• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ದ್ವೇಷಾಸೂಯೆಯಗಳಿಲ್ಲದ ಸಮಾಜದತ್ತ ಯೋಚಿಸೋಣವೇ ? ದ್ವೇಷ ಅಸೂಯೆ ಹಿಂಸೆ ಶೂನ್ಯದಿಂದ ಸೃಷ್ಟಿಯಾಗುವುದಿಲ್ಲ ಸಮಾಜವೇ ವ್ಯವಸ್ಥಿತವಾಗಿ ಉತ್ಪಾದಿಸುತ್ತದೆ

ನಾ ದಿವಾಕರ by ನಾ ದಿವಾಕರ
April 8, 2023
in ಅಂಕಣ
0
ದ್ವೇಷಾಸೂಯೆಯಗಳಿಲ್ಲದ ಸಮಾಜದತ್ತ ಯೋಚಿಸೋಣವೇ ? ದ್ವೇಷ ಅಸೂಯೆ ಹಿಂಸೆ ಶೂನ್ಯದಿಂದ ಸೃಷ್ಟಿಯಾಗುವುದಿಲ್ಲ ಸಮಾಜವೇ ವ್ಯವಸ್ಥಿತವಾಗಿ ಉತ್ಪಾದಿಸುತ್ತದೆ
Share on WhatsAppShare on FacebookShare on Telegram

ADVERTISEMENT

ನಾ ದಿವಾಕರ

“ ಒಮ್ಮೆ ರಾಜಕಾರಣ ಮತ್ತು ಮತಧರ್ಮವನ್ನು ಪ್ರತ್ಯೇಕಿಸಿದರೆ, ರಾಜಕಾರಣಿಗಳು ಮತಧರ್ಮದ ಬಳಕೆ ಮಾಡುವುದನ್ನು ನಿಲ್ಲಿಸಿದರೆ, ದೇಶದಲ್ಲಿ ದ್ವೇಷ ಭಾಷಣಗಳೂ ಅಂತ್ಯ ಕಾಣುತ್ತವೆ !!! ” ಇದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ಇತ್ತೀಚಿನ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ. ದ್ವೇಷ ಭಾಷಣಗಳ ವಿರುದ್ಧ ಸರ್ಕಾರದ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿರುವ ಸುಪ್ರೀಂಕೋರ್ಟ್‌ ರಾಜಕೀಯ ನಾಯಕರು ಸಂಯಮದಿಂದ ವರ್ತಿಸಿದರೆ, ಮತಧರ್ಮಗಳನ್ನು ಬಳಸದೆ ಇದ್ದರೆ ಸಹಜವಾಗಿಯೇ ದ್ವೇಷದ ಮಾತುಗಳಿಗೂ ಕಡಿವಾಣ ಹಾಕಬಹುದು ಎಂದು ಮಾರ್ಮಿಕವಾಗಿ ಹೇಳಿದೆ. ನ್ಯಾಯಮೂರ್ತಿ ಬಿ. ವಿ. ನಾಗರತ್ನ ಮತ್ತು ಕೆ. ಎಮ್‌. ಜೋಸೆಫ್‌ ಅವರ ನ್ಯಾಯಪೀಠ ವ್ಯಕ್ತಪಡಿಸಿರುವ ಈ ಅಭಿಪ್ರಾಯವನ್ನು ಭಾರತದ ಬಹುಸಂಖ್ಯೆಯ ಜನರು ಅನುಮೋದಿಸುತ್ತಾರೆ. “ ಪ್ರತಿ ದಿನವೂ ತುಡುಗು ಕಾರ್ಯಕರ್ತರು (Fringe Elements)  ಸಾರ್ವಜನಿಕವಾಗಿ, ಸಾಮಾಜಿಕ ತಾಣಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಇತರರನ್ನು ನಿಂದಿಸುವಂತಹ ಭಾಷಣಗಳನ್ನು ಮಾಡುತ್ತಲೇ ಇರುತ್ತಾರೆ, ಇದು ನಿಲ್ಲಬೇಕೆಂದರೆ ರಾಜಕಾರಣಿಗಳು ಮತಧರ್ಮಗಳನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು  ” ಎಂದು ನ್ಯಾ ಕೆ.ಎಮ್.‌ ಜೋಸೆಫ್‌ ವಿಷಾದದಿಂದಲೇ ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಇತ್ತೀಚೆಗೆ ವಿವೇಕಯುತ ಸಾರ್ವಜನಿಕ ಸಂಕಥನಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ ಎಂದರೆ      “ ನಾವು ಎತ್ತ ಸಾಗುತ್ತಿದ್ದೇವೆ ?” ಎನ್ನುವುದು. ಈ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಪೀಠವೂ ಇದೇ ಪ್ರಶ್ನೆಯನ್ನು ದೇಶದ ನಾಗರಿಕರ ಮುಂದಿಟ್ಟಿದೆ. ಪಂಡಿತ್‌ ಜವಹರಲಾಲ್‌ ನೆಹರೂ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಮಂತಾದ ಉತ್ತಮ ವಾಕ್‌ಚತುರ ರಾಜಕಾರಣಿಗಳನ್ನು ಉದಾಹರಣೆಯಾಗಿ ನೀಡುತ್ತಾ ನ್ಯಾಯಮೂರ್ತಿಗಳು ದೇಶದ ಎಲ್ಲ ಮೂಲೆಗಳಿಂದಲೂ ತುಡುಗು ಕಾರ್ಯಕರ್ತರು ಆಡುವ ದ್ವೇಷದ ಮಾತುಗಳು ಕೇಳಿಬರುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ದ್ವೇಷ, ಅಸೂಯೆ, ಹಿಂಸೆ ಮತ್ತು ನಿಂದನೆಗಳ ನಡುವೆಯೇ ಭಾರತದ ರಾಜಕಾರಣವೂ ಸಹ ತನ್ನ ಮೂಲ ಸಹಜತೆಯನ್ನು ಕಳೆದುಕೊಂಡು ಬೆತ್ತಲಾಗುತ್ತಿದೆ. ದ್ವೇಷ ಭಾಷಣ ಅಥವಾ ಹಿಂಸೆಯ ಪ್ರಚೋದನೆಯನ್ನು ಸರ್ಕಾರಗಳು ಸಮರ್ಪಕವಾಗಿ ನಿಯಂತ್ರಿಸುತ್ತಿಲ್ಲ ಎಂಬ ಆಪಾದನೆಯ ನಡುವೆಯೇ, ನಾಗರಿಕರಾಗಿ ನಮ್ಮೊಳಗೇ ಉದ್ಭವಿಸಬೇಕಾದ ಪ್ರಶ್ನೆ ಎಂದರೆ “ ಸಭ್ಯತೆ ಸಂಯಮ ಮತ್ತು ಸೌಜನ್ಯಗಳ ಎಲ್ಲೆಗಳನ್ನು ಮೀರಿ ಕೇಳಿಬರುತ್ತಿರುವ ರಾಜಕೀಯ ನಾಯಕರ ಮಾತುಗಳನ್ನು ನಾವು ಹೇಗೆ/ಏಕೆ ಸಹಿಸಿಕೊಳ್ಳುತ್ತಿದ್ದೇವೆ ಅಥವಾ ಅರಗಿಸಿಕೊಳ್ಳುತ್ತಿದ್ದೇವೆ ?”

