ಕಳೆದ ವರ್ಷ ಮಾರ್ಚ್ 24 ರಂದು ದೇಶದಲ್ಲಿ ಕೋವಿಡ್19 ಪ್ರಕರಣಗಳು ಹರಡುವುದನ್ನು ತಡೆಯಲು ನರೇಂದ್ರ ಮೋದಿ ಸರ್ಕಾರ ಇದ್ದಕ್ಕಿದ್ದಂತೆ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿತ್ತು. ಇದರಿಂದಾಗಿ ಉದ್ಯೋಗ, ವಸತಿ, ಆಶ್ರಯ, ಆಹಾರ ಕಳೆದುಕೊಂಡು ಅನೇಕರು ಬೀದಿಗೆ ಬಿದ್ದರು. ಅನಿರೀಕತಷಿತ ಲಾಕ್ಡೌನ್ ಹೆಚ್ಚಿನ ಜನರ ಮೇಲೆ ಶಾಶ್ವತ ಪರಿಣಾಮ ಬೀರಿದೆಯಾದರೂ, ಸಮಾಜದಲ್ಲಿ ಮೂಲೆಗೆ ತಳಲ್ಪಟ್ಟ ಸಮುದಾಯಗಳ ಮೇಲೆ ಈ ಲಾಕ್ಡೌನ್ ಬೀರಿದ ಪರಿಣಾಮ ಅಪಾರ. ಜೀವನೋಪಾಯದ ಕಳೆದುಕೊಂಡದ್ದು, ಅಸುರಕ್ಷಿತ ಕೆಲಸದ ಪರಿಸ್ಥಿತಿಗಳು, ಹಸಿವು ಮತ್ತು ಶೋಷಣೆ ಈಗ ಮೊದಲಿಗಿಂತಲೂ ಹೆಚ್ಚಿದೆ.
‘ಬಹುಜನ್ ಇಕಾನಾಮಿಕ್ಸ್’ ಆಯೋಜಿಸಿದ್ದ ವೆಬ್‌ನಾರ್‌ನಲ್ಲಿ ಮಾತನಾಡಿದ ಆಶಾ ಕಾರ್ಯಕರ್ತೆಯರ ಹಲವಾರು ಪ್ರತಿನಿಧಿಗಳು, ನೈರ್ಮಲ್ಯ ಕಾರ್ಮಿಕರು, ದೈನಂದಿನ ಕೂಲಿ ಕಾರ್ಮಿಕರು, ಟ್ರಾನ್ಸ್‌ಜೆಂಡರ್, ಲೈಂಗಿಕ ಕಾರ್ಯಕರ್ತರು ಸಾಂಕ್ರಾಮಿಕ ರೋಗವು ದೇಶವನ್ನು ಅಪ್ಪಳಿಸಿದ ನಂತರ ಕಳೆದ ವರ್ಷದಲ್ಲಿ ಎದುರಿಸಿದ ಸಮಸ್ಯೆಗಳು ಮತ್ತು ತೊಂದರೆಗಳನ್ನು ಹಂಚಿಕೊಂಡಿದ್ದಾರೆ ಎಂದು ‘ದಿ ವೈರ್’ ವರದಿ ಮಾಡಿದೆ.

ಮಧ್ಯಪ್ರದೇಶದ ಇಂದೋರ್‌ನ ವಾಲ್ಮೀಕಿ ಸಮುದಾಯದ ಮುಖಂಡ ಮತ್ತು ವಾಲ್ಮೀಕಿ ಯುವ ಕಲ್ಯಾಣ ಕೇಂದ್ರದ ಸದಸ್ಯರಾದ ನಿತಿನ್ ಲಾಹೋರ್, ಇಂದೋರ್ ಮತ್ತು ಹತ್ತಿರದ ಜಿಲ್ಲೆಗಳಲ್ಲಿ ಕೆಲಸ ಮಾಡುವ ನೈರ್ಮಲ್ಯ ಕಾರ್ಮಿಕರ ಸಂಕಷ್ಟಗಳನ್ನು ಹಂಚಿಕೊಂಡರು. ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಭಾರತದ ಅತ್ಯಂತ ಸ್ವಚ್ಛ ನಗರವೆಂದು ಪರಿಗಣಿಸಲ್ಪಟ್ಟಿರುವ ಇಂದೋರ್ ಕಳೆದ ಕೆಲವು ವರ್ಷಗಳಿಂದ ನೈರ್ಮಲ್ಯ ಕಾರ್ಮಿಕರನ್ನು ಶೋಷಿಸುತ್ತಿದೆ ಎಂದು ಅವರು ಹೇಳಿದರು. “25-30 ವರ್ಷಗಳ ಕಾಲ ಇಲಾಖೆಯಲ್ಲಿ ಕೆಲಸ ಮಾಡಿದ ನಂತರವೂ, ಜಿಲ್ಲೆಯ ಹಲವಾರು ಸಫಾಯಿ ಕರ್ಮಚಾರಿಗಳು ‘ತಾತ್ಕಾಲಿಕ ಕೆಲಸಗಾರರಾಗಿ’ ಮುಂದುವರೆದಿದ್ದಾರೆ. ಕೆಲಸದ ಸ್ಥಿತಿ ಅಸುರಕ್ಷಿತವಾಗಿದೆ ಮತ್ತು ಸಾಂಕ್ರಾಮಿಕ ಸಮಯದಲ್ಲಿ, ಜಿಲ್ಲಾಡಳಿತವು ಅವರ ಜೀವಗಳನ್ನು ರಕ್ಷಿಸಲು ಏನನ್ನೂ ಮಾಡಿಲ್ಲ. ಮತ್ತು ಈ ಎಲ್ಲದಕ್ಕೂ, ನೈರ್ಮಲ್ಯ ಕೆಲಸಗಾರನಿಗೆ ಕೇವಲ ರೂ .11,000 ಸಂಬಳ ಸಿಗುತ್ತದೆ ” ಎಂದು ಅವರು ಹೇಳಿದ್ದಾರೆ.

