತ್ತೇನೆ ಎಂದು ಹೇಳಿದ್ದೆ. ಆದ್ದರಿಂದ ನನ್ನ ಮೊದಲ ಭೇಟಿ ನನ್ನ ಕ್ಷೇತ್ರದ ಜನರನ್ನು ಭೇಟಿಯಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಮೀಸಲಾಗಿದೆ. ಕಳೆದ 40 ವರ್ಷಗಳಿಂದ ನನ್ನನ್ನು ರಾಜಕೀಯವಾಗಿ ಬೆಳೆಸಿದ ಜನರಿಗೆ ಧನ್ಯವಾದ ಹೇಳುವುದು ನನ್ನ ಕರ್ತವ್ಯ ಎಂದು ಡಿಕೆ ಶಿವಕುಮಾರ್ ಜನರ ಪ್ರೀತಿಗೆ ಮನಸೋತಿದ್ದಾರೆ.
ಇಂದಿನ ಭೇಟಿಯ ವೇಳೆ ಸುಮಾರು 20 ರಿಂದ 25 ಸ್ಥಳಗಳಲ್ಲಿ ಜನರನ್ನು ಭೇಟಿ ಮಾಡುವ ಕಾರ್ಯಕ್ರಮ ರೂಪಿಸಲಾಗಿದೆ. ಜನರ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕ ಅಧಿಕಾರಿಗಳನ್ನು ಇಲ್ಲಿಯೇ ನೇಮಿಸುತ್ತೇನೆ. ಇಲ್ಲಿನ ಜನರು ರಾಜಕೀಯ ಪ್ರಜ್ಞೆ ಹೊಂದಿದ್ದಾರೆ. ಅವರಿಗೆ ಸೇವೆ ಸಲ್ಲಿಸುವುದು ನನ್ನ ಕರ್ತವ್ಯ ಎಂದು ಜನರ ಪ್ರೀತಿಯನ್ನು ಮೆಲುಕು ಹಾಕಿದ್ದಾರೆ.
ನಿಮ್ಮ ಏನೇ ಸಮಸ್ಯೆ ಇದ್ದರೂ ನಮ್ಮ ಮನೆಯ ಬಾಗಿಲು ತೆರೆದಿರುತ್ತೆ..
ನೀವು ಗೆಲ್ಲಿಸಿದ್ದಕ್ಕೆ ನಾನು ಮುಖ್ಯಮಂತ್ರಿ ಆಗಿದ್ದೇನೆ. ಮುಖ್ಯಮಂತ್ರಿ ಆಗಿದ್ದರೂ ನಾನು ನಿಮ್ಮ ಸೇವಕ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಫಲವಾಗಿದ್ದೇನೆ. ನಿಮ್ಮ ಏನೇ ಸಮಸ್ಯೆ ಇದ್ದರೂ ನಮ್ಮ ಮನೆಯ ಬಾಗಿಲು ತೆರೆದಿರುತ್ತೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇನೆ. ಜೆಡಿಎಸ್‌ನವರಿಗೂ ನನ್ನ ಮನೆಯ ಬಾಗಿಲು ತೆರೆದಿರುತ್ತದೆ. ನನ್ನ ಮೇಲೆ ವಿಶ್ವಾಸ ಇಟ್ಟು ಇಕ್ಬಾಲ್ ಹುಸೇನ್ರನ್ನು ಗೆಲ್ಲಿಸಿದ್ದೀರಿ. ಇಕ್ಬಾಲ್ ಹುಸೇನ್ ಹೆಸರಿಗೆ ಮಾತ್ರ, ರಾಮನಗರಕ್ಕೆ ನಾನೇ ಶಾಸಕ ಎಂದು ಡಿಕೆ ಶಿವಕುಮರ್ ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಿಸಿದ್ದು ಐತಿಹಾಸಿಕ ನಿರ್ಧಾರ. ಹೆಸರು ಬದಲಾವಣೆಯಿಂದ ನಿಮ್ಮ ಭೂಮಿಯ ಬೆಲೆ ಹೆಚ್ಚಾಯಿತು. ಬೆಂಗಳೂರು ದಕ್ಷಿಣ ಜಿಲ್ಲೆ ಮಾಡೋದಕ್ಕೆ ಕೆಲವರು ವಿರೋಧಿಸಿದರು. ಜಿಲ್ಲೆಯ ಹೆಸರು ಬದಲಾವಣೆಯಿಂದ ಈಗ ಎಲ್ಲರಿಗೂ ಅರ್ಥವಾಗುತ್ತಿದೆ ಎಂದು ಜೆಡಿಎಸ್ ನಾಯಕರಿಗೆ ಕುಟುಕಿದ್ದಾರೆ.
ಹಾರೋಹಳ್ಳಿ ಅಭಿವೃದ್ಧಿಗೆ ಪ್ರತ್ಯೇಕ ಮೀಟಿಂಗ್ ಮಾಡುತ್ತೇನೆ. ಕನಕಪುರದಲ್ಲಿ ಶೀಘ್ರದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುತ್ತೇವೆ. ತುಮಕೂರು, ಬೆಂಗಳೂರು ಗ್ರಾಮಾಂತರ ಭಾಗದವರಿಗೂ ಅನುಕೂಲವಾಗುತ್ತದೆ. ಇಲ್ಲಿನ ಜನರು ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸುತ್ತೇವೆ. ಉತ್ತಮ ವಿದ್ಯಾಭ್ಯಾಸ ಇಲ್ಲೇ ದೊರಕುವಂತೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕ್ಷೇತ್ರದ ಜನರಿಗೆ ಭರವಸೆ ನೀಡಿದ್ದಾರೆ