ಉತ್ತರಗಳ ಶೋಧದಲ್ಲಿ

ಈ ಪ್ರಶ್ನೆಗೆ ಉತ್ತರ ನಮ್ಮೊಳಗೇ ಇದೆ. ಅಧಿಕಾರ ರಾಜಕಾರಣದ ವಾರಸುದಾರರಿಗೆ ಇಂತಹ ಮಾತುಗಳು ಕೆಲವೊಮ್ಮೆ ಕಿರಿಕಿರಿ, ಮುಜುಗರ ಉಂಟುಮಾಡಿದರೂ, ಹೆಚ್ಚಿನ ಸಂದರ್ಭಗಳಲ್ಲಿ ಚುನಾವಣಾ ಲಾಭ ನಷ್ಟದ ಪರಿಧಿಯಲ್ಲಿ ಅಪ್ಯಾಯಮಾನವಾಗುತ್ತವೆ. ಸುಪ್ರೀಂಕೋರ್ಟ್‌ ಉಲ್ಲೇಖಿಸಿರುವ ಇಬ್ಬರು ಪ್ರಧಾನಮಂತ್ರಿಗಳ ಸಂಸತ್‌ ಕಲಾಪದ ಅಥವಾ ಸಾರ್ವಜನಿಕ ವಲಯದ ಭಾಷಣಗಳನ್ನು ಒಮ್ಮೆ ಓದಿದರೂ, ನಮ್ಮೊಳಗೆ ಸತ್ತಂತಿರುವ ನಾಗರಿಕ ಪ್ರಜ್ಞೆ ಪುನಃ ಪುಟಿದೇಳಲು ಸಾಧ್ಯ. ವಿರೋಧಿ ಮತ್ತು ಶತ್ರು ಈ ಎರಡು ಪದಗಳ ನಡುವೆ ಇರುವ ಅಪಾರ ಅಂತರವನ್ನು ಕುಬ್ಜಗೊಳಿಸುತ್ತಲೇ ಬಂದಿರುವ ಭಾರತದ ರಾಜಕಾರಣ ಇಂದು ಎರಡೂ ಪದಗಳನ್ನು ಬೆಸೆದು ಒಂದೇ ಅರ್ಥ ಬರುವಂತಹ ವಾತಾವರಣವನ್ನು ಸೃಷ್ಟಿಸಿದೆ. ದೇಶದ ಪ್ರತಿಷ್ಠಿತ ಪತ್ರಿಕೆಗಳಲ್ಲೂ ಸಹ ರಾಜಕೀಯ ವಿಶ್ಲೇಷಣೆಯ ಸಂದರ್ಭದಲ್ಲಿ ವಿರೋಧಿ ಪಾಳಯವನ್ನು ಶತ್ರು ಪಾಳಯ ಎಂದು ಕರೆಯುವುದು ಸಾಮಾನ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಮತ್ತು ವೈರುಧ್ಯಗಳು ಅತ್ಯವಶ್ಯವಾಗಿ ಇರಬೇಕಾದ್ದೇ ಆದರೆ ಶತ್ರುತ್ವ ಇರಬೇಕೇ  ?

