ಚಾಮರಾಜನಗರ : ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ . ಪತಿ, ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರವಾಗಿ ಚಾಮರಾಜನಗರದಲ್ಲಿ ಪತ್ನಿ ಶೈಲಜಾ ಸೋಮಣ್ಣ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಪತಿಯ ಪರವಾಗಿ ಪ್ರಚಾರ ಮಾಡುತ್ತಲೇ ಅಮಚವಾಡಿಯಲ್ಲಿ ಮಾತನಾಡಿದ ಶೈಲಜಾ, ವರುಣ ಹಾಗೂ ಚಾಮರಾಜನಗರ ಕ್ಷೇತ್ರಗಳೆರಡೂ ದೊಡ್ಡದಿರುವ ಹಿನ್ನೆಲೆಯಲ್ಲಿ ಚಾಮರಾಜನಗರದ ಪ್ರಚಾರದ ಜವಾಬ್ದಾರಿಯನ್ನು ನಾನು ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಪಕ್ಷದ ಮುಖಂಡರ ಜೊತೆಯಲ್ಲಿ ಎಲ್ಲಾ ಕಡೆ ಓಡಾಡುತ್ತಿದ್ದೇನೆ. ಗೋವಿಂದರಾಜನಗರ, ವಿಜಯನಗರದಲ್ಲಿ ಸೋಮಣ್ಣ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದೇ ಭರವಸೆಯನ್ನು ಇಲ್ಲಿನ ಜನರು ಇಟ್ಗೋಬೇಕು . ಗೆದ್ದ ಮೇಲೆ ನಾವು ಬೇರೆ ಪಕ್ಷದವರ ಹಾಗೆ ಮನೆಗೆ ಹೋಗಿ ಕುತ್ಕೋಳಲ್ಲ ಎಂದು ಹೇಳಿದರು.
ಎರಡೂ ಕ್ಷೇತ್ರದಲ್ಲಿ ಸೋಮಣ್ಣ ಸೋಲ್ತಾರೆ ಎಂಬ ಕಾಂಗ್ರೆಸ್ ವ್ಯಂಗ್ಯ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಅವರವರ ಅಭಿಪ್ರಾಯ ಅವರು ಹೇಳ್ತಾರೆ, ಇದು ಪ್ರಜಾಪ್ರಭುತ್ವ .ಮಾತಾಡೋರು ಮಾತಾಡ್ಕೊಳ್ತಾರೆ, ನಮಗೆ ನಮ್ಮ ಕಾರ್ಯಕರ್ತರು ಇದ್ದಾರೆ ಅವರೇ ನಮಗೆ ಶಕ್ತಿ ಎಂದು ಹೇಳಿದರು.