ದಶಕದ ಹಿಂದೆ ರಾಜ್ಯವನ್ನೇ ಕಂಗೊಳಿಸಿದ್ದ ಧರ್ಮಸ್ಥಳದ 17 ವರ್ಷದ ಬಾಲಕಿ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಪ್ರಕರಣದ ಮರು ತನಿಖೆ (De novo investigation) ಕುರಿತ ಅರ್ಜಿಯ ಹಿನ್ನೆಲೆಯಲ್ಲಿ, ಈ ವಿಷಯದಲ್ಲಿ ತನ್ನ ಸ್ಪಷ್ಟ ನಿಲುವು ತಿಳಿಸುವಂತೆ ನ್ಯಾಯಾಲಯವು ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿದೆ.
ಸಿಬಿಐ ತನಿಖೆಯ ನಂತರವೂ ಆರೋಪಿ ಖುಲಾಸೆಯಾಗಿರುವ ಹಿನ್ನೆಲೆಯಲ್ಲಿ, ಮರು ತನಿಖೆ ಅಗತ್ಯವೇ ಎಂಬುದರ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ವಿವರಿಸುವ ಸಮಗ್ರ ವರದಿ ಸಲ್ಲಿಸಲು ಕೋರ್ಟ್ ಸೂಚಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ.

ಈ ಮೊದಲು ಕಾಲಾವಕಾಶ ಪಡೆದಿದ್ದರೂ ರಾಜ್ಯ ಸರ್ಕಾರ ಕ್ರಮಗಳ ವಿವರ ನೀಡದಿರುವುದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. “ಪ್ರಕರಣದ ಮರು ತನಿಖೆಗೆ ವಿಶೇಷ ತನಿಖಾ ದಳ (SIT) ರಚಿಸುವ ಸಾಧ್ಯತೆ ಇದೆವೇ? ಇತರ ಸಂಭಾವ್ಯ ಆರೋಪಿಗಳ ಪಾತ್ರ ಪರಿಶೀಲಿಸುವ ಯೋಚನೆ ಇದೆಯೇ?” ಎಂಬುದರ ಕುರಿತು ಅಫಿಡವಿಟ್ ಸಲ್ಲಿಸುವಂತೆ ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗೆ ಪೀಠ ಸೂಚನೆ ನೀಡಿದೆ.

ಸಂತ್ರಸ್ತೆಯ ಪರ ವಕೀಲರು, ಪ್ರಕರಣದ ಹಲವು ಸಾಕ್ಷಿಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಉಳಿದ ಸಾಕ್ಷಿಗಳಿಗೆ ಸೂಕ್ತ ಭದ್ರತೆ ಒದಗಿಸಲು ಸೂಚಿಸಿದೆ.
ಸಂತ್ರಸ್ತ ಕುಟುಂಬದ ಪರ ವಕೀಲರು ಹೊಸದಾಗಿ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದರು. 2012ರಲ್ಲಿ ನಡೆದ ಈ ಪ್ರಕರಣವನ್ನು 2013ರಲ್ಲಿ ಸಿಬಿಐಗೆ ವಹಿಸಲಾಗಿತ್ತು ಎಂದು ನ್ಯಾಯಾಲಯ ನೆನಪಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, “ಪ್ರಕರಣದ ಪ್ರಮುಖ ಸಾಕ್ಷ್ಯ ವಸ್ತುಗಳು ಇನ್ನೂ ಲಭ್ಯವಿದ್ದು, ಡಿಎನ್‌ಎ ಪರೀಕ್ಷೆ ನಡೆಸಬಹುದು. ಮೂಲ ಆರೋಪಿಗಳು ಬೇರೆ ಯಾರೋ ಎಂಬುದು ವಿಚಾರಣಾ ನ್ಯಾಯಾಲಯವೇ ಸೂಚಿಸಿದೆ,” ಎಂದು ವಾದಿಸಿದರು. ಮುಂದಿನ ವಿಚಾರಣೆಯನ್ನು ಜುಲೈ 14ಕ್ಕೆ ನಿಗದಿಪಡಿಸಲಾಗಿದೆ.

2023ರ ಜೂನ್ 16ರಂದು ವಿಚಾರಣಾ ನ್ಯಾಯಾಲಯ ಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತ್ತು. ಪ್ರಾಸಿಕ್ಯೂಷನ್ ಆರೋಪ ಸಾಬೀತುಪಡಿಸಲು ವಿಫಲವಾಗಿದೆ ಎಂದು ಹೇಳಿದ ನ್ಯಾಯಾಲಯ, ತನಿಖೆಯಲ್ಲಿ ನಡೆದ ಲೋಪಗಳ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿತ್ತು.ನಂತರ 2024ರಲ್ಲಿ ಸಂತ್ರಸ್ತೆಯ ತಂದೆ ಹೈಕೋರ್ಟ್‌ನಲ್ಲಿ ಮರು ತನಿಖೆಗೆ ಅರ್ಜಿ ಸಲ್ಲಿಸಿದರೂ, ಅದನ್ನು ವಜಾಗೊಳಿಸಲಾಗಿತ್ತು. ಆದರೆ “ಆರೋಪಿ ಖುಲಾಸೆಯಾಗಿರುವುದರಿಂದ ನಿಜವಾದ ಅಪರಾಧಿ ಯಾರು ಎಂಬ ಪ್ರಶ್ನೆ ಉಳಿದಿದೆ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ಇದಲ್ಲದೆ, ಧರ್ಮಸ್ಥಳ ಸುತ್ತಮುತ್ತ ನಡೆದಿರುವ ಹಲವು ಹತ್ಯೆ, ಅತ್ಯಾಚಾರ ಮತ್ತು ನಾಪತ್ತೆ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಈಗಾಗಲೇ ಎಸ್‌ಐಟಿ ರಚಿಸಿದ್ದು, ಅದರ ಅಂತಿಮ ವರದಿ ನಿರೀಕ್ಷೆಯಲ್ಲಿದೆ.