ಈ ಪ್ರಶ್ನೆಗೆ ರಾಜಕೀಯ ಪಕ್ಷಗಳಿಂದ ಸಮರ್ಪಕವಾದ ಉತ್ತರ ದೊರೆಯುವುದು ಸಾಧ್ಯವಿಲ್ಲ. ಏಕೆಂದರೆ ವಿರೋಧಿಗಳನ್ನು ಶತ್ರುಗಳಂತೆ ಕಾಣುವ ಅಥವಾ ಮಿತ್ರರಂತೆ ಕಾಣಲು ಸಾಧ್ಯವೇ ಆಗದಂತಹ ಪರಿಸ್ಥಿತಿಯನ್ನು ಈ ದೇಶದ ಅಧಿಕಾರ ರಾಜಕಾರಣವೇ ಸೃಷ್ಟಿಸಿದೆ, ಪೋಷಿಸಿಕೊಂಡುಬಂದಿದೆ. ರಾಜಕೀಯ ಅಂಗಳದಲ್ಲಿ ತತ್ವ-ಸಿದ್ಧಾಂತಗಳು ಮಾರುಕಟ್ಟೆ ಆರ್ಥಿಕತೆಯ ಚೌಕಟ್ಟಿನೊಳಗೇ ಬಿಕರಿಯಾಗುವಂತಹ ಪರಿಸ್ಥಿತಿಯನ್ನು ಕಳೆದ ಮೂರು ದಶಕಗಳಿಂದ ಕಾಣುತ್ತಲೇ ಬಂದಿದ್ದೇವೆ. ಏಕೆಂದರೆ ಇಂದು ರಾಜಕಾರಣ ಎನ್ನುವುದು ಜನಸೇವೆ ಅಥವಾ ಜನಪರ ಕಾಳಜಿಯ ಅಂಗಳವಾಗಿ ಉಳಿದಿಲ್ಲ. ಬಂಡವಾಳದ ಹಾಗೂ ಬಂಡವಾಳಿಗರ, ಮಾರುಕಟ್ಟೆ ವರ್ತಕರ ಹಾಗೂ ದಲ್ಲಾಳಿಗಳ, ಲಾಭಕೋರ ಉದ್ದಿಮೆ ಹಾಗೂ ಉದ್ಯಮಿಗಳ ಅನುಕೂಲತೆಗಳಿಗೆ ಅನುಗುಣವಾಗಿ ರಾಜಕೀಯ ನಾಯಕತ್ವವೂ ರೂಪುಗೊಳ್ಳುತ್ತಿದೆ. ಚುನಾವಣೆ ಎಂದರೆ ಜನಸೇವೆಯ ಪ್ರವೇಶ ದ್ವಾರ ಎನ್ನುವ ಪರಿಸ್ಥಿತಿ ಎಂದೋ ಕೊನೆಗೊಂಡಿದ್ದು, ಇಂದು ವ್ಯಕ್ತಿಗತ ಔದ್ಯಮಿಕ ಸಾಮ್ರಾಜ್ಯ ವಿಸ್ತರಣೆಯ ಒಂದು ಸಾಧನವಾಗಿ ಪರಿಣಮಿಸಿದೆ. ಹಾಗಾಗಿಯೇ ಲಾಲ್‌ ಬಹದ್ದೂರ್‌ ಶಾಸ್ತ್ರಿ, ನಿಜಲಿಂಗಪ್ಪ, ದೇವರಾಜ ಅರಸು, ವಾಜಪೇಯಿ, ಜೆಪಿ, ಕೃಪಲಾನಿ ಅವರಂತಹ ನಾಯಕರು ನವ ಪೀಳಿಗೆಗೆ ವಸ್ತುಸಂಗ್ರಹಾಲಯದ ಪ್ರತಿಮೆಗಳಾಗಿ ಮಾತ್ರವೇ ಕಾಣುತ್ತಾರೆ.

