ವೀರಶೈವ ಲಿಂಗಾಯತ ನಾಯಕರು ಬಿಜೆಪಿಯ ನಾಯಕರಾದರೆ ಮಾತ್ರ ಬಿಜೆಪಿ ಗೆಲ್ಲಲು ಸಾಧ್ಯ ಎಂಬ ಎಮ್ಎಲ್ಸಿ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿಕೆಗೆ ಬಿಜೆಪಿ ಪಕ್ಷದ ನಾಯಕರಿಂದ ಅಸಮಾಧಾನ ವ್ಯಕ್ತವಾಗಿದೆ.
ಧಾರವಾಡ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ಕುಂದಗೋಳ ಮಠ ಅವರು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರದೀಪ್ ಶೆಟ್ಟರ್ ಹೇಳಿಕೆ ಖಂಡನೀಯ. ಬಿಜೆಪಿಯಿಂದ ಎರಡು ಬಾರಿ ವಿಧಾನಪರಿಷತ್ಗೆ ಆಯ್ಕೆಯಾದವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ನಿಮ್ಮಂತಹ ನಾಯಕರು ಮಾರ್ಗದರ್ಶನ ಮಾಡಬೇಕು. ಅದನ್ನು ಬಿಟ್ಟು ಇಂತಹ ಹೇಳಿಕೆ ನೀಡಬಾರದು. ಕಾರ್ಯಕ್ರಮಕ್ಕೆ ನಿಮ್ಮನ್ನು ಕರೆಯದಿದ್ದಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಲು ನಾವು ಸಿದ್ಧ. ಆದರೆ, ಬಿಜೆಪಿ ಚಿಹ್ನೆ ಮೇಲೆ ಎರಡು ಬಾರಿ ಎಂಎಲ್ಸಿ ಆಗಿಯೂ ಈ ರೀತಿ ಮಾತಾಡುವುದು ಸರಿಯಲ್ಲ. ಜಗದೀಶ್ ಶೆಟ್ಟರ್ ಆರು ಬಾರಿ ಶಾಸಕರಾಗಿದ್ದೂ ವೈಯಕ್ತಿಕ ವರ್ಚಸ್ಸಿನಿಂದ ಅಲ್ಲ, ಬದಲಾಗಿ ಬಿಜೆಪಿ ಚಿಹ್ನೆಯಿಂದಲೇ ಎಂದು ಬಸವರಾಜ ಹೇಳಿದ್ದಾರೆ.
ರಾಜ್ಯದಲ್ಲಿ ಲಿಂಗಾಯತ ನಾಯಕರನ್ನು ತುಳಿದಿರುವುದು ಬಿಜೆಪಿಯ ಸೋಲಿಗೆ ಕಾರಣವಾಗಿದೆ ಎಂದು ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರು ಆರೋಪಿಸಿದ್ದರು. ಅಲ್ಲದೆ, ಅನೇಕ ಲಿಂಗಾಯತ ನಾಯಕರು ಒಂದು ಕಾಲು ಪಕ್ಷದಿಂದ ಹೊರಗಡೆ ಇಟ್ಟಿದ್ದಾರೆ ಎಂದು ಸ್ಪೋಟಕ ಹೇಳಿಕೆಯನ್ನು ನೀಡಿದ್ದರು.
ಅದಾಗ್ಯೂ, ನಾನು ಪಕ್ಷ ಬಿಟ್ಟು ಹೋಗುವುದಿಲ್ಲ. ಅನೇಕ ಕಾಂಗ್ರೆಸ್ ದೊಡ್ಡ ನಾಯಕರು ನನ್ನ ಸಂಪರ್ಕ ಮಾಡಿದ್ದಾರೆ ಎಂದು ಶೆಟ್ಟರ್ ಹೇಳಿದ್ದರು.
ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿರುವುದು ಸಮಸ್ಯೆ ಆಗಿದೆ ಎಂದು ಹೇಳಿದ ಅವರು, ಈಗ ಪಕ್ಷದಲ್ಲಿ ಹೇಳೋರು ಕೇಳೋರು ಇಲ್ಲದಂತಾಗಿದೆ. ಪಕ್ಷದಲ್ಲಿ ನಾಯಕತ್ವದ ಕೊರತೆ ಇದೆ. ಬಿಜೆಪಿಯಲ್ಲಿ ಲಿಂಗಾಯತ ನಾಯಕರೇ ಇಲ್ಲ. ಬಿಜೆಪಿ ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ. ಲಿಂಗಾಯತ ನಾಯಕರಿಗೆ ಮೋಸ ಆಗುತ್ತಿರುವ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇವೆ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಬಿಜೆಪಿಯಲ್ಲಿ ಇರುವುದೇ ಅಲ್ಪ ಸ್ವಲ್ಪ ಲಿಂಗಾಯತ ನಾಯಕರು. ಅವರನ್ನು ಅವಗಣನೆ ಮಾಡಿದ್ರೆ ಬಿಜೆಪಿ ಕೆಟ್ಟ ಸ್ಥಿತಿಗೆ ಹೋಗತ್ತೆ. ರಾಜ್ಯದ ಬಿಜೆಪಿ ಉಸ್ತುವಾರಿಗಳು ಬದಲಾಗಬೇಕು ಎಂದು ಅವರು ಹೇಳಿದ್ದರು.
ಬಿಜೆಪಿ ತನ್ನನ್ನೂ ಕಡೆಗಣನೆ ಮಾಡುತ್ತಿದೆ ಎಂದು ಆರೋಪಿಸಿದ ಅವರು, “ನಾನು ಎಮ್ಎಲ್ಸಿ ಆಗಿದ್ದರೂ ಕಾರ್ಯಕ್ರಮಗಳಿಗೆ ನನ್ನ ಆಹ್ವಾನಿಸುತ್ತಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ನನ್ನ ಕರೆದಿಲ್ಲ. ಇದೊಂದೆ ಕಾರ್ಯಕ್ರಮ ಅಲ್ಲ. ನಾಲ್ಕೈದು ಕಾರ್ಯಕ್ರಮಕ್ಕೆ ಕಡೆಗಣಿಸಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.