ದೇಶ ಕಂಡ ಅಪರೂಪದ ರಾಜಕಾರಣಿ, ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ʻಭಾರತ ರತ್ನʼ ಗೌರವ ನೀಡಲಾಗುತ್ತಿದೆ.
ಈ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಘೋಷಣೆ ಮಾಡಿದ್ದು, “ಶ್ರೀ ಎಲ್.ಕೆ.ಅಡ್ವಾಣಿ ಜಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಗೌರವವನ್ನು ಪಡೆದಿರುವುದಕ್ಕೆ ಅವರನ್ನು ಅಭಿನಂದಿಸಿದ್ದೇನೆ” ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.
ಅಲ್ಲದೇ ಎಲ್.ಕೆ. ಅಡ್ವಾಣಿ ಅವರು ನಮ್ಮ ಕಾಲದ ಗೌರವಾನ್ವಿತ ರಾಜಕೀಯ ತಜ್ಞರಲ್ಲಿ ಒಬ್ಬರಾಗಿದ್ದು, ಭಾರತದ ಅಭಿವೃದ್ಧಿಗೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಪಕ್ಷದ ತಳಮಟ್ಟದಿಂದ ಕೆಲಸ ಮಾಡಿರುವ ಅವರು ದೇಶದ ಉಪ ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿ ಆದರ್ಶ ಜೀವನ ನಡೆಸಿದ್ದಾರೆ. ಅಷ್ಟು ಮಾತ್ರವಲ್ಲದೇ ಗೃಹ ಸಚಿವರಾಗಿ, ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಾಗಿಯೂ ಕೆಲಸ ಮಾಡಿರುವ ಅಡ್ವಾಣಿ ಅವರು, ದೇಶದ ರಾಜಕೀಯದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.
ಇನ್ನೂ ಹಿರಿಯ ರಾಜಕೀಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ “ಭಾರತ ರತ್ನ” ನೀಡುತ್ತಿರುವುದಕ್ಕೆ ಹಲವು ರಾಜಕೀಯ ನಾಯಕರು ಅಭಿನಂದನೆ ಸಲ್ಲಿಸಿದ್ದು, ದೇಶಾಧ್ಯಂತ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲೂ ಸಂಭ್ರಮ, ಸಂತಸ ಮನೆ ಮಾಡಿದೆ.
#BJP #LKAdvani #NarendraModi #PrimeMinister #BharatRatna