“ಯಾರಾದ್ರೂ ಬಂದ್ರೆ (ಬೇರೆ ಪಕ್ಷದವರು) ಓಡಾಡಿಸಿಕೊಂಡು ಹೊಡೀರಿ. ಮಿಕ್ಕಿದ್ದು ನಾನು ನೋಡ್ಕೋತೀನಿ. ಯಾವ ಥರ ಹೊಡೀಬೇಕು ಅಂದ್ರೆ ಅವರು ತಿರುಗಿ ನೋಡಬಾರದು. ಆ ಥರ ಹೊಡೀರಿ. ಯಾರು ಯಾರು ಹೊಡೀತೀರಾ ಕೈ ಎತ್ತಿ ನೋಡಣ… ನಾಳೆ ನಮ್ದು. ಯಾವಾಗ ನಮ್ದು? ವೋಟ್ ಹಾಕ್ತೀರಲ್ಲ, ಆ ನಾಳೆ ನಮ್ದು…”
ಇದು ಸಚಿವ ಮುನಿರತ್ನ ತನ್ನ ತಮಿಳು ಬೆಂಬಲಿಗರಿಗೆ ಬಹಿರಂಗವಾಗಿ ನೀಡಿದ ಕರೆ. ಸಾರ್ವಜನಿಕ ಸಮಾರಂಭದಲ್ಲಿ ಸಚಿವರೊಬ್ಬರು ಈ ರೀತಿ ಪ್ರಚೋದನೆ ನೀಡಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಆರ್ ಆರ್ ನಗರದ ಜಾಲಹಳ್ಳಿ ವಾರ್ಡಿನ ಖಾತಾನಗರದಲ್ಲಿ ಕ್ಷೇತ್ರದ ಶಾಸಕರೂ ಆಗಿರುವ ಮುನಿರತ್ನ ಈ ಹೇಳಿಕೆಗಳನ್ನು ನೀಡಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಲ್ಲವೇ, ಸಚಿವರ ವಿರುದ್ಧ ಕ್ರಮಗಳು ಇಲ್ಲವೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
“ಜಾಲಹಳ್ಳಿ ವಾರ್ಡಿನ ಖಾತಾನಗರಕ್ಕೆ ಯಾರಾದರೂ ಬಂದರೆ “ಹೊಡೆದು ಕಳಿಸಿರಿ” ಎಂದು ಕ್ಷೇತ್ರದ ಶಾಸಕ ಸಾರ್ವಜನಿಕ ಸಭೆಯಲ್ಲಿ ನಿಂತು ತಮಿಳಿನಲ್ಲಿ ಪ್ರಚೋದಿಸಿ ಚುನಾವಣೆಯ ಸಮಯದಲ್ಲಿ ನೇರವಾಗಿ ಅಶಾಂತಿ ಸೃಷ್ಟಿಸಲೆತ್ನಿಸುತ್ತಾರೆಂದರೆ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಆತಂಕ ಹುಟ್ಟಿಸುತ್ತದೆ..” ಎಂದು ಆರ್ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಟ್ವೀಟ್ ಮಾಡಿದ್ದಾರೆ̤
ಕನ್ನಡ ನೆಲದಲ್ಲಿ ನಿಂತು ತಮಿಳು-ಕನ್ನಡ ಮಾತನಾಡುವವರ ಮಧ್ಯೆ ತಮಿಳಿನಲ್ಲಿ ದ್ವೇಷದ ಕಿಚ್ಚು ಹೊತ್ತಿಸಿ “ಹಿಂಸಿಸಿ, ಮುಂದಿನದು ನಾನು ನೋಡ್ಕೊಂತೀನಿ” ಎಂಬ ಬಹಿರಂಗ ಪ್ರಚೋದನೆಯಿಂದ ಯಾರಿಗಾದರೂ ಪ್ರಾಣಹಾನಿಯಾದರೆ ಯಾರು ಹೊಣೆ? ತನ್ನ ಬೆಂಬಲಿಗರ ಹಾಗೂ ಸಾಮಾನ್ಯ ಜನರ ಜೀವಕ್ಕೆ ಇವರ ಬಳಿ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿರುವ ಕುಸುಮಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ನ್ನ ಬೆಂಬಲಿಗರಿಗೆ ಹಿಂಸಾಚಾರ ಮಾಡಿ ಎಂದು ಕರೆ ಕೊಡುವ ಶಾಸಕ ತನ್ನ ಮನೆಯ ಮಕ್ಕಳಿಗೂ ಇದನ್ನೇ ಹೇಳಿ ಕಳುಹಿಸುತ್ತಾರೆಯೇ? ಕಂಡವರ ಮನೆಯ ಮಕ್ಕಳನ್ನು ಬಾವಿಗೆ ತಳ್ಳಿ ಆಳ ಅಳೆವ ಮನಸ್ಥಿತಿಯ ವ್ಯಕ್ತಿಯೊಬ್ಬ ಶಾಸಕನಾಗಲು ಅರ್ಹನೇ? ಸಮಾಜದ ಸ್ವಾಸ್ಥ್ಯ ಹಾಳುಗೆಡುವುವ ವಿಕೃತ ಮನಸ್ಸುಳ್ಳ ಜನಪ್ರತಿನಿಧಿಗಳ ನಡುವೆ ಜನರು ಸಾಮಾನ್ಯ ಜೀವನ ನಡೆಸಲು ಸಾಧ್ಯವೇ? ಎಂದು ಕುಸುಮಾ ಪ್ರಶ್ನಿಸಿದ್ದಾರೆ.
ಒಕ್ಕಲಿಗ ಹೆಣ್ಮಗಳಿಗೆ ಮುನಿರತ್ನ ಹೆದರಿದ್ದಾನೆ: ಸಂಸದ ಡಿಕೆ ಸುರೇಶ್
ಘಟನೆಯ ಬಗ್ಗೆ ಆಕ್ರೋಶ ಹೊರಹಾಕಿರುವ ಸಂಸದ ಡಿಕೆ ಸುರೇಶ್, ಮುನಿರತ್ನ ವಿರುದ್ಧ ಹರಿಹಾಯ್ದಿದ್ದು, ಮುನಿರತ್ನ ಓರ್ವ ಮುಠ್ಠಾಳ, ಒಕ್ಕಲಿಗ ಹೆಣ್ಮಗಳಿಗೆ ಭಯಬಿದ್ದಿದ್ದಾನೆ. ಕನ್ನಡಿಗರ ವಿರುದ್ಧ ತಮಿಳರನ್ನು ಎತ್ತಿ ಕಟ್ಟಿದ್ದಾನೆ, ಒಕ್ಕಲಿಗ ಹೆಣ್ಮಗಳನ್ನು ಅಟ್ಟಾಡಿಸಿ ಹೊಡೆಯಲು ತಮಿಳರಿಗೆ ಹೇಳಿದ್ದಾನೆ, ಇದು ಅಪರಾಧ.ಬೇರೆ ಯಾರಾದ್ರೂ ಮಾಡಿದ್ರೆ ಇಷ್ಟು ಹೊತ್ತಿಗೆ ಜೈಲಲ್ಲಿರಬೇಕಿತ್ತು ಎಂದು ಸಂಸದ ಸುರೇಶ್ ಆಕ್ರೋಶ ಹೊರ ಹಾಕಿದ್ದಾರೆ.
.