ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಬುಧವಾರ (ಡಿಸೆಂಬರ್ 1) ಬೆಳಿಗ್ಗೆ ಸಂಸತ್ತಿನಲ್ಲಿ ಮಾತನಾಡಿ, ಒಂದು ವರ್ಷದಿಂದ ನಡೆಯುತ್ತಿರುವ ಪ್ರತಿಭಟನೆಯ ಸಮಯದಲ್ಲಿ ರೈತರು ನಿಧನರಾದ ವಿಷಯಕ್ಕೆ ಸಂಬಂಧಿಸಿದಂತೆ “ದಾಖಲೆ” ಸರ್ಕಾರದ ಬಳಿ ಇಲ್ಲ, ಆದ್ದರಿಂದ ಪರಿಹಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಸುಮಾರು 700 ರೈತರು ಮೃತರಾಗಿದ್ದನ್ನು ಪ್ರತಿಭಟನಾಕಾರರು, ಸಂಘಸಂಸ್ಥೆಗಳು ಮತ್ತು ಹಲವು ಮಾಧ್ಯಮಗಳು ದಾಖಲಿಸಿವೆ. ಈ ಸರ್ಕಾರದ ಬಳಿ ಯಾವ ದತ್ತಾಂಶ ಅಥವಾ ಡೇಟಾ ಇದೆ? ಲಾಕ್ಡೌನ್ ಘೋಷಣೆಯಾದ ನಂತರ ವಾಹನ ಸೌಕರ್ಯವಿಲ್ಲದೇ ಸಾವಿರಾರು ಕಿಮೀ ಪಾದಯಾತ್ರೆಯಲ್ಲಿ ಊರ ಕಡೆ ಹೊರಟ ಲಕ್ಷಾಂತರ ವಲಸೆ ಕಾರ್ಮಿಕರಲ್ಲಿ ನೂರಾರು ಜನರು ದಾರಿ ಮಧ್ಯೆಯೇ ಹಸಿವು, ನೀರಡಿಕೆ, ಬಳಲಿಕೆಯಿಂದ ಅಸು ನೀಗಿದರು. ಅವರಿಗೆ ಪರಿಹಾರ ಕೊಡಿ ಎಂದರೆ, ಹಾಗೆ ಯಾರೂ ಸತ್ತಿಲ್ಲ ಎಂದು ಲಜ್ಜೆ ಬಿಟ್ಟು ಹೇಳಿದ ಸರ್ಕಾರ, ನಂತರದಲ್ಲಿ ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಪರಿಹಾರ ನೀಡಲು ನಿರಾಕರಿಸಿತು.
ಕೋವಿಡ್ನಿಂದ ಮೃತರಾದವರ ಸ್ಪಷ್ಟ ಸಂಖ್ಯೆಯೂ ಗೊತ್ತಿಲ್ಲ, ಕೋವಿಡ್ ಚಿಕಿತ್ಸೆ ವೇಳೆ ಮೃತರಾದ ವೈದ್ಯರು, ಮುಂಚೂಣಿ ಆರೋಗ್ಯ ಕಾರ್ಯಕರ್ತರ ವಿವರಗಳೂ ಇಲ್ಲ. ಹೀಗಾಗಿ ಅದರಲ್ಲಿ ಬಹುತೇಕರ ಕುಟುಂಬಗಳಿಗೆ ಪರಿಹಾರ ನೀಡಲಿಲ್ಲ. ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸರ್ಕಾರವನ್ನು ಹಿಗ್ಗಾಮುಗ್ಗಾ ಜಾಡಿಸಿದರೂ ಸರ್ಕಾರ ಎಚ್ಚರಗೊಳ್ಳಲಿಲ್ಲ. ನೋಟು ಅಮಾನ್ಯೀಕರಣದಿಂದ ಸಂಗ್ರಹವಾದ ಹಣವೆಷ್ಟು, ಇದರಿಂದ ಮುಚ್ಚಿ ಹೋದ ಸಣ್ಣ ಉದ್ಯಮಗಳೆಷ್ಟು- ಈ ಯಾವುದರ ಬಗ್ಗೆಯೂ ಈ ದರಿದ್ರ ಸರ್ಕಾರದ ಬಳಿ ಯಾವುದೇ ಡೇಟಾ ಇಲ್ಲ.
ಸತ್ಯ ಏನೆಂದರೆ, ಎಲ್ಲವೂ ಇದೆ, ಆದರೆ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಸಂತ್ರಸ್ತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿ ವಿಕೃತ ಖುಷಿ ಪಡೆಯಲು ಈ ಸರ್ಕಾರ ಕೆಲಸ ಮಾಡುತ್ತಿದೆ.
ಲಸಿಕೆಯ ವಿಷಯದಲ್ಲೂ ಇದೇ ಗೊಂದಲ ಭಾರತ್ ಬಯೋಟೆಕ್ ಜೊತೆಗೆ ಮಾಡಿಕೊಳ್ಳಲಾದ ಒಪ್ಪಂದವನ್ನೂ ಬಹಿರಂಗ ಮಾಡಿಲ್ಲ. ಪ್ರಧಾನಮಂತ್ರಿ ಕೋವಿಡ್ ನಿಧಿಯಲ್ಲಿ ಎಷ್ಟು ದುಡ್ಡು ಸಂಗ್ರಹವಾಗಿದೆ ಎಂಬುದನ್ನೂ ಬಹಿರಂಗ ಮಾಡುತ್ತಿಲ್ಲ. ಮಾಹಿತಿ ಹಕ್ಕು ಕಾಯ್ದೆಯ (ಆರ್ಟಿಐ) ಕತ್ತನ್ನೇ ಈ ಸರ್ಕಾರ ಹಿಸುಕಿದೆ.
NDA ಅಂದರೆ No Data Administration ಎಂದು ಪದೇ ಪದೇ ಸಾಬೀತಾಗುತ್ತಿದೆ.
ರೈತ ಸಂಘಗಳು, ವಿರೋಧ ಪಕ್ಷದ ನಾಯಕರು ಮತ್ತು ಇತರ ಕಾರ್ಯಕರ್ತರು ಪ್ರತಿಭಟನೆಯ ಸಂದರ್ಭದಲ್ಲಿ 700 ಕ್ಕೂ ಹೆಚ್ಚು ಸಾವುಗಳನ್ನು ದಾಖಲಿಸಿದ್ದಾರೆ. ಆದರೂ, ತೋಮರ್ ಲೋಕಸಭೆಗೆ, ” ಕೃಷಿ ಸಚಿವಾಲಯವು ಈ ವಿಷಯದಲ್ಲಿ ಯಾವುದೇ ದಾಖಲೆಯನ್ನು ಹೊಂದಿಲ್ಲ. ಆದ್ದರಿಂದ ಪರಿಹಾರದ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ಹೇಳಿದ್ದಾರೆ.
ಈ ಕುರಿತು ʼಪ್ರತಿಧ್ವನಿʼ ಜೊತೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ವೀರಸಂಗಯ್ಯ, ರೈತರ ಸಾವಿನ ಮೇಲೂ ಆಟ ಆಡುತ್ತಿರುವ ಈ ಸರ್ಕಾರ ದೊಡ್ಡ ದಂಡ ತೆರಲೇಬೇಕು. ಬಹುಮತ ಇದೆ ಎಂದ ಮಾತ್ರಕ್ಕೆ ಪ್ರಜಾಸತ್ತೆಯನ್ನು ಧಿಕ್ಕರಿಸಲಾಗದು. ಇದೊಂದು ಅಮಾನವೀಯ, ಜೀವವಿರೋಧಿ ಸರ್ಕಾರ. ಈ ಸರ್ಕಾರದ ಪಾಪದ ಕೊಡ ತುಂಬಿದೆ. ಇದಕ್ಕೆ ತಕ್ಕ ಶಾಸ್ತಿಯೂ ಆಗಲಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹದಾಯಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ರೈತ ಸೇನಾದ ಅಧ್ಯಕ್ಷ ವೀರೇಶ್ ಸೊಬರದಮಠ ʼಪ್ರತಿಧ್ವನಿʼಗೆ ಪ್ರತಿಕ್ರಿಯಿಸಿ, ʼತೋಮರ್ ಸಚಿವರಾಗಲಿಕ್ಕೇ ನಾಲಾಯಕ್. ಅದರಲ್ಲೂ ಈ ಮನುಷ್ಯನಿಗೆ ಕೃಷಿ ಖಾತೆ ನೀಡಿದ್ದಾರೆ. ರಾಜಧಾನಿಯಲ್ಲೇ ಪ್ರತಿಭಟನಾನಿರತ 700 ರೈತರು ನಿಧನರಾದರೂ ಈ ಮೂರ್ಖ ಮತ್ತು ಈತನ ಇಲಾಖೆಗೆ ಗೊತ್ತೇ ಇಲ್ಲವೆಂದರೆ ನಾಚಿಕೆಗೇಡುʼ ಎಂದರು.
ಸಂವೇದನಾಶೂನ್ಯ ಸರ್ಕಾರ!
ಇದೇನು ಕುರುಡು ಸರ್ಕಾರವೋ? ಸಂವೇದನೆಯನ್ನೇ ಕಳೆದುಕೊಂಡ ಜೀವವಿರೋಧಿಗಳ ಗುಂಪೋ?
ಚಳಿ-ಮಳೆ ಲೆಕ್ಕಿಸದೇ ಜೀವನ್ಮರಣದ ಹೋರಾಟ ನಡೆಸಿ, ಹುತಾತ್ಮರಾದ ರೈತರನ್ನು ಈ ಸರ್ಕಾರ ಅವಮಾನಿಸುತ್ತಿದೆ. ಸಂಸತ್ತು ಎಂಬ ಪ್ರಜಾಸತ್ತಾತ್ಮಕ ವೇದಿಕೆಯನ್ನು ದುರುಪಯೋಗ ಮಾಡಿಕೊಂಡು,ಕಡತಗಳಲ್ಲಿ ದಾಖಲಾಗುವಂತೆ ಹಸಿ ಸುಳ್ಳುಗಳನ್ನು ಈ ಸರ್ಕಾರ ಹೇಳುತ್ತಿದೆ.
ರದ್ದತಿ ಘೋಷಿಸಿದ ನಂತರ ಮೋದಿಗೆ ಬರೆದ ಪತ್ರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ಇನ್ನೂ ಈಡೇರದೆ ಉಳಿದಿರುವ ಆರು ಬೇಡಿಕೆಗಳನ್ನು ಪಟ್ಟಿ ಮಾಡಿದೆ. ಪ್ರತಿಭಟನೆಯ ವೇಳೆ ಪ್ರಾಣ ಕಳೆದುಕೊಂಡ ಎಲ್ಲ ರೈತರಿಗೂ ಸ್ಮಾರಕ ನಿರ್ಮಿಸಬೇಕು ಎಂಬುದು ಕೂಡ ಒಂದು ಬೇಡಿಕೆಯಾಗಿತ್ತು. ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಕೂಡ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಹಲವು ಸಲ ಪುನರುಚ್ಚರಿಸಿದ್ದಾರೆ.
ದಿ ವೈರ್ ವರದಿ ಮಾಡಿದಂತೆ, ಮೃತರ ಕುಟುಂಬಗಳು ಇನ್ನೂ ನ್ಯಾಯಕ್ಕಾಗಿ ಪ್ರಯತ್ನಿಸುತ್ತಿವೆ. ಸರಕಾರ ಈ ಹಿಂದೆಯೇ ರೈತರಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ಜೀವ ಉಳಿಸಬಹುದಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇದುವರೆಗೆ ತೆಲಂಗಾಣ ಸರ್ಕಾರ ಮಾತ್ರ ಪ್ರತಿಭಟನೆಯ ವೇಳೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ರೈತರ ಕುಟುಂಬಗಳಿಗೆ 3 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಕುಟುಂಬಗಳಿಗೆ 25 ಲಕ್ಷ ರೂಪಾಯಿ ನೀಡುವುದಾಗಿ ಸಮಾಜವಾದಿ ಪಕ್ಷ ಭರವಸೆ ನೀಡಿದೆ.
ಆದರೆ, ಕೇಂದ್ರ ಸರ್ಕಾರದ ಪ್ರಕಾರ, ಪ್ರತಿಭಟನಾನಿರತ ರೈತರಲ್ಲಿ ಯಾರೂ ಮೃತರಾಗಲೇ ಇಲ್ಲ. ಇದಕ್ಕಿಂತ ಕ್ರೌರ್ಯ ಬೇಕೆ?