ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲೇಬೇಕು ಅನ್ನೋ ಹಠಕ್ಕೆ ಬಿದ್ದಿರುವ ಭಾರತೀಯ ಜನತಾ ಪಾರ್ಟಿ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡು ತಂತ್ರಗಾರಿಕೆ ಮಾಡುತ್ತಿದೆ. ಹೈಕಮಾಂಡ್ ಸೂಚನೆಯಂತೆ ಕಳೆದ ಮಂಗಳವಾರ ಮಾಜಿ ಸಿಎಂ ಯಡಿಯೂರಪ್ಪ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಸಿದ್ದರು. ಯಾವುದೇ ಕಾರಣಕ್ಕೂ ಜಗದೀಶ್ ಶೆಟ್ಟರ್ ಗೆಲ್ಲಬಾರದು, ವೀರಶೈವ ಲಿಂಗಾಯತರು ಬೆಂಬಲ ನೀಡಬಾರದು ಎಂದು ಕರೆ ನೀಡಿದ್ದರೆ. ಜೊತೆಗೆ ಜಗದೀಶ್ ಶೆಟ್ಟರ್ ಸೋಲಿಸುವ ಹೊಣೆ ನನ್ನದು ಎಂದು ಯಡಿಯೂರಪ್ಪ ಬಹಿರಂಗವಾಗಿಯೇ ಹೇಳಿದ್ದರು. ಇನ್ನು ಜಗದೀಶ್ ಶೆಟ್ಟರ್ ಸೋಲುತ್ತಾರೆ ಎನ್ನುವುದನ್ನು ನನ್ನ ರಕ್ತದಲ್ಲಿ ಬೇಕಿದ್ದರೆ ಬರೆದುಕೊಡ್ತೇನೆ ಎಂದು ಬಹಿರಂಗವಾಗಿ ಮಾಧ್ಯಮಗಳ ಎದುರು ಚಾಲೆಂಜ್ ಹಾಕಿದ್ದರು. ಆದರೆ ಮಾಜಿ ಸಿಎಂ ಯಡಿಯೂರಪ್ಪ ಮಾತಿಗೆ ಪ್ರತ್ಯುತ್ತರವಾಗಿ ಯುವಕನೊಬ್ಬ ನೇರವಾಗಿ ರಕ್ತದಲ್ಲೇ ಪತ್ರ ಬರೆದು ತಿರುಗೇಟು ನೀಡಿದ್ದಾನೆ.

ಮಾಜಿ ಸಿಎಂಗೆ ರಕ್ತದಲ್ಲಿ ಪತ್ರ ಬರೆದ ಯುವಕ..!

ಮಾಜಿ ಸಿಎಂ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೋಲುತ್ತಾರೆ ಎನ್ನುವುದನ್ನು ರಕ್ತದಲ್ಲಿ ಬರೆದುಕೊಡ್ತೇನೆ ಎಂದಷ್ಟೇ ಹೇಳಿದ್ದರು. ಆದರೆ ಜಗದೀಶ್ ಶೆಟ್ಟರ್ ಗೆದ್ದೇ ಗೆಲ್ಲುತ್ತಾರೆ ಎನ್ನುವುದನ್ನು ರಕ್ತದಲ್ಲಿ ಪತ್ರ ಬರೆದು ತಿರುಗೇಟು ನೀಡಿದ್ದಾನೆ ಯುವಕ. ಜಗದೀಶ್ ಶೆಟ್ಟರ್ ಗೆಲ್ಲುವುದಿಲ್ಲ ಎಂದು ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದ ಮಾಜಿ ಸಿಎಂ ಯಡಿಯೂರಪ್ಪಗೆ ಲಿಂಗಾಯತ ಯುವ ಮುಖಂಡ ತಿರುಗೇಟು ನೀಡಿರುವುದು ಅಚ್ಚರಿ ಮೂಡಿಸಿದೆ. ಲಿಂಗಾಯತ ಸಮುದಾಯದ ಯುವಕ ಮಂಜುನಾಥ ಯಂಟ್ರುವಿ ಎಂಬಾತ ಜಗದೀಶ್ ಶೆಟ್ಟರ್ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಪತ್ರ ಬರೆದಿದ್ದಾನೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮಂಜುನಾಥ ಫೋಟೋಗಳು ಸಖತ್ ವೈರಲ್ ಆಗಿವೆ. ಇದೇ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ರಕ್ತಪತ್ರ ಬರೆದಿದ್ದಾನೆ ಯುವಕ ಮಂಜುನಾಥ್.
ಕೊನೆ ಘಟ್ಟದಲ್ಲಿ ಸಮುದಾಯಕ್ಕೂ ಬೇಸರ ತರುತ್ತಿರೋ ಯಡಿಯೂರಪ್ಪ..!?
ಮಾಜಿ ಸಿಎಂ ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಚುನಾವಣಾ ರಾಜಕೀಯ ಯಡಿಯೂರಪ್ಪಗೆ ಬೇಕಿಲ್ಲ. ಆದರೂ ಹೈಕಮಾಂಡ್ ತಾಳಕ್ಕೆ ತಕ್ಕಂತೆ ಕುಣಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದೀಗ ಲಿಂಗಾಯತ ಸಮುದಾಯದ ನಿರ್ಧಾರಕ್ಕೆ ವಿರುದ್ಧವಾಗಿ ಭಾರತೀಯ ಜನತಾ ಪಾರ್ಟಿ ನಿರ್ಧಾರಗಳನ್ನು ತೆಗೆದುಕೊಂಡರೂ ಪ್ರಶ್ನೆ ಮಾಡುವ ಶಕ್ತಿ ಉಳಿಸಿಕೊಳ್ಳದ ಯಡಿಯೂರಪ್ಪ, ದೆಹಲಿಯಿಂದ ಬರುವ ಸೂಚನೆಗಳನ್ನು ಮಾತ್ರ ಪಾಲಿಸುತ್ತಿದ್ದಾರೆ. ಇದೇ ಕಾರಣಕ್ಕೆ ಯಡಿಯೂರಪ್ಪಗೆ ಲಿಂಗಾಯತ ಸಮುದಾಯವೇ ತಿರುಗಿ ಬೀಳುತ್ತಾ ಅನ್ನೋ ಪ್ರಶ್ನೆಯೂ ಎದುರಾಗಿದೆ. ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಜಗದೀಶ್ ಶೆಟ್ಟರ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನನಗೆ ಟಿಕೆಟ್ ತಪ್ಪಿಸಿದ್ದು, ಆದರೆ ಯಡಿಯೂರಪ್ಪ ಹೆಗಲ ಮೇಲೆ ಬಂಧೂಕು ಇಟ್ಟು ನನ್ನನ್ನು ಗುರಿಯಾಗಿಸಲಾಗ್ತಿದೆ ಎಂದಿದ್ದರು. ಇನ್ನು ಸಂತೋಷ್ಗೆ ಶಕ್ತಿಯಿದ್ದರೆ ಅಖಾಡಕ್ಕೆ ಬರಲಿ ಎಂದು ಸವಾಲು ಕೂಡ ಹಾಕಿದ್ದರು. ಇದೀಗ ಯಡಿಯೂರಪ್ಪ ಗುರಿ ಕೂಡ ಮಿಸ್ ಆಗುವ ಮಾತುಗಳು ಕೇಳಿ ಬರುತ್ತಿವೆ.
ಶೆಟ್ಟರ್ ಗೆದ್ದರೆ ಯಡಿಯೂರಪ್ಪ ಶಕ್ತಿ ಹೀನತನ ಪ್ರದರ್ಶನ..
ಬಿಜೆಪಿ ಹೈಕಮಾಂಡ್ ಪಕ್ಷವನ್ನು ಯಡಿಯೂರಪ್ಪ ಹಿಡಿತದಿಂದ ಸಂಪೂರ್ಣವಾಗಿ ಬಿಡಿಸಿಕೊಂಡಿದೆ ಎನ್ನಬಹುದು. ಯಾವಾಗ ಯಡಿಯೂರಪ್ಪ ಅವರನ್ನು ಆಚೆಗೆ ಕಳುಹಿಸಿ ಟಿಕೆಟ್ ಆಯ್ಕೆ ವಿಚಾರ ಚರ್ಚೆ ಮಾಡಿದ್ದರೋ ಆಗಲೇ ಯಡಿಯೂರಪ್ಪ ಹೈಕಮಾಂಡ್ ಮಟ್ಟದಲ್ಲಿ ವೀಕ್ ಆಗಿದ್ದಾರೆ ಎನ್ನುವುದು ಬಯಲಾಗಿತ್ತು. ಮೊನ್ನೆ ಜಗದೀಶ್ ಶೆಟ್ಟರ್ ಕೂಡ ರಾಜ್ಯದಲ್ಲಿ ಬಿಜೆಪಿ ಪಕ್ಷ ಬಿ.ಎಲ್ ಸಂತೋಷ್, ಪ್ರಹ್ಲಾದ್ ಜೋಷಿ ಹಾಗೂ ಬಸವರಾಜ ಬೊಮ್ಮಾಯಿ ಕಪಿಮುಷ್ಠಿಯಲ್ಲಿದೆ ಎಂದಿದ್ದರು. ಪರಿಸ್ಥಿತಿ ಹೀಗಿದ್ದರು ಪಕ್ಷ ಯಡಿಯೂರಪ್ಪ ಅವರಿಗೆ ಮಣೆ ಹಾಕಿತುವುದು ಲಿಂಗಾಯತರ ಮತಗಳು ದೂರ ಆಗುವ ಭೀತಿಯಿಂದ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಇನ್ನು ಯಡಿಯೂರಪ್ಪ ಏನೇ ಅಬ್ಬರಿಸಿದರೂ ಮುಂದಿನ 12 ದಿನಗಳು ಮಾತ್ರ. ಆ ಬಳಿಕ ಯಡಿಯೂರಪ್ಪ ಕೂಡ ಮೂಲೆಗುಂಪಾಗುವುದು ನೂರಕ್ಕೆ ನೂರರಷ್ಟು ಸತ್ಯ. ಲಿಂಗಾಯತರು ತಮ್ಮ ಪ್ರಭಾವವನ್ಮು ಕಾಂಗ್ರೆಸ್ ಪಕ್ಷದಲ್ಲಿ ಕಂಡುಕೊಳ್ತಿದ್ದಾರೆ. ಶೆಟ್ಟರ್ ಹಾಗು ಸವದಿ ಗೆಲುವು ಯಡಿಯೂರಪ್ಪಗೆ ಮುಜುಗರ ಆದರೂ ಸಮುದಾಯಕ್ಕೆ ಅನಿವಾರ್ಯತೆ ಎದುರಾಗಿದೆ.
ಕೃಷ್ಣಮಣಿ