ಬೆಂಗಳೂರು:
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತ ದುರಂತದ ಹಿನ್ನೆಲೆ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ ಅವರು ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಗಾಯಾಳುಗಳನ್ನು ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ಘಟನೆ ಅತ್ಯಂತ ದುಃಖಕರವಾಗಿದ್ದು, ಇಂತಹ ಅನಾಹುತಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯಗಳ ಸಮಗ್ರ ಪರಿಶೀಲನೆಗೆ ಸೂಚನೆ ನೀಡಲಾಗಿದೆ ಎಂದರು.ವಿಶೇಷವಾಗಿ ಬೆಂಗಳೂರು ನಗರದಲ್ಲಿರುವ ಪ್ರಮುಖ ಆಸ್ಪತ್ರೆಗಳಾದ ಬೌರಿಂಗ್, ವಿಕ್ಟೋರಿಯಾ, ಕೆ.ಸಿ. ಜನರಲ್, ಸಿ.ವಿ. ರಾಮನಗರ ಸೇರಿದಂತೆ ಎಲ್ಲಾ ಆಸ್ಪತ್ರೆಗಳ ಕಾಂಪೌಂಡ್ ಗೋಡೆಗಳು, ಹಳೆಯ ಕಟ್ಟಡಗಳು ಮತ್ತು ಅವುಗಳ ಸ್ಥಿತಿಗತಿಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಹೇಳಿದರು.

“ಎಲ್ಲಾ ಸಂಬಂಧಿತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಬೇಕು. ಅಪಾಯಕಾರಿಯಾಗಿರುವ ಕಟ್ಟಡಗಳು ಮತ್ತು ಗೋಡೆಗಳನ್ನು ತಕ್ಷಣ ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು,” ಎಂದು ಸಚಿವರು ಸ್ಪಷ್ಟ ಸೂಚನೆ ನೀಡಿದರು.
ಈ ದುರಂತದ ಬಳಿಕ ನಗರದಲ್ಲಿ ಹಳೆಯ ಕಟ್ಟಡಗಳ ಸುರಕ್ಷತೆ ಬಗ್ಗೆ ಚರ್ಚೆ ಜೋರಾಗಿದೆ. ಭಾರೀ ಮಳೆಯ ಸಂದರ್ಭಗಳಲ್ಲಿ ಗೋಡೆ ಕುಸಿತ, ಮರ ಬೀಳುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಅಗತ್ಯತೆಯನ್ನು ಸರ್ಕಾರ ಒತ್ತಿಹೇಳುತ್ತಿದೆ.ರಾಜ್ಯ ಸರ್ಕಾರ ಈಗಾಗಲೇ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದು, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳನ್ನು ತಪ್ಪಿಸಲು ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿಗಳನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಯುತ್ತಿದೆ.





