• Home
  • About Us
  • ಕರ್ನಾಟಕ
Sunday, November 16, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಪ್ರಜಾತಂತ್ರದ ಚೌಕಟ್ಟಿನಲ್ಲಿ ನೇಪಾಳದ ದಂಗೆ-ಬಂಡಾಯ

ನಾ ದಿವಾಕರ by ನಾ ದಿವಾಕರ
September 14, 2025
in Top Story, ಜೀವನದ ಶೈಲಿ, ದೇಶ, ರಾಜಕೀಯ, ವಿದೇಶ
0
ಪ್ರಜಾತಂತ್ರದ ಚೌಕಟ್ಟಿನಲ್ಲಿ ನೇಪಾಳದ ದಂಗೆ-ಬಂಡಾಯ
Share on WhatsAppShare on FacebookShare on Telegram

ನವ ಉದಾರವಾದ ಮತ್ತು ಸರ್ವಾಧಿಕಾರದ ದುಷ್ಪರಿಣಾಮಗಳಿಗೆ ಪ್ರಾತ್ಯಕ್ಷಿಕೆಯಾದ  ನೇಪಾಳ

ADVERTISEMENT

ನಾ ದಿವಾಕರ

 ನೆರೆ ರಾಷ್ಟ್ರ ನೇಪಾಳದಲ್ಲಿ ಕಳೆದ ಹಲವು ದಿನಗಳಲ್ಲಿ ನಡೆದಿರುವ ಕ್ಷಿಪ್ರಗತಿಯ ಬೆಳವಣಿಗೆಗಳು ಚಾರ್ಲ್ಸ್‌ ಡಿಕನ್ಸ್‌ ಅವರ ಈ ದಾರ್ಶನಿಕ ಮಾತುಗಳನ್ನು ನೆನಪಿಸುತ್ತವೆ :

 “ ಅದೊಂದು ಅತ್ಯುತ್ತಮ ಸಮಯ ಆಗಿತ್ತು, ಅದು ಅತ್ಯಂತ ಕೆಟ್ಟ ಸಮಯ ಆಗಿತ್ತು, ಅದು ವಿವೇಕದ ಕಾಲವಾಗಿತ್ತು, ಅದು ಮೂರ್ಖತನದ ಕಾಲವಾಗಿತ್ತು, ಅದು ನಂಬಿಕೆಗಳ ಯುಗ ಆಗಿತ್ತು, ಅದು ಅಪನಂಬಿಕೆಯ ಯುಗ ಆಗಿತ್ತು, ಅದು ಬೆಳಕಿನ ಕಾಲವಾಗಿತ್ತು, ಅದು ಕತ್ತಲೆಯ ಕಾಲವಾಗಿತ್ತು, ಅದು ಭರವಸೆಯ ವಸಂತ ಋತು ಆಗಿತ್ತು, ಅದು ಹತಾಶೆಯ ಶೀತಲ ಋತು ಆಗಿತ್ತು, ನಮ್ಮ ಮುಂದೆ ಎಲ್ಲವೂ ಇತ್ತು, ನಮ್ಮ ಮುಂದೆ ಏನೂ ಇರಲಿಲ್ಲ, ನಾವೆಲ್ಲರೂ ನೇರವಾಗಿ ಸ್ವರ್ಗದ ಹಾದಿಯಲ್ಲಿದ್ದೆವು, ನಾವೆಲ್ಲರೂ ನೇರವಾಗಿ ಬೇರೆ ಮಾರ್ಗಗಳಲ್ಲಿ ನಡೆದಿದ್ದೆವು,,,”̤ ಮಾತುಗಳಲ್ಲಿ ಡಿಕನ್ಸ್‌ ಒಂದು ಪ್ರದೇಶದ ಎರಡು ಭಿನ್ನ ಚಿತ್ರಗಳನ್ನು ನೀಡುತ್ತಾನೆ. ಕತ್ತಲೆ ಬೆಳಕಿನ ನಡುವೆ ಬದುಕುವ ಜನಸಾಮಾನ್ಯರು ಬೆಳಕನ್ನು ಸಂಭ್ರಮಿಸುತ್ತಲೇ, ಕತ್ತಲೆ ಗಾಢವಾಗುತ್ತಿರುವಂತೆ ಹತಾಶರಾಗುತ್ತಾರೆ , ಕ್ರಮೇಣ ಅದು ಆಕ್ರೋಶಕ್ಕೆ ಎಡೆಮಾಡಿಕೊಡುತ್ತದೆ, ಸಹನೆಯ ಗಡಿ ಮೀರಿದಾಗ, ಬಂಡಾಯ ದಂಗೆ ಮೊದಲಾದ ಪ್ರತಿರೋಧದ ದನಿಗಳು ಹುಟ್ಟಿಕೊಳ್ಳುತ್ತವೆ.

 ನವ ಉದಾರವಾದದ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯು ವಿಶ್ವದ ಎಲ್ಲ ರಾಷ್ಟ್ರಗಳನ್ನೂ ಆಕ್ರಮಿಸುತ್ತಿರುವ ಹೊತ್ತಿನಲ್ಲಿ, ಅಭಿವೃದ್ಧಿಯ ಪರಿಕಲ್ಪನೆಯೇ ಹೊಸ ಆಯಾಮ ಪಡೆದುಕೊಂಡಿದೆ.    ʼ ಅಭಿವೃದ್ಧಿ ಯಾರಿಗಾಗಿ ʼ ಎಂಬ ಪ್ರಶ್ನೆ ಒಂದೆಡೆಯಾದರೆ ʼ ಅಭಿವೃದ್ಧಿಗೆ ತೆರುವ ಬೆಲೆ ಎಷ್ಟು ಮತ್ತು ಬೆಲೆ ತೆರುವವರು ಯಾರು ʼ ಎಂಬ ಜಿಜ್ಞಾಸೆಯ ನಡುವೆ, ಮಾರುಕಟ್ಟೆ ಬಂಡವಾಳಶಾಹಿಯು ತನ್ನ ತೋಳುಗಳನ್ನು ಚಾಚುತ್ತಾ, ಬಹುತೇಕ ಎಲ್ಲ ದೇಶಗಳಲ್ಲೂ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಸಮಾಜಗಳನ್ನು ಶೋಷಣೆಗೊಳಪಡಿಸುತ್ತಿವೆ. ಮತ್ತೊಂದು ಬದಿಯಲ್ಲಿ ʼ ಅಭಿವೃದ್ಧಿಯ ಫಲಾನುಭವಿಗಳು ಯಾರು ʼ ಎಂಬ ಪ್ರಶ್ನೆ ಎದುರಾದಾಗ, ತಳಸ್ತರದ ಆರ್ಥಿಕ ಅಸಮಾನತೆಗಳು ಹೆಚ್ಚಾಗುತ್ತಿರುವುದು, ಸಾಮಾನ್ಯವಾಗಿ ಕಾಣುವಂತಹ ಚಿತ್ರಣ. ಇದಕ್ಕೆ ಭಾರತವೂ ಹೊರತಲ್ಲ. ಆದರೆ ಭಾರತದಲ್ಲಿ ಆರ್ಥಿಕ ಮೂಲಗಳು (Economic Fundamentals) ಬಲವಾಗಿರುವುದರಿಂದ ಕೊಂಚ ಮಟ್ಟಿಗೆ ಸುಸ್ಥಿರತೆ ಸಾಧ್ಯವಾಗುತ್ತಿದೆ. ಇದರ ಕಾರಣ ನೆಹರೂ ಆರ್ಥಿಕತೆ ಎನ್ನುವುದು ಕಟು ಸತ್ಯ.

