ಪವಿತ್ರ ರಂಜಾನ್ ಸಂದರ್ಭದಲ್ಲಿ ಆಯೋಜಿಸಲ್ಪಡುವ ಇಫ್ತಿಯಾರ್ (Iftar) ಬಗ್ಗೆ ಮತ್ತೆ ಚರ್ಚೆಗಳು ನಡೆಯುತ್ತಿವೆ. ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ (Tejaswi Yadav) ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಭಾಗವಹಿಸಿದ್ದರಿಂದ ಹೊಸ ರಾಜಕೀಯ ಧ್ರುವೀಕರಣವೇ ಆಗಿಬಿಡುತ್ತದೆ ಎಂಬೆಲ್ಲಾ ಚರ್ಚೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತದ ರಾಜಕಾರಣದಲ್ಲಿ ಇಫ್ತಿಯಾರ್ ಕೂಟಗಳ ಸುತ್ತ ನಡೆದ ಬೆಳವಣಿಗೆಗಳನ್ನೊಮ್ಮೆ ನೋಡೋಣ.
ರಾಜಕಾರಣಿಗಳು ಆಯೋಜಿಸುವ ಇಫ್ತಿಯಾರ್ ಕೂಟಗಳು ದೇಶದ ಬಹು-ಪಕ್ಷೀಯ ರಾಜಕೀಯ ಪದ್ಧತಿಯನ್ನು ಪೊರೆಯುವಲ್ಲಿ ಪ್ರಮುಖ ಪಾತ್ರವಹಿಸಿವೆ. ಸಾಮಾಜಿಕವಾಗಿ ದೇಶದ ಜಾತ್ಯತೀತ ಧೋರಣೆಯನ್ನು ಸಾರಿ ಹೇಳುವ ಸಾಧನಗಳೂ ಆಗಿವೆ. ಧಾರ್ಮಿಕ ಆಚರಣೆಯ, ಅಥವಾ ಒಂದು ನಿರ್ದಿಷ್ಟ ಸಮುದಾಯದ ಸಂಪ್ರದಾಯದ ಭಾಗವಾಗಿದ್ದ ಇಫ್ತಿಯಾರ್ ಕೂಟವನ್ನು ರಾಜಕಾರಣಕ್ಕೂ ಪಸರಿಸಿ ರಾಜಕಾರಣದಲ್ಲೂ ಪ್ರೀತಿ-ಸ್ನೇಹ ಹಂಚಿಕೊಳ್ಳಲು ಮುನ್ನಡಿ ಬರೆದವರು ಚೊಚ್ಚಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು. ಮೊದಲಿಗೆ ಅವರು ಆಪ್ತ ಮುಸ್ಲಿಂ ಸ್ನೇಹಿತರಿಗೆ ದೆಹಲಿಯ ಜಂತರ್ ಮಂತರ್ ರಸ್ತೆಯಲ್ಲಿದ್ದ ತಮ್ಮ 7ನೇ ನಂಬರ್ ಮನೆಯಲ್ಲಿ, ಆನಂತರ ಎಐಸಿಸಿ ಪ್ರಧಾನ ಕಛೇರಿಯಲ್ಲಿ ಇಫ್ತಿಯಾರ್ ಕೂಟಗಳನ್ನು ಆಯೋಜಿಸುತ್ತಿದ್ದರು.
ಜವಾಹರಲಾಲ್ ನೆಹರೂ ಅವರ ಉತ್ತರಾಧಿಕಾರಿ ಲಾಲ್ ಬಹದ್ದೂರ್ ಶಾಸ್ತ್ರಿ ಇಫ್ತಿಯಾರ್ ಕೂಟ ಆಯೋಜಿಸುವ ಅಭ್ಯಾಸವನ್ನು ಕೈಬಿಟ್ಟಿದ್ದರು. ಆದರೆ ತದನಂತರ ಬಂದ ಇಂದಿರಾ ಗಾಂಧಿ ಮತ್ತಿತರರು ಈ ಅಭ್ಯಾಸವನ್ನು ಪುನರಾರಂಭಿಸಿದರು. ಅದು ಇತ್ತೀಚಿನವರೆಗೂ ನಡೆದುಕೊಂಡು ಬಂದಿತ್ತು. ಇದು ರಾಷ್ಟ್ರೀಯ ಮಟ್ಟದ ಬೆಳವಣಿಗೆ. ಧರ್ಮ ಮತ್ತು ಜಾತಿಗಳೆರಡೂ ಸರಿಸಮಾನವಾಗಿ ನಿರ್ಣಾಯಕವಾಗಿರುವ ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಕೂಡ ಇಫ್ತಿಯಾರ್ ಕೂಟಗಳ ವಿಷಯದಲ್ಲಿ ಹೀಗೆ ಆಗಿದೆ.

ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಇಫ್ತಿಯಾರ್ ಕೂಟ ಆಯೋಜನೆ ಮಾಡಿದ್ದು ಅಲ್ಲಿನ ಮಾಜಿ ಮುಖ್ಯಮಂತ್ರಿ ಹೇಮಾವತಿ ನಂದನ್ ಬಹುಗುಣ. ನಂತರ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ಬಹುಜನ ಸಮಾಜ ಪಕ್ಷದ ಮಾಯಾವತಿ, ಬಿಜೆಪಿಯ ರಾಜನಾಥ್ ಸಿಂಗ್ ಮತ್ತು ಕಲ್ಯಾಣ್ ಸಿಂಗ್, ಅಂದರೆ ಎಲ್ಲಾ ಮುಖ್ಯಮಂತ್ರಿಗಳೂ ಮಾಡಿದ್ದಾರೆ. ಆದರೆ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಶಕಗಳ ಹಿಂದಿನ ಸಂಪ್ರದಾಯವನ್ನು ಮುರಿದಿದ್ದಾರೆ.
ಯೋಗಿ ಆದಿತ್ಯನಾಥ್ ಇಂತಹ ಯಾವುದೇ ಧರ್ಮಿಕ ಹಿನ್ನೆಲೆಯ ಭೋಜನ ಕೂಟಗಳನ್ನು ಧರ್ಮಾತೀತವಾಗಿ, ಜಾತ್ಯಾತೀತವಾಗಿ, ಸಂವಿಧಾನದ ಪ್ರತಿನಿಧಿಯಾಗಿ ಅಧಿಕಾರ ಸ್ವೀಕರಿಸಿರುವ ಸರ್ಕಾರದ ಮುಖ್ಯಸ್ಥನಾಗಿ ನಾನು ಆಯೋಜಿಸುವುದಿಲ್ಲ ಎಂದು ನಿರ್ಧರಿಸಿದ್ದರೆ ಅದು ಬೇರೆಯದೇ ಮಾತು. ಆದರೆ ಅವರು ನವರಾತ್ರಿ ಉಪವಾಸದ ಅವಧಿಯಲ್ಲಿ ತಮ್ಮ ಅಧಿಕೃತ ಸಿಎಂ ನಿವಾಸದಲ್ಲಿ ‘ಕನ್ಯಾ ಪೂಜೆ’ ಆಯೋಜಿಸಿ ‘ಫಲಹರಿ ಔತಣ’ ಏರ್ಪಡಿಸಿದ್ದರು. ಅಷ್ಟೇ ಏಕೆ 2019ರಲ್ಲಿ ಉತ್ತರ ಪ್ರದೇಶದ ರಾಜ್ಯಪಾಲ ರಾಮ್ ನಾಯಕ್ ಅವರು ರಾಜಭವನದಲ್ಲಿ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲೂ ಭಾಗವಹಿಸಿರಲಿಲ್ಲ.
ಮತ್ತೆ ರಾಷ್ಟ್ರ ರಾಜಕಾರಣದ ಹೊರಳಿದರೆ ಇದೇ ಹಿಂದುತ್ವ, ರಾಮಜನ್ಮ ಭೂಮಿ, ಬಾಬರಿ ಮಸೀದಿ, ರಥಯಾತ್ರೆ ಹೆಸರಿನಲ್ಲೇ ರಾಜಕಾರಣ ಮಾಡಿಕೊಂಡು ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಸೌಹಾರ್ದತೆಯ ಸಂಕೇತವಾಗಿದ್ದ ಇಫ್ತಿಯಾರ್ ಕೂಟಗಳಿಗೆ ವಿರೋಧಿಯಾಗಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಇಫ್ತಿಯಾರ್ ಕೂಟ ಆಯೋಜಿಸಿ ಮುಸ್ಲಿಂ ನಾಯಕರನ್ನು ಆಹ್ವಾನಿಸುತ್ತಿದ್ದರು. ಅವರು ಛಾಯಾಚಿತ್ರಗಳಿಗೆ ನಗುಮುಖದಿಂದಲೇ ಪೋಸ್ ನೀಡುತ್ತಿದ್ದರು. ಅವರು ಎರಡು ಬಾರಿ ಇಫ್ತಿಯಾರ್ ಕೂಟ ಆಯೋಜಿಸಿದ್ದರೆಂದು ಅವರ ಬೆಂಬಲಿಗರೂ ಮತ್ತು ಇಫ್ತಿಯಾರ್ ಕೂಟದ ಪ್ರಮುಖ ಆಯೋಜಕರೂ ಆಗಿರುತ್ತಿದ್ದ ಬಿಜೆಪಿಯ ಹಿರಿಯ ನಾಯಕ ಶಾನವಾಜ್ ಹುಸೇನ್ ಹೇಳುತ್ತಾರೆ. ಪಕ್ಷದ ಅಧ್ಯಕ್ಷರಾಗಿ ಮುರಳಿ ಮನೋಹರ್ ಜೋಶಿ ಬಿಜೆಪಿಯ ಮೊದಲ ಅಧಿಕೃತ ಇಫ್ತಿಯಾರ್ ಕೂಟವನ್ನು ಆಯೋಜಿಸಿದ್ದರು ಎಂಬ ಸಂಗತಿಯನ್ನೂ ವಿವರಿಸುತ್ತಾರೆ.
ರಾಷ್ಟ್ರಪತಿ ಭವನ ಕೂಡ ದೊಡ್ಡ ಮಟ್ಟದ ಇಫ್ತಿಯಾರ್ ಕೂಟಗಳನ್ನು ಆಯೋಜನೆ ಮಾಡುತ್ತಿತ್ತು. ಆದರೆ ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರಪತಿ ಆದಾಗ ಇಫ್ತಿಯಾರ್ ಕೂಟಗಳ ಆಯೋಜನೆಯನ್ನು ನಿಲ್ಲಿಸಿ ಅದರ ಹಣವನ್ನು ಅನಾಥಾಶ್ರಮಗಳಿಗೆ ಆಹಾರ, ಬಟ್ಟೆ ಮತ್ತು ಹೊದಿಕೆಗಳಿಗೆ ಖರ್ಚು ಮಾಡಲು ನಿರ್ಧರಿಸಿದರು. ನಂತರ ಪ್ರತಿಭಾ ಪಾಟೀಲ್ ಮತ್ತು ಪ್ರಣಬ್ ಮುಖರ್ಜಿ ಮತ್ತೆ ಇಫ್ತಿಯಾರ್ ಕೂಟಗಳನ್ನು ಪುನರಾರಂಭಿಸಿದರು.
ಪ್ರಧಾನಿಯಾಗಿ ತಮ್ಮ ನಿವಾಸದಲ್ಲೇ ಇಫ್ತಿಯಾರ್ ಕೂಟ ಆಯೋಜಿಸುತ್ತಿದ್ದ ಡಾ. ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿದ್ದ ಇಫ್ತಿಯಾರ್ ಕೂಟಗಳಲ್ಲೂ ಭಾಗವಹಿಸುತ್ತಿದ್ದರು. ಆದರೆ 2014ರಲ್ಲಿ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿ ತಾವು ಆಯೋಜನೆ ಮಾಡುವುದಿರಲಿ, ರಾಷ್ಟ್ರಪತಿ ಭವನದಲ್ಲಿ ಪ್ರಣವ್ ಮುಖರ್ಜಿ ಆಯೋಜಿಸುತ್ತಿದ್ದ ಇಫ್ತಿಯಾರ್ ಕೂಟಗಳಲ್ಲೂ ಭಾಗವಹಿಸಲಿಲ್ಲ. ಮೋದಿ ಅಷ್ಟೇಯಲ್ಲ, ಅವರ ಸಂಪುಟದ ಯಾವುದೇ ಸಚಿವರು ಕೂಡ ರಾಷ್ಟ್ರಪತಿ ಭವನದ ಇಫ್ತಿಯಾರ್ ಕೂಟದಲ್ಲಿ ಭಾಗವಾಗಿಸಲಿಲ್ಲ.
ವಿಶೇಷ ಎಂದರೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಕೂಡ ಇಫ್ತಿಯಾರ್ ಆಯೋಜಿಸಲು ಉತ್ಸುಕರಾಗಿರಲಿಲ್ಲ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಲಕ್ನೋದ ಪಂಚತಾರಾ ಹೋಟೆಲ್‌ಗಳಲ್ಲಿ ಇಫ್ತಿಯಾರ್ ಕೂಟಗಳನ್ನು ಆಯೋಜನೆ ಮಾಡುತ್ತಿದ್ದ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಬಿಎಸ್‌ಪಿಯ ಮಾಯಾವತಿ ಈ ಬಾರಿ ಇನ್ನೂ ಈ ಬಗ್ಗೆ ಗಮನ ಹರಿಸಿಲ್ಲ. ಆದರೆ ಕೆಲವು ರಾಜ್ಯಗಳಲ್ಲಿ ಇಫ್ತಿಯಾರ್ ಕೂಟಗಳು ಪರಸ್ಪರ ಗೌರವವನ್ನು ಪ್ರದರ್ಶಿಸಲು ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಡಲು ಒಂದು ಸಂದರ್ಭವಾಗಿವೆ. ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಇಬ್ಬರೂ ಇಫ್ತಾರ್ ಕೂಟಗಳನ್ನು ಆಯೋಜಿಸಿದ್ದರು. ಇದಕ್ಕೆ ಎಲ್ಲಾ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗಿತ್ತು.
ಈ ಬರಹದ ಆರಂಭದಲ್ಲೇ ಹೇಳಿದಂತೆ ಬಿಹಾರದಲ್ಲಿ ತೇಜಸ್ವಿ ಯಾದವ್ ಆಯೋಜಿಸಿದ್ದ ಇಫ್ತಿಯಾರ್ ಕೂಟಕ್ಕೆ ನಿತೀಶ್ ಕುಮಾರ್ ಬಂದಿದ್ದರು. ಮಾಜಿ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಕೂಡ ಕಳೆದ ವಾರ ಪಾಟ್ನಾದಲ್ಲಿ ಇಫ್ತಿಯಾರ್ ಕೂಟ ಆಯೋಜಿಸಿದ್ದರು. ಬಿಹಾರದಲ್ಲಿ ನಡೆದ ಇಫ್ತಿಯಾರ್ ಕೂಟದ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಯುತ್ತಿದೆ. ಮೋದಿ ಮತ್ತು ಯೋಗಿ ದೊಡ್ಡತನ ತೋರದಿರುವ ಬಗ್ಗೆ ಸಣ್ಣ ಪ್ರಮಾಣದಲ್ಲಿ ಒಳಗೊಳಗೆ ಚರ್ಚೆಯಾಗುತ್ತಿದೆ. ಈ ನಡುವೆ ಬಿಜೆಪಿಯ ಶಾನವಾಜ್ ಹುಸೇನ್, ‘ನಾನು ಇನ್ನು ಮುಂದೆ ರಾಷ್ಟ್ರ ರಾಜಧಾನಿಯಲ್ಲಿ ಈದ್ ಊಟವನ್ನು ಆಯೋಜಿಸುತ್ತೇನೆ. ಅದರಲ್ಲಿ ಹೆಚ್ಚಿನ ಸಂಖ್ಯೆಯ ಬಿಜೆಪಿ ನಾಯಕರು ಭಾಗವಹಿಸುತ್ತಾರೆ’ ಎಂದು ಹೇಳಿದ್ದಾರೆ. ಕಾದು ನೋಡಬೇಕು.