ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇವೆ, ಇದೇ ವಾರ ಅಥವಾ ಮುಂದಿನ ವಾರ ರಾಜ್ಯ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟ ಆಗಲಿದೆ. ಈಗಾಗಲೇ ಬಿಜೆಪಿ ರಾಷ್ಟ್ರೀಯ ನಾಯಕರು ಕರ್ನಾಟಕದ ಕಡೆಗೆ ಎಡತಾಕುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರಿ ಕಾರ್ಯಕ್ರಮಗಳ ಮೂಲಕವೇ ಜನರಿಗೆ ಅಭಿವೃದ್ಧಿಯ ಬಗ್ಗೆ ಮನವರಿಕೆ ಮಾಡಲು ಮುಂದಾಗಿದ್ದಾರೆ. ಸೋಮವಾರ ತುಮಕೂರಿನಲ್ಲಿ ನೂತನವಾಗಿ ನಿರ್ಮಾಣ ಆಗಿರುವ HAL ಘಟಕವನ್ನು ಲೋಕಾರ್ಪಣೆ ಮಾಡಲು ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರು ಬಳಿಯ ಬಿದರೆಹಳ್ಳಿ ಕಾವಲ್ ಬಳಿ ನಿರ್ಮಾಣವಾಗಿರುವ ನೂತನ ಎಚ್ಎಎಲ್ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಹೀಗಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಭದ್ರತೆ ಪರಿಶೀಲನೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಪ್ರಧಾನಿ ಪ್ರವಾಸದ ವಿವರ ಹೀಗಿದೆ..!
ಸೋಮವಾರ ಬೆಳಗ್ಗೆ 10.55 ಕ್ಕೆ ಹೆಚ್ಎಎಲ್ ಏರ್ಪೋರ್ಟ್ಗೆ ಬಂದಿಳಿಯಲಿರುವ ಪ್ರಧಾನಿ ನರೇಂದ್ರ ಮೋದಿ, ಬೆಳಗ್ಗೆ 11 ಗಂಟೆಗೆ ಹೆಚ್ಎಎಲ್ ಏರ್ಪೋರ್ಟ್್ನಿಂದ ಹೆಲಿಕಾಪ್ಟರ್ ಮೂಲಕ ಬಿಐಇಸಿಗೆ (Bangalore International Exibition Centre) ಪ್ರಯಾಣ ಬೆಳೆಸಲಿದ್ದಾರೆ. ಬೆಳಗ್ಗೆ 11.20 ಕ್ಕೆ ಬಿಐಇಸಿ ತಲುಪಲಿದ್ದು, ಬಿಐಇಸಿಯಲ್ಲಿ ಆಯೋಜನೆ ಆಗಿರುವ ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಮಧ್ಯಾಹ್ನ 2.30ರ ತನಕ ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, 2.45ಕ್ಕೆ ನರೇಂದ್ರ ಮೋದಿ ತುಮಕೂರಿಗೆ ಪ್ರಯಾಣ ಮಾಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಗುಬ್ಬಿ ಹೆಚ್ಎಎಲ್ ಹೆಲಿಪ್ಯಾಡ್ ತಲುಪಲಿದ್ದು. ಮಧ್ಯಾಹ್ನ 3.30 ಕ್ಕೆ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಜೊತೆಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಸಂಜೆ 4.30 ರವರೆಗೆ ಮೋದಿ ತುಮಕೂರಲ್ಲಿ ಇರಲಿದ್ದು, ಸಂಜೆ 4.45 ಕ್ಕೆ ಗುಬ್ಬಿ ಹೆಚ್ಎಎಲ್ ಹೆಲಿಪ್ಯಾಡ್ನಿಂದ ಕೆಐಎಎಲ್ಗೆ ಆಗಮಿಸಲಿದ್ದು, ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಪ್ರಧಾನಿ ಹೆಲಿಕಾಪ್ಟರ್ ಸಂಚಾರ, ಆದರೂ ದಟ್ಟಣೆ ಗ್ಯಾರಂಟಿ..!
ಪ್ರಧಾನಿ ನರೇಂದ್ರ ಮೋದಿ ಹೆಚ್ಎಎಲ್ನಿಂದ BIEC ಹಾಗು ಬಿಐಇಸಿ ಇಂದ ತುಮಕೂರಿನ ಗುಬ್ಬಿ ಬಳಿಯ ಹೆಚ್ಎಎಲ್ಘಟಕಕ್ಕೆ ನೇರವಾಗಿ ಹೆಲಿಕಾಪ್ಟರ್ನಲ್ಲಿ ಸಂಚಾರ ಮಾಡಿದ್ರೂ ಪ್ರಧಾನಿ ನರೇಂದ್ರ ಮೋದಿಗೆ ಭದ್ರತೆ ನೀಡುವ ಉದ್ದೇಶದಿಂದ ಬೃಹತ್, ಮಧ್ಯಮ ಹಾಗು ಲಘು ಸರಕು ಸಾಗಣೆ ವಾಹನಗಳ ಸಂಚಾರವನ್ನು ಬದಲಾವಣೆ ಮಾಡಲಾಗಿದೆ. ಇದು ತುಮಕೂರು ರಸ್ತೆಯ ಸಂಚಾರ ದಟ್ಟಣೆ ಕಡಿಮೆ ಮಾಡುತ್ತದೆ. ಆದರೆ ಬೆಂಗಳೂರಿನ ಇತರೆ ಮಾರ್ಗಗಳ ಮೇಲೆ ಈ ಮಾರ್ಗ ಬದಲಾವಣೆ ಪರಿಣಾಮ ಹೆಚ್ಚಾಗಿ ಬೀರಲಿದೆ. ಸಾಮಾನ್ಯ ದಿನಕ್ಕೆ ಹೋಲಿಸಿಕೊಂಡರೆ ಸೋಮವಾರ ಸಂಜೆ 6 ಗಂಟೆ ತನಕವೂ ಸಂಚಾರ ದಟ್ಟಣೆ ಇರಲಿದೆ. ಮಧ್ಯಾಹ್ನ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಆಗಬಹುದು. ಆದರೆ ಮಧ್ಯಾಹ್ನದ ಬಳಿಕ ಟ್ರಾಫಿಕ್ ಜಾಮ್ ಅನುಭವಿಸಲೇಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಪರಿಣಾಮ ಹಾಗು ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ದೇಶ ವಿದೇಶದ ಗಣ್ಯರು ‘ ಇಂಡಿಯಾ ಎನರ್ಜಿ ವೀಕ್ ’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಟ್ರಾಫಿಕ್ ಸಮಸ್ಯೆ ಕಟ್ಟಿಟ್ಟ ಬುತ್ತಿ.