ಕೋವಿಡ್ ಸಂಕಷ್ಟದಲ್ಲೇ 2021ನೇ ವರ್ಷ ಮುಗಿದಿದೆ. 2022ನೇ ವರ್ಷವೂ ಹೊಸ ಕೋವಿಡ್ ರೂಪಾಂತರಿ ಓಮಿಕ್ರಾನ್ ವ್ಯಾಪಿಸುವ ಆತಂಕದ ನಡುವೆಯೇ ಪ್ರಾರಂಭವಾಗುತ್ತಿದೆ. ಕೋವಿಡ್ ಸಂಕಷ್ಟ ಬೇರೆ ಬೇರೆ ಸ್ವರೂಪದಲ್ಲಿ ವ್ಯಾಪಿಸಿತ್ತು. ಜನಸಾಮಾನ್ಯರ ಬದುಕು ಬೆಲೆ ಏರಿಕೆಗಳಿಂದ ತತ್ತರಿಸಿ ಹೋಗಿತ್ತು. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ. ಈ ಹಿಂದೆ ಅಸಂಘಟಿತ ವಲಯದಲ್ಲಿದ್ದ ಉದ್ಯೋಗಗಳ ಕೊರತೆ ಈಗ ಸಂಘಟಿತ ವಲಯಕ್ಕೂ ಕಾಲಿಟ್ಟಿದೆ. ಸಂಘಟಿತ ವಲಯಗಳಲ್ಲಿ ಉದ್ಯೋಗ ನಷ್ಟ ಹೆಚ್ಚುತ್ತಲೇ ಇದೆ. ಆರ್ಥಿಕತೆಯ ಚೇತರಿಕೆಯ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದ್ದರು, ವಾಸ್ತವಿಕವಾಗಿ ಆರ್ಥಿಕತೆ ಚೇತರಿಕೆಗೆ ಮೂಲದ್ರವ್ಯವಾದ ಉದ್ಯೋಗ ಸೃಷ್ಟಿಯಾಗುತ್ತಲೇ ಇಲ್ಲ.
ಈ ಹಿನ್ನೆಲೆಯಲ್ಲಿ ಹೊಸ ವರ್ಷ ಹೇಗಿದ್ದೀತು, ಉದ್ಯೋಗ ಸೃಷ್ಟಿಯಾಗಬಹುದೇ? ಬೆಲೆ ಏರಿಕೆ ಇಳಿಯಬಹುದೇ? ಜನರ ಬದುಕ ಹಸನಾಗಬಹುದೇ? ದೇಶದ ಆರ್ಥಿಕತೆ ಚೇತರಿಸಿಕೊಳ್ಳಬಹುದೇ? ಈ ಎಲ್ಲಾ ಪ್ರಶ್ನೆಗಳ ಹಿನ್ನೆಲೆಯಲ್ಲಿ 2022ನೇ ಸಾಲಿನ ಮುನ್ನಂದಾಜು ಇಲ್ಲಿದೆ.
ಸದ್ಯಕ್ಕೆ ಪೆಟ್ರೋಲ್, ಡಿಸೇಲ್ ಬೆಲೆ ಏರಲ್ಲ!
ಇದೊಂದು ಸಂತಸ ಸುದ್ದಿ. ದುಃಖದ ಸುದ್ದಿ ಏನೆಂದರೆ ಈ ಸಂತಸ ಬಹಳ ದಿನ ಉಳಿಯಲ್ಲ. ಪೆಟ್ರೋಲ್ ಮತ್ತು ಡಿಸೇಲ್ ದರ ತೀವ್ರವಾಗಿ ಏರಿಕೆಯಾಗಿ ಡಿಸೇಲ್ ಕೂಡಾ ಶತಕ ಬಾರಿಸಿದ ನಂತರ ದೇಶವ್ಯಾಪಿ ಪ್ರತಿಭಟನೆಗಳಾದ ನಂತರ, ನವೆಂಬರ್ ಆರಂಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಂಕ ಕಡಿತ ಮಾಡಿದವು. ತತ್ಪರಿಣಾಮ ಪೆಟ್ರೋಲ್ ಮತ್ತು ಡಿಸೇಲ್ ದರಗಳು ಕೊಂಚ ಕುಸಿದವು ನಂತರ ಬಹುತೇಕ ಸ್ಥಿರವಾಗಿವೆ. ಪೆಟ್ರೋಲ್ 100ರ 90ರ ಆಜುಬಾಜಿನಲ್ಲಿದೆ. ಸುಮಾರು ಅರವತ್ತು ದಿನಗಳಿಂದ ದರಗಳು ಸ್ಥಿರವಾಗಿವೆ. ಈ ದರಗಳು 2022ರಲ್ಲೂ ಸ್ಥಿರವಾಗಿ ಇರುತ್ತವೆಯೇ? ಖಂಡಿತಾ ಇಲ್ಲಾ. ಆದರೆ, ಜೂನ್ ತಿಂಗಳವರೆಗೂ ಈಗಿನ ದರವೇ ಒಂಚೂರು ಏರಿಳಿಕೆಯೊಂದಿಗೆ ಮುಂದುವರೆಯುತ್ತದೆ.

ಜೂನ್ ನಂತರದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ತ್ವರಿತವಾಗಿ ಏರಿಕೆಯಾಗಲಿದೆ. ಅದಕ್ಕೆ ಮುಖ್ಯ ಕಾರಣ ಏನೆಂದರೆ, ಮೇ-ಜೂನ್ ತಿಂಗಳಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಖಂಡ ಮತ್ತು ಮಣಿಪುರ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಕೇಂದ್ರ ಸರ್ಕಾರವು ವಿಧಾನಸಭಾ ಚುನಾವಣೆಗಳು ಹತ್ತಿರ ಬರುವ ಹೊತ್ತಿನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡುವುದಿಲ್ಲ. ಚುನಾವಣೆ ಮುಗಿದ ನಂತರ ಏರಿಕೆ ಮಾಡುತ್ತದೆ. ಏರಿಕೆಯು ತ್ವರಿತಗತಿಯಲ್ಲಿರುತ್ತದೆ. ಜೂನ್ ನಂತರದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರುತ್ತದೆ. ಏರಿಕೆ ಎಷ್ಟು ಎಂಬುದು ಆ ಹೊತ್ತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಎಷ್ಟಿರುತ್ತದೆಂಬುದನ್ನು ಆಧರಿಸಿರುತ್ತದೆ. ಆದರೆ, ಜನರು ಅಲ್ಲಿಯವರೆಗೂ ಸಮಾಧಾನದಿಂದ ಇರಬಹುದು. ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುವುಲ್ಲ ಎಂದ ಮಾತ್ರಕ್ಕೆ ಇತರ ವಸ್ತುಗಳ ಬೆಲೆ ಏರಿಕೆಯಾಗುವುದಿಲ್ಲ ಎಂಬ ಗ್ಯಾರಂಟಿ ಏನೂ ಇಲ್ಲ. ಆ ಕಾರಣಕ್ಕೆ ಜನ ಸಾಮಾನ್ಯರು ಬೆಲೆ ಏರಿಕೆಯನ್ನು ಅರಗಿಸಿ ಕೊಳ್ಳಲು ಸಿದ್ದರಾಗಬೇಕು.
ಜನರ ಜೇಬಿಗೆ ಕತ್ತರಿ ಹಾಕಲು ಸರ್ಕಾರ ಸಿದ್ದ
ಜನರ ಜೇಬಿಗೆ ಕತ್ತರಿ ಹಾಕಲು ಸರ್ಕಾರವೇ ಈಗಾಗಲೇ ಸಿದ್ದವಾಗಿದೆ. ಸರಕು ಸೇವಾ ತೆರಿಗೆ ವ್ಯಾಪ್ತಿಗೆ ಬಹುತೇಕ ಎಲ್ಲಾ ಸೇವೆಗಳನ್ನು ಕೇಂದ್ರ ಸರ್ಕಾರ ತಂದಿದೆ. ಹೀಗಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತೆರಿಗೆ ಬೀಳಲಿದೆ. ದಿನ ಬಳಕೆ ವಸ್ತುಗಳು ಮತ್ತಷ್ಟು ತುಟ್ಟಿ ಆಗಲಿವೆ. ಆಹಾರ ಧಾನ್ಯಗಳು, ಖಾದ್ಯ ತೈಲಗಳು, ಹಣ್ಣು ತರಕಾರಿಗಳ ಬೆಲೆ ಮತ್ತಷ್ಟು ಏರಲಿದೆ. ಈಗಾಗಲೇ ನಿರೀಕ್ಷಿತ ಮಟ್ಟ ಮೀರಿ ಜಿಗಿದಿರುವ ಹಣದುಬ್ಬರ ತಣಿಯಲು ಸಾಕಷ್ಟು ಕಾಲಾವಕಾಶ ಬೇಕಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿರುವ ಅಂಕಿ ಅಂಶಗಳ ಪ್ರಕಾರ ಮುಂದಿನ ಮೂರು- ನಾಲ್ಕು ತ್ರೈಮಾಸಿಕಗಳಲ್ಲಿ ಹಣದುಬ್ಬರ ಈಗಿರುವ ಮಟ್ಟದಲ್ಲೇ ಮುಂದುವರೆಯಲಿದ್ದು, ಗರಿಷ್ಠ ಶೇ.5.7ರಷ್ಟು ಮುಟ್ಟಬಹುದು. ಎಟಿಎಂ ವಹಿವಾಟಿಗೂ ಜಿಎಸ್ಟಿ, ಓಲಾ, ಉಬರ್ ಬುಕಿಂಗ್ ಮೇಲೂ ಶೇ.5ರಷ್ಟು ಜಿಎಸ್ಟಿ ಬೀಳಲಿದೆ. ಬಟ್ಟೆ ಪಾದರಕ್ಷೆಗಳ ಮೇಲಿ ಜಿಎಸ್ಟಿ ತೆರಿಗೆಯನ್ನು ಶೇ.5ರಿಂದ 12ಕ್ಕೆ ಏರಿಕೆ ಆಗುತ್ತಿದೆ. ಹೊಸವರ್ಷವು ಹೊಸತೆರಿಗೆ ಭಾರ ಹೊರುವ ತಯಾರಿಯೊಂದಿಗೆ ಆರಂಭವಾಗುತ್ತಿದೆ. ಬರುವ ಬಜೆಟ್ ನಂತರ ಮತ್ತಷ್ಟು ಭಾರ ಹೊರ ಬೇಕಾಗುತ್ತದೆ.
ಅತ್ತ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದರೆ, ಇತ್ತ ಕರೆನ್ಸಿ ಮಾರುಕಟ್ಟೆಯಲ್ಲಿ ರುಪಾಯಿ ಅಪಮೌಲ್ಯದಿಂದ ತತ್ತರಿಸುತ್ತಿದೆ. ರುಪಾಯಿ ಮೌಲ್ಯ ಕುಸಿಯುತ್ತಿದೆ ಎಂದಾದರೆ ಆಮದು ಮಾಡಿಕೊಳ್ಳುವ ಎಲ್ಲಾ ಸರಕು ಸೇವೆಗಳ ದರವೂ ಏರಿಕೆಯಾಗುತ್ತದೆ. ಅಂದರೆ ಜನರ ಜೇಬಿಗೆ ಕತ್ತರಿ ಬೀಳುತ್ತಲೇ ಇರುತ್ತದೆ. ಡಾಲರ್ ವಿರುದ್ಧ ರುಪಾಯಿ ಮೌಲ್ಯವು ಸತತವಾಗಿ ಕುಸಿಯುತ್ತಲೇ ಬಂದಿದೆ. ಡಿಸೆಂಬರ್ ಮೂರನೇ ವಾರದಲ್ಲಿ ರುಪಾಯಿ ಮೌಲ್ಯವು 76.40ಕ್ಕೆ ಕುಸಿದಿತ್ತು. ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶಿಸಿ, ತನ್ನ ವಿದೇಶಿ ವಿನಿಮಯ ಮೀಸಲು ನಿಧಿಯಿಂದ 6 ಬಿಲಿಯನ್ ಡಾಲರ್ ಗಳನ್ನು ಮಾರಾಟ ಮಾಡಿ, ರುಪಾಯಿ ಮೌಲ್ಯ ಕುಸಿಯುುವುದನ್ನು ತಡೆದಿದೆ. ಕರೆನ್ಸಿ ಮಾರುಕಟ್ಟೆ ತಜ್ಞರ ಪ್ರಕಾರ ರುಪಾಯಿ ಮೌಲ್ಯವು 2022ರ ಅಂತ್ಯದ ವೇಳೆಗೆ 77-78ರ ಆಜುಬಾಜಿಗೆ ಕುಸಿಯಲಿದೆ ಎಂಬುದು ಕರೆನ್ಸಿ ಮಾರುಕಟ್ಟೆ ತಜ್ಞರ ಮುನ್ನಂದಾಜು. ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ ಮುನ್ಸೂಚನೆ ನೀಡಿದೆ. ಬಡ್ಡಿ ಏರಿಕೆಯಾದರೆ, ಡಾಲರ್ ಮತ್ತಷ್ಟು ಪ್ರಬಲಗೊಂಡು ರುಪಾಯಿ ಮೌಲ್ಯ ನಿರೀಕ್ಷಿಸಿದ್ದಕ್ಕಿಂತ ತ್ವರಿತವಾಗಿ ಕುಸಿಯುವ ಸಾಧ್ಯತೆ ಇದೆ.
ಇವೆಲ್ಲದರ ನಡುವೆ ಒಂದೇ ಒಂದು ಆಶದಾಯಕ ಅಂಶ ಎಂದರೆ ಕೃಷಿ ಕ್ಷೇತ್ರ ಉತ್ತಮ ಸಾಧನೆ ಮಾಡಲಿದೆ. ಪ್ರಕೃತಿ ಪ್ರಕೋಪ, ಅಕಾಲಿಕ ಮಳೆಯ ನಡುವೆಯೂ ಆಹಾರಧಾನ್ಯಗಳ ಉತ್ಪಾದನೆ ಹೆಚ್ಚಲಿದೆ ಎಂಬ ಮುನ್ನಂದಾಜು ಇದೆ. ಕೃಷಿ ಯಾಂತ್ರೀಕರಣ, ತತ್ಪರಿಣಾಮ ಹೆಚ್ಚುತ್ತಿರುವ ಉತ್ಪಾದಕತೆ, ವೈಜ್ಞಾನಿಕ ಬೆಳೆ ವಿಧಾನ ಅಳವಡಿಕೆಗಳ ಜತೆಗೆ ಸಾಮಾನ್ಯ ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಕೃಷಿ ಕ್ಷೇತ್ರದಿಂದ ಉತ್ತಮ ಸಾಧನೆ ನಿರೀಕ್ಷಿಸಲಾಗಿದೆ. 2021-22ನೇ ಸಾಲಿನಲ್ಲಿ 320 ದಶಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆ ಆಗುವ ಅಂದಾಜು ಇದೆ.
ಈ ಸಾಲಿನಲ್ಲಿ 310 ದಶಲಕ್ಷ ಟನ್ ಆಹಾರ ಉತ್ಪಾದನೆ ಆಗಲಿದೆ. ಕೃಷಿ ಚಟುವಟಿಕೆ ಗರಿಗೆದರಿದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಕೃಷಿಕರ ಆದಾಯ ಹೆಚ್ಚಿದರೆ ಉಪಭೋಗ ಬೇಡಿಕೆಯೂ ವೃದ್ಧಿಸುತ್ತದೆ. ಹೀಗಾಗಿ ಉಳಿದೆಲ್ಲ ವಲಯಗಳಿಗಿಂತ ಕೃಷಿ ವಲಯದ ಮೇಲೆ ಹೆಚ್ಚಿನ ಭರವಸೆ. ಕೃಷಿ ಉತ್ಪನ್ನಗಳ ಬೇಡಿಕೆಯೂ ವೃದ್ಧಿಸುತ್ತಿದೆ. ಆ ಮೂಲಕ ಕೃಷಿ ಕ್ಷೇತ್ರವು ಆರ್ಥಿಕಾಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಲಿದೆ ಎಂಬ ಬಹಳ ನಿರೀಕ್ಷೆ ಆರ್ಥಿಕತಜ್ಞರಲ್ಲಿದೆ.