ಸಂಘಪರಿವಾರದ ಪ್ರಯೋಗ ಶಾಲೆ ಎಂದೇ ಕುಖ್ಯಾತಿ ಪಡೆದಿರುವ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಒಳಗಿನ ಭಿನ್ನಮತ ಕುದಿಯತೊಡಗಿದೆ. ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಸ್ಥಳೀಯ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನವಿದ್ದು, ನಳಿನ್ ಕುಮಾರ್ ಕಟೀಲು ತಲೆದಂಡವಾಗಬೇಕೆಂದು ಕಾಯುತ್ತಿದ್ದಾರೆ. ಅದಕ್ಕಾಗಿ, ಒಂದು ಬಾರಿ ಪಕ್ಷವನ್ನು ಸೋಲಿಸಲೂ ಕೇಸರಿ ಕಾರ್ಯಕರ್ತರು ತಯಾರಾಗಿದ್ದಾರೆ.
ರಾಜ್ಯ ಹಾಗೂ ಕೇಂದ್ರದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದಾಗಲೂ, ಪ್ರವೀಣ್ ನೆಟ್ಟಾರು ಹತ್ಯೆ ನಡೆದಿರುವುದು ಕಾರ್ಯಕರ್ತರ ಆಕ್ರೋಶ ಭುಗಿಲೇಳಲು ಕಾರಣವಾಗಿತ್ತು. ಆ ವೇಳೆ ನಳಿನ್ ಕಾರಿಗೆ ಮುತ್ತಿಗೆ ಹಾಕಿದ್ದ ಘಟನೆ ರಾಜ್ಯ ಮಟ್ಟದ ಸುದ್ದಿಯಾಗಿತ್ತು. ನಂತರ ಹಲವು ಸಂದರ್ಭಗಳಲ್ಲಿ ಪಕ್ಷ ಹಾಗೂ ಅದರ ನಾಯಕರು ನಡೆದುಕೊಂಡ ರೀತಿ ಕಾರ್ಯಕರ್ತರ ಕೋಪಕ್ಕೆ ತುತ್ತಾಗಿದೆ.

ಪುತ್ತೂರಿನ ಹಾಲಿ ಶಾಸಕ ಸಂಜೀವ ಮಠಂದೂರು ವಿರುದ್ಧ ಆಡಳಿತ ವಿರೋಧಿ ಅಲೆ ಇರುವಾಗ ಪುತ್ತೂರಿನ ಕ್ಷೇತ್ರಕ್ಕೆ ಪ್ರಬಲ ಹಿಂದುತ್ವವಾದಿ ಅರುಣ್ ಕುಮಾರ್ ಪುತ್ತಿಲರ ಹೆಸರು ಕೇಳಿ ಬಂದಿತ್ತು. ಡಾ. ಎಂ ಕೆ ಪ್ರಸಾದ್ ಭಂಡಾರಿಯಂತಹ ಸ್ಥಳೀಯ ಹಿರಿಯ ಬಿಜೆಪಿ ನಾಯಕರಿಗೆ ಪುತ್ತಿಲ ಬಗ್ಗೆ ಅಸಮಾಧಾವಿದ್ದು, ಅವರಿಗೆ ಟಿಕೆಟ್ ಸಿಗದಂತೆ ಮಾಡಿದ್ದರು. ಬದಲಾಗಿ ಕ್ಷೇತ್ರದಲ್ಲಿ ಅಷ್ಟೇನೂ ಪ್ರಭಾವಿ ಅಲ್ಲದ ಆಶಾಗೌಡರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಬಿಜೆಪಿ ಯುವ ಕಾರ್ಯಕರ್ತರ ಪಡೆಯೇ ಪುತ್ತಿಲ ಬೆನ್ನಿಗೆ ನಿಂತಿದ್ದು, ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ಅಶೋಕ್ ರೈ ವಿರುದ್ದ ಪುತ್ತಿಲರಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿತ್ತು, ಬದಲಾಗಿ ಕ್ಷೇತ್ರದಲ್ಲಿ ಮುಖ ಪರಿಚಯವೇ ಇಲ್ಲದ ಮಹಿಳೆಗೆ ಟಿಕೆಟ್ ನೀಡಬಾರದಿತ್ತು ಎನ್ನುವುದು ಕಾರ್ಯಕರ್ತರ ವಾದವಾಗಿದೆ. ಇದಕ್ಕೆಲ್ಲಾ ನಳಿನ್ ಕಟೀಲು ಕಾರಣವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷರಾಗಿರೇ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ ಎಂಬ ಆಕ್ರೋಶ ಇದೆ.
ಇದೆಲ್ಲದರ ನಡುವೆ, ಪುತ್ತಿಲರನ್ನು ಹೇಗಾದರೂ ಸೋಲಿಸಬೇಕೆಂಬುದು ಬಿಜೆಪಿ ನಾಯಕರ ಅಗತ್ಯವಾಗಿದೆ. ಪುತ್ತಿಲ ಗೆದ್ದರೆ ಹಿರಿಯ ಬಿಜೆಪಿಗರಿಗೆ ತೀವ್ರ ಮುಜುಗರವಾಗಲಿದೆ. ಈ ಹಿನ್ನೆಲೆಯಲ್ಲಿ ದ.ಕದಲ್ಲಿ ತನ್ನೆಲ್ಲಾ ಶಕ್ತಿಯನ್ನು ಪುತ್ತಿಲರ ಸೋಲಿಗೆ ಬಿಜೆಪಿ ಶ್ರಮಿಸುತ್ತಿದೆ. ಕಾರ್ಯಕರ್ತರ ಮನೆಗೆ ಕರೆ ಮಾಡುತ್ತಿರುವ ಬಿಜೆಪಿಗರು ಕೆಲಸ ಮಾಡುವ ಭರವಸೆ ನೀಡುತ್ತಿದ್ದಾರೆ. ಅಲ್ಲದೆ, ಬಿಜೆಪಿ ಮುಖಂಡರು ಮುಖ್ಯಸ್ಥರಾಗಿರುವ ಸಂಸ್ಥೆಗಳಲ್ಲಿ ದುಡಿಯುವ ಸಿಬ್ಬಂದಿಗಳು ಪುತ್ತಿಲರಿಗೆ ಬಹಿರಂಗ ಬೆಂಬಲ ನೀಡಬಾರದೆಂಬ ತಾಕೀತೂ ಮಾಡಲಾಗಿದೆ ಎನ್ನಲಾಗಿದೆ.
ಹಾಗಾಗಿ, ಈ ಬಾರಿ ಪುತ್ತಿಲರನ್ನು ಹೇಗಾದರೂ ಗೆಲ್ಲಿಸಿ ನಳಿನ್ ಕುಮಾರ್ ಗೆ ಸರಿಯಾಗಿ ಬುದ್ಧಿ ಕಳಿಸಬೇಕೆಂಬ ಬಯಕೆ ಪುತ್ತೂರು ಬಿಜೆಪಿಗರಲ್ಲಿದೆ. ಇದು ಜಿಲ್ಲೆಯ ಇತರೆ ಭಾಗದ ಕಾರ್ಯಕರ್ತರ ಮೇಲೂ ಪರಿಣಾಮ ಬೀರುತ್ತಿದೆ.
ಇನ್ನು ಅರುಣ್ ಕುಮಾರ್ ಪುತ್ತಿಲರಿಗೆ ಬಿಎಸ್‌ವೈ ಕರೆ ಮಾಡಿದ್ದು ನಾಮಪತ್ರ ಹಿಂಪಡೆಯಲು ಒತ್ತಡ ಹೇರಿದ್ದಾರೆ. ಆದರೆ, ಇದುವರೆಗೂ ಯಾವುದೇ ನಾಯಕರ ಆಮಿಷಗಳಿಗೆ ತಾನು ಬಗ್ಗುವುದಿಲ್ಲ. ನಾಮಪತ್ರ ಹಿಂಪಡೆಯಲ್ಲ ಎಂದು ಪುತ್ತಿಲ ಬಲವಾಗಿ ನಿಂತಿದ್ದಾರೆ.