ಹಾಗಾಗಿ ಈ ಪ್ರಶ್ನೆಗೆ ನಾಗರಿಕರಾಗಿ ನಾಗರಿಕರಾದ ನಾವು ಉತ್ತರ ಶೋಧಿಸಬೇಕಿದೆ. ಈ ದ್ವೇಷ , ಅಸೂಯೆ, ಮತ್ಸರ ಮತ್ತು ತತ್ಸಂಬಂಧಿ ಹಿಂಸೆ ಇಂತಹ ಅವಗುಣಗಳು ಎಲ್ಲಿ ಉತ್ಪಾದನೆಯಾಗುತ್ತವೆ ? ಇವಾವುದೂ ಹೊಸ ವಿದ್ಯಮಾನಗಳಲ್ಲ. ಶತಮಾನಗಳಿಂದಲೂ ಮಾನವ ಸಮಾಜವನ್ನು ಈ ಸಂಕೀರ್ಣತೆಗಳು ಕಾಡುತ್ತಲೇ ಇವೆ. ಮನುಷ್ಯನಿಗೆ ಸಹಮಾನವರನ್ನು ಅಥವಾ ಸಹಜೀವಿಗಳನ್ನು ಪ್ರೀತಿಸಲು ಬೇಕಿರುವುದು ಒಂದೇ ಗುಣ ಎಂದರೆ ಅಂತಃಕರಣ. ಆದರೆ ದ್ವೇಷಿಸಲು ನಾನಾ ಕಾರಣಗಳು ನೆರವಾಗುತ್ತವೆ. ಸಾಮಾನ್ಯ ಮನುಷ್ಯನೊಳಗಿರುವ ಅಂತಃಕರಣದ ಬೀಜಗಳನ್ನು ಹೊಸಕಿ ಹಾಕಿ, ದ್ವೇಷಾಸೂಯೆಗಳ ಬೀಜಗಳನ್ನು ಬಿತ್ತುವ ಹಲವೂ ಸಲಕರಣೆಗಳನ್ನು, ಮಾರ್ಗಗಳನ್ನು ಭಾರತೀಯ ಸಮಾಜ ತನ್ನೊಳಗೇ ಸೃಷ್ಟಿಸಿಕೊಂಡುಬಂದಿದೆ. ಜಾತಿಯ ಏಣಿ ಶ್ರೇಣಿ ಮತ್ತು ಇದರಿಂದ ಬೇರೂರುವ ಶ್ರೇಷ್ಠತೆಯ ಮೇಲರಿಮೆ-ಅಹಮಿಕೆ, ಮತಧರ್ಮಗಳು ಮತ್ತು ಇದರ ಸುತ್ತಲೂ ಬೇಲಿಯಂತೆ ಆವರಿಸುವ ಶ್ರೇಷ್ಠತೆ-ಪಾರಮ್ಯದ ಭಾವನೆ, ಶ್ರೀಮಂತಿಕೆ-ಸಂಪತ್ತು ಮತ್ತು ಇದು ಸೃಷ್ಟಿಸುವಂತಹ ಮೇಲು ಕೀಳಿನ ಕಂದರಗಳು ಮತ್ತು ಎಲ್ಲಕ್ಕಿಂತಲೂ ಢಾಳಾಗಿ ಕಾಣುವುದು ಬಂಡವಾಳಶಾಹಿ ವ್ಯವಸ್ಥೆಯು ಸಾಮಾನ್ಯರಲ್ಲೂ ಸೃಷ್ಟಿಸುವ- ಮತ್ತೊಬ್ಬರನ್ನು ತುಳಿದು ಮೇಲ್‌ ಚಲನೆ ಪಡೆಯುವ ಅಪಾರ ಹಂಬಲ, ಹಪಹಪಿ, ಲಾಲಸೆ ಇತ್ಯಾದಿ. ತಮ್ಮ ನಿತ್ಯ ಬದುಕಿನಲ್ಲಿ ಈ ಮೂರೂ ವಲಯಗಳಿಂದ ಪ್ರಭಾವಿತವಾಗುತ್ತಲೇ ಬೆಳೆಯುವ ಮಾನವ ಸಮಾಜದಲ್ಲಿ ಅಂತಃಕರಣ ಎನ್ನುವುದೂ ಸಹ ಕ್ರಮೇಣ ಸಾಪೇಕ್ಷತೆಯನ್ನು ಪಡೆಯುತ್ತಾ ʼ ನಾವು ʼ ಮತ್ತು ʼ ಅನ್ಯರು ʼ ಎಂಬ ವರ್ಗೀಕರಣಕ್ಕೆ ಬಲಿಯಾಗುತ್ತದೆ.

ಮೇಲಿನ ಪ್ರಶ್ನೆಗೆ ಉತ್ತರ ನಮಗೆ ಇಲ್ಲಿ ದೊರೆಯಲು ಸಾಧ್ಯ. ನಾವು 75  ವರ್ಷಗಳ ಗಣತಂತ್ರವನ್ನು ಪೂರೈಸಿದ್ದೇವೆ. ಅತ್ಯಾಧುನಿಕ ಶಿಕ್ಷಣ ಪಡೆದಿದ್ದೇವೆ. ನಾಗರಿಕತೆಯ ಎತ್ತರದ ಮೆಟ್ಟಿಲುಗಳನ್ನು ಏರುತ್ತಾ, ಶಿಖರ ತಲುಪಿದ್ದೇವೆ. ಸ್ವಾತಂತ್ರ್ಯ , ಸಮಾನತೆ ಮತ್ತು ಸೋದರತ್ವದ ಭಾವನೆಗಳ ನಡುವೆಯೇ ಇಂದಿಗೂ ಬದುಕುತ್ತಿದ್ದೇವೆ. ತಳಮಟ್ಟದ ಸಮಾಜದೊಳಗೆ ಇಣುಕಿ ನೋಡಿದರೆ ನಮಗೆ ಇವೆಲ್ಲವೂ ಸಾಕಾರಗೊಂಡ ಆದರ್ಶಗಳಂತೆಯೇ ಕಾಣುತ್ತದೆ. ತಮ್ಮ ಬದುಕು ಕಟ್ಟಿಕೊಳ್ಳಲು ಹಗಲಿರುಳೂ ಬೆವರು ಸುರಿಸುವ ದೇಶದ ಬಹುಸಂಖ್ಯೆಯ ಜನತೆಗೆ ಈ ಸಮನ್ವಯ-ಸೌಹಾರ್ದತೆಯ ಮನಸ್ಥಿತಿ ಸ್ವಾಭಾವಿಕವಾಗಿಯೇ ಬಂದಿರುತ್ತದೆ. ದುಡಿಯವ ವರ್ಗಗಳ ನಡುವೆ, ರೈತಾಪಿಯ ನಡುವೆ, ಕೃಷಿ ಕೂಲಿ ಕಾರ್ಮಿಕರ ನಡುವೆ, ವಲಸೆ ಕಾರ್ಮಿಕರ ನಡುವೆ ಜಾತಿ-ಮತಧರ್ಮಗಳ ಭಿನ್ನ ನೆಲೆಗಳನ್ನು, ಶ್ರದ್ಧಾ ನಂಬಿಕೆಗಳನ್ನು, ಆಚರಣೆಗಳನ್ನು ಕಾಣಬಹುದಾದರೂ, ʼ ತಮ್ಮದಲ್ಲದದುದನ್ನು ʼ ಅಥವಾ  ʼ ತನ್ನವರಲ್ಲದವರನ್ನು ʼ ʼ ಅನ್ಯ ʼ ಎಂದು ವರ್ಗೀಕರಿಸುವ ಕ್ಷುದ್ರ ಮನಸ್ಥಿತಿ ಸಾಮಾನ್ಯವಾಗಿ ಇರುವುದಿಲ್ಲ.

