
ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಬದಲಾವಣೆಯ ಕಸರತ್ತು ನಡೆಯುತ್ತಿದೆಯಾ..? ಅನ್ನೋ ಅನುಮಾನಗಳು ದಟ್ಟವಾಗುತ್ತಿವೆ. ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಹಾಗು ಆಪ್ತ ಸಚಿವರು ಡಿನ್ನರ್ ಮೀಟಿಂಗ್ ಮಾಡಿರೋದು ಕೂಡ ಏನೋ ನಡೆಯುತ್ತಿರುವ ಗುಮಾನಿಯನ್ನು ಹುಟ್ಟು ಹಾಕಿದೆ. ಇದರ ಬೆನ್ನಲ್ಲೇ ಆರ್ ಅಶೋಕ್ ಹೇಳಿರುವ ಮಾತು ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.
ಸತೀಸ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಟೀಂ ಡಿನ್ನರ್ ಮೀಟಿಂಗ್ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಹುದ್ದೆಗೆ ಲಾಬಿ ನಡೆಸುತ್ತಿರುವ ಡಿ.ಕೆ ಶಿವಕುಮಾರ್ ಓಟಕ್ಕೆ ಬ್ರೇಕ್ ಹಾಕಲು ರಣತಂತ್ರ ರೂಪಿಸಲಾಗ್ತಿದೆ. ದೆಹಲಿ ಮಟ್ಟದಲ್ಲಿ ಈಗಾಗಲೇ ಡಿ.ಕೆ ಶಿವಕುಮಾರ್ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಬಜೆಟ್ ಅಧಿವೇಶನಕ್ಕೂ ಮುನ್ನವೇ ಸಿಎಂ ಬದಲಾವಣೆಗೆ ಡಿಕೆ ಶಿವಕುಮಾರ್ ಟೀಂ ಲಾಬಿ ಮಾಡುತ್ತಿದೆ. ಮತ್ತೊಂದೆಡೆ ಸಚಿವ ಸಂಪುಟ ಪುನರ್ ರಚನೆಗೆ ಹಿರಿಯ ಶಾಸಕರ ಒತ್ತಡ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಹಾಗು ಹೆಚ್ಚುವರಿ ಡಿಸಿಎಂ ಹುದ್ದೆ ಕುರಿತು ಸಾಧಕ ಬಾಧಕಗಳ ಬಗ್ಗೆ ಆಪ್ತರ ಜೊತೆ ಸಿಎಂ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದಾದರೆ ಸಚಿವ ಸ್ಥಾನವೂ ಇರಲಿ. ಡಿ.ಕೆ ಶಿವಕುಮಾರ್ಗೆ ಎರಡೆರಡು ಖಾತೆ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಇತ್ತು ಎಂದಿರುವ ಸತೀಶ್ ಜಾರಕಿಹೊಳಿ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಯಾದರೆ ನನಗೆ ಖಾತೆ ಬದಲಾವಣೆ ಮಾಡಿ, ಡಿಸಿಎಂ ಹುದ್ದೆಯನ್ನೂ ನೀಡಿ ಎಂದಿದ್ದಾರಂತೆ ಡಾ.ಜಿ.ಪರಮೇಶ್ವರ್. ಹೈಕಮಾಂಡ್ ಬಗ್ಗೆ ಮಾತನಾಡಿರುವ ಹೇಳಿಕೆ ಇಟ್ಟುಕೊಂಡೆ ನನ್ನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಡಿಕೆ ಶಿವಕುಮಾರ್ ಒತ್ತಡ ಹೇರಿದ್ದಾರೆ. ನಾನು ಮೊದಲ ಬಾರಿ ಸಚಿವ, ಐದೂ ವರ್ಷವೂ ಇರ್ತೇನೆ ಎಂದಿದ್ದಾರೆ ಸಚಿವ ಕೆ.ಎನ್.ರಾಜಣ್ಣ.
ಹೈಕಮಾಂಡ್ ಮಟ್ಟದಲ್ಲಿ ಅಧಿಕಾರ ಹಂಚಿಕೆ ಕುರಿತು ಯಾವುದೇ ಚರ್ಚೆ ಆಗಿಲ್ಲ. ಬಜೆಟ್ ಮಂಡಿಸಲು ನಾನು ತಯಾರಿ ನಡೆಸಬೇಕು. ಸದ್ಯಕ್ಕಂತೂ ಸಚಿವ ಸಂಪುಟ ಪುನರ್‌ರಚನೆ ಮಾಡಲ್ಲ ಎಂದಿರುವ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆದ್ರೆ ಸತೀಶ್ ಪರ ನಿಲ್ತೇನೆ ಎನ್ನುವ ಮೂಲಕ ಸತೀಶ್ಗೆ ಅಧ್ಯಕ್ಷಪಟ್ಟ ಅನ್ನೋ ಸುಳಿವು ನೀಡಿದ್ದಾರೆ ಸಿದ್ದರಾಮಯ್ಯ. ಏರ್ಪೋರ್ಟ್ನಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿರುವ ಆರ್ ಅಶೋಕ್, ಕರ್ನಾಟಕದ ಇತಿಹಾಸದಲ್ಲಿ ಇಂತ ಕೆಟ್ಟ ಸರಕಾರ ನೋಡಿಲ್ಲ. ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ ಅಂದಿದ್ದಾರೆ.

ಡಿ.ಕೆ ಶಿವಕುಮಾರ್ ಈಗಾಗಲೇ ಹೇಳಿದ್ದಾರೆ ಒದ್ದು ಕಿತ್ತುಕೊಳ್ಳುತ್ತೇನೆ ಎಂದು. ಯಾವಾಗ ಒದ್ದು ಕಿತ್ತುಕೊಳ್ಳುತ್ತಾರೋ ಗೊತ್ತಿಲ್ಲ. ಯಾವಾಗ ಕಿತ್ತುಕೊಳ್ಳುತ್ತಾರೆ ಎಂದು ಇನ್ನು 6 ತಿಂಗಳಲ್ಲಿ ಗೊತ್ತಾಗುತ್ತದೆ. ಹೋಗುವಾಗ ಲೂಟಿ ಹೊಡೆದುಕೊಂಡು ಹೋಗೋಣಾ ಅನ್ನೋದು ಅಷ್ಟೇ ಈ ಸರ್ಕಾರದ ಉದ್ದೇಶ. ರಿಟೈರ್ಡ್ ಆದ ಮೇಲೆ ನೆಮ್ಮದಿ ಜೀವನಕ್ಕೆ ಬೇಕಲ್ಲಾ ಹಣ ಅದಕ್ಕೆ ಲೂಟಿ ಮಾಡುತ್ತಿದ್ದಾರೆ ಎಂದಿದ್ದಾರೆ.







