
ತುಮಕೂರು : ದೂರು ನೀಡಲು ಬಂದ ರೈತ ಮಹಿಳೆಗೆ ಾಮಿಷವೊಡ್ಡಿ ತನ್ನ ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯ ನಡೆಸಿರುವ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪನ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು ಈ ಘಟನೆಯಿಂದ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ.
ತನ್ನ ಜಮೀನಿನ ವ್ಯಾಜ್ಯದ ಕುರಿತು ಪಾವಗಡದಿಂದ ದೂರು ನೀಡಲು ಮಹಿಳೆಯೊಬ್ಬರು ಮಧುಗಿರಿ ಡಿವೈಎಸ್ಪಿ ಕಚೇರಿಗೆ ಬಂದಿದ್ದರು. ಆಗ ತಾನು ಈ ವಿಷಯದಲ್ಲಿ ಸಹಾಯ ಮಾಡುವುದಾಗಿಯೂ ಮಹಿಳೆಯ ಎದುರುದಾರರ ವಿರುದ್ದ ಕ್ರಮ ಕೈಗೊಳ್ಳುವುದಾಗಿಯೂ ಡಿವೈಎಸ್ಪಿ ಅಮಿಷವೊಡ್ಡಿ ಲೈಂಗಿಕ ಸಂಪರ್ಕ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಡಪಾಯಿ ಮಹಿಳೆ ತನ್ನ ಜಮೀನು ರಕ್ಷಿಸಿಕೊಳ್ಳುವ ಏಕೈಕ ಉದ್ದೇಶದಿಂದ ಆತನಿಗೆ ಸಹಕರಿಸಿದ್ದಾಳೆ ಎನ್ನಲಾಗಿದೆ. ಅಧಿಕಾರಿ ತನ್ನ ಕಚೇರಿಯಲ್ಲಿಯೇ ಅನೈತಿಕ ಚಟುವಟಿಕೆ ಆರಂಭಿಸಿದ್ದಾನೆ. ಕಿಟಕಿಯ ಮೂಲಕ ಚಿತ್ರೀಕರಣಗೊಂಡ ವಿಡಿಯೋ ಲಭಿಸಿದೆ.
ಇದೊಂದು ಪೊಲೀಸ್ ಇಲಾಖೆಯ ಗೌರವವನ್ನು ಮಣ್ಣುಪಾಲು ಮಾಡುವಂತ ನೀಚ ಕೃತ್ಯವಾಗಿದ್ದು ಗೃಹ ಸಚಿವರ ತವರು ಜಿಲ್ಲೆ ಹಾಗೂ ಸಹಕಾರ ಸಚಿವರ ಕ್ಷೇತ್ರದಲ್ಲೇ ನಡೆದಿದ್ದು ಇಬ್ಬರೂ ಸಚಿವರಿಗೆ ಮುಜುಗರ ತಂದಿದೆ.
”ಇದೊಂದು ದುರದೃಷ್ಟಕರ ವಿಚಾರ. ಈ ವಿಚಾರವಾಗಿ ತನಿಖೆ ನಡೆಸಲು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಈ ಬಗ್ಗೆ ನನಗೂ ಸ್ವಲ್ಪ ಮಾಹಿತಿಯಿತ್ತು. ಆದರೆ ಸಾಕ್ಷಿ ಇರಲಿಲ್ಲ. ಯಾವುದೇ ಕಾರಣಕ್ಕೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಇಲಾಖೆ ಸಹಿಸಿಕೊಳ್ಳಲ್ಲ. ಸಾರ್ವಜನಿಕರಿಗೆ ಇಲಾಖೆ ಮೇಲಿನ ನಂಬಿಕೆ ಹೋಗದಂತೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು” ಎಂದು ತುಮಕೂರು ಎಸ್ಪಿ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ಈತನನ್ನು ಅಮಾನತ್ತುಗೊಳಿಸುವ ಸಾದ್ಯತೆ ಇದೆ ಎಂದು ಪೋಲೀಸ್ ಉನ್ನತ ಮೂಲಗಳು ತಿಳಿಸಿವೆ.
