ಭಾರತದಿಂದ ತೊಲಗಿಸಬೇಕಿರುವುದು ದ್ವೇಷಾಸೂಯೆ ದಬ್ಬಾಳಿಕೆ ಶೋಷಣೆ ಕ್ರೌರ್ಯವನ್ನು
ನಾ ದಿವಾಕರ
ಆಗಸ್ಟ್ 9 ಭಾರತದ ಸ್ವಾತಂತ್ರ್ಯಪೂರ್ವ ಇತಿಹಾಸದ ಒಂದು ಸ್ಮರಣೀಯ ದಿನ. ಮೊಟ್ಟಮೊದಲ ಬಾರಿ ಇಡೀ ದೇಶದ ಜನತೆ ಬ್ರಿಟೀಷ್ ವಸಾಹತು ಆಳ್ವಿಕೆಯನ್ನು ಕೊನೆಗೊಳಿಸಲು ಯುದ್ಧೋಪಾದಿಯಲ್ಲಿ ತಯಾರಾದ ದಿನ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವ್ಯಾಪಿಸಿದ ʼಕ್ವಿಟ್ ಇಂಡಿಯಾʼ ಕೂಗು ಬ್ರಿಟೀಷರ ಎದೆ ನಡುಗಿಸಿದ್ದೂ ಹೌದು. ಎರಡನೆ ಮಹಾಯುದ್ಧದ ಕರಾಳ ಛಾಯೆ ಇಡೀ ವಿಶ್ವವನ್ನು ವ್ಯಾಪಿಸುತ್ತಿರುವಂತೆಯೇ ಭಾರತದಲ್ಲಿ ವಸಾಹತು ಆಳ್ವಿಕೆಯನ್ನು ಕೊನೆಗೊಳಿಸುವ ಕೂಗು ಸಹ ಗಟ್ಟಿಯಾಗಲು ನೆರವಾದದ್ದು ಈ ಚಳುವಳಿಯ ಘೋಷವಾಕ್ಯ. ʼಕ್ವಿಟ್ ಇಂಡಿಯಾʼ ಚಳುವಳಿಯ ಪೂರ್ವಾಪರಗಳು, ರಾಜಕೀಯ ಕಾರಣಗಳು ಹಾಗೂ ಸೈದ್ಧಾಂತಿಕ ವೈರುಧ್ಯಗಳು ಏನೇ ಇದ್ದರೂ, ಭಾರತದ ಕಟ್ಟಕಡೆಯ ಪ್ರಜೆಯ ಮನಸ್ಸಿನಲ್ಲೂ ಬ್ರಿಟೀಷ್ ವಸಾಹತು ಕ್ರೌರ್ಯವನ್ನು ಕೊನೆಗೊಳಿಸಬೇಕು ಎಂಬ ಛಲವನ್ನು ಮೂಡಿಸಿದ್ದು ಈ ಸಂದರ್ಭದ ವಿಶೇಷ.

ಈ ಚಳುವಳಿಯನ್ನು ಹತ್ತಿಕ್ಕಲು ಬ್ರಿಟೀಷ್ ಸರ್ಕಾರ ಅನುಸರಿಸಿದ ಕ್ರೂರ ಮಾರ್ಗಗಳು ಇಂದಿಗೂ ಸಹ ಜಾಗತಿಕ ರಾಜಕಾರಣದಲ್ಲಿ ಮಾನ್ಯತೆ ಪಡೆದಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಭಾರತ ತನ್ನ ವಿಮೋಚನೆಗಾಗಿ ಬ್ರಿಟೀಷ್ ವಸಾಹತು ಆಳ್ವಿಕೆಗೆ “ ಕ್ವಿಟ್ ಇಂಡಿಯಾ ” ಎಂದು ಕರೆ ನೀಡಿತ್ತು. ಈಗ ಭಾರತ ತನ್ನ ಕಳೆದ 81 ವರ್ಷಗಳ ನಡಿಗೆಯಲ್ಲಿ ಸ್ವಾತಂತ್ರ್ಯವನ್ನು ಪಡೆದು ಒಂದು ಗಣತಂತ್ರವಾಗಿ ಸ್ಥಾಪನೆಯಾಗಿ ತನ್ನದೇ ಆದ ಸಂವಿಧಾನದೊಡನೆ ವಿಶ್ವಮಟ್ಟದಲ್ಲಿ ಅಗ್ರಮಾನ್ಯ ರಾಷ್ಟ್ರವಾಗಲು ದಾಪುಗಾಲು ಹಾಕುತ್ತಿದೆ. ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಭಾರತ ವಿಶ್ವದ ಒಂದು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುವ ಆಶಯದೊಂದಿಗೆ ಸಾಗುತ್ತಿದೆ. ಮಾರುಕಟ್ಟೆ, ಬಂಡವಾಳ ಹಾಗೂ ಮಾನವ ಸಂಪನ್ಮೂಲಗಳ ಪ್ರಾಬಲ್ಯದೊಂದಿಗೇ ಭೌಗೋಳಿಕವಾಗಿಯೂ ಸಹ ಭಾರತ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳುವ ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆಯುತ್ತಿದೆ.
