ಪ್ರೀತಿ (Love) ಅನ್ನೋದೇ ಹಾಗೆ ಯಾರ ಕೈಲಿ ಏನನ್ನ ಬೇಕಾದ್ರೂ ಮಾಡಿಸುತ್ತೆ. ಪ್ರೀತಿಯಲ್ಲಿ ಬಿದ್ದಮೇಲೆ ಅಮಲಿನಲ್ಲಿ ತೇಲುವವರು ತಮ್ಮ ಪ್ರೀತಿ ಪಾತ್ರರಿಗಾಗಿ ಏನು ಬೇಕಾದ್ರೂ ಮಾಡ್ತಾರೆ. ಆದ್ರೆ, ಇಲ್ಲೊಬ್ಬ ಪಾಗಲ್ ಪ್ರೇಮಿ (Lover) ಪ್ರೇಯಸಿಗಾಗಿ ನೀವು ಹಿಂದೆಂದೂ ಕೇಳಿರದ , ನೋಡಿರದ ಆಶ್ಚರ್ಯ ಗೊಳಿಸುವ ರಿಸ್ಕ್ ತೆಗೆದುಕೊಂಡು ಎಲ್ಲರೂ ಹುಬ್ಬೇರುವಂತೆ ಮಾಡಿ ತಗಳಾಕೊಂಡಿದ್ದಾನೆ
ಪ್ರೀತಿ ಹೆಸರಲ್ಲಿ ಗಿಫ್ಟ್ ಕೊಡೋದು , ಸಾಹಸಮಯ ಪ್ರವೃತ್ತಿಗೆ ಕೈ ಹಾಕಿ ಮನಗೆಲ್ಲೋದು ಎಲ್ಲವನ್ನ ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಆಸಾಮಿ ತನ್ನ ಹುಡುಗಿಯಾಗಿ ಬದಲಾಗಿ ತಾನೇ ಪರೀಕ್ಷೆ ಬರೆಯಲು ಹೋಗಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾನೆ.
ಜನವರಿ 7 ರಂದು, ಕೊಟ್ಕಾಪುರದ ಡಿಎವಿ ಪಬ್ಲಿಕ್ ಸ್ಕೂಲ್ನಲ್ಲಿ ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಬಹುಪಯೋಗಿ ಆರೋಗ್ಯ ಕಾರ್ಯಕರ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಆ ಪರೀಕ್ಷೆಯಲ್ಲಿ ಈ ಆಸಾಮಿ ಸಿಕ್ಕಿ ಬಿದ್ದಿದ್ದಾನೆ. ಈತನ ಹೆಸರು ಫಜಿಲ್ಕಾದ ಅಂಗ್ರೇಜ್ ಸಿಂಗ್ ಅಂತ ಗೊತ್ತಾಗಿದೆ. ತನ್ನ ಪ್ರಿಯತಮೆಯ ಬದಲಾಗಿ ತಾನೇ ಪರೀಕ್ಷೆ ಬರೆಯಲು ಈ ಪ್ರಿಯಕರ ಬಂದಿದ್ದ ಎನ್ನಲಾಗಿದೆ. ಬಯೋಮೆಟ್ರಿಕ್ ಹಾಜರಾತಿ ಇದ್ದ ಕಾರಣ ಇವನನ್ನು ಕೊಠಡಿ ಅಧಿಕಾರಿಗಳು ಲಾಕ್ ಮಾಡಿದ್ದಾರೆ. ಇವನ ಅವತಾರ ನೋಡಿ ಎಲ್ಲರೂ ನಕ್ಕು ನಕ್ಕು ಸುಸ್ತಾಗಿದ್ದಾರೆ.
ಪಂಜಾಬ್ನ (Punjab) ಫಾಜಿಲ್ಕಾದ ಅಂಗ್ರೇಜ್ ಸಿಂಗ್ ತನ್ನ ಪ್ರೇಯಸಿ ಪರಮ್ಜಿತ್ ಕೌರ್ನಂತೆ ರೆಡಿ ಆಗಿ ಬಂದಿದ್ದ . ಅವಳ ಹೆಸರಲ್ಲಿ ಪರೀಕ್ಷೆ ಬರೆದು ಆಕೆಗೆ ಸಹಾಯ ಮಾಡಬೇಕು ಅಂದುಕೊಂಡಿದ್ದ. ಈ ಮೂಲಕ ತನ್ನ ಗೆಳತಿ ಮನಗೆಲ್ಲಲು ಪ್ರಯತ್ನ ಪಟ್ಟಿದ್ದ. ಆದ್ರೆ,ವಿಶ್ವವಿದ್ಯಾಲಯದ ಅಧಿಕಾರಿಗಳು ಬೇಗನೇ ಪೊಲೀಸರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಇದರಿಂದಾಗಿ ಅವನು ಪರೀಕ್ಷೆ ಬರೆಯುವುದನ್ನು ತಪ್ಪಿಸಲಾಗಿದೆ. ಪೊಲೀಸರ ಪ್ರಕಾರ, ಅಂಗ್ರೇಜ್ ಸಿಂಗ್ ಅವರು ಪರಮ್ಜಿತ್ ಕೌರ್ ಎಂದು ಸಾಬೀತುಪಡಿಸಲು ನಕಲಿ ವೋಟರ್ ಐಡಿ ಕಾರ್ಡ್ ಮತ್ತು ಆಧಾರ್ ಕಾರ್ಡ್ಗಳನ್ನು ಸಹ ಮಾಡಿಸಿಕೊಂಡು ಬಂದಿದ್ದ ಅನ್ನೋ ಮಾಹಿತಿ ಸಿಕ್ಕಿದೆ.. ಬಯೋಮೆಟ್ರಿಕ್ ತನ್ನ ಗೆಳತಿಯ ಫಿಂಗರ್ಪ್ರಿಂಟ್ಗಳನ್ನು ಹೊಂದಿಸಲು ಸಾಧ್ಯವಾಗದ ಕಾರಣ ಆತ ತಗ್ಲಾಕೊಂಡಿದ್ದಾನೆ.