ರಾಜ್ಯ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಹಲವು ಊಹಾಪೋಹಗಳೆದ್ದಿದ್ದು, ಸಿಎಂ ಬಿಎಸ್ ವೈ ಅವರ ಪದಚ್ಯುತಿಗೆ ಕ್ಷಣಗಣನೆ ಎಂಬಂತ ವಾತಾವರಣ ನಿರ್ಮಾಣವಾಗಿತ್ತು. ಇನ್ನೇನು ಸಿಎಂ ಬದಲಾಗಲಿದ್ದಾರೆ ಎನ್ನುವಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮುಖ್ಯಮಂತ್ರಿಯಾಗಿ ಬಿಎಸ್ವೈ ಚೆನ್ನಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದಿದ್ದಾರೆ. ಚೆನ್ನಾಗಿ ಕೆಲಸ ನಿರ್ವಹಿಸಿದ್ದರೆ ಸಿಎಂ ಬದಲಾವಣೆ ಪ್ರಶ್ನೆ ಏಕೆ ಉದ್ಭವವಾಗಿದೆ ಎಂಬ ಪ್ರಶ್ನೆಯೂ ಈಗ ಮುನ್ನೆಲೆಗೆ ಬಂದಿದೆ.

ಬೆಳಗಾವಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ “ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ನಿಂದ ಈವರೆಗೂ ಯಾವುದೇ ಸಂದೇಶ ಬಂದಿಲ್ಲ. ಹೈಕಮಾಂಡ್ ಆದೇಶಕ್ಕಾಗಿ ಕಾಯುತ್ತಿದ್ದೇನೆ. ನಾಳೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ” ಎಂದು ಹೇಳಿದ್ದರು.
ರಾಜ್ಯದಲ್ಲಿ ಉತ್ತರಪ್ರದೇಶ ಮಾದರಿ ಆಡಳಿತಕ್ಕೆ ಆರಂಭವಾಗಿದೆ ಸಿದ್ಧತೆ?
ಅದೇ ವೇಳೆ ಗೋವಾ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ರಾಜಕೀಯ ಬದಲಾವಣೆ ಇಲ್ಲ ಎಂದು ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ.
ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಹುದ್ದೆ; ಶ್ರೀರಾಮುಲು, ರಮೇಶ್ ಜಾರಕಿಹೊಳಿ ನಡುವೆ ತೀವ್ರ ಪೈಪೋಟಿ
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಜನಪರ ಕಾರ್ಯಗಳನ್ನು ಮಾಡುತ್ತಿದೆ. ಎಲ್ಲವನ್ನೂ ನಾವು ಗಮನಿಸುತ್ತಿದ್ದೇವೆ. ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆಯುತ್ತಿಲ್ಲ ಎಂದು ಅವರು ತಿಳಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಈ ನಡುವೆ ಸಿಎಂ ರೇಸಿನಲ್ಲಿ ಮುಂಚೂಣಿಯಲ್ಲಿರುವ ನಾಯಕ ಪ್ರಹ್ಲಾದ್ ಜೋಷಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿಯೂ ಸಿಎಂ ಬದಲಾವಣೆ ಸಾಧ್ಯತೆಗೆ ಪುಷ್ಟಿ ನೀಡುವಂತಿದೆ. ಧಾರವಾಡದಲ್ಲಿ ಮಾತನಾಡಿದ ಜೋಷಿ ಹೈಕಮಾಂಡ್ ಹಾಗೂ ಸಿಎಂ ನಡುವೆ ನಡೆದಿರುವ ಮಾತುಕತೆಯನ್ನು ಒಪ್ಪಿಕೊಂಡರಾದರೂ, ಸಿಎಂ ಬದಲಾವಣೆ ಕುರಿತು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದರು.
ಹೈಕಮಾಂಡ್ ಅಳೆದು ತೂಗಿ ಅರ್ಹರನ್ನೇ ಸಿಎಂ ಮಾಡುತ್ತಾರೆ: ಸಚಿವ ಮುರುಗೇಶ್ ನಿರಾಣಿ
ಈ ನಡುವೆ ಜು.25 ರಂದು ರಾತ್ರಿ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ, ಸಂಘಟನಾ ಕಾರ್ಯದರ್ಶಿ ಬಿಎ ಲ್ ಸಂತೋಷ್, ಜೆಪಿ ನಡ್ಡಾ ಅವರು ಸಭೆ ನಡೆಸಲಿದ್ದು, ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ. ಒಟ್ಟಾರೆ, ಒಂದು ಕಡೆ ಕರೋನಾ ಸಂಕಷ್ಟ, ಇನ್ನೊಂದೆಡೆ ಉತ್ತರ ಕರ್ನಾಟಕ ನೆರೆಯ ನಡುವೆ ರಾಜ್ಯ ರಾಜಕಾರಣವಂತೂ ಗೊಂದಲದ ಗೂಡಾಗಿ ಮಾರ್ಪಟ್ಟಿದೆ.