CM Siddaramaih : ಸಿಎಂ ಸಿದ್ದರಾಮಯ್ಯ ಕೇಳಿದ ಪ್ರಶ್ನೆ ಗೆ ಯಾರು ಉತ್ತರ  ಕೊಟ್ಟರು ?  #pratidhvani

 ಜನಾಂದೋಲನಗಳ ಹೊಸ ರೂಪ

 ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಮೂರು ನೆರೆ ದೇಶಗಳು ಈ ಆರ್ಥಿಕ ವ್ಯವಸ್ಥೆಯ ಪಲ್ಲಟಗಳನ್ನು ಎದುರಿಸಿದ್ದು, ತಳಸಮಾಜದ ಅಸಮಾಧಾನಗಳು ಉಲ್ಬಣಿಸಿ, ಸರ್ಕಾರಗಳನ್ನೇ ಪಲ್ಲಟಗೊಳಿಸುವ ಹಂತ ತಲುಪಿರುವುದನ್ನು ಕಂಡಿದ್ದೇವೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಈಗ ನೇಪಾಳ ಇದೇ ಹಾದಿಯಲ್ಲಿ ಸಾಗುತ್ತಿದೆ. Gen Z ಎಂದು ಬಣ್ಣಿಸಲಾಗುವ ಮಿಲೆನಿಯಂ ಯುವ ಸಮೂಹದ ( 1997-2021ರ ನಡುವೆ ಹುಟ್ಟಿದ ಜನಸಂಖ್ಯೆ) ಒಂದು ಬಂಡಾಯ ಆರಂಭವಾಗಿದ್ದು ನೇಪಾಳ ಸರ್ಕಾರದ ಡಿಜಿಟಲ್‌ ದಬ್ಬಾಳಿಕೆಯ ವಿರುದ್ಧ. ಮೂಲತಃ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದರಿಂದ ಆರಂಭವಾದ ಯುವ ಸಮೂಹದ ಪ್ರತಿಭಟನೆಗಳು ಕ್ರಮೇಣ, ಹಿಂಸಾತ್ಮಕ ಸ್ವರೂಪ ಪಡೆದಿದ್ದು ಸಹ ಈ ದಂಗೆಗಳಿಗೆ ಕಾರಣವಾಗಿದೆ. ಈ ಹಿಂಸೆಗೆ ಕಾರಣವಾಗಿದ್ದು ಸಾಮಾಜಿಕ ಮಾಧ್ಯಮಗಳ ಮೇಲೆ ಸರ್ಕಾರ ನಿಷೇಧ. ಕಳೆದ ಹತ್ತು ವರ್ಷಗಳಲ್ಲಿ ಭಾರತವನ್ನೂ ಒಳಗೊಂಡಂತೆ, ಎಲ್ಲ ದೇಶಗಳಲ್ಲೂ ಜನಾಂದೋಲನಗಳು ತೀವ್ರವಾಗುತ್ತಿದ್ದಂತೆ ಅಂತರ್ಜಾಲ ನಿಷೇಧಿಸುವ ಒಂದು ಡಿಜಿಟಲ್‌ ದಬ್ಬಾಳಿಕೆಯ ಮಾದರಿಯನ್ನು ಗಮನಿಸುತ್ತಿದ್ದೇವೆ.

 ಆದರೆ ನೇಪಾಳ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಾಮಾಜಿಕ ಮಾಧ್ಯಮ ವೇದಿಕೆಗಳನ್ನೇ (Social Media Platforms) ನಿಷೇಧಿಸಿದ್ದು, ಯುವ ಸಮೂಹದ ಆಕ್ರೋಶ ಉಲ್ಬಣಿಸಲು ಕಾರಣವಾಗಿತ್ತು. ಏಕೆಂದರೆ ಡಿಜಿಟಲ್‌ ಯುಗದಲ್ಲಿ ಎಲ್ಲ ರೀತಿಯ ಮಾಹಿತಿ-ದತ್ತಾಂಶಗಳು, ಸರ್ಕಾರದ ಆಡಳಿತ ನೀತಿಗಳು, ಆರ್ಥಿಕ ವ್ಯತ್ಯಯಗಳು ಹಾಗೂ ಜನಸಾಮಾನ್ಯರ ಸಂಕಟಗಳನ್ನು ತಿಳಿಯಲು ಸಹಾಯಕವಾಗುತ್ತಿರುವುದು ಈ ಸಾಮಾಜಿಕ ಮಾಧ್ಯಮಗಳೇ. ಈ ಸಂವಹನ ಸಾಧನಗಳೇ ಜನರ ಕ್ರೋಢೀಕರಣಕ್ಕೂ ನೆರವಾಗುತ್ತಿರುವುದನ್ನು ಸಾರ್ವತ್ರಿಕವಾಗಿ ಗುರುತಿಸಬಹುದು. ಈ ವೇದಿಕೆಗಳನ್ನು ನಿಷೇಧಿಸುವುದೆಂದರೆ, ಜನತೆಯ ನಡುವೆ ಇರುವ ಸಂಪರ್ಕಗಳನ್ನೇ ಕಡಿತಗೊಳಿಸಿದಂತಾಗುತ್ತದೆ. ಸಹಜವಾಗಿಯೇ ಆಧುನಿಕ ಆಂಡ್ರಾಯ್ಡ್‌ ತಂತ್ರಜ್ಞಾನವನ್ನೇ ಆಧರಿಸಿ ಬದುಕುವ ಒಂದು ಸಮಾಜ, ಈ ರೀತಿಯ ನಿಷೇಧದಿಂದ, ಸಂಕೋಲೆಗಳಲ್ಲಿ ಬಂಧಿಸಲ್ಪಟ್ಟ ಭಾವನೆಗಳಿಗೆ ಒಳಗಾಗುತ್ತದೆ.

 ಕೇವಲ ಒಂದು ದಶಕದ ಹಿಂದೆ ಭೌತಿಕ/ದೈಹಿಕ ಬಂಧನದಿಂದ ಉಂಟಾಗುತ್ತಿದ್ದ ಸಂವಹನ-ಸಂಪರ್ಕ ವ್ಯತ್ಯಯಗಳು, ಡಿಜಿಟಲ್‌ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳ ನಿಷೇಧದಿಂದ ಹತ್ತು ಪಟ್ಟು ಹೆಚ್ಚಾಗಿರುತ್ತದೆ. ಇದು ಒಂದು ರೀತಿಯಲ್ಲಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಮುಕ್ತ ಸಂವಾದದ ಹಕ್ಕನ್ನು ಹಾಗೂ ಪರಸ್ಪರ ಮನುಜ ಸಂಬಂಧಗಳನ್ನು ನಿರ್ಬಂಧಿಸುವ ಅಪ್ರಜಾಸತ್ತಾತ್ಮಕ ವಿಧಾನವಾಗಿ ಕಾಣುತ್ತದೆ. ಆಡಳಿತ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧ ಆರಂಭವಾದ ಯುವ ಜನಾಂಗದ ಪ್ರತಿಭಟನೆಯನ್ನು ಹತ್ತಿಕ್ಕಲು ನೇಪಾಳ ಸರ್ಕಾರ ಅನುಸರಿಸಿದ ನಿರಂಕುಶಾಧಿಕಾರದ ಕ್ರಮಗಳು , ಸರ್ಕಾರವನ್ನು ಪದಚ್ಯುತಗೊಳಿಸಿದ್ದೇ ಅಲ್ಲದೆ, ದೇಶವನ್ನು ಅರಾಜಕತೆಯತ್ತ ದೂಡಿರುವುದು ಗಮನಿಸಬೇಕಾದ ಅಂಶ. ಪ್ರತಿಭಟನೆಯ ಮೊದಲ ದಿನದಂದು ಸರ್ಕಾರದ ದಮನಕಾರಿ ಕ್ರಮಗಳಿಗೆ 19 ಜನರು ಪ್ರಾಣತೆತ್ತ ನಂತರ ಇಡೀ ಆಂದೋಲನವೇ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದು ಸ್ವಾಭಾವಿಕ ಎಂದೇ ಹೇಳಬಹುದು.