ಸಂವಿಧಾನಬದ್ಧ ಸಮಾಜಕ್ಕಾಗಿ

ಇಂದು ಭಾರತ ತನ್ನದೇ ಆದ ಸಾಂವಿಧಾನಿಕ ಆಡಳಿತ ವ್ಯವಸ್ಥೆಯೊಂದಿಗೆ ಪ್ರಜಾಪ್ರಭುತ್ವದ ಅಡಿಪಾಯವನ್ನು ಗಟ್ಟಿಗೊಳಿಸಲು ಎಲ್ಲ ಆಯಾಮಗಳಿಂದಲೂ ಪ್ರಯತ್ನಿಸುತ್ತಿದೆ. ಗ್ರಾಂಥಿಕವಾಗಿ ಸಂವಿಧಾನವನ್ನು ಅನುಸರಿಸುತ್ತಿರುವ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಪ್ರಜಾಸತ್ತಾತ್ಮಕ ಆಶಯಗಳು ಗಟ್ಟಿಯಾಗುತ್ತಿವೆಯೇ ಎಂಬ ಪ್ರಶ್ನೆ ಎದುರಾದಾಗ ನಿರುತ್ತರರಾಗುತ್ತೇವೆ. ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಗಳು, ಪ್ರಜಾಪ್ರಾತಿನಿಧಿತ್ವದ ಸರ್ಕಾರಗಳ ರಚನೆ ಹಾಗೂ ಶಾಸನಸಭೆಗಳ ಸಾಂವಿಧಾನಿಕ ನಡಾವಳಿಗಳ ಹೊರತಾಗಿಯೂ ಭಾರತೀಯ ಸಮಾಜದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಶಿಥಿಲವಾಗುತ್ತಿರುವ ಅಪಾಯವನ್ನೂ ದೇಶ ಎದುರಿಸುತ್ತಿದೆ. ಪ್ರಜಾಪ್ರಭುತ್ವದ ಉಳಿವಿಗೆ ಅತ್ಯವಶ್ಯವಾದ ವಿರೋಧ-ಪ್ರತಿರೋಧದ ನೆಲೆಗಳನ್ನು, ಚರ್ಚೆ-ಸಂವಾದಗಳ ಬೌದ್ಧಿಕ ಚೌಕಟ್ಟುಗಳನ್ನು ನಿರಾಕರಿಸುವ ಒಂದು ರಾಜಕೀಯ ಪ್ರಜ್ಞೆ ಜನಸಾಮಾನ್ಯರಲ್ಲೂ ಆಳವಾಗಿ ಬೇರೂರುತ್ತಿರುವುದು ಪ್ರಜಾಸತ್ತೆಯ ಆಶಯಗಳಿಗೆ ಮಾರಕವಾಗಿ ಪರಿಣಮಿಸಲಿದೆ.
81 ವರ್ಷಗಳ ನಂತರ ಭಾರತ ಮತ್ತೊಮ್ಮೆ “ ಕ್ವಿಟ್ ಇಂಡಿಯಾ ” ಕರೆ ನೀಡುವುದೇ ಆದರೆ ಅದು ರಾಜಕೀಯ ಕರೆ ಆಗಿರದೆ ಸಾಂಸ್ಕೃತಿಕ-ಸಾಮಾಜಿಕ ಘೋಷವಾಕ್ಯ ಆಗಬೇಕಿದೆ. ಇಂದು ಏನೆಲ್ಲಾ ಭಾರತವನ್ನು ಬಿಟ್ಟು ತೊಲಗಬೇಕು ಎಂದು ಯೋಚಿಸುವಾಗ ನಮಗೆ ಢಾಳಾಗಿ ಗೋಚರಿಸುವುದು ಭೌತಿಕ ವಿಚಾರಗಳಲ್ಲ, ವ್ಯಕ್ತಿ-ಸಮಾಜ-ಸಮುದಾಯಗಳಲ್ಲ ಬದಲಾಗಿ ಸಾಮಾನ್ಯ ಜನರನ್ನೂ ಆವರಿಸುತ್ತಿರುವ ಆಲೋಚನಾ ವಿಧಾನಗಳು. 1942ರ ಕ್ವಿಟ್ ಇಂಡಿಯಾ ಕರೆಯ ಹಿಂದೆ ಇದ್ದ ಉದಾತ್ತ ಉದ್ದೇಶಗಳನ್ನು ಈಗ ಪುನರ್ ಮನನ ಮಾಡಿಕೊಳ್ಳಬೇಕಿದೆ. ಅಂದು ಭಾರತದ ಸಮಸ್ತ ಜನತೆ ತಮ್ಮ ತ್ಯಾಗ ಬಲಿದಾನಗಳ ಮೂಲಕ ಹೋರಾಡಿದ್ದು ವಸಾಹತುಶಾಹಿ ಕ್ರೌರ್ಯದ ವಿರುದ್ಧ, ಬ್ರಿಟೀಷ್ ಬಂಡವಾಳಶಾಹಿಯ ಶೋಷಣೆಯ ವಿರುದ್ಧ, ವಸಾಹತುಶಾಹಿಯ ದರ್ಪ ದಬ್ಬಾಳಿಕೆಯ ವಿರುದ್ಧ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಈ ವಿರೋಧಗಳ ಹಿಂದೆ ಇದ್ದ ಆಶಯ ಎಂದರೆ ಭಾರತವನ್ನು ಒಂದು ಸಮಾನತೆಯ, ಸಹಬಾಳ್ವೆಯ, ಸಮನ್ವಯದ, ಶಾಂತಿಪ್ರಿಯ ದೇಶವಾಗಿ ಕಟ್ಟುವುದಾಗಿತ್ತು.

75 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತ ಅಪಾರ ಪ್ರಗತಿ ಸಾಧಿಸಿದೆ. ಸಾರ್ವಜನಿಕ ಬದುಕಿನ ಎಲ್ಲ ವಲಯಗಳಲ್ಲೂ ಅಭಿವೃದ್ಧಿಯನ್ನು ದಾಖಲಿಸಿದೆ. ಲೂಟಿಕೋರ ಬ್ರಿಟೀಷ್ ವಸಾಹುತುಶಾಹಿಯ ದುರಾಡಳಿತದಿಂದ ಬರಿದಾಗಿದ್ದ ಭಾರತದ ಬೊಕ್ಕಸ ಇಂದು ವಿಶ್ವದ ಇತರ ದೇಶಗಳನ್ನು ಸಲಹುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಕ್ಕೆ ಕಾರಣವೆಂದರೆ ಸ್ವಾತಂತ್ರ್ಯೋತ್ತರ ಭಾರತದ ನಿರ್ಮಾಣಕ್ಕಾಗಿ ಬಳಸಿದ ಅಡಿಗಲ್ಲುಗಳು ಸಮಾನತೆ, ಸಹಬಾಳ್ವೆ, ಸಮನ್ವಯದ ಸಂದೇಶಗಳನ್ನು ಹೊತ್ತು ಸ್ಥಾಪನೆಯಾಗಿದ್ದವು. ಬ್ರಿಟೀಷ್ ವಸಾಹತುಶಾಹಿಯ ಒಡೆದು ಆಳುವ ನೀತಿ, ಊಳಿಗಮಾನ್ಯ ಶೋಷಣೆ ಹಾಗೂ ತಾರತಮ್ಯದ ನೀತಿಗಳನ್ನು ದಾಟಿ ಮುನ್ನಡೆದ ಭಾರತ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಂವಿಧಾನಿಕ ಆಶಯಗಳನ್ನು ಹೊತ್ತು ದೇಶದ ಕಟ್ಟಕಡೆಯ ವ್ಯಕ್ತಿಯನ್ನೂ ಒಳಗೊಳ್ಳುವಂತಹ ಒಂದು ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಯನ್ನು ಪೋಷಿಸಿಕೊಂಡು ಬಂದಿದೆ. ಈ ಬುನಾದಿಯ ಮೇಲೆ ಈ ದೇಶದ ಕೋಟ್ಯಂತರ ದುಡಿಯುವ ಜೀವಗಳ ತ್ಯಾಗ ಬಲಿದಾನದಿಂದ ಕಟ್ಟಲಾಗಿರುವ ಭಾರತ ಇಂದು ಬಲಿಷ್ಟ ರಾಷ್ಟ್ರವಾಗಿದೆ.
ಮುಂದುವರೆಯುತ್ತದೆ,,,,,