ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಬುಧವಾರ (ಆಗಸ್ಟ್ 9) ಎರಡನೇ ದಿನ ತಲುಪಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೊದಲ ಬಾರಿಗೆ ಮಣಿಪುರ ವಿಚಾರವಾಗಿ ಸಂಸತ್ತಿನಲ್ಲಿ ಮಾತನಾಡಿದ್ದಾರೆ.
ರಾಹುಲ್ ಅವರು ಮಣಿಪುರ ವಿಚಾರದಲ್ಲಿನ ನಿರ್ಲಕ್ಷ್ಯಕ್ಕಾಗಿ ಕೇಂದ್ರ ಹಾಗೂ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. “ಮಣಿಪುರದಲ್ಲಿ ಭಾರತ ಹತ್ಯೆಯಾಗಿದೆ. ಈಗ ಸತ್ಯವೆಂದರೆ ಮಣಿಪುರ ಎರಡು ಭಾಗಗಳಾಗಿ ವಿಭಜನೆಯಾಗಿದೆ. ಇಂದು ನಾನು ಅದಾನಿ ವಿಚಾರ ಪ್ರಸ್ತಾಪಿಸುವುದಿಲ್ಲ” ಎಂದು ಲೋಕಸಭೆಯಲ್ಲಿ ಹೇಳಿದ್ದಾರೆ.
“ಪ್ರಧಾನಿ ಮೋದಿ ಅವರಿಗೆ ಮಣಿಪುರ ಭಾರತದ ಭಾಗವಾಗಿಲ್ಲ. ಆದರೆ ನಾನು ನಡೆಸಿದ ಭಾರತ್ ಜೋಡೋ ಯಾತ್ರೆಯಿಂದ ದೇಶ ಅರ್ಥವಾಗಿದೆ. ಶಬ್ದಗಳು ಹೃದಯದಿಂದ ಬರಬೇಕು, ಹೃದಯವನ್ನು ಮುಟ್ಟುವಂತಿರಬೇಕು” ಏಂದು ರಾಹುಲ್ ಗಾಂಧಿ ರೂಮಿ ಅವರ ಹೇಳಿಕೆಯನ್ನು ಉಲ್ಲೇಖಿಸಿದರು.
ತಮ್ಮ ಭಾಷಣದ ವೇಳೆ ರಾಹುಲ್ ಭಾರತ್ ಜೋಡೋ ಯಾತ್ರೆಯ ಅನುಭವವನ್ನು ಹಂಚಿಕೊಂಡರು. “ಪ್ರಯಾಣ ಇನ್ನೂ ಮುಗಿದಿಲ್ಲ. ಎರಡನೇ ಯಾತ್ರೆಯು ಈ ವರ್ಷದ ದ್ವಿತೀಯಾರ್ಧದಿಂದ ಆರಂಭಿಸಲಾಗುವುದು” ಎಂದು ತಿಳಿಸಿದರು.“ನನಗೆ ಲೋಕಸಭಾ ಸದಸ್ಯನ ಸ್ಥಾನವನ್ನು ಮರುಸ್ಥಾಪಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇಂದು ಅದಾನಿ ವಿಚಾರವಾಗಿ ಮಾತನಾಡುವುದಿಲ್ಲ” ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.
ಬೆಳಿಗ್ಗೆ 11 ಗಂಟೆಗೆ ಆರಂಭವಾದ ಲೋಕಸಭೆ ಕಲಾಪ ಆಡಳಿತ ಹಾಗೂ ಪ್ರತಿಪಕ್ಷಗಳ ಗದ್ದಲದಿಂದ ಮಧ್ಯಾಹ್ನ 12ಕ್ಕೆ ಮುಂದೂಡಲ್ಪಟ್ಟಿತು. ಬಳಿಕ 12 ಗಂಟೆಗೆ ಆರಂಭವಾದ ಕಲಾಪದಲ್ಲಿ ರಾಹುಲ್ ಗಾಂಧಿ ಅವರು ಕಲಾಪಕ್ಕೆ ಆಗಮಿಸಿ ಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಧನ್ಯವಾದ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಸಂಸತ್ತು ಮುಂಗಾರು ಅಧಿವೇಶನ | ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ ; ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಅಮಾನತು
ಸಂಸದ ಸುಶೀಲ್ ಅವರ ಈ ನಡೆಯನ್ನು ಸಭಾಪತಿ ಜಗದೀಪ್ ಧನ್‌ಕರ್ ಅವರು ವಿರೋಧಿಸಿದರು. ಹಣದುಬ್ಬರ ಮತ್ತು ಟೊಮ್ಯಾಟೊ ತರಕಾರಿ ಬೆಲೆ ಹೆಚ್ಚಳ ಖಂಡಿಸಿ ಪ್ರತಿಪಕ್ಷ ನಾಯಕರು ಪ್ರತಿಭಟನೆ ನಡೆಸಿದರು. ತೀವ್ರ ಗದ್ದಲ ಹಿನ್ನೆಲೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಬೆಳಿಗ್ಗೆ ಆರಂಭವಾದ ಲೋಕಸಭೆ ಕಲಾಪದಲ್ಲಿ ಪ್ರಧಾನಿ ಓದಿ ಸೇರಿ ಇತರ ನಾಯಕರು 1942ರ ಕ್ವಿಟ್ ಇಂಡಿಯಾ ಚಳವಳಿಯ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ವೇಳೆ ಜಪಾನ್‌ನ ಹಿರೋಷಿಮಾ ಮತ್ತು ನಾಗಸಾಕಿಯ ಅಣುಬಾಂಬ್ ದಾಳಿಯ 78ನೇ ವರ್ಷಾಚರಣೆ ಸ್ಮರಣಾರ್ಥ ಸಂತ್ರಸ್ತರಿಗೆ ಸಭಾ ನಾಯಕರು ಗೌರವ ನಮನ ಸಲ್ಲಿಸಿದರು.
ಲೋಕಸಭೆಯಲ್ಲಿ ಬುಧವಾರ ಚರ್ಚೆಗೆ ಪಟ್ಟಿ ಮಾಡಲಾಗಿದ್ದ ವಿಚಾರಗಳ ಬಗ್ಗೆ ಕಾಂಗ್ರೆಸ್ ಸಂಸದರಾದ ಮಣಿಕಾಮ್ ಟ್ಯಾಗೋರ್ ಮತ್ತು ಮನೀಶ್ ತಿವಾರಿ ಮುಂಡೂಡಿಕೆ ನಿಲುವಳಿ ಮಂಡಿಸಿದರು. ರಾಜ್ಯಸಭೆಯಲ್ಲಿ ಬುಧವಾರ ಒಟ್ಟು ಆರು ಮಸೂದೆಗಳನ್ನು ಮಂಡಿಸಲಾಗುತ್ತಿದೆ.