ಹಾಗಾಗಿ ಭಿನ್ನಮತ ಅಥವಾ ಭಿನ್ನ ನಿಲುವು ದ್ವೇಷದಲ್ಲಿ ಪರ್ಯವಸಾನ ಕಾಣುವ ಸಾಧ್ಯತೆಗಳು ಕಡಿಮೆ ಇರುತ್ತವೆ. ಜಾತಿ ವ್ಯವಸ್ಥೆಯಲ್ಲಿ ಬೇರೂರಿರುವ ತಾರತಮ್ಯ, ದಬ್ಬಾಳಿಕೆ ಮತ್ತು ಅಸಮಾನತೆಗಳನ್ನು ಶತಮಾನಗಳ ಕಾಲ ಭಾರತ ಸಹಿಸಿಕೊಂಡು ಬಂದಿರುವುದಕ್ಕೆ ಕಾರಣ ಎಂದರೆ ಅಪಮಾನಕ್ಕೊಳಗಾದ ಶೋಷಿತ ಜನಸಮುದಾಯಗಳಲ್ಲಿ ಮೂಲತಃ ಇರುವ ಪ್ರಜಾಸತ್ತಾತ್ಮಕ ಗುಣ ಮತ್ತು ಸಹಿಷ್ಣುತೆ. ಶತಮಾನಗಳ ಅಪಮಾನ ಮತ್ತು ಹಿಂಸೆಯನ್ನು ಅನುಭವಿಸಿಯೂ ಸಹ ಈ ದೇಶದ ಶೋಷಿತ ತಳಸಮುದಾಯಗಳು ಮೇಲ್ಜಾತಿಯ ವಿರುದ್ಧ ದ್ವೇಷಾಸೂಯೆಗಳನ್ನು ಬೆಳೆಸಿಕೊಳ್ಳದಿರುವುದೇ ಇದಕ್ಕೆ ಸಾಕ್ಷಿ.  ಈ ಸಹಿಷ್ಣುತೆಯನ್ನೇ ದೌರ್ಬಲ್ಯ ಎಂದು ಭಾವಿಸಿ ನಡೆದಿರುವ ಅಮಾನುಷ ಪ್ರಕರಣಗಳನ್ನೂ ಚರಿತ್ರೆಯಲ್ಲಿ ನಾವು ಕಾಣುತ್ತೇವೆ. ಆದಾಗ್ಯೂ ನೂರಾರು ಜಾತಿಗಳು, ಹತ್ತಾರು ಮತಧರ್ಮಗಳು , ಸಾವಿರಾರು ಭಾಷೆಗಳು ಮತ್ತು ವೈವಿಧ್ಯಮಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡೇ ಭಾರತೀಯ ಸಮಾಜ ತನ್ನ ಭೌಗೋಳಿಕ ಅಖಂಡತೆಯನ್ನೂ ಕಾಪಾಡಿಕೊಂಡುಬಂದಿದೆ. ಇದಕ್ಕೆ ಕಾರಣ ತಳಮಟ್ಟದ ಸಮಾಜದಲ್ಲಿ                               ʼ ಅನ್ಯ ʼ ರ ಪರಿಕಲ್ಪನೆ ಇರಲಿಲ್ಲ. ಮೇಲ್ಜಾತಿ ಮತ್ತು ಮೇಲ್ವರ್ಗದಲ್ಲಿ ಈ ಭಾವನೆ ಇತ್ತಾದರೂ, ನಿತ್ಯ ಬದುಕಿನ ಅನಿವಾರ್ಯತೆಗಳು ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಅವಕಾಶವನ್ನೇ ಕೊಡುವುದಿಲ್ಲ.

