• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಜಂಗಮ ಸನ್ಯಾಸಿಗೆ ಸ್ಥಾವರದ ಸಂಕೋಲೆ

ನಾ ದಿವಾಕರ by ನಾ ದಿವಾಕರ
July 4, 2021
in ಅಭಿಮತ
0
ಜಂಗಮ ಸನ್ಯಾಸಿಗೆ ಸ್ಥಾವರದ ಸಂಕೋಲೆ
Share on WhatsAppShare on FacebookShare on Telegram

ಸಾರ್ವಜನಿಕ ಜೀವನದಲ್ಲಿ ಮುಂದಿನ ಹಲವು ಪೀಳಿಗೆಗಳಿಗೆ ಮಾದರಿಯಾಗಿ ಹೊರಹೊಮ್ಮುವ ವ್ಯಕ್ತಿತ್ವಗಳನ್ನು ಒಂದು ಚೌಕಟ್ಟಿನಲ್ಲಿ ಸಿಲುಕಿಸಿ ಚಿತ್ರಪಟವನ್ನಾಗಿಸಿದಾಗ ಸಮಾಜ ಮತ್ತು ಆ ವ್ಯಕ್ತಿಗಳ ನಡುವಿನ ಕಂದರ ಸೃಷ್ಟಿಯಾದಂತೆ. ಇದರ ಮುಂದಿನ ಹಂತ ಎಂದರೆ ಅಂತಹ ವ್ಯಕ್ತಿಗಳ ಪ್ರತಿಮೆಯ ಸ್ಥಾಪನೆ. ಗೌರವಾದರಗಳನ್ನು ಪ್ರದರ್ಶಿಸುವ ಆಡಂಬರದ ಆಚರಣಾತ್ಮಕ ಧೋರಣೆಗೆ ಬಲಿಯಾಗುವ ವಿದ್ಯಮಾನ ಪ್ರತಿಮೆಯಲ್ಲಿ ಪರ್ಯವಸಾನಹೊಂದುತ್ತದೆ. ಈ ಪ್ರಕ್ರಿಯೆಯ ಶಿಖರ ಹಂತವೆಂದರೆ ಇಂತಹ ಆದರ್ಶಪ್ರಾಯ, ಆದರಣೀಯ ವ್ಯಕ್ತಿಗಳ ಹೆಸರಿನಲ್ಲಿ ನಿರ್ಮಿಸಲಾಗುವ ಸ್ಮಾರಕಗಳು. ಚಿತ್ರಪಟದಿಂದ ಸ್ಮಾರಕದವರೆಗಿನ ಪಯಣದಲ್ಲಿ ಸಾರ್ವತ್ರಿಕವಾಗಿ ಸ್ವೀಕೃತವಾಗಬಹುದಾದ ವ್ಯಕ್ತಿಗಳು ಸಾಮುದಾಯಿಕ ಚೌಕಟ್ಟಿನೊಳಗೋ, ಚಾರಿತ್ರಿಕ ಕೂಪದೊಳಗೋ ಅಥವಾ ಅಂಧ ಶ್ರದ್ಧೆಯ ಸಂಕೋಲೆಗಳಲ್ಲೋ ಬಂಧಿಯಾಗಿಬಿಡುತ್ತಾರೆ. ಪ್ರತಿಮಾ ಸಂಸ್ಕೃತಿಯ ವೈಭವೀಕರಣದಲ್ಲಿ ಈ ವ್ಯಕ್ತಿಗಳ ಆದರ್ಶ, ತತ್ವ, ಸಿದ್ಧಾಂತ ಮತ್ತು ಅನುಕರಣೀಯ, ಅನುಸರಣೀಯ ಧೋರಣೆಗಳು ಸಮಾಧಿಯಾಗಿಬಿಡುತ್ತವೆ. ಇದು ಮನುಕುಲ ಕಂಡಿರುವ ಚಾರಿತ್ರಿಕ ಸತ್ಯ.

ADVERTISEMENT

ಭಾರತದ ಸಾಮಾಜಿಕ, ಸಾಂಸ್ಕøತಿಕ ಸಂದರ್ಭದಲ್ಲಿ ನೋಡಿದಾಗ ಗಾಂಧಿ, ಅಂಬೇಡ್ಕರ್, ನಾರಾಯಣಗುರು, ಬಸವಣ್ಣ, ಕಬೀರ್, ವಿವೇಕಾನಂದ ಇನ್ನೂ ಮುಂತಾದ ಮಹನೀಯರು ಈ ರೀತಿ ಭೂಗತ ಸಿದ್ಧಾಂತಗಳ ಪ್ರವಾದಿಗಳಾಗಿದ್ದಾರೆ. ಪ್ರತಿಮಾ ಸಂಸ್ಕೃತಿ ಮನುಕುಲಕ್ಕೆ ಅಂಟಿರುವ ಒಂದು ಸಾಂಕ್ರಾಮಿಕ ರೋಗ. ಸ್ಮಾರಕ ಸಂಸ್ಕೃತಿ ಒಂದು ಅಂಟು ಜಾಢ್ಯ. ಇದಕ್ಕೆ ಯಾವ ಸಮಾಜವೂ ಹೊರತಾಗಿಲ್ಲ. ಯಾವ ಸಮುದಾಯವೂ ಹೊರತಾಗಿಲ್ಲ. ಮಾರ್ಗದರ್ಶಕ ವ್ಯಕ್ತಿಗಳನ್ನು ಸ್ಮರಿಸುವ ಸಂಸ್ಕೃತಿಗೆ ಆಚರಣಾತ್ಮಕ ಸ್ವರೂಪ ನೀಡಿದಾಗ ಇಂತಹ ಅಭಾಸಗಳು ಸಹಜ. ಹಾರ, ತುರಾಯಿ, ಜೈಕಾರ ಮತ್ತು ಆರಾಧನೆಗಳ ಭರಾಟೆಯಲ್ಲಿ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ನೇಪಥ್ಯಕ್ಕೆ ಸರಿದರೆ, ಅವರ ತತ್ವ ಸಿದ್ಧಾಂತಗಳು ಮೌನವಾಗಿ ಭೂಗತವಾಗುತ್ತವೆ. ಮುಕ್ತ ವಾತಾವರಣದಲ್ಲಿ ಅಶರೀರವಾಣಿಯಂತೆ ಝೇಂಕರಿಸುವ ಮಹನೀಯರ ತತ್ವ ಸಿದ್ಧಾಂತಗಳು ಘೋಷಣೆಗಳಾಗಿಬಿಡುತ್ತವೆ. ಅನುಕರಣೀಯ ತತ್ವಗಳ ಸ್ಥಾನವನ್ನು ಅನುಸರಣೀಯ ಮಾದರಿಗಳು ಆಕ್ರಮಿಸುತ್ತವೆ. ಜಂಗಮ ರೂಪದ ತಾತ್ವಿಕ ಮೌಲ್ಯಗಳು ಸ್ಥಾವರಗಳ ಅಡಿಗಲ್ಲುಗಳಾಗಿ ನಿರ್ದಿಷ್ಟ ಗುಂಪುಗಳ ಹಿತಾಸಕ್ತಿಗಳನ್ನು ರಕ್ಷಿಸುವ ಹಾಸುಗಲ್ಲುಗಳಾಗಿ ಕೊನೆಗೊಳ್ಳುತ್ತವೆ. ಈ ಪ್ರವೃತ್ತಿಗೆ ಬಹುತೇಕ ಎಲ್ಲ ಮಹಾನ್ ವ್ಯಕ್ತಿಗಳೂ ಬಲಿಪಶುಗಳಾಗಿದ್ದಾರೆ. ಹಾಗಾಗಿಯೇ ಭಾರತದಲ್ಲಿ ಪ್ರತಿಮೆ, ಸ್ಮಾರಕಗಳು ವಿಜೃಂಭಿಸುತ್ತಿದ್ದರೂ ಮೌಲ್ಯಗಳು ಕುಸಿಯುತ್ತಲೇ ಇವೆ. ಆರಾಧನಾ ಸಂಸ್ಕೃತಿ ಗಾಢವಾಗಿ ಬೇರೂರುತ್ತಿರುವಂತೆಯೇ ಪೂಜಿತ ವ್ಯಕ್ತಿಗಳ ತತ್ವಗಳು ಶಾಶ್ವತವಾಗಿ ಭೂಗತವಾಗುತ್ತಿವೆ.’

ಎನ್‍ಟಿಎಂ ಶಾಲೆಯ ಪ್ರಹಸನ

ಮಹಾರಾಣಿ ಎನ್‍ಟಿಎಂ ಶಾಲೆ ಮೈಸೂರಿನ ಪ್ರತಿಷ್ಠಿತ ಶಾಲೆಗಳಲ್ಲೊಂದು. ಶತಮಾನದ ಇತಿಹಾಸ ಇರುವ ಈ ಬಾಲಕಿಯರ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಬೋಧಿಸಲಾಗುತ್ತಿದ್ದು ಶಿಕ್ಷಣದ ಖಾಸಗೀಕರಣ ಮತ್ತು ವಾಣಿಜ್ಯೀಕರಣದ ಸುನಾಮಿ ಅಲೆಗೆ ಸಿಲುಕಿ ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಕನ್ನಡ ಶಾಲೆಗಳು ಅವಸಾನದ ಹಂತ ತಲುಪುತ್ತಿದೆ, ಶಾಲೆಗಳ ಪುನರುಜ್ಜೀವನಕ್ಕೆ ಸೂಕ್ತ ಕ್ರಮ ಜರುಗಿಸಬೇಕು, ಜನಸಾಮಾನ್ಯರಲ್ಲಿ ಸರ್ಕಾರಿ ಶಾಲೆ ಮತ್ತು ಕನ್ನಡ ಮಾಧ್ಯಮದ ಬಗ್ಗೆ ಒಲವು ಮೂಡಿಸಬೇಕು, ಬಾಲಕಿಯರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು, ಇವೆಲ್ಲವೂ ರಾಜ್ಯ ಸರ್ಕಾರದ ಜಾರಿಯಾಗದ ಘೋಷಣೆಗಳು. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಒಂದು ಗಂಭೀರ ಸಮಸ್ಯೆ. ಆದರೆ ಈ ಸಮಸ್ಯೆಯ ಪರಿಹಾರಕ್ಕೆ ಕಂಡುಕೊಂಡ ಮಾರ್ಗ ಶಾಲೆಯ ಅವಸಾನ. ಸರ್ಕಾರದ ಈ ಅವಿವೇಕದ ನಿರ್ಧಾರಕ್ಕೆ ಬಲಿಯಾದ ಶಾಲೆಗಳು ಅದೆಷ್ಟೋ. ಶಾಲೆಯನ್ನು ಮುಚ್ಚುವುದಕ್ಕೆ ಕನ್ನಡ ಪರ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿದಾಗ ಯಡಿಯೂರಪ್ಪ ಸರ್ಕಾರ, ವಿದ್ಯಾರ್ಥಿಗಳು ಕಡಿಮೆ ಇರುವ ಶಾಲೆಗಳನ್ನು ಮತ್ತೊಂದು ಶಾಲೆಯೊಡನೆ ವಿಲೀನಗೊಳಿಸುವ ಹೊಸ ನಿಯಮವನ್ನು ಜಾರಿಗೊಳಿಸಿತ್ತು.

ಈ ಹಂತದಲ್ಲಿ ಮಠೋದ್ಯಮಿಗಳ ಕೆಂಗಣ್ಣಿಗೆ ಗುರಿಯಾದ ಶಾಲೆ, ಬಡಪಾಯಿ ಎನ್‍ಟಿಎಂ ಶಾಲೆ. ಮೈಸೂರಿನಲ್ಲಿರುವ ಪ್ರತಿಷ್ಠಿತ ಮಠೋದ್ಯಮಗಳಲ್ಲೊಂದಾದ ಶ್ರೀ ರಾಮಕೃಷ್ಣ ಮಠದ ರಿಯಲ್ ಎಸ್ಟೇಟ್ ಧೋರಣೆಗೆ ಬಲಿಯಾದದ್ದು ಶತಮಾನದ ಎನ್‍ಟಿಎಂ ಶಾಲಾ ಕಟ್ಟಡ. ಸಲ್ಲದ ಕಾರಣಕ್ಕೆ ವಿವೇಕಾನಂದರ ಪರಂಪರೆಯನ್ನು ತನ್ನ ಸೈದ್ಧಾಂತಿಕ ನಿಲುವಿನೊಂದಿಗೆ ಸಮೀಕರಿಸಿಕೊಳ್ಳುವ ಮೂಲಕ ತನ್ನದೇ ಆದ ಹಿಂದೂ ಧರ್ಮದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಯತ್ನಿಸುತ್ತಿರುವ ಸಂಘಪರಿವಾರ ಮತ್ತು ಬಿಜೆಪಿ ಇದೀಗ ವಿದ್ಯಾದೇಗುಲವೊಂದನ್ನು ಧ್ವಂಸ ಮಾಡಲು ತಳಹದಿಯನ್ನು ನಿರ್ಮಿಸಿದೆ. ಮೈಸೂರಿನ ಎನ್‍ಟಿಎಂ ಬಾಲಕಿಯರ ಶಾಲೆಯನ್ನು ರಾಮಕೃಷ್ಣ ಮಠಕ್ಕೆ ಪರಭಾರೆ ಮಾಡುವ ಮೂಲಕ ಅಲ್ಲಿ ವಿವೇಕಾನಂದ ಸ್ಮಾರಕವನ್ನು ನಿರ್ಮಿಸುವ ಬಿಜೆಪಿ ಸರ್ಕಾರದ ನಿರ್ಧಾರ ಇಂದು ಕನ್ನಡದ ದನಿಯಲ್ಲೇ ಒಡಕು ಮೂಡಿಸುವಂತಾಗಿದೆ. ಯಾವುದೇ ಕನ್ನಡ ಶಾಲೆಯನ್ನು ಮುಚ್ಚುವುದಿಲ್ಲ ಮತ್ತೊಂದು ಶಾಲೆಯೊಡನೆ ವಿಲೀನಗೊಳಿಸುತ್ತೇವೆ ಎಂದು ಹೇಳುವುದು, ಪ್ರೀತಿಯಿಂದ ಅಪ್ಪಿಕೊಂಡು ಸ್ವಾಹ ಮಾಡಿದಂತೆಯೇ ಸರಿ. ಹಾಗೆಯೇ ಎನ್‍ಟಿಎಂ ಶಾಲೆಯನ್ನು ವಿವೇಕಾನಂದ ಸ್ಮಾರಕವನ್ನಾಗಿ ನಿರ್ಮಿಸುವ ಮೂಲಕ ಅದರ ಪರಂಪರೆಯನ್ನು ರಕ್ಷಿಸುತ್ತೇವೆ ಎಂದು ಹೇಳುವುದು ಠಕ್ಕುತನದ ಪರಮಾವಧಿ.ಈ ಧೋರಣೆಗೆ ಸರ್ಕಾರದ ಒತ್ತಾಸೆಯಿದೆ, ಕೆಲವು ಹಿತಾಸಕ್ತಿಗಳ ಆಶಯವೂ ಇದೆ. ಇಲ್ಲಿ ಪ್ರಶ್ನೆ ಉದ್ಭವಿಸುವುದು ಶಾಲೆಯ ಮುಂದುವರಿಕೆ, ವಿಲೀನ ಅಥವಾ ಮಚ್ಚುವಿಕೆಯನ್ನು ಕುರಿತು ಅಲ್ಲ. ಮುಂದಿನ ಪೀಳಿಗೆಯ ಭದ್ರ ಬುನಾದಿಯನ್ನು ನಿರ್ಮಿಸುವ ಒಂದು ವಿದ್ಯಾ ಸಂಸ್ಥೆಯ ಸಮಾಧಿಯ ಮೇಲೆ, ವ್ಯಕ್ತಿ ಪೂಜೆ, ಆರಾಧನಾ ಸಂಸ್ಕೃತಿಗಳನ್ನು ಪ್ರತಿರೋಧಿಸಿದ ಮಹನೀಯರ ಸ್ಮಾರಕವನ್ನು ನಿರ್ಮಿಸುವ ವೈಪರೀತ್ಯ ಇಲ್ಲಿ ಪ್ರಶ್ನಾರ್ಹವಾಗುತ್ತದೆ.

ವಿವೇಕ ಇಲ್ಲದ ಆನಂದ ಸಲ್ಲದು

ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಶಾಲೆಯ ಕೋಣೆಯೊಂದರಲ್ಲಿ ತಂಗಿದ್ದರು ಎಂಬ ಕಾರಣಕ್ಕೆ ಶಾಲೆಯ ಸ್ವರೂಪವನ್ನೇ ಬದಲಿಸಿ ಸ್ಮಾರಕವನ್ನು ನಿರ್ಮಿಸುವುದು ಆರಾಧನಾ ಸಂಸ್ಕೃತಿಯ ಪರಾಕಾಷ್ಠೆ . ಹಸಿದ ಹೊಟ್ಟೆಗೆ ಉಪನ್ಯಾಸ ನೀಡಬೇಡಿ, ಅನ್ನ ಕೊಡಿ ಎಂದ ದಾರ್ಶನಿಕ ವ್ಯಕ್ತಿಯನ್ನು ಸ್ಮರಿಸಲು, ಅರಿವಿನ ಹಸಿವು ನೀಗಿಸುವ ತಾಣವನ್ನು ಧ್ವಂಸ ಮಾಡಿ ಸ್ಮಾರಕ ನಿರ್ಮಿಸುವುದು ವಿವೇಕಾನಂದರಿಗೆ ಅವಮಾನ ಮಾಡಿದಂತಲ್ಲವೇ ? ಸ್ಮಾರಕವನ್ನು ನಿರ್ಮಿಸುವುದಾದರೂ ಯಾರು. ಮೈಸೂರಿನ ರಾಮಕೃಷ್ಣ ಮಠ. ಈ ಮಠದ ಸಾಮಾಜಿಕ ಕೊಡುಗೆಯಾದರೂ ಏನು ? ಜಾತಿವಾದ, ಮತೀಯವಾದ, ಕೋಮುವಾದ ಮತ್ತು ಸಾಂಸ್ಕೃತಿಕ ಭಯೋತ್ಪಾದನೆಯಿಂದ ಜರ್ಝರಿತವಾಗುತ್ತಿರುವ ಸಮಾಜದಲ್ಲಿ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ರಾಮಕೃಷ್ಣ ಮಠದ ಕೊಡುಗೆ ಏನಿದೆ ? ವೇದ, ಉಪನಿಷತ್ತು, ಸನಾತನ ಹಿಂದೂ ಧರ್ಮದ ಮೌಲ್ಯಗಳು ಮತ್ತು ಸಮಕಾಲೀನ ಸಂದರ್ಭದಲ್ಲಿ ಹಿಂದೂ ಧರ್ಮದ ರಕ್ಷಣೆ ಈ ಮೌಲ್ಯಗಳನ್ನು ಹೊರತುಪಡಿಸಿ ರಾಮಕೃಷ್ಣ ಮಠ ಮತ್ತು ವಿವೇಕಾನಂದರ ಅನುಯಾಯಿಗಳು ಒಂದು ಹೆಜ್ಜೆಯನ್ನಾದರೂ ಮುಂದಿರಿಸಿದ್ದಾರೆಯೇ ?

ನೂರಾರು ಎಕರೆ ಭೂಮಿಯನ್ನು ಪರಭಾರೆ ಮಾಡಿಕೊಂಡು ಶಿಕ್ಷಣ ಸಂಸ್ಥೆಯನ್ನು ನಡೆಸುವ ರಾಮಕೃಷ್ಣ ಮಠದಲ್ಲಿ ಶೋಷಿತರಿಗೆ, ಅಸ್ಪೃಶ್ಯರಿಗೆ, ನಿರ್ಗತಿಕರಿಗೆ, ಅಕ್ಷರ ಕಲಿಯುವ ಆರ್ಥಿಕ ಸಾಮಥ್ರ್ಯ ಇಲ್ಲದವರಿಗೆ, ಪರಮಹಂಸ-ವಿವೇಕಾನಂದರ ಧಾರ್ಮಿಕ ನಿಲುವುಗಳನ್ನು ಸ್ವೀಕರಿಸದ ಸಮುದಾಯಗಳಿಗೆ ನಿಸ್ವಾರ್ಥತೆಯಿಂದ ಶಿಕ್ಷಣ ಒದಗಿಸಲು ಸಾಧ್ಯವೇ ? ಇದು ಸಾಧ್ಯವಿಲ್ಲ ಎಂದಾದಲ್ಲಿ ರಾಮಕೃಷ್ಣ ಮಠಕ್ಕೆ ವಿವೇಕಾನಂದರ ಸ್ಮಾರಕ ನಿರ್ಮಿಸುವ ನೈತಿಕ ಹಕ್ಕು ಇರುವುದಿಲ್ಲ. ನಿರ್ಮಿಸುವುದೇ ಆದಲ್ಲಿ ರಾಮಕೃಷ್ಣ ಮಠದ ಆವರಣದಲ್ಲೇ ನಿರ್ಮಿಸಬಹುದಲ್ಲವೇ ? ವಿವೇಕಾನಂದರು ಮೈಸೂರಿನಲ್ಲಿ ತಂಗಿದ್ದುದೇ ಆದಲ್ಲಿ ಮೈಸೂರು ನಗರವನ್ನೇ ವಿವೇಕಾನಂದ ಸ್ಮಾರಕ ನಗರ ಎಂದು ಪರಿಗಣಿಸಿ ತಮ್ಮ ಆತ್ಮ ತೃಪ್ತಿಯ ಹಪಾಹಪಿಯನ್ನು ನೀಗಿಸಿಕೊಳ್ಳಲಿ. ಈ ಹಪಾಹಪಿಗೆ ಒಂದು ಶಿಕ್ಷಣ ಸಂಸ್ಥೆ ಬಲಿಯಾಗಬೇಕೇ ? ಮಠದ ಈ ಕ್ರಮವನ್ನು ವಿವೇಕಾನಂದರು ಬದುಕಿದ್ದಿದ್ದಲ್ಲಿ ಒಪ್ಪುತ್ತಿದ್ದರೇ ಎಂಬ ಬಾಲಿಶ ಪ್ರಶ್ನೆ ಬೇಕಿಲ್ಲ, ವಿವೇಕ ಇರುವವರು ಒಪ್ಪಬಹುದೇ ಎಂಬ ವಾಸ್ತವದ ಪ್ರಶ್ನೆ ಇಲ್ಲಿ ಮಹತ್ತರವಾದುದು.

ರಾಮಕೃಷ್ಣ ಮಠದ ಒಡೆಯರು ಮೈಸೂರಿನಲ್ಲಿ ವಿವೇಕಾನಂದರು ತಂಗಿದ್ದ ಕಟ್ಟಡದಲ್ಲಿ ಸ್ಮಾರಕ ನಿರ್ಮಿಸುವುದೇ ಆದರೆ ಇನ್ನೂ ಹಲವು ತಾಣಗಳಿವೆ.. ಅಲ್ಲಿಯೂ ನಿರ್ಮಿಸಬಹುದಲ್ಲವೇ. ಆದರೆ ಎನ್‍ಟಿಎಂ ಶಾಲೆಯ ಕಟ್ಟಡಕ್ಕೆ ಕೇವಲ ಬೌದ್ಧಿಕ ಮೌಲ್ಯ ಮಾತ್ರ ಇಲ್ಲ. ಮಾರುಕಟ್ಟೆ ಮೌಲ್ಯವೂ ಇದೆ. ಒಂದು ಸ್ಮಾರಕದ ಸುತ್ತ ನಿರ್ಮಿತವಾಗುವ ಬಂಡವಾಳದ ಸಾಮ್ರಾಜ್ಯದ ವಿಸ್ತರಣೆಗೆ ಮಾರುಕಟ್ಟೆ ಮೌಲ್ಯ ಅತ್ಯಗತ್ಯ. ಇದು ಆಧುನಿಕ ಭಾರತದ ಮಠೋದ್ಯಮದ ನಿಯಮವೂ ಹೌದು. ವಿವೇಕಾನಂದರ ತತ್ವ ಸಿದ್ಧಾಂತಗಳನ್ನು ಸಮಕಾಲೀನ ಹಿಂದೂ ಮತೀಯವಾದದ ಚೌಕಟ್ಟಿನಲ್ಲಿ ಸಿಲುಕಿಸಿ ಭೂಗತವಾಗಿಸಿರುವ ವಿಚ್ಚಿದ್ರಕಾರಿ ಶಕ್ತಿಗಳು ಪ್ರತಿಮೆ, ಸ್ಮಾರಕಗಳ ಮೂಲಕ ಮಹಾನ್ ವ್ಯಕ್ತಿಯ ವೈಭವೀಕರಣದಲ್ಲಿ ತೊಡಗಿರಲು ಕಾರಣ, ವಿವೇಕಾನಂದರ ಸ್ವೀಕೃತ ಮೌಲ್ಯ. “ ಏಳಿ ಎದ್ದೇಳಿ ಗೆಲ್ಲುವವರೆಗೂ ಹೋರಾಡಿ ” ಎಂದು ದೇಶದ ಯುವ ಜನತೆಗೆ, ಶೋಷಿತ ಸಮುದಾಯಗಳಿಗೆ, ಅಸ್ಪೃಶ್ಯರಿಗೆ ಮತ್ತು ಮೌಲ್ಯಗಳನ್ನು ಕಳೆದುಕೊಂಡು ದಿಕ್ಕುತಪ್ಪುತ್ತಿದ್ದ ಸಮಾಜಕ್ಕೆ ವಿವೇಕಾನಂದರು ನೀಡಿದ ಸಂತವಾಣಿಯನ್ನು, ರಾಮಮಂದಿರದ ಆವರಣದಲ್ಲಿ ಮೊಳಗಿಸುವ ಮೂಲಕ ಸಮಕಾಲೀನ ಯುವ ಸಮಾಜದ ದಿಕ್ಕು ತಪ್ಪಿಸಲು ಯತ್ನಿಸುತ್ತಿರುವ ಸಂಘರಿವಾರಕ್ಕೆ ವಿವೇಕಾನಂದ ಮತ್ತು ಅವರ ತತ್ವಗಳು ಚಿಮ್ಮುಹಲಗೆಯಾಗಿ ಪರಿಣಮಿಸಿರುವುದು ವಾಸ್ತವವೂ ಹೌದು ದುರಂತವೂ ಹೌದು.

ವಿವೇಕಾನಂದರ ಭೇಟಿಯ ಹಿನ್ನೆಲೆ

ಇಷ್ಟಕ್ಕೂ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದು ಹಿಂದೂ ಧರ್ಮದ ರಕ್ಷಣೆಗಾಗಿ ಅಲ್ಲ. ಅಥವಾ ಹಿಂದೂ ಧರ್ಮದ ಪ್ರಚಾರ ಮಾಡಲೂ ಅಲ್ಲ. ದೇಶಾದ್ಯಂತ ಪರ್ಯಟನ ಮಾಡಲು ನಿರ್ಧರಿಸಿದ್ದ ವಿವೇಕಾನಂದರ ಮೂಲ ಆಶಯ ಇದ್ದುದು ದಲಿತ ಸಮುದಾಯಗಳ ಅಭ್ಯುದಯ ಮತ್ತು ದಲಿತ ಸಮುದಾಯದ ಶೈಕ್ಷಣಿಕ ಮುನ್ನಡೆ. ಶಿಕ್ಷಣದಿಂದ ವಂಚಿತರಾಗಿದ್ದ ಅಸ್ಪೃಶ್ಯರಿಗೆ ಮೌಲಿಕ ಶಿಕ್ಷಣ ನೀಡುವ ಸಲುವಾಗಿ ದೇಶದೆಲ್ಲೆಡೆ ಉಚಿತ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳು ಮತ್ತು ಹಾಸ್ಟೆಲುಗಳನ್ನು ಆರಂಭಿಸುವ ಉದಾತ್ತ ಚಿಂತನೆಯಿಂದ ಎಲ್ಲ ರಾಜ ಮಹಾರಾಜರುಗಳನ್ನು ಭೇಟಿ ಮಾಡಿದ್ದ ವಿವೇಕಾನಂದರು ಇದೇ ಸಂದರ್ಭದಲ್ಲಿ ಮೈಸೂರು ಮಹಾರಾಜರನ್ನೂ ಭೇಟಿಯಾಗಲಿಚ್ಚಿಸಿದ್ದರು. ಶಿಕ್ಷಣದಿಂದ ಮಾತ್ರ ಕ್ರಾಂತಿ ಸಾಧ್ಯ ಮತ್ತು ಭಾರತದ ಶ್ರೇಣೀಕೃತ ಸಮಾಜದಲ್ಲಿ ದಲಿತರ ಏಳಿಗೆ ಸಾಧ್ಯ ಎಂಬ ಸತ್ಯವನ್ನು ಅರಿತಿದ್ದ ವಿವೇಕಾನಂದರು ವೈದಿಕ ಪಾರಮ್ಯ ಹಾಗೂ ಮೇಲ್ಜಾತಿಯ ಪ್ರಾಬಲ್ಯವನ್ನು ಪ್ರತಿರೋಧಿಸಿ ಸೆಟೆದು ನಿಲ್ಲಲು ದಲಿತರಿಗೆ ಪ್ರೋತ್ಸಾಹಿಸಲು ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು.

ಎಲ್ಲ ಪ್ರಾಂತ್ಯಗಳ ರಾಜರುಗಳನ್ನು ಭೇಟಿ ಮಾಡಿದಂತೆಯೇ ಮೈಸೂರಿನ ಮಹಾರಾಜ ಜಾಮರಾಜ ಒಡೆಯರನ್ನೂ ವಿವೇಕಾನಂದರು ಭೇಟಿ ಮಾಡಿದ್ದರು. ಚಿಕಾಗೋದಲ್ಲಿ ನಡೆಯಬೇಕಿದ್ದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಹೊರಡಬೇಕಿದ್ದ ವಿವೇಕಾನಂದರಿಗೆ ಆ ಸಮ್ಮೇಳನಕ್ಕಿಂತಲೂ ಭಾರತದಲ್ಲಿ ಅಸ್ಪೃಶ್ಯರಿಗೆ ಒಂದು ಶೈಕ್ಷಣಿಕ ನೆಲೆ ಕಲ್ಪಿಸುವುದು ಮುಖ್ಯವಾಗಿತ್ತು. ಈ ನಿಟ್ಟಿನಲ್ಲಿ ಮೈಸೂರು ಪ್ರಾಂತ್ಯದಲ್ಲಿ ಚಾಮರಾಜ ಒಡೆಯರು ದಲಿತರಿಗಾಗಿ ಎಷ್ಟು ಪ್ರತ್ಯೇಕ ಶಾಲೆ ಮತ್ತು ಹಾಸ್ಟೆಲುಗಳನ್ನು ಆರಂಭಿಸಿದ್ದಾರೆ ಎಂಬ ಪ್ರಶ್ನೆ ವಿವೇಕಾನಂದರ ಮುಂದಿತ್ತು. ಚಾಮರಾಜ ಒಡೆಯರನ್ನು ಭೇಟಿ ಮಾಡಲು ಮೈಸೂರಿಗೆ ಆಗಮಿಸಿದ್ದ ವಿವೇಕಾನಂದರು ಹಲವು ರಾತ್ರಿಗಳು ತಂಗಿದ್ದರು. ಚಿಕಾಗೋ ಸಮ್ಮೇಳನಕ್ಕೆ ಹೋಗಲು ಚಾಮರಾಜ ಒಡೆಯರು ವಿವೇಕಾನಂದರಿಗೆ ದೇಣಿಗೆ ನೀಡಲು ಮುಂದಾದರೂ ಅದನ್ನು ನಿರಾಕರಿಸಿದ ವಿವೇಕಾನಂದರು ಅದೇ ಹಣದಿಂದ ದಲಿತರಿಗೆ ಪ್ರತ್ಯೇಕ ಶಾಲೆಗಳನ್ನು ತೆರೆಯುವಂತೆ ಸಲಹೆ ನೀಡಿದ್ದರು. ಈ ಸಂದರ್ಭದಲ್ಲೇ ವಿವೇಕಾನಂದರು ಮಹಾರಾಣಿ ಎನ್‍ಟಿಎಂಎಸ್ ಶಾಲೆಯಲ್ಲೂ ಕೆಲಕಾಲ ತಂಗಿದ್ದರು. ಚಾಮರಾಜ ಒಡೆಯರು ದಲಿತರಿಗಾಗಿ ಉಚಿತ ಪ್ರತ್ಯೇಕ ಶಾಲೆಗಳನ್ನು ಆರಂಭಿಸಿದ್ದರೂ ಆ ಶಾಲೆಗಳಲ್ಲಿ ಬೋಧನೆ ಮಾಡಲು ಮೇಲ್ಜಾತಿಯ ಶಿಕ್ಷಕರು ಸಿದ್ಧರಿರಲಿಲ್ಲ ಎನ್ನುವುದು ಗಮನಾರ್ಹ ಅಂಶ. ಇಂತಹ ಒಂದು ಕ್ರೂರ ವ್ಯವಸ್ಥೆಯ ವಿರುದ್ಧ ಸಮರ ಸಾರಿದ್ದ ವಿವೇಕಾನಂದರಿಗೆ ಹಿಂದೂ ಧರ್ಮ ರಕ್ಷಣೆ ಎಂದರೆ ಹಿಂದೂ ಧರ್ಮದೊಳಗಿನ ಅಮಾನವೀಯ ವ್ಯವಸ್ಥೆ ಮತ್ತು ದೌರ್ಜನ್ಯದ ವಿರುದ್ಧ ಹೋರಾಟವೆಂದೇ ಆಗಿತ್ತು.

ಚಿಕಾಗೋ ವಿಶ್ವ ಧರ್ಮ ಸಮ್ಮೇಳನಕ್ಕೆ ತೆರಳುವ ಮುನ್ನ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದು ಈ ಕಾರಣಕ್ಕಾಗಿ. ಆ ಸಂದರ್ಭದಲ್ಲಿ ವಿವೇಕಾನಂದರು ಎನ್‍ಟಿಎಮ್ ಶಾಲೆ ಇರುವ ಕಟ್ಟಡದ ಪಕ್ಕದಲ್ಲಿ ನೆಲೆಸಿದ್ದುದೂ ಉಂಟು. ಈ ಚಾರಿತ್ರಿಕ ಹಿನ್ನೆಲೆಯಿಂದ ನೋಡಿದಾಗ ಎನ್‍ಟಿಎಂ ಶಾಲೆಯ ಕಟ್ಟಡವನ್ನು ವಿವೇಕಾನಂದ ಸ್ಮಾರಕವನ್ನಾಗಿ ಪರಿವರ್ತಿಸುವ ರಾಮಕೃಷ್ಣ ಮಠದ ನಿಲುವನ್ನು ಕಟುವಾಗಿ ಪ್ರಶ್ನಿಸಬೇಕಾಗುತ್ತದೆ. ರಾಮಕೃಷ್ಣ ಮಠ ಮತ್ತು ವಿವೇಕ ಬಳಗದ ಮುತ್ಸದ್ಧಿಗಳಿಗೆ ವಿವೇಕಾನಂದರ ತತ್ವ ಸಿದ್ಧಾಂತಗಳಲ್ಲಿ ವಿಶ್ವಾಸ ಇದ್ದುದೇ ಆದರೆ ಶಾಲೆಯನ್ನು ಮುಚ್ಚುವ ಆಗ್ರಹ ಮಾಡುತ್ತಿರಲಿಲ್ಲ. ಈಗಿರುವ ಶಾಲೆಯನ್ನೇ ಸಮಾಜ ಶೋಷಿತ ವರ್ಗಗಳಿಗೆ ಉಚಿತ ಶಿಕ್ಷಣ ನೀಡುವ ಒಂದು ಉನ್ನತ ಮಟ್ಟದ ಶಾಲೆಯನ್ನಾಗಿ ಪರಿವರ್ತಿಸಲು ಮುಂದಾಗುತ್ತಿದ್ದರು. ಕುವೆಂಪು ವಿವೇಕಾನಂದ ಮತ್ತು ರಾಮಕೃಷ್ಣರ ಅನುಯಾಯಿಯಾಗಿದ್ದರು ಎಂಬ ಒಂದೇ ಕಾರಣಕ್ಕೆ ಕುವೆಂಪು ಅವರ ಶಿಷ್ಯವೃಂದ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸುತ್ತಿರುವುದು ದಾರ್ಶನಿಕ ಮಹಾಕವಿಗೂ ಅವಮಾನ ಮಾಡಿದಂತಾಗುತ್ತದೆ.

ಇಲ್ಲಿ ವಿವೇಕಾನಂದರ ಪರ ವಿರೋಧಿ ನಿಲುವು ಉದ್ಭವಿಸುವುದಿಲ್ಲ. ಅಥವಾ ಸ್ಮಾರಕ ನಿರ್ಮಾಣಕ್ಕೆ ಯಾವುದೇ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸುತ್ತಿಲ್ಲ. ಬಡ ಮಕ್ಕಳಿಗೆ ನೆರವಾಗುವ ಒಂದು ಶಿಕ್ಷಣ ಸಂಸ್ಥೆಯನ್ನು ಧ್ವಂಸ ಮಾಡಿ ಸ್ಮಾರಕವನ್ನು ನಿರ್ಮಿಸುವ ಪ್ರವೃತ್ತಿ ಪ್ರಶ್ನಾರ್ಹವಾಗುತ್ತದೆ. ವಿವೇಕಾನಂದರ ದಾರ್ಶನಿಕತೆ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳು ಆಧುನಿಕ ಸಮಾಜದಲ್ಲಿ ಅವರಂತೆಯೇ ಜಂಗಮ ಸ್ವರೂಪದಲ್ಲಿ ಜನಮಾನಸದ ಆತ್ಮಗಳಲ್ಲೊಂದಾಗಬೇಕು. ವಿಪರ್ಯಾಸವೆಂದರೆ ಈ ಮೌಲ್ಯಗಳನ್ನು ಸ್ಥಾವರದ ಚೌಕಟ್ಟಿನಲ್ಲಿ ಸಮಾಧಿ ಮಾಡಲಾಗುತ್ತಿದೆ.

Previous Post

ಮುಗಿಯದ ಪಶ್ಚಿಮ ಬಂಗಾಳ ಚುನಾವಣೆ ಗೊಂದಲ: ಮರು ಮತ ಎಣಿಕೆಗೆ ಎಂಟು ಬಿಜೆಪಿ ಅಭ್ಯರ್ಥಿಗಳಿಂದ ಅರ್ಜಿ

Next Post

ತಮ್ಮ ಪರ ಪ್ರಚಾರಕ್ಕೆ ಟ್ರೋಲ್ ಪಡೆ ಇಟ್ಟುಕೊಂಡಿದ್ದಾರೆಯೇ ರೋಹಿಣಿ ಸಿಂಧೂರಿ?

Related Posts

ಭಾರತದಲ್ಲಿ ಸಮಕಾಲೀನ ಪ್ರಭುತ್ವ..
Top Story

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

by ಪ್ರತಿಧ್ವನಿ
March 21, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ಭಾಗ 1  1947ರಲ್ಲಿ ಬ್ರಿಟೀಷ್‌ ವಸಾಹತುಶಾಹಿಯಿಂದ ವಿಮೋಚನೆ ಪಡೆಯುವ ಸಂದರ್ಭದಲ್ಲಿ ದೇಶದ ರಾಜಕೀಯ ವಿಶ್ಲೇಷಕರನ್ನು ಮತ್ತು ನಾಯಕರನ್ನು...

Read moreDetails
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

February 3, 2026
ಕುಟುಂಬ ರಾಜಕಾರಣ: ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಭೀಕರ ದಾಳಿ! 

ಕುಟುಂಬ ರಾಜಕಾರಣ: ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಭೀಕರ ದಾಳಿ! 

January 26, 2026
Next Post
ತಮ್ಮ ಪರ ಪ್ರಚಾರಕ್ಕೆ ಟ್ರೋಲ್ ಪಡೆ ಇಟ್ಟುಕೊಂಡಿದ್ದಾರೆಯೇ ರೋಹಿಣಿ ಸಿಂಧೂರಿ?

ತಮ್ಮ ಪರ ಪ್ರಚಾರಕ್ಕೆ ಟ್ರೋಲ್ ಪಡೆ ಇಟ್ಟುಕೊಂಡಿದ್ದಾರೆಯೇ ರೋಹಿಣಿ ಸಿಂಧೂರಿ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada