ಕೋವಿಡ್ ಎರಡನೇ ಅಲೆಯ ಲಾಕ್ ಡೌನ್ ಗಳು ತಳಮಟ್ಟದಿಂದ ಬಿಗಿಯಾಗತೊಡಗಿವೆ. ದೇಶಾದ್ಯಂತ ಜಿಲ್ಲಾ, ತಾಲೂಕು ಮತ್ತು ಪಂಚಾಯ್ತಿ ಮಟ್ಟದಲ್ಲಿ ಬಿಗಿ ನಿರ್ಬಂಧ ಕ್ರಮಗಳು ಜಾರಿಯಾಗತೊಡಗಿದ್ದು, ಉದ್ಯಮ, ವಹಿವಾಟು, ವ್ಯಾಪಾರ ವಲಯಗಳಷ್ಟೇ ಅಲ್ಲ; ಕೃಷಿ ಚಟುವಟಿಕೆಗಳನ್ನು ಕೂಡ ಕತ್ತು ಹಿಸುಕತೊಡಗಿವೆ.
ಕಳೆದ ವರ್ಷದ ಮೊದಲ ಅಲೆಯ ಹೊತ್ತಿಗೆ ಏಕಾಏಕಿ ದಿಲ್ಲಿಯಿಂದ ಹೇರಿದ ಲಾಕ್ ಡೌನ್ ಸೃಷ್ಟಿಸಿದ ಅನಾಹುತಗಳು ಮತ್ತು ಆರ್ಥಿಕ ಸಂಕಷ್ಟಗಳಿಂದ ಜನರ ಕೆಂಗಣ್ಣಿಗೆ, ರಾಜಕೀಯ ಮತ್ತು ಆರ್ಥಿಕ ವಲಯದ ತೀವ್ರ ಟೀಕೆಗೆ ಗುರಿಯಾದ ನರೇಂದ್ರ ಮೋದಿಯವರ ಸರ್ಕಾರ, ಈ ಬಾರಿ ಅಂತಹ ತಪ್ಪು ಮಾಡಲಿಲ್ಲ. ಬದಲಾಗಿ, ಪಂಚಾಯ್ತಿ ಮಟ್ಟದಿಂದಲೇ ಬಿಗಿ ಲಾಕ್ ಡೌನ್, ಸೀಲ್ ಡೌನ್ ಜಾರಿಗೆ ತರುತ್ತಿದೆ. ಆ ಮೂಲಕ ಈ ನಿರ್ಬಂಧ ಕ್ರಮಗಳ ಆಗುಹೋಗುಗಳಿಗೆ ಹೆಗಲುಕೊಡುವ ಹೊಣೆಗಾರಿಕೆಯಿಂದ ಬಹಳ ಚಾಣಾಕ್ಷತನದಿಂದ ಜಾರಿಕೊಂಡಿದೆ!
ಮಾರ್ಚ್ ಮಧ್ಯಂತರದಿಂದ ಬಹುತೇಕ ಆರಂಭವಾದ ಕೋವಿಡ್ ಎರಡನೇ ಅಲೆ ನಿಯಂತ್ರಣದ ನಿರ್ಬಂಧ ಕ್ರಮಗಳು, ಹಂತಹಂತವಾಗಿ ಬಿಗಿಯಾಗುತ್ತಾ ಈಗ ಹಳ್ಳಿ-ಹಳ್ಳಿಗಳ ಮಟ್ಟದಲ್ಲಿ ಸಂಪೂರ್ಣ ಜನ ಸಂಚಾರ ನಿರ್ಬಂಧದ, ಕರ್ಫ್ಯೂ(ಅಧಿಕೃತವಾಗಿ ಆ ಪದ ಬಳಕೆ ಮಾಡುತ್ತಿಲ್ಲವಷ್ಟೇ) ಜಾರಿಯಾಗತೊಡಗಿದೆ. ಹಾಗಾಗಿ, ಆರಂಭದ ಲಾಕ್ ಡೌನ್ ವೇಳೆ, ಕಳೆದ ಬಾರಿಯ ಬಿಗಿ ಲಾಕ್ ಡೌನ್ ಗಿಂತ ಈ ಬಾರಿ ಕೆಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ದಿನದ ಕೆಲವು ಗಂಟೆ ಅಗತ್ಯ ವಸ್ತು ಖರೀದಿಗೆ ಮತ್ತು ದಿನವೆಲ್ಲಾ ಸರಕು ಸಾಗಣೆಗೆ, ಉದ್ಯಮ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಹಾಗಾಗಿ ಒಟ್ಟಾರೆ ದೇಶದ ಉದ್ಯಮ, ವಹಿವಾಟು, ವ್ಯಾಪಾರ ಕ್ಷೇತ್ರಗಳ ಮೇಲೆ ಈ ಬಾರಿಯ ಲಾಕ್ ಡೌನ್ ಕಳೆದ ಬಾರಿಯಷ್ಟು ಭೀಕರ ಪರಿಣಾಮ ಬೀರುವುದಿಲ್ಲ. ಜೊತೆಗೆ ಕೃಷಿ ವಲಯವನ್ನಂತೂ ಸಂಪೂರ್ಣ ನಿರ್ಬಂಧಮುಕ್ತಗೊಳಿಸಲಾಗಿದೆ. ಹಾಗಾಗಿ ಒಟ್ಟಾರೆ ದೇಶದ ಆರ್ಥಿಕತೆಯ ಮೇಲೆ ಕಳೆದ ಬಾರಿಯಷ್ಟು ವ್ಯತಿರಿಕ್ತ ಪರಿಣಾಮವಾಗದು ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು.
ಆದರೆ, ಇದೀಗ ಮೇ ಎರಡು ಮತ್ತು ಮೂರನೇ ವಾರದ ಹೊತ್ತಿಗೆ ಕರ್ನಾಟಕವೂ ಸೇರಿದಂತೆ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಬಹುತೇಕ ರಾಜ್ಯಗಳಲ್ಲಿ ಗ್ರಾಮಮಟ್ಟದಿಂದ ಬಿಗಿ ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಕರೋನಾ ಪ್ರಕರಣಗಳ ವ್ಯಾಪಕ ಹೆಚ್ಚಳದ ಹಿನ್ನೆಲೆಯಲ್ಲಿ ಸೋಂಕು ಹತೋಟಿಗೆ ತರುವ ಯತ್ನವಾಗಿ ಹೇರಲಾಗುತ್ತಿರುವ ಈ ಅಕ್ಷರಶಃ ಕರ್ಫ್ಯೂ ಪರಿಸ್ಥಿತಿಯಿಂದಾಗಿ, ಕಳೆದ ಒಂದು ತಿಂಗಳಿನಿಂದ ಜಾರಿಯಲ್ಲಿರುವ ಬಿಗಿ ಲಾಕ್ ಡೌನ್ ಹೊರತುಪಡಿಸಿ, ಮುಂದಿನ ಕನಿಷ್ಟ 15-20 ದಿನ ಜನಜೀವನ ಸಂಪೂರ್ಣ ಸ್ತಬ್ಧಗೊಳ್ಳಲಿದೆ. ಸರಕು ಸರಂಜಾಮು ವಹಿವಾಟು ಸಂಪೂರ್ಣ ಸ್ಥಗಿತಗೊಳ್ಳಲಿದೆ. ಹಳ್ಳಿಗಳ ಮನೆಮನೆಯಲ್ಲೂ ಕರೋನಾ ಸೋಂಕು ಹಬ್ಬಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಕೂಡ ಕನಿಷ್ಟ ಒಂದು ತಿಂಗಳು, ಅದೂ ಮುಂಗಾರು ಬಿತ್ತನೆ ಹಂಗಾಮಿನಲ್ಲಿಯೇ ಬಹುತೇಕ ಸ್ಥಗಿತಗೊಳ್ಳಲಿವೆ. ಹಾಗಾಗಿ ಮಾರಾಟ ಚಟುವಟಿಕೆ ಇಲ್ಲದೆ ಉತ್ಪಾದನೆ, ಸೇವಾ ವಲಯಗಳು ಸ್ಥಗಿತಗೊಂಡರೆ, ಕೆಲಸಗಾರರಿಲ್ಲದೆ, ಗೊಬ್ಬರ, ಬೀಜ, ಯಂತ್ರೋಪಕರಣಗಳ ಅಲಭ್ಯತೆಯಿಂದಾಗಿ ಕೃಷಿ ಚಟುವಟಿಕೆ ಕೂಡ ಭಾಗಶಃ ಸ್ಥಗಿತವಾಗಲಿದೆ.