ʼ ಅನ್ಯʼ ಎಂಬುದರ ರಾಜಕೀಯ ಪರಿಭಾಷೆ

ಈ ʼ ಅನ್ಯ ʼರನ್ನು ಸೃಷ್ಟಿಸುವ ರಾಜಕಾರಣದ ಉಗಮವೇ ಭಾರತದಲ್ಲಿ ದ್ವೇಷ ಮತ್ತು ಅಸೂಯೆಗಳ ಚಿಂತನಾ ವಾಹಿನಿಗಳಿಗೂ ಕಾರಣವಾಗಿದೆ. ಅಧಿಕಾರ ರಾಜಕಾರಣದ ಪೀಠ ವ್ಯಾಮೋಹ ಮತ್ತು ಮಾರುಕಟ್ಟೆ ಆರ್ಥಿಕತೆಯ ಸಾಮ್ರಾಜ್ಯ ವಿಸ್ತರಣೆಯ ಮೋಹ ಈ ಚಿಂತನಾ ವಾಹಿನಿಗಳನ್ನು ವ್ಯವಸ್ಥಿತವಾಗಿ ಪೋಷಿಸಿಕೊಂಡು ಬಂದಿದೆ. ನಾಗರಿಕರಾಗಿ ನಮ್ಮ ಮುಂದಿರುವ ಸವಾಲು ಈ ರಾಜಕೀಯ ಭೂಮಿಕೆಗಳಲ್ಲ. ನಮ್ಮನ್ನು ಕಾಡಬೇಕಿರುವುದು ಈ ಮನುಕುಲ ವಿರೋಧಿ ಧೋರಣೆಗಳು ನಮ್ಮ ನಿತ್ಯ ಬದುಕಿನಲ್ಲಿ ನಿರ್ಣಾಯಕ ಪಾತ್ರ ವಹಿಸುವಂತಹ ಸಾಹಿತ್ಯ, ಕಲೆ, ರಂಗಭೂಮಿ ಮತ್ತು ಅಕ್ಷರ ಮಾಧ್ಯಮಗಳಲ್ಲಿ ಏಕೆ ವ್ಯಾಪಕವಾಗಿ ನೆಲೆ ಕಂಡುಕೊಂಡಿದೆ ಎಂಬ ಪ್ರಶ್ನೆ.  ಪ್ರಜಾಪ್ರಭುತ್ವವೇ ಆಗಲೀ ನಿರಂಕುಶಾಧಿಕಾರವೇ ಆಗಲೀ ಯಾವುದೇ ಸಮಾಜದಲ್ಲಿ ಅಧಿಕಾರ ರಾಜಕಾರಣದಿಂದಾಚೆಗೂ ಒಂದು ಸಾಮಾಜಿಕ-ಸಾಂಸ್ಕೃತಿಕ ಚಿಂತನಾ ವಾಹಿನಿಯು ಜನಮಾನಸದ ನಡುವೆ ಸದಾ ಜಾಗೃತಿಯನ್ನು ಮೂಡಿಸುವ ರೀತಿಯಲ್ಲಿ ಚಾಲ್ತಿಯಲ್ಲಿರುತ್ತವೆ. ಈ ಚಿಂತನಾವಾಹಿನಿಗಳನ್ನು ವಿಚಾರವಾದ, ವೈಚಾರಿಕತೆ, ಪ್ರಜ್ಞಾಪ್ರಾಧಾನ್ಯವಾದ (Intellectualism) ಎಂದು ಬಣ್ಣಿಸಲಾಗುತ್ತದೆ. ಇದನ್ನು ಪ್ರತಿನಿಧಿಸುವ ವ್ಯಕ್ತಿ-ಸಂಘ-ಸಂಸ್ಥೆಗಳನ್ನು ಬುದ್ಧಿಜೀವಿ ವರ್ಗ ಎಂದು ಗುರುತಿಸಲಾಗುತ್ತದೆ.  ಈ ವರ್ಗವೇ ಜಗತ್ತಿನ ಇತಿಹಾಸದ ಎಲ್ಲ ವಿಪ್ಲವಕಾರಿ ಬದಲಾವಣೆಗಳಿಗೂ, ಮನ್ವಂತರಗಳಿಗೂ, ಕ್ರಾಂತಿಕಾರಕ ಪರಿವರ್ತನೆಗಳಿಗೂ ಕಾರಣವಾಗಿದೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಡುವೆ ಭಾರತದಲ್ಲಿ ಈ ವಿಚಾರವಾದದ ನೆಲೆಗಳು ಲೇವಡಿಗೊಳಗಾಗಿವೆ, ಅಪಮಾನಕ್ಕೊಳಗಾಗಿವೆ ಹಾಗೆಯೇ ಸ್ವತಃ ದ್ವೇಷಕ್ಕೂ ಒಳಗಾಗಿವೆ. ಆದಾಗ್ಯೂ ಈ ಚಿಂತನಾ ವಾಹಿನಿಯ ತಂತುಗಳು ತಮ್ಮ ಜೀವಂತಿಕೆಯನ್ನು ಕೆಲವೇ  ಮನಸುಗಳಲ್ಲಿ ಕಾಪಾಡಿಕೊಂಡು ಬಂದಿವೆ. ಈ ಜೀವಂತಿಕೆಯನ್ನು ಶಾಶ್ವತಗೊಳಿಸುವ ಜವಾಬ್ದಾರಿ ಸಾಹಿತ್ಯ, ರಂಗಭೂಮಿ, ಕಲೆ ಮತ್ತು ಅಕ್ಷರ ಮಾಧ್ಯಮಗಳನ್ನು ಪ್ರತಿನಿಧಿಸುವ, ಇನ್ನೂ ಮನುಜ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಉಳಿಸಿಕೊಂಡಿರುವವರ ಮೇಲಿದೆ. ಈ ಕ್ಷೇತ್ರಗಳು ತಮ್ಮ ಸ್ವಾಯತ್ತತೆಯನ್ನು ಹಾಗೂ ಸ್ವಂತಿಕೆಯನ್ನು ಕಾಪಾಡಿಕೊಳ್ಳುವುದೇ ಅಲ್ಲದೆ, ಪ್ರಜಾಪ್ರಭುತ್ವದ ಮತ್ತೊಂದು ಪ್ರಬಲ ಧ್ವನಿಯಾಗಿ ಸಮಾಜದಲ್ಲಿ ಬೇರೂರುತ್ತಿರುವ ದ್ವೇಷಾಸೂಯೆಗಳ ಚಿಂತನಾ ವಾಹಿನಿಗಳನ್ನು ಹಿಮ್ಮೆಟ್ಟಿಸಬೇಕಿದೆ.

