ಬ್ರೋಕರ್ ಗಳ ಹಾವಾಳಿ ಹಾಗೂ ಲಂಚದ ಬೇಡಿಕೆ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯದ 9 ಆರ್ ಟಿಒ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶುಕ್ರವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು, ಅತ್ತಿಬೆಲೆ, ವಿಜಯಪುರದ ಜಳಲಿ ಪೋಸ್ಟ್, ಬೆಳಗಾವಿಯ ನಿಪ್ಪಾಣಿ, ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಕೋಲಾರದ ನಂಗ್ಲಿ, ಬಳ್ಳಾರಿ, ಕೊಪ್ಪಳ, ಹೊಸಪೇಟೆ, ಗುಂಡ್ಲುಪೇಟೆ, ಬೀದರ್ ನ ಹುಮನಬಾದ್ ಚೆಕ್ ಪೋಸ್ಟ್ ಮೇಲೆ ದಾಳಿ ಆಗಿದೆ.
ಚೆಕ್ ಪೋಸ್ಟ್ ಗಳಲ್ಲಿ ಮಧ್ಯವರ್ತಿಗಳು ಹಾಗೂ ಲಂಚಕ್ಕೆ ಬೇಡಿಕೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಈ ದಾಳಿ ನಡೆಸಿದ್ದಾರೆ.
ಬೆಂಗಳೂರು ಹೊರವಲಯದ ಅತ್ತಿಬೆಲೆ ಆರ್ ಟಿಒ ಕಚೇರಿಗೆ ಬೆಳಿಗ್ಗೆ 2 ವಾಹನಗಳಲ್ಲಿ ಬಂದ ಲೋಕಾಯುಕ್ತ ಕಚೇರಿ ಒಳಗೆ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಬೀದರ ಜಿಲ್ಲೆಯ ಹುಮನಾಬಾದ ಪಟ್ಟಣದ ಹೊರವಲಯದ ಆರ್.ಟಿ.ಓ. ಕಚೇರಿ ಮೇಲೆ ಸೆ.30ರ ಶುಕ್ರವಾರ ಬೆಳ್ಳಂ ಬೆಳಿಗ್ಗೆ ಕಲಬುರಗಿ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ. ಚೆಕ್ ಪೋಸ್ಟ್ ನಲ್ಲಿ ವಾಹನಗಳಿಂದ ಹಣ ವಸೂಲಿ ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 65ರ ಮೋಳಕೆರಾ ಗ್ರಾಮದ ಹತ್ತಿರದ ಚೆಕ್ ಪೋಸ್ಟ್ ನಲ್ಲಿ ದಾಳಿ ನಡೆದಿದೆ.
ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ನಡೆಯುತ್ತಿರುವ ಗುಂಡ್ಲುಪೇಟೆ ಚೆಕ್ ಪೋಸ್ಟ್ ಬಳಿಯಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.