ಆಶಾ ಕಾರ್ಯಕರ್ತೆಯರು ಕೇವಲ 4000 ರೂಗಳನ್ನು ಮಾಸಿಕ ವೇತನವಾಗಿ ಪಡೆಯುತ್ತಿದ್ದಾರೆ ಎಂದು ಕಾರ್ಮಿಕರ ಯೂನಿಯನ್‌ನ ಪ್ರತಿನಿಧಿ ಇದೇ ವೆಬಿನಾರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಹೆಚ್ಚಿನ ರಾಜ್ಯಗಳು ಆಶಾ ಕಾರ್ಯಕರ್ತೆಯರಿಗೆ ಪಿಪಿಇ ಕಿಟ್‌ಗಳನ್ನು ನೀಡಲು ವಿಫಲವಾಗಿವೆ. ಅವರು ಅತಿಯಾದ ಕೆಲಸದಿಂದ ದಣಿದಿದ್ದಾರೆ. ತಪ್ಪು ಕಲ್ಪನೆಗಳನ್ನು ಇಲ್ಲವಾಗಿಸುವುದರಿಂದ ಹಿಡಿದು ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವವರೆಗೆ, ಜನರು ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸುವವರೆಗೆ ಆಶಾ ಕಾರ್ಯಕರ್ತೆಯರು ಎಲ್ಲವನ್ನೂ ಮಾಡಿದ್ದಾರೆ. ಆದರೆ ಇನ್ನೂ, ಅವರನ್ನು ಯಾವುದೇ ಸರ್ಕಾರದ ನೀತಿಗಳ ವ್ಯಾಪ್ತಿಗೆ ಸೇರಿಸಲಾಗಿಲ್ಲ ” ಎಂದು ಸುರೇಖಾ ಹೇಳಿದ್ದಾರೆ. ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಹರ್ಯಾಣದ ಕಮಲೇಶ್ “ಸಾಂಕ್ರಾಮಿಕ ರೋಗಕ್ಕೆ ಕೋಮು ಬಣ್ಣವನ್ನು ನೀಡುವ ಸರ್ಕಾರದ ಪ್ರಯತ್ನವು ವಾಸ್ತವದ ನೆಲೆಗಟ್ಟಿನಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಿತು” ಎಂದಿದ್ದಾರೆ.
ಸಾಂಕ್ರಾಮಿಕ ರೋಗದ ಅತ್ಯಂತ ಅಗೋಚರವಾದ ಬಲಿಪಶುಗಳು ಲೈಂಗಿಕ ಕಾರ್ಯಕರ್ತೆಯರು ಎಂದು ‘ನ್ಯಾಷನಲ್ ನೆಟ್‌ವರ್ಕ್ ಆಫ್ ಸೆಕ್ಸ್ ವರ್ಕರ್ಸ್’ನ ಅಧ್ಯಕ್ಷ ಕಿರಣ್ ದೇಶ್ಮುಖ್ ಹೇಳಿದ್ದಾರೆ. ಲಾಕ್ ಡೌನ್ ಮತ್ತು ಸಾಂಕ್ರಾಮಿಕವು ಹಲವಾರು ಹಂತಗಳಲ್ಲಿ ಲೈಂಗಿಕ ಕಾರ್ಯಕರ್ತೆಯರ ಸಮುದಾಯವನ್ನು ಕಷ್ಟಕ್ಕೀಡು ಮಾಡಿದೆ ಎಂದು ಅವರು ಹೇಳಿದ್ದಾರೆ. “ಇದು ನಮ್ಮ ಉಳಿವಿಗೇ ಸವಾಲಾಯಿತು. ನಾವು ಹೇಗಾದರೂ ಮೊದಲ ಅಲೆಯನ್ನು ತಡೆದಿದ್ದೆವು, ಮೊದಲ ಅಲೆಯಲ್ಲಿನ ವೈರಲ್ ಸೋಂಕಿನಿಂದ ನಮ್ಮನ್ನು ನಾವು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಎರಡನೇ ಅಲೆಯಲ್ಲಿ, ಅನೇಕ ಮಹಿಳೆಯರು ಸೋಂಕಿಗೆ ಒಳಗಾಗಿದ್ದಾರೆ ಮತ್ತು ವೈರಸ್‌ನಿಂದ ನಾವು ಹಲವಾರು ಮಹಿಳೆಯರನ್ನು ಕಳೆದುಕೊಂಡಿದ್ದೇವೆ ”ಎಂದು ದೇಶ್ಮುಖ್ ಹೇಳಿದ್ದಾರೆ.

ಏಕಾಏಕಿ ಹೊರ ಹೊಮ್ಮಿದ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಉದ್ದೇಶದಿಂದ ಸರ್ಕಾರವು ತನ್ನ ಎಲ್ಲಾ ಸಂಪನ್ಮೂಲಗಳನ್ನು ಮತ್ತು ಆರೋಗ್ಯ ಮೂಲಸೌಕರ್ಯವನ್ನು ಒಂದೆಡೆ ತಿರುಗಿಸಲು ನಿರ್ಧರಿಸಿತು. ಹಾಗಾಗಿ ಇತರ ಕಾಯಿಲೆಗಳ ವಿರುದ್ಧ ಹೋರಾಡುವ ರೋಗಿಗಳನ್ನು ಕಡೆಗಣಿಸದಂತಾಯಿತು ಎಂದು ತಮಿಳುನಾಡಿನ ಟ್ರಾನ್ಸ್‌ಜೆಂಡರ್ ಹಕ್ಕುಗಳ ಕಾರ್ಯಕರ್ತೆ ಗ್ರೇಸ್ ಬಾನು ಹೇಳಿದ್ದಾರೆ. ” ಟ್ರಾನ್ಸ್ ಸಮುದಾಯದಲ್ಲಿನ ಎಚ್ಐವಿ ರೋಗಿಗಳು ಸರ್ಕಾರದ ನಿರ್ಧಾರದಿಂದ ತೀವ್ರವಾಗಿ ಪ್ರತಿಕೂಲ ಪರಿಣಾಮ ಎದುರಿಸಿದ್ದಾರೆ” ಎಂದು ಅವರು ಹೇಳಿದ್ದಾರೆ. “ಟ್ರಾನ್ಸ್‌ಜೆಂಡರ್‌ಗಳ ವಿಷಯಕ್ಕೆ ಬಂದಾಗ, ಅನೇಕ ಹೋರಾಟಗಾರರು ಹಿಂದೆ ಸರಿಯುತ್ತಾರೆ. ಸರ್ಕಾರವೂ ಸಹ ಅದೇ ರೀತಿ. ಈ ಸಮುದಾಯವು ಪ್ರತಿಯೊಂದು ಸಮಸ್ಯೆಯೊಂದಿಗೆ ತಾವಾಗಿಯೇ ಹೋರಾಡುತ್ತದೆ ಮತ್ತು ಇಲ್ಲಿ ಅನೇಕ ಜನರು ಧ್ವನಿ ಎತ್ತುವುದಿಲ್ಲ ಅಥವಾ ನಮ್ಮ ಸ್ಥಿತಿಯ ಬಗ್ಗೆ ಮಾತನಾಡಲು ಬಯಸುವುದಿಲ್ಲ ”ಎಂದೂ ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಕೋವಿಡ್ ವಿಪರೀತವಾಗಿ ಹರಡಬಾರದು ಎಂಬ ಉದ್ದೇಶದಿಂದ ಸರ್ಕಾರವು ಜಾರಿಗೊಳಿಸಿದ ಅವೈಜ್ಞಾನಿಕ ಮತ್ತು ಪೂರ್ವ ತಯಾರಿಯಿಲ್ಲದ ಲಾಕ್ಡೌನ್ ಅನೇಕರ ಬದುಕನ್ನು ಮೂಲೆಗುಂಪು ಮಾಡಿದೆ. ಕಾರ್ಮಿಕರ ಅದರಲ್ಲೂ ಸಮಾಜ ಕೆಳ ಹಂತದ ಕಾರ್ಮಿಕರು ಎಂದು ಗುರುತಿಸಲ್ಪಡುವವರ ಬದುಕು ಬೀದಿಗೆ ಬಿದ್ದಂತಾಗಿದೆ. ಆಡಳಿತ ಯಂತ್ರದ ತುತ್ತ ತುದಿಯಲ್ಲಿ ಕುಳಿತವರು ಸಂವೇದನೆ ಕಳೆದುಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಕೋವಿಡ್, ಲಾಕ್ಡೌನ್ ಮತ್ತು ಅದರ ನಂತರ ಪರಿಣಾಮಗಳೇ ಉತ್ತಮ ಉದಾಹರಣೆ.