 ಸಾಮಾಜಿಕ – ಆರ್ಥಿಕ ಕಾರಣಗಳು

 ನೇಪಾಳದ ಈ ದಂಗೆಯನ್ನು ಕೇವಲ ರಾಜಕೀಯ ಬಂಡಾಯ ಎಂದು ಪರಿಗಣಿಸಲಾಗುವುದಿಲ್ಲ. ಇದು ಜನಸಾಮಾನ್ಯರಲ್ಲಿ, ವಿಶೇಷವಾಗಿ ತಳಸಮಾಜದಲ್ಲಿ ಜನರಲ್ಲಿ ಮಡುಗಟ್ಟಿದ್ದ, ಆಳವಾಗಿ ಬೇರೂರಿದ್ದ ಆರ್ಥಿಕ ಹತಾಶೆಯ ಸಂಕೇತವಾಗಿ ಕಾಣಬೇಕಿದೆ. ಶೇಕಡಾ 13ರಷ್ಟು ನಿರುದ್ಯೋಗ ಪ್ರಮಾಣದೊಂದಿಗೆ ನೇಪಾಳ ಏಷಿಯಾದ ಅತ್ಯಂತ ಬಡದೇಶಗಳಲ್ಲಿ ಒಂದಾಗಿದೆ. ಬಹುಪಾಲು ಯುವ ಜನತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಪೊಳ್ಳು ಎನಿಸುವುದು ಸಹಜ. ಕೈಗಾರಿಕಾ ಬೆಳವಣಿಗೆ, ಉದ್ಯೋಗಾವಕಾಶಗಳ ಸೃಷ್ಟಿಯ ಬದಲು ಇಲ್ಲಿನ ತಳಸಮಾಜ ಎದುರಿಸುತ್ತಿರುವುದು ಜಡಗಟ್ಟಿದ ಆರ್ಥಿಕತೆ ಮತ್ತು ಹೊರದೇಶಗಳಿಗೆ ವಲಸೆ ಹೋಗಿರುವ ಕಾರ್ಮಿಕರಿಂದ ಹರಿದುಬರುವ ಹಣದ ಪಾವತಿಯ ಅವಲಂಬನೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ನೇಪಾಳದಲ್ಲಿ ಯುಪಿಐ (UPI) ಪಾವತಿಯ ಸೌಲಭ್ಯವನ್ನು ಈವರೆಗೂ ಅಳವಡಿಸಲಾಗಿಲ್ಲ. ಹಾಗಾಗಿ ವಲಸೆ ಹೋಗಿರುವ ದುಡಿಯುವ ಜನತೆ ವಾಟ್ಸಾಪ್‌ ಪಾವತಿ ಸೌಲಭ್ಯವನ್ನೇ ಅವಲಂಬಿಸಿರುತ್ತಾರೆ. ಸರ್ಕಾರ ವಾಟ್ಸಾಪ್‌ ಒಳಗೊಂಡಂತೆ ಎಲ್ಲ ಸಾಮಾಜಿಕ ಮಾಧ್ಯಮಮ ವೇದಿಕೆಗಳನ್ನೂ ನಿಷೇಧಿಸಿದ ಕಾರಣ, ಈ ವಲಸೆ ಕಾರ್ಮಿಕರನ್ನು ನಂಬಿ ಬದುಕುವ ಲಕ್ಷಾಂತರ ಕುಟುಂಬಗಳು ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗುತ್ತವೆ.

 ನೇಪಾಳ ಸಾಂವಿಧಾನಿಕ ರಾಜಪ್ರಭುತ್ವದಿಂದ ಚುನಾಯಿತ ಪ್ರಜಾತಂತ್ರ ವ್ಯವಸ್ಥೆಗೆ ಪರಿವರ್ತನೆಯಾದ ದಿನದಿಂದ, ಅಂದರೆ 1990 ರಿಂದ ಈವರೆಗೆ 30 ಪ್ರಧಾನಿಗಳನ್ನು ಕಂಡಿದೆ. ಈ ಗಲಭೆಗಳ ನಂತರ ರಾಜೀನಾಮೆ ನೀಡಿರುವ ಖಡ್ಗ ಪ್ರಸಾದ್‌ ಒಲಿ 30ನೆಯವರು. 2008ರಲ್ಲಿ ಸಾಂವಿಧಾನಿಕ ಗಣತಂತ್ರವಾಗಿ ರೂಪುಗೊಂಡ ನೇಪಾಳ ದೀರ್ಘಕಾಲದ  ಅಸ್ಥಿರತೆಯನ್ನೂ ಕಂಡಿದೆ. ಈ ಅಸ್ಥಿರತೆಯ ಪರಿಣಾಮವಾಗಿಯೇ ಆರ್ಥಿಕ ಅಸಮಾನತೆಗಳು ಆಳವಾಗುತ್ತಿದ್ದು, ಬಡವ-ಶ್ರೀಮಂತರ ನಡುವೆ, ಗ್ರಾಮೀಣ-ನಗರ ಜನತೆಯ ನಡುವೆ, ವಿದ್ಯಾವಂತ-ಅನಕ್ಷರಸ್ಥ ಅಥವಾ ಕಡಿಮೆ ಶಿಕ್ಷಣ ಹೊಂದಿರುವ ಜನತೆಯ ನಡುವೆ ಅಂತರ ಹಿಗ್ಗುತ್ತಲೇ ಬಂದಿದೆ. ಈ ಅಸಮಾನತೆಗಳೇ ಮೂಲತಃ ಜನರ ಪ್ರತಿಭಟನೆಯ ಮೂಲವೂ ಆಗಿದೆ. ವಿಶೇಷವಾಗಿ Gen Z ಯುವ ಸಮೂಹ ಮತ್ತು Nepo Kids ಎಂದು ಬಣ್ಣಿಸಲ್ಪಡುವ ಶ್ರೀಮಂತರ-ಹಿತವಲಯದ ನಡುವಿನ ಸಂಘರ್ಷದ ಮೂಲವನ್ನು ಇಲ್ಲಿ ಕಾಣಬಹುದು.

 2022-23ರಲ್ಲಿ ನೇಪಾಳದ ನಿರುದ್ಯೋಗ ಪ್ರಮಾಣ ಶೇಕಡಾ 12.5ರಷ್ಟಿದ್ದು ಇದರ ಹೊರೆ ಯುವ ಸಮೂಹವನ್ನು ಕಂಗೆಡಿಸಿದೆ. 15-24ರ ವಯೋಮಾನದ ಯುವಜನತೆಯಲ್ಲಿ ನಿರುದ್ಯೋಗ ಶೇಕಡಾ 22.7ರಷ್ಟಿದ್ದರೆ,  25-44ರ ವಯಸ್ಸಿನ ಜನರಲ್ಲಿ ಶೇಕಡಾ  11.5, 45-64ರ ವಯಸ್ಸಿನವರಲ್ಲಿ ಶೇಕಡಾ 7.5ರಷ್ಟು ದಾಖಲಾಗಿದೆ. ಅಧಿಕೃತ ದತ್ತಾಂಶಗಳ ಅನುಸಾರವೇ, ಕಡುಬಡವ ಕುಟುಂಬಗಳ ಪೈಕಿ ಶೇಕಡಾ 17.2ರಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ.  ಶ್ರೀಮಂತರ ಪೈಕಿ ಈ ಪ್ರಮಾಣ ಶೇಕಡಾ 8.5ರಷ್ಟಿದೆ. ಪ್ರಾಥಮಿಕ ಶಿಕ್ಷಣವನ್ನಷ್ಟೇ ಪಡೆದಿರುವವರ ಪೈಕಿ ಶೇಕಡಾ 18ರಷ್ಟು , ಪದವೀಧರರ ಪೈಕಿ ಕೇವಲ ಶೇಕಡಾ 6.3ರಷ್ಟು ಜನರು  ನಿರುದ್ಯೋಗಿಗಳಾಗಿದ್ದಾರೆ. ನೇಪಾಳದ ಏಕೈಕ ಆಧುನಿಕ ಹಾಗೂ ಅಭಿವೃದ್ಧಿ ಹೊಂದಿರುವ ನಗರ ಎಂದರೆ ಕಠ್ಮಂಡು. ಇಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 7.6ರಷ್ಟಿದ್ದರೆ, ಉಳಿದ ಎಲ್ಲ ಪ್ರದೇಶಗಳಲ್ಲಿ ಶೇಕಡಾ 20ರಷ್ಟಿದೆ.

ಬಡತನದಲ್ಲಿ ಬೇಯುವ, ಗ್ರಾಮೀಣ ಹಾಗು ಕಡಿಮೆ ಶಿಕ್ಷಣ ಹೊಂದಿರುವ ಜನರಲ್ಲಿ ಶ್ರಮಿಕ  ಪಡೆಯ ಭಾಗವಹಿಸುವಿಕೆಯ (Labour Force Participation)  ಪ್ರಮಾಣವು ಅತ್ಯಂತ ಕನಿಷ್ಠ ಪ್ರಮಾಣದಲ್ಲಿದ್ದು  ಇವರ ಪೈಕಿ ಶ್ರಮ ಮಾರುಕಟ್ಟೆಯನ್ನು ಪ್ರವೇಶಿಸುವವರ ಪೈಕಿ ಬಹುಪಾಲು ಜನರಿಗೆ ಉದ್ಯೋಗಗಳೇ ಲಭಿಸುವುದಿಲ್ಲ. ಇದು ಎರಡು ರೀತಿಯ ಅನಾನುಕೂಗಳನ್ನು ಉಂಟುಮಾಡುತ್ತದೆ.  ಮೊದಲನೆಯದಾಗಿ ಈ ಜನರಿಗೆ ಉದ್ಯೋಗ ದೊರೆಯುವುದಿಲ್ಲ,  ಎರಡನೆಯದಾಗಿ ಅವಕಾಶಗಳು ಇಲ್ಲದಿರುವ ಕಾರಣ ಉದ್ಯೋಗ ಬಯಸುವವರೂ ಹಿಂಜರಿಯುತ್ತಿದ್ದಾರೆ.  ಇದರ ನೇರ ಪರಿಣಾಮವಾಗಿಯೇ ಬದುಕು ಸವೆಸಲು ನೌಕರಿಗಾಗಿ ಅಲೆಯುವ ಸಾವಿರಾರು ಮಂದಿ ಹೊರದೇಶಗಳಿಗೆ ವಲಸೆ ಹೋಗಲಾರಂಭಿಸಿದ್ದರು. ನಾಲ್ವರು ಪುರುಷರಲ್ಲಿ ಒಬ್ಬರು ತಮ್ಮ ಕುಟುಂಬದಿಂದ ದೂರ ಇರುತ್ತಾರೆ, ಇವರಲ್ಲಿ ಬಹುಪಾಲು ಜನರು ಹೊರದೇಶಗಳಲ್ಲಿರುತ್ತಾರೆ.