ವ್ಯಾಪಕವಾಗುತ್ತಿರುವ ಮುಸ್ಲಿಂ ದ್ವೇಷ, ಹಿಂದೂ ದ್ವೇಷ ಮತ್ತು ಜಾತಿ ದ್ವೇಷಗಳ ಧಾತು ಇರುವುದು               ʼ ಅನ್ಯರ ʼ ಪರಿಕಲ್ಪನೆಯಲ್ಲಿ ಮತ್ತು ಅದರ ಸುತ್ತ ಬೆಳೆಯುತ್ತಿರುವ ರಾಜಕಾರಣದಲ್ಲಿ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿಚಾರವಂತ ಮನಸುಗಳು, ವಿವೇಕಯುತ ಪ್ರಜ್ಞೆಯ ನೆಲೆಯಲ್ಲಿ ಸಮಾಜದಲ್ಲಿ ಲಿಂಗ ಸೂಕ್ಷ್ಮತೆ, ಮನುಜ ಸೂಕ್ಷ್ಮತೆ ಮತ್ತು ಜೀವ ಸೂಕ್ಷ್ಮತೆಯನ್ನು ಬೆಳೆಸಬೇಕಿದೆ. ಹಾಗಾದಲ್ಲಿ ಮಾತ್ರವೇ ಅಮಾಯಕ ಯುವಕರು ಹಂತಕರಾಗುವುದನ್ನು, ಹತ್ಯೆಗೊಳಗಾಗುವುದನ್ನು ಮತ್ತು ಪಾತಕೀಕರಣಕ್ಕೊಳಗಾಗುವುದನ್ನು ತಪ್ಪಿಸಲು ಸಾಧ್ಯ. ಅಧಿಕಾರ ರಾಜಕಾರಣದ ಪರಿಚಾರಕ ಶಕ್ತಿಯಾಗಿ ರೂಪುಗೊಳ್ಳುವ ಯುವ ಸಂಕುಲದ ನಡುವೆ ಮನುಜ ಸೂಕ್ಷ್ಮತೆಯನ್ನು ಮೂಡಿಸುವ ನಿಟ್ಟಿನಲ್ಲಿ ಸಂವೇದನಾಶೀಲ ಮನಸುಗಳು ಕಾರ್ಯಪ್ರವೃತ್ತರಾಗಬೇಕಿದೆ. ಸಾಹಿತ್ಯ, ಕಲೆ, ಅಕ್ಷರ ಮಾಧ್ಯಮಗಳೆಲ್ಲವೂ ಅಧಿಕಾರ ರಾಜಕಾರಣದ ನಿರ್ಬಂಧಗಳ ನಡುವೆ ನಿಷ್ಕ್ರಿಯವಾಗುತ್ತಿರುವ ಸಂದರ್ಭದಲ್ಲಿ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಸಹಜವಾಗಿ ಉದ್ಭವಿಸುತ್ತದೆ.

ಸುಪ್ರೀಂಕೋರ್ಟ್‌ ಉಲ್ಲೇಖಿಸಿರುವ ತುಡುಗು ಕಾರ್ಯಕರ್ತರೇ ಆಗಲೀ, ಪ್ರಸ್ತಾಪಿಸಿರುವ ದ್ವೇಷ ಭಾಷಣಗಳಾಗಲೀ, ಹಂತಕರು-ಅತ್ಯಾಚಾರಿಗಳು-ಕೋಮುದ್ವೇಷದ ಪರಿಚಾರಕರಾಗಲೀ, ಶೂನ್ಯದಲ್ಲಿ ಉದ್ಭವಿಸುವುದಿಲ್ಲ. ನಮ್ಮ ನಡುವೆಯೇ ಈ ಶಕ್ತಿಗಳು ಉಗಮಿಸಿ ವ್ಯವಸ್ಥಿತವಾಗಿ ಬೇರೂರುತ್ತವೆ. ಇದನ್ನು ಪೋಷಿಸುವ ರಾಜಕೀಯ ಶಕ್ತಿಗಳೂ ನಮ್ಮ ನಡುವೆಯೇ ಉದಯಿಸುತ್ತವೆ. ಸಾಮಾಜಿಕ ಪ್ರಜ್ಞೆ ಇರುವ, ಮಾನವ ಸಂವೇದನೆ ಇರುವ ಪ್ರತಿಯೊಬ್ಬ ಪ್ರಜೆಯೂ ದ್ವೇಷ-ಅಸೂಯೆ ಮತ್ತು ಹಿಂಸೆಯನ್ನು ಪ್ರಚೋದಿಸುವ ಚಿಂತನಾ ವಾಹಿನಿಗಳನ್ನು ಬಹಿಷ್ಕರಿಸುವ ಅಥವಾ ದೂರ ಇರಿಸುವ ಪ್ರತಿಜ್ಞಾವಿಧಿ ಸ್ವೀಕರಿಸಿದರೆ ಮಾತ್ರವೇ ಈ ಪಿಡುಗನ್ನು ಹೋಗಲಾಡಿಸಲು ಸಾಧ್ಯ.  ಈ ಸಾಮಾಜಿಕ ಜಾಗೃತಿ ಮೂಡಿಸುವ ಜವಾಬ್ದಾರಿ  ವಿಚಾರವಂತರ, ವಿವೇಕಯುತ ಸಮಾಜದ ಮೇಲಿದೆ. ಹೊರೆ ಹೊರಬೇಕಾಗಿರುವುದು ಯಾರು ? ನಾವೇ ಅಲ್ಲವೇ ?

Tags: amithshahBJPbsyediyurappacmbommaiCmIbrahimCongress PartyctraviDKShivakumarhddevegowdaHdKumaraswamyhdrevannahindumuslimJDSjdskarnatakaModinewsupdatenikilkumaraswamyPMModipolitical LeadersRAshoksiddaramaiahSupreme Court of Indiaಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

‘ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬೆಂಬಲಿಗರಿಂದ ಒತ್ತಡ’ : ಪರೋಕ್ಷವಾಗಿ ಮುಂದಿನ ನಡೆ ತಿಳಿಸಿದ ದತ್ತಾ

Next Post

ವರುಣದಲ್ಲಿ ಸಿದ್ದರಾಮಯ್ಯಗೆ ಗೆಲುವಿಗೆ ಸಹಾಯ ಮಾಡ್ತಿದ್ದಾರಾ ಬಿಎಸ್​ವೈ..? ಅನುಮಾನ ಮೂಡಿಸಿದ ಅಭ್ಯರ್ಥಿಗಳ ಆಯ್ಕೆ

Related Posts

Top Story

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
December 12, 2025
0

“ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಬೆಳಗಾವಿಯ ಸರ್ಕಿಟ್ ಹೌಸ್ ಹಾಗೂ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳ...

Read moreDetails

ಬಗರ್ ಹುಕುಂ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು-ಭೂ ಮಾಫಿಯಾ ವಿರುದ್ಧ ಕ್ರಿಮಿನಲ್ ಪ್ರಕರಣ: ಕೃಷ್ಣ ಬೈರೇಗೌಡ

December 12, 2025

ಅಧಿವೇಶನದ ಬಳಿಕ ಡಿಕೆಶಿ ಸಿಎಂ ಆಗೇ ಆಗ್ತಾರೆ…!! ‌ ಯತೀಂದ್ರಗೆ ಕೌಂಟರ್‌ ನೀಡಿದ ಇಕ್ಬಾಲ್‌ ಹುಸೇನ್.

December 12, 2025

ಹೆಲಿಕಾಪ್ಟರ್, ಸ್ಪೆಷಲ್ ಫ್ಲೈಟ್ ಖರೀದಿ ಮಾಡಲ್ಲ, ಬಾಡಿಗೆ ಪಡೆಯಲು ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

December 9, 2025

ಗಣ್ಯ ವ್ಯಕ್ತಿಗಳ ಪ್ರಯಾಣಕ್ಕೆ ಚಾಪರ್, ವಿಮಾನ ಬಾಡಿಗೆ ಕುರಿತ ಸಭೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್‌..

December 9, 2025
Next Post
ವರುಣದಲ್ಲಿ ಸಿದ್ದರಾಮಯ್ಯಗೆ ಗೆಲುವಿಗೆ ಸಹಾಯ ಮಾಡ್ತಿದ್ದಾರಾ ಬಿಎಸ್​ವೈ..? ಅನುಮಾನ ಮೂಡಿಸಿದ ಅಭ್ಯರ್ಥಿಗಳ ಆಯ್ಕೆ

ವರುಣದಲ್ಲಿ ಸಿದ್ದರಾಮಯ್ಯಗೆ ಗೆಲುವಿಗೆ ಸಹಾಯ ಮಾಡ್ತಿದ್ದಾರಾ ಬಿಎಸ್​ವೈ..? ಅನುಮಾನ ಮೂಡಿಸಿದ ಅಭ್ಯರ್ಥಿಗಳ ಆಯ್ಕೆ

Please login to join discussion

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada