ನಾಯಕ ಕೆಎಲ್ ರಾಹುಲ್ ಸಿಡಿಸಿದ ಶತಕದ ನೆರವಿನಿಂದ ಲಕ್ನೋ ಸೂಪರ್ ಗೈಂಟ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 36 ರನ್ ಗಳಿಂದ ಸೋಲಿಸಿದೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಗೈಂಟ್ಸ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 168 ರನ್ ಗಳಿಸಿತು. ಪೈಪೋಟಿಯ ಮೊತ್ತ ಬೆಂಬತ್ತಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 132 ರನ್ ಗಳಿಸಲಷ್ಟೇ ಶಕ್ತವಾಯಿತು.
ಮುಂಬೈ ಬ್ಯಾಟ್ಸ್ ಮನ್ ಗಳ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. ನಾಯಕ ರೋಹಿತ್ ಶರ್ಮ (39) ಮತ್ತು ತಿಲಕ್ ವರ್ಮ (38) ಮತ್ತು ಕೀರನ್ ಪೊಲಾರ್ಡ್ (19) ಮಾತ್ರ ಹೋರಾಟ ನಡೆಸಿದರೆ, ಉಳಿದವರು ಪೆವಿಲಿಯನ್ ಪರೇಡ್ ನಡೆಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಲಕ್ನೋ ತಂಡಕ್ಕೆ ಕೆಎಲ್ ರಾಹುಲ್ ಶತಕದ ಬಲ ನೀಡಿದರು. ಒಂದೆಡೆ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೂ ಬಂಡೆಯಂತೆ ನಿಂತು ಶತಕ ಸಿಡಿಸಿದರು. ಇದು ಪ್ರಸಕ್ತ ಸಾಲಿನ 2ನೇ ಶತಕವಾಗಿದೆ.
ರಾಹುಲ್ 62 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 103 ರನ್ ಬಾರಿಸಿ ಅಜೇಯರಾಗಿ ಉಳಿದರು. ಮನೀಷ್ ಪಾಂಡೆ 22 ರನ್ ಗಳಿಸಿದರು.
ಮುಂಬೈ ಪರ ರಿಲೆ ಮೆರೆಡಿತ್ ಮತ್ತು ಕೀರನ್ ಪೊಲಾರ್ಡ್ ತಲಾ 2 ವಿಕೆಟ್ ಗಳಿಸಿದರು. ಜಸ್ ಪ್ರೀತ್ ಬುಮ್ರಾ, ಡೇನಿಯಲ್ ಸ್ಯಾಮ್ ಮತ್ತು ತಲಾ ಒಂದು ವಿಕೆಟ್ ಪಡೆದರು.