 ಮಹಿಳೆಯರೇ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊತ್ತ ಪ್ರಮಾಣ ಹೆಚ್ಚಾಗಿದ್ದು  1995-96ರಲ್ಲಿ ಶೇಕಡಾ 13.6ರಷ್ಟಿದ್ದುದು, 2022-23ರ ವೇಳೆಗೆ ಶೇಕಡಾ 37.1ರಷ್ಟಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ, ವಿಶೇ಼ಷವಾಗಿ ಯುವ ಸಮೂಹದಲ್ಲಿ ಊರು ತೊರೆದಿರುವವರ ಪ್ರಮಾಣ ಹೆಚ್ಚಾಗಿದೆ. ಶೇಕಡಾ 20ರಷ್ಟು ಗ್ರಾಮೀಣ ಜನರು ಕುಟುಂಬದಿಂದ ದೂರವಾಗಿದ್ದಾರೆ, ಕಠ್ಮಂಡು  ನಗರದಲ್ಲಿ ಇದರ ಪ್ರಮಾಣ ಶೇಕಡಾ 8.7ರಷ್ಟಿದೆ.  ಮನೆ ತೊರೆದಿರುವ ಪುರುಷರ ಪೈಕಿ ಶೇಕಡಾ 56ರಷ್ಟು 15-29ರ ವಯೋಮಾನದವರಾಗಿದ್ದಾರೆ.  ಈ ಗುಂಪಿನಲ್ಲೇ ನಿರುದ್ಯೋಗ ಪ್ರಮಾಣವೂ ತೀವ್ರ ಹೆಚ್ಚಳವಾಗಿದೆ.  ಹೊರದೇಶಗಳಿಗೆ ನೌಕರಿ ಅರಸಿ ವಲಸೆ ಹೋಗುವವರು ಕುಟುಂಬಗಳಿಗೆ ಮತ್ತು ದೇಶದ ಬೊಕ್ಕಸಕ್ಕೂ ಪ್ರಧಾನ ಆಸರೆಯಾಗಿದ್ದಾರೆ. ಹೊರದೇಶಗಳಿಂದ ಹಣ ಪಡೆಯುವ ಕುಟುಂಬಗಳ ಪ್ರಮಾಣ 1995-96ರಲ್ಲಿ ಶೇಕಡಾ 23.4ರಷ್ಟಿದ್ದುದು, 2022-23ರ ವೇಳೆಗೆ ಶೇಕಡಾ 76.8ಕ್ಕೆ ಏರಿದೆ.

 2022-23ರ ದತ್ತಾಂಶಗಳ ಪ್ರಕಾರ ಶೇಕಡಾ 50ಕ್ಕಿಂತಲೂ ಹೆಚ್ಚಿನ ಹಣದ ಒಳಹರಿವು ಭಾರತವನ್ನು ಹೊರತುಪಡಿಸಿ ಇತರ ದೇಶಗಳಿಂದ ಬಂದಿದೆ. ಭಾರತದಿಂದ ಶೇಕಡಾ  20ರಷ್ಟು ರವಾನೆಯಾಗುತ್ತದೆ. ಈ ಬದಲಾವಣೆಯೇ ನೇಪಾಲದ ನಿರುದ್ಯೋಗಿಗಳು ಭಾರತವನ್ನು ದಾಟಿ, ಇತರ ದೇಶಗಳಿಗೆ ವಲಸೆ ಹೋಗುತ್ತಿರುವುದನ್ನು ಸೂಚಿಸುತ್ತದೆ. ಈ ಒಳಹರಿವಿನ ಪ್ರಮಾಣವನ್ನು ಗಮನಿಸಿದೆ, ಕತಾರ್‌, ಸೌದಿ ಅರೇಬಿಯಾ, ಮಲೇಷಿಯಾ ಮತ್ತು ಯುಎಇ ದೇಶಗಳಿಂದ ಒಟ್ಟು ಶೇಕಡಾ 35ರಷ್ಟು ಹಣ ಹರಿದುಬರುವುದನ್ನು ಗುರುತಿಸಬಹುದು. 1990ರಲ್ಲಿ ವೈಯುಕ್ತಿಕ ಹಣ ರವಾನೆಯ ಪ್ರಮಾಣ ನೇಪಾಳದ ಜಿಡಿಪಿಯ ಶೇಕಡಾ 1ರಷ್ಟಿದ್ದುದು, 2024ರ ವೇಳೆಗೆ ಶೇಕಡಾ 33ರಷ್ಟಾಗಿದೆ. ಇದು ಕೇವಲ ಗಡಿಯಾಚೆಯಿಂದ ಒಳಬರುವ ಹಣದ ಪ್ರಮಾಣವಾಗಿದೆ.

 ಅನಿಶ್ಚಿತತೆ ಅಭದ್ರತೆ ಮತ್ತು ಭವಿಷ್ಯ

 ಈ ಅಂಕಿಅಂಶಗಳನ್ನು ಗಮನಿಸಿದಾಗ, ನೇಪಾಳದ ಯುವ ಸಮೂಹದಲ್ಲಿ ಮಡುಗಟ್ಟಿರಬಹುದಾದ ಹತಾಶೆ, ಜುಗುಪ್ಸೆ ಮತ್ತು ಆಕ್ರೋಶಗಳನ್ನೂ ಗುರುತಿಸಬಹುದು. ಈಗ ನಡೆದಿರುವ ಹಿಂಸಾತ್ಮಕ ಪ್ರತಿಭಟನೆಗಳಿಗೆ, ಬಾಹ್ಯ ಪ್ರಚೋದನೆ, ಉತ್ತೇಜನಗಳನ್ನು ಕಾರಣವಾಗಿ ಗುರುತಿಸಬಹುದಾದರೂ, ವಾಸ್ತವದಲ್ಲಿ ಇದು ಆಳವಾಗಿ ಬೇರೂರಿದ್ದ ಹತಾಶೆಯ ಫಲ ಎನ್ನುವುದು ಕಟು ಸತ್ಯ. ಈ ಬೆಳವಣಿಗೆಗಳು ಏನನ್ನು ಸೂಚಿಸುತ್ತವೆ ? ನೇಪಾಳ ಸರ್ಕಾರವು ಆಂತರಿಕವಾಗಿ ದೇಶದ ಆರ್ಥಿಕತೆಯನ್ನು ಬದಲಿಸಿ, ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ರೂಪಿಸಬೇಕಿತ್ತು. ಆದರೆ ನೇಪಾಳ ಸರ್ಕಾರದ ನೀತಿಗಳು ಯುವ ಸಮೂಹವನ್ನು, ಸಾಮಾನ್ಯ ದುಡಿಯುವ ವರ್ಗಗಳನ್ನು ಹೊರದೇಶಗಳಲ್ಲೇ ಉದ್ಯೋಗ ಅರಸುವಂತಹ ಪರಿಸ್ಥಿತಿಯನ್ನು ನಿರ್ಮಿಸಿತ್ತು.  ಇದು ನಾಗರಿಕರ ಆಕ್ರೋಶಕ್ಕೆ ಮೂಲ ಕಾರಣವಾಗಿದೆ.

