ಅಡುಗೆ ಅನಿಲ ಸಿಲಿಂಡರ್ ದರವನ್ನು ಮತ್ತೆ ಏರಿಕೆ ಮಾಡಲಾಗಿದೆ. 19 ಕೆಜಿಯ ವಾಣಿಜ್ಯ ಬಳಕೆ ಸಿಲಿಂಡರ್ ದರವನ್ನು ಬುಧವಾರ 100 ರುಪಾಯಿಗಳಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ 19 ಕೆಜಿಯ ಒಂದು ಸಿಲಿಂಡರ್ ದರವು 2101ಕ್ಕೆ ಏರಿದೆ. ಸದ್ಯಕ್ಕೆ 14.2 ಕೆ.ಜಿ. ತೂಕದ ಗೃಹ ಬಳಕೆ ಸಿಲಿಂಡರ್ ದರವನ್ನು ಏರಿಕೆ ಮಾಡಿಲ್ಲ.
ನವೆಂಬರ್ 1 ರಂದು 19 ಕೆಜಿ ಸಿಲಿಂಡರ್ ದರವನ್ನು 266 ರುಪಾಯಿ ಏರಿಕೆ ಮಾಡಲಾಗಿತ್ತು. ಅದಕ್ಕೂ ಮುನ್ನ ಅಕ್ಟೋಬರ್ 1 ರಂದು 43 ರುಪಾಯಿ ಏರಿಕೆ ಆಗಿತ್ತು. ಅಕ್ಟೋಬರ್ 6 ರಂದು 2.50 ರುಪಾಯಿ ಮಾತ್ರ ಇಳಿಕೆ ಮಾಡಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲೂ 75 ರುಪಾಯಿ ಏರಿಕೆ ಮಾಡಿತ್ತು.
ಮೂರು ತಿಂಗಳ ಅವಧಿಯಲ್ಲಿ 484 ರುಪಾಯಿ ಏರಿಕೆ ಮಾಡಿದಂತಾಗಿದೆ. ಈ ಅವಧಿಯಲ್ಲಿ ಸರ್ಕಾರ ದರ ಇಳಿಕೆ ಮಾಡಿದ್ದು ಒಂದೇ ಬಾರಿ. ಅದೂ ಕೇವಲ2.50 ರುಪಾಯಿ ಮಾತ್ರ. ಈ ಮೂರು ತಿಂಗಳಲ್ಲೇ ಕೇಂದ್ರ ಸರ್ಕಾರವು ಸಿಲಿಂಡರ್ ದರವನ್ನು ಶೇ.30ರಷ್ಟು ಏರಿಕೆ ಮಾಡಿದಂತಾಗಿದೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಗೃಹ ಬಳಕೆ ಸಿಲಿಂಡರ್ ದರವು 597 ರುಪಾಯಿಗಳಷ್ಟಿತ್ತು. ಈಗ 900 ರುಪಾಯಿ ಗಡಿ ದಾಟಿದೆ. ಪ್ರಸ್ತುತ ಬೆಂಗಳೂರಿನಲ್ಲಿ 902 ರುಪಾಯಿಗಳಷ್ಟಿದೆ. ಅಂದರೆ ಒಂದೇ ವರ್ಷದ ಅವಧಿಯಲ್ಲಿ 305 ರುಪಾಯಿಗಳಷ್ಟು ಏರಿಕೆ ಮಾಡಲಾಗಿದೆ. ಒಂದೇ ವರ್ಷದಲ್ಲಿ ಅತಿ ಗರಿಷ್ಠ ಅಂದರೆ ಶೇ.50ರಷ್ಟು ಏರಿಕೆ ಇದಾಗಿದೆ.
ವಾಣಿಜ್ಯ ಬಳಕೆ ಸಿಲಿಂಡರ್ ದರ ಏರಿಕೆಯು ಪರೋಕ್ಷವಾಗಿ ಉಳಿದೆಲ್ಲ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತಿದೆ. ಮುಖ್ಯವಾಗಿ ಹೋಟೆಲ್ ಉದ್ಯಮವು ವಾಣಿಜ್ಯ ಬಳಕೆ ಸಿಲಿಂಡರ್ ಬಳಸುತ್ತಿರುವುದರಿಂದ ಕಾಫಿ, ಟೀ, ತಿಂಡಿ, ಊಟದ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ.