ದೇಶದ ಜನರಿಗೆ 100 ಕೋಟಿ ವ್ಯಾಕ್ಸಿನ್ ನೀಡಿದ್ದೇವೆ ಎಂದು ಕೇಂದ್ರ ಸರ್ಕಾರ ಸಾಧನೆಗೈದ ಸಂತಸದಲ್ಲಿದೆ. ಇನ್ನೊಂದೆಡೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಶತಕೋಟಿ ಲಸಿಕೆ ಕೇವಲ ಲೆಕ್ಕ ಮಾತ್ರ ಎಂದು ವ್ಯಂಗ್ಯವಾಡುತ್ತಿದೆ. ಇದರ ನಡುವೆ ಲಸಿಕೆ ತಯಾರಕ ಕಂಪನಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು. ಅಷ್ಟೇ ಅಲ್ಲದೇ ಸಭೆಯಲ್ಲಿ ಭಾರತ ವ್ಯಾಕ್ಸಿನ್ ಕ್ರಾಂತಿ ಮಾಡಿದೆ ಎಂದರು.
ಕೋವಿಡ್ ವಿರುದ್ಧದ ಹೋರಾಟದಲ್ಲಿ ದೇಶದ ಜನರಿಗೆ ನೂರು ಕೋಟಿ ವ್ಯಾಕ್ಸಿನ್ ವಿತರಿಸಿದೆ. ಇಡೀ ವಿಶ್ವವೇ ತನ್ನತ್ತ ಕಣ್ಣರಳಿಸಿ ನೋಡುವಂತ ಸಾಧನೆಯನ್ನ ಈಗಾಗಲೇ ಭಾರತ ಮಾಡಿದೆ. ಲಸಿಕೆ ಹಂಚಿಕೆಯ ಲೆಕ್ಕ ದಿನದಿಂದ ದಿನಕ್ಕೆ ಏರುತ್ತಿದ್ದು, ಇದುವರೆಗೂ ದೇಶದಲ್ಲಿ 101 ಕೋಟಿ 30 ಲಕ್ಷ ವ್ಯಾಕ್ಸಿನ್ ಹಂಚಿಕೆಯಾಗಿದೆ. ಇದಕ್ಕೆ ಕಾರಣ ನೀವೆ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಕ್ಸಿನ್ ತಯಾರಕರ ಬೆನ್ನು ತಟ್ಟಿದ್ದಾರೆ.

‘ವ್ಯಾಕ್ಸಿನ್’ ಮೀಟಿಂಗ್ ಹೈಲೈಟ್ಸ್
- ಭಾರತ್ ಬಯೋಟೆಕ್, ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ
- ಬಯಾಲೋಜಿಕಲ್ ಇ, ಜಿನ್ನೋವಾ ಬಯೋಫಾರ್ಮಾ, ಜೈಡಸ್ ಕೆಡಿಲ್ಲಾ
- ಡಾ.ರೆಡ್ಡಿ ಲ್ಯಾಬೋರೆಟರಿಸ್, ಪನಾಸಿಯಾ ಬಯೋಟೆಕ್ ಜೊತೆ ಸಭೆ
- 100 ಕೋಟಿ ಲಸಿಕೆ ಗಡಿ ದಾಟಿದ್ದಕ್ಕೆ ಕಂಪನಿಗಳಿಗೆ ಅಭಿನಂದನೆ
- ಕಂಪನಿಗಳ ಮುಖ್ಯಸ್ಥರಿಗೆ ಪ್ರಧಾನಿ ಮೋದಿಯಿಂದ ಕೆಲ ಸಲಹೆಗಳು
- ವ್ಯಾಕ್ಸಿನ್ ಪಡೆಯದೇ ಇರುವವರಿಗೆ ಬೇಗ ಲಸಿಕೆ ಲಭ್ಯವಾಗಬೇಕು
- ಯಾವ್ಯಾವ ವಿಧಾನಗಳಲ್ಲಿ ಶೀಘ್ರವಾಗಿ ಲಸಿಕೆ ನೀಡಬಹುದು
- ವ್ಯಾಕ್ಸಿನ್ ಸಂಶೋಧನೆಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚೆ
- ಬೇರೆ ದೇಶಗಳಿಗೂ ವ್ಯಾಕ್ಸಿನ್ ನೀಡಿ ಸಹಾಯಹಸ್ತ ಚಾಚಲು ಚರ್ಚೆ
ಸಭೆಯಲ್ಲಿ ಭಾರತ್ ಬಯೋಟೆಕ್, ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಬಯಾಲೋಜಿಕಲ್ ಇ, ಜಿನ್ನೋವಾ ಬಯೋಫಾರ್ಮಾ, ಜೈಡಸ್ ಕೆಡಿಲ್ಲಾ, ಡಾ.ರೆಡ್ಡಿ ಲ್ಯಾಬೋರೆಟರಿಸ್ ಹಾಗೂ ಪನಾಸಿಯಾ ಬಯೋಟೆಕ್ ಕಂಪನಿಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.
ಇನ್ನು, ಸಭೆಯಲ್ಲಿ ಈ ವೇಳೆ ನೂರು ಕೋಟಿ ಲಸಿಕೆ ಗಡಿ ದಾಟಿದ್ದಕ್ಕೆ ಕಂಪನಿಗಳ ಮುಖ್ಯಸ್ಥರಿಗೆ ಮೋದಿ ಅಭಿನಂದಿಸಿದ್ರು. ಜೊತೆಗೆ ಕಂಪನಿಗಳ ಮುಖ್ಯಸ್ಥರಿಗೆ ಪ್ರಧಾನಿ ಮೋದಿ ಕೆಲ ಸಲಹೆಗಳನ್ನೂ ನೀಡಿದ್ರು. ಇದುವರೆಗೂ ವ್ಯಾಕ್ಸಿನ್ ಪಡೆಯದೇ ಇರುವವರಿಗೆ ಬೇಗನೇ ಲಸಿಕೆ ಲಭ್ಯವಾಗಬೇಕು ಎಂದ ಮೋದಿ, ಯಾವ್ಯಾವ ವಿಧಾನಗಳಲ್ಲಿ ಅತಿ ಶೀಘ್ರವಾಗಿ ಜನರಿಗೆ ಲಸಿಕೆ ನೀಡಬಹುದು ಎಂಬ ಬಗ್ಗೆ ಚರ್ಚಿಸಿದ್ರು.

ವ್ಯಾಕ್ಸಿನ್ ಸಂಶೋಧನೆಯನ್ನು ಮತ್ತಷ್ಟು ಬಲಪಡಿಸಬೇಕು. ಇನ್ನು, ಬೇರೆ ದೇಶಗಳ ಜನರಿಗೂ ಸಹ ವ್ಯಾಕ್ಸಿನ್ ನೀಡಿ ಸಹಾಯಹಸ್ತ ಚಾಚಬೇಕು ಎಂದರು.
ವ್ಯಾಕ್ಸಿನ್ ಫಾರ್ ಆಲ್ ಎಂಬ ಭಾರತ ಸರ್ಕಾರದ ಮಂತ್ರ ನಿಜಕ್ಕೂ ಫಲಕೊಡುತ್ತಿದ್ದು, ದಿನದಿಂದ ದಿನಕ್ಕೆ ಲಸಿಕೆ ತೆಗೆದುಕೊಳ್ಳಲು ಜನ ಸಹ ಮುಂದೆ ಬರ್ತಿದ್ದಾರೆ. ಆದಷ್ಟು ಬೇಗ ಚಿಣ್ಣರ ಸಹಿತ ದೇಶದ ಪ್ರತಿ ನಾಗರಿಕರೂ ಲಸಿಕೆ ತೆಗೆದುಕೊಂಡ್ರೆ, ಕೊರೊನಾ ಎಂಬ ಹೆಮ್ಮಾರಿಯನ್ನ ಮತ್ತಷ್ಟು ದೂರವಿಡಲು ಸಾಧ್ಯ ಎಂದರು ಮೋದಿ.