 ಇದಕ್ಕೆ ಪೂರಕವಾಗಿ ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚಾದ ಭ್ರಷ್ಟಾಚಾರ, ಶ್ರೀಮಂತರ ಐಷಾರಾಮಿ ಭೋಗ ಜೀವನ, ಬಡ ಜನತೆಯ ನಿರ್ಗತಿಕತೆ ಮತ್ತು ಸಮಾಜದ ಒಂದು ಸಣ್ಣ ವರ್ಗದೊಳಗೇ ಸಂಪತ್ತಿನ ತೀವ್ರವಾದ ಹೆಚ್ಚಳ. ರಾಜಕೀಯ ನಾಯಕರ ಶ್ರೀಮಂತಿಕೆಯ ಆಡಂಬರ ಮತ್ತು ಜನಸಾಮಾನ್ಯರ ಬದುಕಿನ ನಿತ್ಯ ಬವಣೆಗಳ ನಡುವೆ ಅಂತರ ಹೆಚ್ಚಿದಂತೆಲ್ಲಾ, ಹಸಿವು, ಬಡತನ ಮತ್ತು ಅವಕಾಶವಂಚನೆಯ ಸನ್ನಿವೇಶಗಳು ಜನರೊಳಗಿನ ಆಕ್ರೋಶವನ್ನು ಒಮ್ಮೆಲೆ ಸ್ಫೋಟಿಸುವಂತೆ ಮಾಡುತ್ತದೆ. ಒಳಗೊಳಗೇ ಬೇಯುತ್ತಿದ್ದ ಈ ಆಕ್ರೋಶವನ್ನು ಗುರುತಿಸುವಲ್ಲಿ ನೇಪಾಳ ಸರ್ಕಾರ ಸೋತಿದೆ ಎನ್ನುವುದಕ್ಕಿಂತಲೂ, ಭಾರತವನ್ನೂ ಒಳಗೊಂಡಂತೆ, ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯನ್ನು ಅನುಸರಿಸುವ ಎಲ್ಲ ದೇಶಗಳಂತೆ, ಇಲ್ಲಿಯೂ ಸಹ ಇದನ್ನು ಅಸಡ್ಡೆಯಿಂದಲೇ ನೋಡಲಾಗಿದೆ ಎನ್ನುವುದು ಸೂಕ್ತ.

 ಜನಾಕ್ರೋಶ ಭುಗಿಲೆದ್ದಾಗ

 ಮೊದಲು ಶ್ರೀಲಂಕಾ, ಅನಂತರ ಬಾಂಗ್ಲಾದೇಶ ಈಗ ನೇಪಾಳ ಮೂರೂ ದೇಶಗಳಲ್ಲಿ ಘಟಿಸಿದ ಸಾರ್ವಜನಿಕ ಪ್ರತಿಭಟನೆಗಳನ್ನು ಸೂಕ್ಷ್ಮವಾಗಿ ಗಮನಿಸದಾಗ ಸಮಾನ ಎಳೆ ಕಾಣುವುದು ಯುವ ಸಮೂಹದ ಆಕ್ರೋಶ ಮತ್ತು ಹಿಂಸಾತ್ಮಕ ಪ್ರತಿಭಟನೆಯಲ್ಲಿ. ಮೂರೂ ಸರ್ಕಾರಗಳ ಸ್ವರೂಪ ಭಿನ್ನವಾಗಿದ್ದರೂ, ನಿರ್ಲಕ್ಷಿತ ಸಮಾಜದ ದೃಷ್ಟಿಯಲ್ಲಿ ಸಮಾನವಾಗಿ ಕಂಡಿದ್ದು ಆರ್ಥಿಕ ಅಸಮಾನತೆ, ತಾರತಮ್ಯ, ದಬ್ಬಾಳಿಕೆ ಮತ್ತು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೇ ಸರ್ಕಾರಗಳು ಅನುಸರಿಸಿದ ಸರ್ವಾಧಿಕಾರದ ದಮನಕಾರಿ ನೀತಿಗಳು.ಡಿಜಿಟಲ್‌ ಬಂಡವಾಳಶಾಹಿ ಯುಗದಲ್ಲಿ, ಆಳುವ ವರ್ಗಗಳು ಈ ಇಬ್ಬಂದಿ ಸನ್ನಿವೇಶವನ್ನು ಎಲ್ಲ ದೇಶಗಳಲ್ಲೂ ಎದುರಿಸುತ್ತಿವೆ. ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಮಾರುಕಟ್ಟೆ-ಕಾರ್ಪೋರೇಟ್‌ ಔದ್ಯಮಿಕ ಹಿತಾಸಕ್ತಿಗಳನ್ನು ಸಂರಕ್ಷಿಸುವ  ಹಾದಿಯಲ್ಲಿ, ತಮ್ಮ ಸ್ವಾವಲಂಬನೆಯನ್ನೇ ಕಳೆದುಕೊಂಡು ಪರಾವಲಂಬಿಗಳಾಗುವ ಬೃಹತ್‌ ಜನಸಮೂಹಗಳು, ಸಾಮಾನ್ಯವಾಗಿ ಶ್ರಮಿಕವರ್ಗ ಮತ್ತು ನಿರುದ್ಯೋಗಿ ವರ್ಗಗಳು, ಹತಾಶೆಗೊಳಗಾಗುವ ಸಹಜ ಪ್ರಕ್ರಿಯೆಯನ್ನು ಎಲ್ಲ ದೇಶಗಳೂ ಎದುರಿಸಿವೆ. ಭಾರತವೂ ಹೊರತಾಗಿಲ್ಲ.

 ಸದ್ಯಕ್ಕೆ ಸೇನೆ ಮಧ್ಯೆ ಪ್ರವೇಶಿಸಿದ್ದರೂ, ಸಂಸತ್ತನ್ನು ವಿಸರ್ಜಿಸಿ ಹೊಸ ಹಂಗಾಮಿ ಪ್ರಧಾನಿಯನ್ನು ಆಯ್ಕೆ ಮಾಡಿರುವುದು ಸಕಾರಾತ್ಮಕ ಬೆಳವಣಿಗೆ ಎಂದೇ ಹೇಳಬಹುದು. ಈ ಸಂದರ್ಭದಲ್ಲೇ ಕಳೆದ ವರ್ಷ ರಾಜಪ್ರಭುತ್ವವನ್ನು ಮರಳಿ ಸ್ಥಾಪಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಗಳನ್ನೂ ಹಿಂತಿರುಗಿ ನೋಡಬೇಕಿದೆ. ಇದು ಪ್ರಾಚೀನ ಮನಸ್ಥಿತಿಯ, ಅಪ್ರಜಾಸತ್ತಾತ್ಮಕ ಬೆಳವಣಿಗೆ ಎಂದು ವಿದ್ವಾಂಸರು ವಿಶ್ಲೇಷಿಸಿದ್ದರೂ, ಈ ಚಳುವಳಿಯ ಹಿಂದಿದ್ದವರೂ ಇದೇ GEN Z  ಜನಸಂಖ್ಯೆ ಎನ್ನುವುದು ಗಮನಾರ್ಹ. ಈ ಜನಾಂದೋಲನ ಕೇವಲ ರಾಜಕೀಯ ಅಸ್ಥಿರತೆ ಮತ್ತು ಆಳುವವರ ಸಿನಿಕತನದ ವಿರುದ್ಧ ಮಾತ್ರವಾಗಿರದೆ, ವ್ಯವಸ್ಥೆಯ ಬಗ್ಗೆ ಇದ್ದ ಅಸಮಾಧಾನ ಮತ್ತು ಹತಾಶೆಯ ಸಂಕೇತವೂ ಆಗಿದ್ದುದನ್ನು ಅಲ್ಲಗಳೆಯಲಾಗುವುದಿಲ್ಲ. ವ್ಯಾಪಕ ಭ್ರಷ್ಟಾಚಾರ, ಬಂಡವಾಳಿಗರ ದಬ್ಬಾಳಿಕೆ ಮತ್ತು ಮಾರುಕಟ್ಟೆ ಆರ್ಥಿಕತೆಯ ಸಂಕಟಗಳು, ಸಮಾಜದ ಒಂದು ವರ್ಗದಲ್ಲಿ ಕೇಂದ್ರೀಕೃತವಾದ, ಸುಸ್ಥಿರ ಆಡಳಿತ ನೀಡುವ ರಾಜಪ್ರಭುತ್ವವೇ ಮೇಲು ಎಂಬ ಅಭಿಪ್ರಾಯ ಮೂಡಿದ್ದು ಈ ಆಂದೋಲನಕ್ಕೆ ಕಾರಣವಾಗಿತ್ತು. ಮತ್ತೊಂದು ಆಯಾಮದಲ್ಲಿ ಇದು ರಾಷ್ಟ್ರೀಯ ಅಸ್ಮಿತೆಯನ್ನು ಮರಳಿ ಗಳಿಸುವ ಆಶಯವನ್ನೂ ಹೊಂದಿತ್ತು.

 ತುಲನಾತ್ಮಕವಾಗಿ ನೋಡಿದಾಗ, ಈಗಿನ ದಂಗೆಗಳೂ ಸಹ ಸಮಾನ ನೆಲೆಯಲ್ಲಿ ಕಾಣುತ್ತದೆ. ನೇಪಾಳದ ಜನತೆ ಇದೇ ಗೊಂದಲವನ್ನು ಎದುರಿಸುತ್ತಿದ್ದಾರೆ. ಮರಳಿ ರಾಜಪ್ರಭುತ್ವದ ಸರ್ವಾಧಿಕಾರ ಸ್ಥಾಪನೆಯಾಗುವುದೋ ಅಥವಾ ಮಿಲಿಟರಿ ಆಡಳಿತದ ನಿರಂಕುಶಾಧಿಕಾರ ಮರಳುವುದೋ ಅಥವಾ ಕ್ರಾಂತಿಕಾರಕ ಯುವ ಶಕ್ತಿ ದೇಶದ ಆಡಳಿತ ಚುಕ್ಕಾಣಿ ಹಿಡಿಯುವುದೋ ಎಂಬ ಜಿಜ್ಞಾಸೆ ನೇಪಾಳದ ಜನರಲ್ಲಿ ಕಾಣುತ್ತಿದೆ. ಹಾಗಾಗಿ ಈ ಜನಾಂದೋಲನವನ್ನಾಗಲೀ, ಅದರ ಯಶಸ್ಸನ್ನಾಗಲೀ ಕ್ರಾಂತಿಯ ಚೌಕಟ್ಟಿನಲ್ಲಿ ವಿಶ್ಲೇಷಿಸಲಾಗುವುದಿಲ್ಲ. ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಪಲ್ಲಟಗಳು ಉಂಟಾದ ನಂತರದಲ್ಲಿ ಅಲ್ಲಿ ಜಮಾತ್‌ ಇ ಇಸ್ಲಾಮಿಯಂತಹ ಮೂಲಭೂತವಾದಿ ಸಂಘಟನೆಗಳು ಮುನ್ನಲೆಗೆ ಬರುತ್ತಿದ್ದು, ಇತ್ತೀಚೆಗೆ ನಡೆದ ಢಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಚುನಾವಣೆಗಳಲ್ಲಿ ಈ ಸಂಘಟನೆಯ ಗೆಲುವು ಭವಿಷ್ಯದ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿದೆ.

CM Siddaramaih : ಬಿಜೆಪಿಗೆ  ಭಾಷೆ ಧರ್ಮ ಅಂತ ಪ್ರಚೋದನೆ ಮಾಡೋದು  #pratidhvani #siddaramaiah #bjp #congress

 ನೇಪಾಳದ ಪ್ರತಿಭಟನಾಕಾರರ ಆಕ್ರೋಶಕ್ಕೆ ನೇಪಾಳಿ ಕಾಂಗ್ರೆಸ್‌, ನೇಪಾಳ ಕಮ್ಯುನಿಸ್ಟ್‌ ಪಕ್ಷ ( ಸಂಯುಕ್ತ ಮಾರ್ಕ್ಸ್‌ವಾದಿ-ಲೆನಿನ್‌ವಾದಿ) ಮತ್ತು ಮಾವೋಯಿಸ್ಟ್‌ ಸೆಂಟರ್‌ ಮೂರೂ ಪಕ್ಷಗಳು ಗುರಿಯಾಗಿದ್ದು, ಬೀದಿ ಬೀದಿಗಳಲ್ಲಿ ಈ ವಿರೋಧ ವಿಧ್ವಂಸಕ ಕೃತ್ಯಗಳ ಮೂಲಕ ವ್ಯಕ್ತವಾಗುತ್ತಿದೆ. ರಾಷ್ಟ್ರೀಯ ಸ್ವತಂತ್ರ ಪಕ್ಷ ಮತ್ತು ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ ಎಲ್ಲ ನಾಯಕರೂ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಇಂದು ನೇಪಾಳದಲ್ಲಿ ಎಂದೂ ಕಾಣದಂತಹ ರಾಜಕೀಯ ನಿರ್ವಾತ (Political Vacuum) ನಿರ್ಮಾಣವಾಗಿದೆ. ಮುಂದಿನ ನಾಯಕತ್ವಕ್ಕೆ ಜನರು ಯಾರಿಗೆ ಮನ್ನಣೆ ನೀಡಲಿದ್ದಾರೆ ಎನ್ನುವುದು, ಅನಿಶ್ಚಿತವಾಗಿಯೇ ಕಾಣುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಬೌದ್ಧ ಧಮ್ಮಕ್ಕೆ ಸೇರಿದ ಬಲೆಂದ್‌ ಷಾ ಪ್ರಧಾನಿಯಾಗುತ್ತಾರೆ ಎಂಬ ಸುದ್ದಿಯೂ ದಟ್ಟವಾಗಿತ್ತು ಆದರೆ ನಿವೃತ್ತ ನ್ಯಾಯಮೂರ್ತಿ ಸುಶೀಲ ಕರ್ಕಿ ಅವರನ್ನು ಹಂಗಾಮಿ ಪ್ರಧಾನಿಯಾಗಿ ನೇಮಿಸಲಾಗಿದ್ದು, ನೇಪಾಳದ ಇತಿಹಾಸದಲ್ಲಿ ಪ್ರಪ್ರಥಮ ಮಹಿಳಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

 ತುಲನಾತ್ಮಕ ನಿರೂಪಣೆಗಳು ಅನಗತ್ಯ

 ಈ ಬೆಳವಣಿಗೆಗಳನ್ನು ಭಾರತವನ್ನೂ ಒಳಗೊಂಡಂತೆ, ಜಾಗತಿಕ ಭೌಗೋಳಿಕ ನೆಲೆಯಲ್ಲಿ ನೋಡುವಾಗ, ಸಮಾನಾಂತರವಾಗಿ ಇದು ನಮ್ಮ ದೇಶದಲ್ಲೂ ಸಂಭವಿಸಬಹುದು ಎಂಬ ಅಭಿಪ್ರಾಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಕೆಲವು ಖಾಸಗಿ ಯು ಟ್ಯೂಬರ್‌ಗಳು ನೇಪಾಳ ಬೆಳವಣಿಗೆಗಳನ್ನು , ಭಾರತದ ಬ್ರಾಹ್ಮಣ್ಯದ ಪರಿಕಲ್ಪನೆಯ ಮೂಲಕ ನೋಡಿರುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ನೇಪಾಳದ ಬ್ರಾಹ್ಮಣವಾದಿಗಳ ವಿರುದ್ಧ ಜನಾಂದೋಲನ ಎಂಬ ವ್ಯಾಖ್ಯಾನಗಳು ವಾಸ್ತವಕ್ಕೆ ದೂರ ಅಷ್ಟೇ ಅಲ್ಲದೆ, ಈ ಬೆಳವಣಿಗೆಗಳ ಹಿಂದಿರುವ ಸಾಮಾಜಿಕ-ಆರ್ಥಿಕ ಕ್ಷೋಭೆ ಮತು ನವ ಉದಾರವಾದದ ದುಷ್ಪರಿಣಾಮಗಳ ನಿರಾಕರಣೆಯಾಗುತ್ತದೆ.. ಬೌದ್ಧ ಪ್ರಧಾನಿಯಾಗುವ ಸಂಭವವನ್ನು ಸಂಭ್ರಮಿಸುವುದು ಎಷ್ಟು ಅತಿರೇಕವೋ, ಪದಚ್ಯುತಗೊಂಡ ಆಳ್ವಿಕೆಯನ್ನು ಬ್ರಾಹ್ಮಣ್ಯದ ಚೌಕಟ್ಟಿನಲ್ಲಿಟ್ಟು ನೋಡುವುದೂ ಅಷ್ಟೇ ಅತಿರೇಕದ ಅಭಿಪ್ರಾಯವಾಗುತ್ತದೆ. ಶ್ರೀಲಂಕಾದಲ್ಲಿ, ಮ್ಯಾನ್ಮಾರ್‌ನಲ್ಲಿ ಸರ್ಕಾರಗಳನ್ನು ಪಲ್ಲಟಗೊಳಿಸಿದ ಘಟನೆಗಳಿಗೆ ಆಳ್ವಿಕೆಯ ಧಾರ್ಮಿಕ ಅಸ್ತಿತ್ವ ಕಾರಣವಲ್ಲ ಎಂಬ ವಿವೇಕ ನಮ್ಮಲ್ಲಿರಬೇಕಾಗುತ್ತದೆ. ಭಾರತದ ಜಾತಿ ಕೇಂದ್ರಿತ ನಿರೂಪಣೆಗಳನ್ನು (Narratives), ವ್ಯಾಖ್ಯಾನಗಳನ್ನು (Interpretations) ಅಂತಾರಾಷ್ಟ್ರೀಯಗೊಳಿಸುವುದು ರೋಚಕವಾಗಿ ಕಾಣಬಹುದೇ ಹೊರತು, ವಸ್ತುಸ್ಥಿತಿಯ ವಿಶ್ಲೇಷಣೆಯಾಗಿ ಕಾಣಲಾರದು.

 ಮತ್ತೊಂದೆಡೆ ನೇಪಾಳದ ಜನತೆ ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ತಲ್ಲಣಗಳು ಭಾರತದಲ್ಲೂ ವ್ಯಾಪಕವಾಗಿ ಇರುವುದಾದರೂ, ಇಂತಹ ಘಟನೆಗಳು, ಜನಾಂದೋಲನಗಳು ಭಾರತದಲ್ಲೂ ಸಂಭವಿಸುತ್ತವೆ ಎಂಬ ಸಾಮಾಜಿಕ ಮಾಧ್ಯಮಗಳ ಅಭಿಪ್ರಾಯಗಳೂ ಸಹ ವಿವೇಕಯುತವಾಗಿ ಕಾಣುವುದಿಲ್ಲ. ಅದೇ ರೀತಿಯ ಹಿಂಸಾತ್ಮಕ ಪ್ರತಿಭಟನೆಗಳನ್ನು ನಿರೀಕ್ಷಿಸುವುದಾಗಲೀ, ಅಪೇಕ್ಷಿಸುವುದಾಗಲೀ ಅವಸರದ ತೀರ್ಮಾನಗಳಷ್ಟೆ ಅಲ್ಲದೆ ವಿವೇಕಯುತ ಎನಿಸುವುದಿಲ್ಲ. ಆಳುವ ಪಕ್ಷಗಳ ಧೋರಣೆ ಏನೇ ಇದ್ದರೂ, ಎಷ್ಟೇ ದಮನಕಾರಿಯಾಗಿದ್ದರೂ, ಪ್ರಜಾಸತ್ತಾತ್ಮಕ ಹೋರಾಟಗಳ ಮೂಲಕವೇ ಜನರು ತಮ್ಮ ಸಾಂವಿಧಾನಿಕ ಅಧಿಕಾರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಭಾರತದ ಮಿಲೆನಿಯಂ ಸಮಾಜ ಯೋಚಿಸಬೇಕಿದೆ. ಏಕೆಂದರೆ ಭಾರತದಲ್ಲಿ ಸಾಮಾನ್ಯ ಜನತೆಯ ಸಂಕಟ-ಸಂಕಷ್ಟಗಳು ಎಷ್ಟೇ ಗಂಭೀರ ಸ್ವರೂಪ ಪಡೆದಿದ್ದರೂ, ಇಲ್ಲಿನ ಮಣ್ಣಿನಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿದ ಗಾಂಧಿ, ಅಂಬೇಡ್ಕರ್‌ ಮೊದಲಾದವರ ದಾರ್ಶನಿಕ ಚಿಂತನಾಧಾರೆಗಳು ನಮ್ಮನ್ನು ನಿರ್ದೇಶಿಸುತ್ತವೆ.

 ಪ್ರಜಾಪ್ರಭುತ್ವದ ಜಗತ್ತಿನೆಡೆಗೆ ,,,,

 ಮೇಲಾಗಿ, ಆಳ್ವಿಕೆಯ ಸ್ವರೂಪವನ್ನು ಬದಲಾಯಿಸುವುದಾಗಲೀ, ಆಳುವ ಪಕ್ಷಗಳನ್ನು ಪಲ್ಲಟಗೊಳಿಸಿ, ಹೊಸ ಪಕ್ಷಗಳಿಗೆ ಅಧಿಕಾರ ವಹಿಸುವುದಾಗಲೀ, ನೆಲದ ವಾಸ್ತವಗಳನ್ನು ಕಿಂಚಿತ್ತೂ ಬದಲಾಯಿಸುವುದಿಲ್ಲ. ಏಕೆಂದರೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಸಾಮಾಜಿಕವಾಗಿ, ಆರ್ಥಿಕವಾಗಿ ನವ ಉದಾರವಾದಿ ಬಂಡವಾಳಶಾಹಿಯ, ಡಿಜಿಟಲ್‌ ಬಂಡವಾಳಶಾಹಿಯ ಮಾರುಕಟ್ಟೆ ಆರ್ಥಿಕತೆಯಿಂದಲೇ ನಿರ್ದೇಶಿಸಲ್ಪಡುತ್ತವೆ. ಭಾರತದಲ್ಲೂ ಇದು ಅಪವಾದವೇನಲ್ಲ. ಈ ನೀತಿಗಳ ವಿರುದ್ಧ ಸೊಲ್ಲೆತ್ತುವ ಯಾವುದೇ ಮುಖ್ಯವಾಹಿನಿ ರಾಜಕೀಯ ಪಕ್ಷಗಳನ್ನು , ರಾಷ್ಟ್ರಮಟ್ಟದಲ್ಲಾಗಲೀ ಪ್ರಾದೇಶಿಕ ನೆಲೆಯಲ್ಲಾಗಲೀ ಗುರುತಿಸಲಾಗುವುದಿಲ್ಲ. ಹಾಗಾಗಿ ದುಡಿಯುವ ವರ್ಗಗಳ ಪಾಲಿಗೆ ಪ್ರಜಾಪ್ರಭುತ್ವ ಮೇಲು ಹೊದಿಕೆಯಾಗಿ, ಸಂವಿಧಾನ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆಯೇ ಹೊರತು, ಈ ಶ್ರಮಜೀವಿಗಳನ್ನು ಶೋಷಣೆಯ ಸಂಕೋಲೆಗಳಿಂದ ಬಂಧಮುಕ್ತಗೊಳಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗುವುದಿಲ್ಲ.

Siddaramaih : ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಕೊಡಬೇಕಾ ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ #pratidhvani

 ನೇಪಾಳದ ಬೆಳವಣಿಗೆಗಳನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ಆದರೆ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದ ಬೆಳವಣಿಗೆಗಳು ಆಳುವ ಪಕ್ಷಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಾಲಿಸದೆ ಹೋದರೆ, ಅತಿಯಾದ ದಮನಕಾರಿ ಶಾಸನಾತ್ಮಕ ಕ್ರಮಗಳನ್ನು ಅನುಸರಿಸಿದರೆ ಎದುರಾಗಬಹುದಾದ ಅಪಾಯಗಳ ಮುನ್ಸೂಚನೆಯನ್ನು ನೀಡಿರುವುದು ಸತ್ಯ. ಜನದನಿಯನ್ನು ಹತ್ತಿಕ್ಕುವ ಮೂಲಕ ಆಡಳಿತವನ್ನು ಸುಸ್ಥಿರಗೊಳಿಸುವ ವಿಧಾನಗಳು 21ನೆ ಶತಮಾನದ ಡಿಜಿಟಲ್‌ ಯುಗದಲ್ಲಿ ಯಶಸ್ವಿಯಾಗುವುದಿಲ್ಲ ಎಂಬ ಸಂದೇಶವನ್ನು ಈ ದೇಶಗಳ ಘಟನೆಗಳು ನಿರೂಪಿಸಿವೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಆಳ್ವಿಕೆಯ ದೃಷ್ಟಿಯಿಂದ ಅಧಿಕಾರ ರಾಜಕಾರಣದ ವಾರಸುದಾರರು ಕಲಿಯಬೇಕಾದ ಪಾಠವನ್ನೇ ಅಧಿಕಾರಕ್ಕೆ ಬರಲು ಬಯಸುವ ಸಣ್ಣ ಪುಟ್ಟ ಪ್ರಾದೇಶಿಕ ರಾಜಕೀಯ ಪಕ್ಷಗಳು ಮತ್ತು ಅವುಗಳನ್ನು ಬೆಂಬಲಿಸುವ ತಳಮಟ್ಟದ ನಾಗರಿಕ ಸಂಘಟನೆಗಳೂ ಕಲಿಯಬೇಕಿದೆ. ಅಂತಿಮವಾಗಿ ಜನದನಿಗೆ ಮನ್ನಣೆ ದೊರೆಯುವುದೆಂದರೆ, ಪ್ರಜಾಪ್ರಭುತ್ವದ ಗೆಲುವು ಎಂಬ ಆಶಾದಾಯಕ ಸದ್ಭಾವನೆಯೊಂದಿಗೆ, ಶೋಷಿತ-ಅವಕಾಶವಂಚಿತ-ದಮನಿತ-ಅಂಚಿಗೆ ತಳ್ಳಲ್ಪಟ್ಟ ಜನಸಮುದಾಯಗಳ ನಡುವೆ ಪ್ರಜಾಸತ್ತಾತ್ಮಕ ಆಶಯಗಳನ್ನು, ಸಾಂವಿಧಾನಿಕ ಮೌಲ್ಯಗಳನ್ನೂ ಬಿತ್ತುವುದು ನಮ್ಮ ಆದ್ಯತೆಯಾಗಬೇಕಿದೆ.

ನೇಪಾಳ ಈಗ ಕಲಿಸಿರುವ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಈಗಾಗಲೇ ಕಲಿಸಿರುವ ಪಾಠ ಎಂದರೆ ಇದೇ.

 (ಆರಂಭದಲ್ಲಿ ಉಲ್ಲೇಖಿಸಲಾಗಿರುವ ಚಾರ್ಲ್ಸ್‌ ಡಿಕನ್ಸ್‌ ಅವರ ಹೇಳಿಕೆ ಮತ್ತು ಕೆಲವು ವಿವರಗಳಿಗೆ ಆಧಾರ ದ ವೈರ್‌ ಪತ್ರಿಕೆಯ ಲೇಖನ Over 48 houŗs Witnessing Nepalʼs descent into anarchy ̲̲ ದಿನೇಶ್‌ ಕಾಫ್ಲೆ – ನೇಪಾಲದ ಆರ್ಥಿಕ ಸ್ಥಿತಿಗಳ ಅಂಕಿಅಂಶಗಳಿಗೆ ಆಧಾರ Political Instabiliti̧y Economic difficulties behind Nepalʼs rage ̲- ದ ಹಿಂದೂ ಪತ್ರಿಕೆ )

-೦-೦-೦-೦-

Tags: gen z nepal protestgen z protest nepalgenz protest nepalnepal gen z protestnepal genz protestnepal live protestnepal protestnepal protest 2025nepal protest clashnepal protest deathsnepal protest footagenepal protest gen znepal protest leadersnepal protest livenepal protest newsnepal protest reasonsnepal protest todaynepal protest updatenepal protest updatesnepal protest videonepal protestsnepal public protestprotest in nepalviral nepal protest
Previous Post

ಧರ್ಮದ ಕಾಲಂ ನಲ್ಲಿ ನಾಸ್ತಿಕ ಎಂದು ಬರೆಸಲು ಬಿಜೆಪಿ ಆಕ್ಷೇಪ – ದೇವರನ್ನು ನಂಬದವರು ಇದ್ದಾರೆ : ಸಚಿವ ತಂಗಡಗಿ 

Next Post

ತುಮಕೂರು ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕಿರಿಕ್ – ಪೊಲೀಸರಿಂದ ಅನಾವಶ್ಯಕ ಹಲ್ಲೆ ಆರೋಪ ! 

Related Posts

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ
Top Story

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ

by ಪ್ರತಿಧ್ವನಿ
November 15, 2025
0

  https://youtu.be/Y21a0uwLDB8 ದೆಹಲಿ, ಅ.15: "ನನಗೆ ಏನೂ ತಿಳಿದಿಲ್ಲ. ಏನಾದರೂ ಮಾಹಿತಿ ಬೇಕೆಂದರೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ದೆಹಲಿಯಲ್ಲಿ...

Read moreDetails
ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಆರ್.ಕೆ ಸಿಂಗ್ ಅಮಾನತು

ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಆರ್.ಕೆ ಸಿಂಗ್ ಅಮಾನತು

November 15, 2025
ಬಿಹಾರ ಸೋಲಿನ ಬೆನ್ನಲ್ಲೇ ಖರ್ಗೆ-ರಾಹುಲ್‌ ಗಾಂಧಿ ಭೇಟಿ: ದೆಹಲಿಯಲ್ಲಿ ರಾಜ್ಯ ನಾಯಕರು

ಬಿಹಾರ ಸೋಲಿನ ಬೆನ್ನಲ್ಲೇ ಖರ್ಗೆ-ರಾಹುಲ್‌ ಗಾಂಧಿ ಭೇಟಿ: ದೆಹಲಿಯಲ್ಲಿ ರಾಜ್ಯ ನಾಯಕರು

November 15, 2025
ಬಿಹಾರ ಚುನಾವಣೆ ಫಲಿತಾಂಶ: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಭದ್ರ

ಬಿಹಾರ ಚುನಾವಣೆ ಫಲಿತಾಂಶ: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಭದ್ರ

November 15, 2025
ಕನ್ನಡ ಚಿತ್ರರಂಗದ ನಟಿಗೆ ಕಿರುಕುಳ: ನಿರ್ಮಾಪಕ ಅರವಿಂದ್ ವೆಂಕಟೇಶ  ರೆಡ್ಡಿ ಅರೆಸ್ಟ್‌

ನಟಿಗೆ ಕಿರುಕುಳ ಆರೋಪ: ವಿಚಾರಣೆ ವೇಳೆ ಅರವಿಂದ್ ರೆಡ್ಡಿ ಹೇಳಿದ್ದೇನು..?

November 15, 2025
Next Post
ತುಮಕೂರು ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕಿರಿಕ್ – ಪೊಲೀಸರಿಂದ ಅನಾವಶ್ಯಕ ಹಲ್ಲೆ ಆರೋಪ ! 

ತುಮಕೂರು ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕಿರಿಕ್ - ಪೊಲೀಸರಿಂದ ಅನಾವಶ್ಯಕ ಹಲ್ಲೆ ಆರೋಪ ! 

Recent News

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ
Top Story

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ

by ಪ್ರತಿಧ್ವನಿ
November 15, 2025
ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಆರ್.ಕೆ ಸಿಂಗ್ ಅಮಾನತು
Top Story

ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಆರ್.ಕೆ ಸಿಂಗ್ ಅಮಾನತು

by ಪ್ರತಿಧ್ವನಿ
November 15, 2025
ಬಿಹಾರ ಸೋಲಿನ ಬೆನ್ನಲ್ಲೇ ಖರ್ಗೆ-ರಾಹುಲ್‌ ಗಾಂಧಿ ಭೇಟಿ: ದೆಹಲಿಯಲ್ಲಿ ರಾಜ್ಯ ನಾಯಕರು
Top Story

ಬಿಹಾರ ಸೋಲಿನ ಬೆನ್ನಲ್ಲೇ ಖರ್ಗೆ-ರಾಹುಲ್‌ ಗಾಂಧಿ ಭೇಟಿ: ದೆಹಲಿಯಲ್ಲಿ ರಾಜ್ಯ ನಾಯಕರು

by ಪ್ರತಿಧ್ವನಿ
November 15, 2025
ಬಿಹಾರ ಚುನಾವಣೆ ಫಲಿತಾಂಶ: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಭದ್ರ
Top Story

ಬಿಹಾರ ಚುನಾವಣೆ ಫಲಿತಾಂಶ: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಭದ್ರ

by ಪ್ರತಿಧ್ವನಿ
November 15, 2025
ಕನ್ನಡ ಚಿತ್ರರಂಗದ ನಟಿಗೆ ಕಿರುಕುಳ: ನಿರ್ಮಾಪಕ ಅರವಿಂದ್ ವೆಂಕಟೇಶ  ರೆಡ್ಡಿ ಅರೆಸ್ಟ್‌
Top Story

ನಟಿಗೆ ಕಿರುಕುಳ ಆರೋಪ: ವಿಚಾರಣೆ ವೇಳೆ ಅರವಿಂದ್ ರೆಡ್ಡಿ ಹೇಳಿದ್ದೇನು..?

by ಪ್ರತಿಧ್ವನಿ
November 15, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ

November 15, 2025

ಜಪಾನಿನ ನೈಡೆಕ್ ಕಂಪನಿಯ ಆರ್ಚರ್ಡ್ ಹಬ್ ಗೆ ಚಾಲನೆ ನೀಡಿದ ಸಚಿವ ಎಂ ಬಿ ಪಾಟೀಲ್..

November 15, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada