ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ದಿಗೆ ಮೀನಾಮೇಷ ಎಣಿಸುವುದು ‘ಸಾಮಾನ್ಯ’ ಪರಿಸ್ಥಿತಿಯೆಂಬಂತಾಗಿದೆ. ದೇಶದ ಹಲವು ಹಳ್ಳಿಗಳಿಗೆ ಇಂದಿಗೂ ರಸ್ತೆ ಹಾಗೂ ವಿದ್ಯುತ್ ಭಾಗ್ಯ ಒದಗಿ ಬಂದಿಲ್ಲ. ಪರಿಸ್ಥಿತಿ ಹೀಗಿರುವಾಗ ಆಧುನಿಕತೆಗೆ ಆ ಹಳ್ಳಿಗಳು ತೆರೆಯಲ್ಪಡುವುದು ದೂರದ ಮಾತಾಯಿತು.
ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಬಾರಾಮುಖಿಯಾ ಎಂಬ ಹಳ್ಳಿಯೂ ಈ ಪರಿಸ್ಥಿತಿಯಿಂದ ಹೊರತಾಗಿರಲಿಲ್ಲ. ಆದರೆ, ಅಚಾನಕ್ ಎಂಬಂತೆ ಸಂಪೂರ್ಣ ದೇಶವೇ ಈ ಹಳ್ಳಿಯತ್ತ ನೋಡಲು ಆರಂಭಿಸಿತು. ಈ ಸಮಯದಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರ ಬಾರಾಮುಖಿಯಾ ಹಳ್ಳಿಗೆ ಪಕ್ಕಾ ರಸ್ತೆ ನಿರ್ಮಿಸಲು ಹೊರಟಿದೆ.
ಲವ್ಲೀನಾ ಬೊರ್ಗೊಹೈನ್ ಅವರು ಒಲಿಂಪಿಕ್ಸ್’ನಲ್ಲಿ ಕಂಚಿನ ಪದಕ ಗೆದ್ದ ಬಳಿಕ ಈ ಬೆಳವಣಿಗೆಗಳು ನಡೆದಿವೆ. ಹಳ್ಳಿಗೆ ರಸ್ತೆ ನಿರ್ಮಿಸಲು ಒಲಿಂಪಿಕ್ಸ್’ನಲ್ಲಿ ಪದಕ ಗೆಲ್ಲಬೇಕಾದ ದುಸ್ಥಿತಿ ಒದಗಿ ಬಂದಿದ್ದು ನಿಜಕ್ಕೂ ಬೇಸರದ ಸಂಗತಿ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ರಾಜ್ಯ ಸರ್ಕಾರವು ಈಗ ಅತಿಯಾದ ಮುತುವರ್ಜಿ ಅಹಿಸಿ 3.5 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿದೆ. ಈ ಹಿಂದೆ ಕೇವಲ ಮಣ್ಣಿನ ರಸ್ತೆ ಹೊಂದಿದ್ದ ಬಾರಾಮುಖಿಯಾ ಹಳ್ಳಿ ಈ ಡಾಂಬರ್ ಮುಖ ನೋಡುತ್ತಿದೆ. ಲವ್ಲೀನಾ ಅವರು ಕಂಚಿನ ಪದಕದೊಂದಿಗೆ ಊರಿಗೆ ಮರಳುವ ಮುಂಚೆ ಈ ರಸ್ತೆ ನಿರ್ಮಾಣವಾಗಬೇಕು ಎಂಬುದು ಸರ್ಕಾರದ ಗುರಿ.
2016ರಲ್ಲಿ ಈ ರಸ್ತೆಯ ಡಾಂಬರೀಕರಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಕೇವಲ 100 ಮೀ.ನಷ್ಟು ಕಾಮಗಾರಿ ನಡೆಸಿ ನಂತರ ಸ್ಥಗಿತಗೊಳಿಸಲಾಗಿತ್ತು. ಈ ರಸ್ತೆ ಕೇವಲ ಲವ್ಲೀನಾ ಅವರ ಮನೆಗೆ ಮಾತ್ರ ಸಂಪರ್ಕ ಕಲ್ಪಿಸುತ್ತಿಲ್ಲ.
2019ರಲ್ಲಿ ಪಾಕಿಸ್ತಾನ ಸೇನೆಯ ಅಪ್ರಚೋದಿತ ಗುಂಡಿನ ದಾಳಿಗೆ ಬಲಿಯಾಗಿದ್ದ ಯೋಧ ಹವಿಲ್ದಾರ್ ಬಹದ್ದೂರ್ ಶ್ರೇಷ್ಠ ಅವರ ಮನೆಗೂ ಸಂಪರ್ಕ ಕಲ್ಪಿಸುತ್ತದೆ. ಯೋಧನೊಬ್ಬ ಹುತಾತ್ಮನಾದಗಲೂ ಈ ರಸ್ತೆಯನ್ನು ಅಭಿವೃದ್ದಿಪಡಿಸುವ ಗೋಜಿಗೆ ಸರ್ಕಾರ ಹೋಗಿರಲಿಲ್ಲ.

ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು, ವಿದ್ಯಾರ್ಥಿಗಳು ಶಾಲೆ/ಕಾಲೇಜುಗಳಿಗೆ ಹೋಗಲು ಆಗುತ್ತಿಲ್ಲ ಎಂದು ಇಲ್ಲಿನ ಜನರು ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇಲ್ಲಿನ ಮನೆಗಳಿಗೆ ಕುಡಿಯುವ ನೀರು ಕುಡಾ ಸರಿಯಾಗಿ ಸರಬರಾಜು ಆಗುತ್ತಿಲ್ಲ. ಜನರು ತಮ್ಮ ಬಳಕೆಗಾಗಿ ತಮ್ಮ ತಮ್ಮ ಮನೆಗಳ ಹತ್ತಿರ ಇರುವಂತಹ ಕೆರೆ ಅಥವಾ ಬೋರ್ ವೆಲ್’ಗಳ ಮೊರೆ ಹೋಗಬೇಕಾಗಿದೆ.
ಉತ್ತಮವಾದ ಆಸ್ಪತ್ರೆಯನ್ನು ಕೂಡಾ ಈ ಹಳ್ಳಿ ಹೊಂದದೇ ಇರುವುದು, ಇಲ್ಲಿನ ಮೂಲಸೌಕರ್ಯ ‘ಅಭಿವೃದ್ದಿ’ಗೆ ಹಿಡಿದ ಕೈಗನ್ನಡಿ. ಖಾಯಿಲೆಯಿಂದ ತೀವ್ರವಾಗಿ ನರಳುತ್ತಿರುವವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಬೇಕಾದರೂ, ಇಲ್ಲಿನ ಜನರು 45 ಕಿ.ಮೀ. ಪ್ರಯಾಣಿಸಬೇಕಾದ ಪರಿಸ್ಥಿತಿ.
ಇಂತಹ ದುರ್ಗಮ ಪ್ರದೇಶಗಳಿಂದ ಲವ್ಲೀನಾ ಅಂತಹ ಪ್ರತಿಭಾನ್ವಿತ ಆಟಗಾರ್ತಿಯರು ಹುಟ್ಟಿ ಬಂದಿದ್ದಾರೆ. ಆದರೆ, ದೇಶದ ಮೂಲಸೌಕರ್ಯ ಅಭಿವೃದ್ದಿ ಇನ್ನಷ್ಟು ಉತ್ತಮಪಡಿಸಿದಲ್ಲಿ ಹಲವು ಪ್ರತಿಭೆಗಳಿಗೆ ಅವಕಾಶ ಲಭಿಸಲಿದೆ. ಕೇವಲ ರಸ್ತೆ ನಿರ್ಮಾಣಕ್ಕಾಗಿ ಒಲಿಂಪಿಕ್ಸ್’ನಲ್ಲಿ ಪದಕ ಗೆಲ್ಲಲು ಸರ್ಕಾರಗಳು ಕಾಯುವ ಬದಲು, ಒಲಿಂಪಿಕ್ಸ್’ನಲ್ಲಿ ಪದಕ ಗೆಲ್ಲುವ ಸಲುವಾಗಿ ಮೂಲಭೂತ ಸೌಕರ್ಯ ಅಭಿವೃದ್ದಿಯತ್ತ ಗಮನ ಹರಿಸಬೇಕಾಗಿದೆ.