ಆ ಹಿನ್ನೆಲೆಯಲ್ಲಿ ಕಳೆದ ಬಾರಿಯ ಲಾಕ್ ಡೌನ್ ಗೆ ಹೋಲಿಸಿದರೆ, ಈ ಬಾರಿಯ ಲಾಕ್ ಡೌನ್ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಡಲಿದೆ. ಆದರೆ ಕಳೆದ ಬಾರಿಯಂತೆ ಲಾಕ್ ಡೌನ್ ಈ ಬಾರಿ ಮೇಲಿನಿಂದ ಜಾರಿಯಾಗಿಲ್ಲ. ಉತ್ಪಾದನಾ ಹಂತದಿಂದ ಜಾರಿಯಾಗಿಲ್ಲ. ಬದಲಾಗಿ ಬಳಕೆದಾರರ ಹಂತದಿಂದ, ಕೆಳ ಹಂತದಿಂದ ಜಾರಿಯಾಗಿ ಮೇಲ್ಮಟ್ಟಕ್ಕೆ ಚಲಿಸುತ್ತಿದೆ. ಅಂದರೆ, ಅಪ್ ಸೈಡ್ ಡೌನ್(ಉಲ್ಟಾಪಲ್ಟಾ) ಲಾಕ್ ಡೌನ್. ಹಾಗಾಗಿ ಕತ್ತು ಹಿಸುಕುತ್ತಿರುವುದು ತಳದಿಂದ ಮೇಲಕ್ಕೇರುತ್ತದೆ. ಹಾಗಾಗಿ ಕತ್ತು ಹಿಸುಕಿದೆ ಎಂಬುದು ಅರಿವಿಗೆ ಬರುವ ಹೊತ್ತಿಗೆ ಬಹುತೇಕ ಎಲ್ಲವೂ ಮುಗಿದುಹೋಗಿರುತ್ತದೆ. ಹಾಗಾಗಿ ದೇಶ- ವಿದೇಶದ ಅರ್ಥಶಾಸ್ತ್ರಜ್ಞರು ಎರಡನೇ ಅಲೆಯ ಲಾಕ್ ಡೌನ್ ಬಗ್ಗೆ ತೀರಾ ನಿರಾಶಾದಾಯಕ ಅಭಿಪ್ರಾಯಗಳನ್ನು ಕೊಟ್ಟಿರಲಿಲ್ಲ. ಬದಲಾಗಿ ಕಳೆದ ವರ್ಷದ ಪರಿಸ್ಥಿತಿಗೆ ಹೋಲಿಸಿದರೆ ಈ ಬಾರಿಯ ನಿರ್ಬಂಧ ಕ್ರಮಗಳು ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಡಲಾರವು ಎಂದೇ ಹೇಳುತ್ತಿದ್ದರು.
ಆದರೆ, ಈಗ ನಿಧಾನವಾಗಿ ಪರಿಸ್ಥಿತಿಯ ಬಿಸಿ ಮೇಲ್ಮಟ್ಟಕ್ಕೆ ತಟ್ಟತೊಡಗಿದೆ. ತಳಮಟ್ಟದಲ್ಲಿ ಬದುಕು ನಿಂತುಹೋದ ಪರಿಣಾಮಗಳೂ ಹಂತಹಂತವಾಗಿ ಮೇಲ್ತುದಿಯ ವ್ಯವಸ್ಥೆಗೆ ಬಿಸಿ ಮುಟ್ಟಿಸತೊಡಗಿದೆ. ಸರಕು ಉತ್ಪಾದನೆ, ಸೇವಾ ವ್ಯವಸ್ಥೆಯ ಕೇಂದ್ರದ ಚಟುವಟಿಕೆಗಳಿಗೆ ಈ ನಿರ್ಬಂಧಗಳು ದೊಡ್ಡ ಮಟ್ಟದ ತಡೆ ಒಡ್ಡಿಲ್ಲ ನಿಜ. ಆದರೆ, ಮೇ ಮಧ್ಯಂತರದ ನಂತರ ಹಂತಹಂತವಾಗಿ ವಿಸ್ತರಿಸುತ್ತಿರುವ ಕರ್ಫ್ಯೂ ಸ್ವರೂಪದ ಕಟ್ಟುನಿಟ್ಟಿನ ನಿರ್ಬಂಧಗಳು ಉತ್ಪಾದನೆಯಾಗಿ, ಸರಬರಾಜಾದ ವಸ್ತುಗಳನ್ನು ಕೊಳ್ಳಲು, ಬಳಸಲು ಗ್ರಾಹಕರೇ ಮನೆಬಿಟ್ಟು ಹೊರಬರಲಾರದ ಬಿಗಿ ಸ್ಥಿತಿ ನಿರ್ಮಾಣಮಾಡಿವೆ. ಹಾಗಾಗಿ ಉತ್ಪಾದನೆಯಾದ ಸರಕುಗಳು ಗೋದಾಮುಗಳಲ್ಲೇ ಧೂಳು ತಿನ್ನುವ, ಹಾಳಾಗುವ, ವ್ಯರ್ಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಈ ಹೊಸ ಬಗೆಯ ಚಾಣಾಕ್ಷ ಲಾಕ್ ಡೌನ್ ಹೊಡೆತಗಳು ಎಲ್ಲೆಲ್ಲಿ ಹೇಗೆ ಹೇಗೆ ಬಿದ್ದಿವೆ ಎಂಬುದು ಅರಿವಾಗಲು ಇನ್ನೂ ತುಸು ಸಮಯ ಹಿಡಿಯಬಹುದು.
ಈ ಸೂಕ್ಷ್ಮವನ್ನು ದೇಶದ ಆರ್ ಬಿಐ ಮತ್ತಿತರ ಹಣಕಾಸು ಸಂಸ್ಥೆಗಳು, ಆರ್ಥಿಕ ಸಮೀಕ್ಷಾ ಸಂಸ್ಥೆಗಳು ಅರಿಯುವ ಮುನ್ನವೇ ರಾಯಿಟರ್ಸ್ ನಂತಹ ಮಾಧ್ಯಮ ಸಂಸ್ಥೆಯ ಸಮೀಕ್ಷೆ ಗ್ರಹಿಸಿದೆ. ಕರೋನಾ ಎರಡನೇ ಅಲೆಯ ಹೊಡೆತ ಭಾರತದ ಆರ್ಥಿಕತೆಯ ಮೇಲೆ ಬೀರಲಿರುವ ಪರಿಣಾಮಗಳು ಈ ಮೊದಲು ಊಹಿಸಿದ್ದಕ್ಕಿಂತ ಭೀಕರವಾಗಿರಲಿವೆ ಎಂದಿರುವ ರಾಯಿಟರ್ಸ್, ಈಗಾಗಲೇ ಆತಂಕಕಾರಿ ಮಟ್ಟಕ್ಕೆ ಕುಸಿದಿರುವ ಉದ್ಯೊಗಾವಕಾಶಗಳ ಮಾರುಕಟ್ಟೆಯು ಮುಂದಿನ ಕೆಲವು ವರ್ಷಗಳ ಕಾಲ ಇನ್ನಷ್ಟು ಭೀಕರವಾಗಲಿದೆ ಎಂದು ಎಚ್ಚರಿಸಿದೆ.
ಈ ಹಣಕಾಸು ವರ್ಷದ ಸರಾಸರಿ ಬೆಳವಣಿಗೆ ದರವು ಈ ಹಿಂದೆ ಊಹಿಸಿದ್ದ ಶೇ.10.4ಕ್ಕೆ ಬದಲಾಗಿ ಶೇ.9.8ಕ್ಕೆ ಕುಸಿಯಲಿದೆ. ಈ ಮೊದಲು ಊಹಿಸಿದ್ದಕ್ಕಿಂತ ಮುಂದಿನ ಕೆಲವು ದಿನಗಳಲ್ಲಿ ದೇಶದ ಆರ್ಥಿಕತೆಯ ಮುನ್ನೋಟವು ‘ದುರ್ಬಲ ಮತ್ತು ಇನ್ನಷ್ಟು ಕುಸಿತದ ಸಾಧ್ಯತೆಯ ನಿರಾಶಾದಾಯಕ ಸ್ಥಿತಿಯಲ್ಲಿದೆ’ ಎಂದು ತನ್ನ ಸಮೀಕ್ಷೆಯಲ್ಲಿ ಭಾಗವಹಿಸಿದ್ದ 29 ಮಂದಿ ಜಾಗತಿಕ ಖ್ಯಾತಿಯ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯಾರೊಬ್ಬರೂ ಸದೃಢವಾಗಿ ಆರ್ಥಿಕತೆ ಪುಟಿದೇಳುವ ಸಾಧ್ಯತೆಯನ್ನು ನಿರೀಕ್ಷಿಸಿಲ್ಲ ಮತ್ತು ಆಶಾದಾಯಕ ಬೆಳವಣಿಗೆ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ರಾಯಿಟರ್ಸ್ ಹೇಳಿದೆ.
ಹಾಗೆಯೇ, “ದೇಶದ ಜನಸಂಖ್ಯೆಯ ಬಹುಪಾಲು ಮಂದಿಗೆ ಕೋವಿಡ್ ಲಸಿಕೆ ನೀಡುವವರೆಗೆ ಕರೋನಾ ಅಲೆಯ ಅಪಾಯ ಮತ್ತೆ ಮತ್ತೆ ತಲೆದೋರುತ್ತಲೇ ಇರುತ್ತದೆ ಮತ್ತು ಹಾಗೆ ಹೊಸ ಹೊಸ ಅಲೆಗಳು ಬಂದಂತೆಲ್ಲಾ ಲಾಕ್ ಡೌನ್, ಸೀಲ್ ಡೌನ್ ಗಳ ಜಾರಿ ಅನಿವಾರ್ಯವಾಗಲಿದೆ. ಹಾಗಾಗಿ ಎಲ್ಲಿಯವರಿಗೆ ಭಾರತ ತನ್ನ ಜನಸಂಖ್ಯೆಯ ಬಹುಪಾಲು ಮಂದಿಗೆ ಲಸಿಕೆ ನೀಡುವುದು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಆರ್ಥಿಕತೆಯ ಈ ಜಾರುಬಂಡಿಯ ಆಟ ಕೂಡ ನಿಲ್ಲುವುದಿಲ್ಲ” ಎಂದು ವೂಟರ್ ವ್ಯಾನ್ ಏಕ್ಲೆನ್ ಬರ್ಗ್ ಎಂಬ ರೋಬೊಬ್ಯಾಂಕ್ ಆರ್ಥಿಕ ತಜ್ಞರು ಹೇಳಿರುವುದಾಗಿ ರಾಯಿಟರ್ಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಿರಂತರ ಲಾಕ್ ಡೌನ್ಗಳ ನೇರ ಪರಿಣಾಮ ಮೊದಲು ದೇಶದ ಉದ್ಯೋಗ ಮಾರುಕಟ್ಟೆಯ ಮೇಲೆ ಆಗಲಿದೆ. ಮೇ 23ರ ಹೊತ್ತಿಗೆ ಶೇ.14.73ಕ್ಕೆ ತಲುಪಿದ್ದ ನಿರುದ್ಯೊಗ ಪ್ರಮಾಣ ವಾರ್ಷಿಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು(ಸಿಎಂಐಇ ಪ್ರಕಾರ). ಅದು ಆರ್ಥಿಕ ಹಿಂಜರಿತದ ಸ್ಪಷ್ಟ ಪುರಾವೆ. ಈ ನಡುವೆ ಸಮೀಕ್ಷೆಯಲ್ಲಿ ಭಾಗವಹಿಸಿದ 29 ತಜ್ಞರ ಪೈಕಿ 25 ಮಂದಿ, ದೇಶದ ಉದ್ಯೋಗ ನಷ್ಟ ಮತ್ತು ನಿರುದ್ಯೋಗ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನಷ್ಟು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಲಿದೆ ಎಂದಿದ್ದಾರೆ. “ದೇಶದ ಆರ್ಥಿಕತೆಗೆ ಹಂತಹಂತದ ಲಾಕ್ ಡೌನ್ ಗಳಿಂದಾಗಿ ಬೇಡಿಕೆಯ ಕುಸಿತದ ದೊಡ್ಡ ಆಘಾತಕಾರಿ ಪೆಟ್ಟು ಬೀಳಲಿದೆ. ಆ ಪೈಕಿ ಕೆಲವು ವಸ್ತುಗಳ ಬೇಡಿಕೆ ಶಾಶ್ವತವಾಗಿ ಕುಸಿಯಬಹುದು. ಹಾಗಾಗಿ ಅಂತಹ ಬೆಳವಣಿಗೆ ಖಂಡಿತವಾಗಿಯೂ ಈಗಿರುವ ಉದ್ಯೋಗಗಳಿಗೂ ಕುತ್ತು ತರಲಿದೆ. ಪರಿಣಾಮವಾಗಿ ಇನ್ನಷ್ಟು ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ” ಎಂದು ಐಎನ್ ಜಿಯ ಹಿರಿಯ ಆರ್ಥಿಕ ತಜ್ಞ ಪ್ರಕಾಶ್ ಸಕ್ಪಾಲ್ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಆರ್ಥಿಕ ಚಟುವಟಿಕೆಗಳ ಕಣ್ಗಾವಲು ಸಂಸ್ಥೆ ಆರ್ ಬಿಐ ತನ್ನ ‘ಸ್ಟೇಟ್ ಆಫ್ ದಿ ಎಕಾನಮಿ’ ವರದಿಯಲ್ಲಿ ಕೋವಿಡ್ ಸೋಂಕು ತಡೆಯದೇ ಹೋದರೆ ಗ್ರಾಹಕ ವಸ್ತು ಸರಬರಾಜು ವ್ಯವಸ್ಥೆಯನ್ನೇ ಅದು ತುಂಡರಿಸಲಿದೆ. ಆ ಮೂಲಕ ಹಣದುಬ್ಬರಕ್ಕೆ ಕಾರಣವಾಗಲಿದೆ. ಅದೇ ಹೊತ್ತಿಗೆ ಸ್ಥಳೀಯ ಲಾಕ್ ಡೌನ್ ಕ್ರಮಗಳು ಆರ್ಥಿಕತೆ ಸಹಜ ಸ್ಥಿತಿಗೆ ಮರಳುವುದನ್ನು ಇನ್ನಷ್ಟು ದಿನ ಮುಂದೂಡಲಿವೆ ಎಂದು ಹೇಳಿದ ಮಾರನೇ ದಿನವೇ ರಾಯಿಟರ್ಸ್ ತನ್ನ ಸಮೀಕ್ಷೆಯಲ್ಲಿ ಈ ಆತಂಕಕಾರಿ ಅಂಶಗಳನ್ನು ಬಹಿರಂಗಪಡಿಸಿದೆ.
ಹಾಗಾಗಿ ದೇಶದ ಆಳುವ ಮಂದಿ, ಅಧಿಕಾರಸ್ಥರು ತಮ್ಮ ತಲೆ ಉಳಿಸಿಕೊಳ್ಳಲು, ತಮ್ಮ ವರ್ಚಸ್ಸು, ರಾಜಕೀಯ ಭವಿಷ್ಯ, ಚುನಾವಣಾ ಲಾಭಗಳನ್ನು ಉಳಿಸಿಕೊಳ್ಳಲು, ಕೇಂದ್ರೀಯ ಲಾಕ್ ಡೌನ್ ಬದಲಿಗೆ ಲೋಕಲ್ ಲಾಕ್ ಡೌನ್ ಹೇರಿ, ತಮ್ಮ ಹೆಗಲ ಹೊಣೆ ಕೊಡವಿಕೊಳ್ಳಬಹುದು. ಜನರ ನೇರ ಆಕ್ರೋಶದಿಂದ ಪಾರಾಗಬಹುದು. ಆದರೆ, ದೇಶದ ಆರ್ಥಿಕತೆಗೆ, ದುಡಿವ ಜನರ ಕೈ ಮತ್ತು ಬಾಯಿಗೆ ಬೀಗ ಬಿದ್ದಿರುವುದಂತೂ ತಳ್ಳಿಹಾಕಲಾಗದ ವಾಸ್ತವ. ಆ ಕಟುವಾಸ್ತವವನ್ನು ತಡವಾಗಿಯಾದರೂ ಕೆಲವರು ಗುರುತಿಸತೊಡಗಿದ್ದಾರೆ.
ಆದರೆ, ಅನಾಹುತಗಳು ಈಗಷ್ಟೇ ಶುರುವಾಗಿವೆ. ಏಕೆಂದರೆ, ಇದು ಕುತ್ತಿಗೆಗೆ ಕೈಹಾಕುವ ಬದಲು, ಅದಕ್ಕಿಂತ ಸಾಕಷ್ಟು ಕೆಳಗೆ ಕೈಹಾಕಿ ಅಮುಕಿ ಹಿಡಿದಿರುವ ಚಾಣಾಕ್ಷ ಹಿಸುಕುವ ವರಸೆ! ಹಾಗಾಗಿ ಹಿಸುಕಿದ್ದು ಮೇಲ್ನೋಟಕ್ಕೆ ಕಾಣಿಸದು. ಆದರೆ, ಕರಗಿ ನೀರಾಗುವುದು ಮಾತ್ರ ಪಕ್ಕಾ!