ಕೇರಳದಲ್ಲಿ ಮತ್ತೊಮ್ಮೆ ಐದು ದಿನಗಳ ಕಾಲ ಧಾರಾಕಾರ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಸೂಚಿಸಿರುವಂತೆಯೇ ಕರ್ನಾಟಕ ಮುಖ್ಯಮಂತ್ರಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಈ ಮಧ್ಯೆ ಕರ್ನಾಟಕದಲ್ಲಿ ಬೆಳೆ ಹಾನಿ ಪ್ರಮಾಣ ಮಂಗಳವಾರ 3.8 ಲಕ್ಷದಿಂದ 5 ಲಕ್ಷ ಹೆಕ್ಟೇರ್ಗೆ ಏರಿಕೆಯಾಗಿದೆ. ಪರಿಷ್ಕೃತ ಡಾಟಾವು ಬಡ ರೈತರ ಸುಲಭ ಬೆಲೆಯಾದ ರಾಗಿಯು ಹೆಚ್ಚು ಹಾನಿಗೊಳಗಾಗಿದೆ ಎಂದು ತೋರಿಸಿದೆ . ಒಟ್ಟು 2.76 ಲಕ್ಷ ಹೆಕ್ಟೇರ್ ಪ್ರದೇಶದ ರಾಗಿ ಬೆಳೆ ಹಾನಿಯಾಗಿದೆ. ಇದು ಹಾನಿಗೊಳಗಾದ ಬೆಳೆಯ 55%.
ಅದರಲ್ಲೂ ರಬಿ ಋತುವಿನ ಮಳೆಯ ಮೇಲೆ ಅವಲಂಬಿತವಾಗಿರುವ ಕೋಲಾರ, ತುಮಕೂರು ಮತ್ತು ಚಿಕ್ಕಬಳ್ಳಾಪುರದ ರೈತರು ಹವಾಮಾನ ವೈಪರೀತ್ಯಗಳಿಂದ ಹೆಚ್ಚಿನ ಹಾನಿ ಅನುಭವಿಸಿದ್ದಾರೆ. ಖಾರಿಫ್ ಹಂಗಾಮಿನಲ್ಲಿ 6.88 ಲಕ್ಷ ಹೆಕ್ಟೇರ್ನಲ್ಲಿ ರಾಗಿ ಬಿತ್ತನೆಯಾಗಿದ್ದು, ಶೇ.40ರಷ್ಟು ಮಳೆ ಹಾನಿಯಾಗಿದೆ ಎಂದು ಅಂಕಿಅಂಶಗಳು ತೋರಿಸಿವೆ.
ದಕ್ಷಿಣ ಕರ್ನಾಟಕದ ಸುಮಾರು10 ಜಿಲ್ಲೆಗಳ ಬಡ ರೈತರ ಪ್ರಧಾನ ಬೆಳೆಯಾಗಿದೆ ರಾಗಿ. ದುಬಾರಿ ಬೀಜಗಳು ಮತ್ತು ರಸಗೊಬ್ಬರಗಳಲ್ಲಿ ಹೂಡಿಕೆ ಮಾಡಿರುವ ರೈತರು ಅಕಾಲಿಕ ಮಳೆ ಬಂದು ಈಗ ಸಂಕಷ್ಟಕ್ಕೆ ಈಡಾಗಿದ್ದಾರೆ. “70% ಭೂ ಹಿಡುವಳಿಗಳು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸೇರಿದ್ದು ಎಂದು ಪರಿಗಣಿಸಿ, 1.5 ಲಕ್ಷಕ್ಕೂ ಹೆಚ್ಚು ರೈತರು ಮಳೆಯಿಂದ ಹಾನಿಗೊಳಗಾಗಿದ್ದಾರೆ ಎಂದು ನಾವು ಅಂದಾಜಿಸಿದ್ದೇವೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
“ಡಿಸೆಂಬರ್ ಅಂತ್ಯದ ವೇಳೆಗೆ ರಾಗಿ ಬೆಳೆ ಕಟಾವು ಆಗಬೇಕಿತ್ತು. ಈಗ ಅಕಾಲಿಕ ಮಳೆ ಸುರಿದು ರೈತ ಪಟ್ಟ ಕಷ್ಟ ಮಣ್ಣುಪಾಲಾದಂತಾಗಿದೆ” ಎನ್ನುತ್ತಾರೆ ಗೌರಿಬಿದನೂರಿನ ರೈತ ಮಂಜುನಾಥ ಗೌಡ. ಕೃಷಿ ಇಲಾಖೆಯ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿರುವ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಮಾತನಾಡಿ, ಸರಕಾರಕ್ಕೆ ರಾಗಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಅರಿವಿದ್ದು “ಕರ್ನಾಟಕದ ದಕ್ಷಿಣ ಜಿಲ್ಲೆಗಳ ಕುಟುಂಬಗಳಿಗೆ 5 ಕೆಜಿ ಪಿಡಿಎಸ್ ಪಡಿತರ ಜೊತೆಗೆ 1 ಕೆಜಿ ರಾಗಿ ನೀಡಬೇಕು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಬಿಕ್ಕಟ್ಟನ್ನು ತಗ್ಗಿಸಲು ಸಹಾಯ ಮಾಡಲು ವಿಪತ್ತು ಪರಿಹಾರ ನಿಧಿಯ ಅಡಿಯಲ್ಲಿ ರೈತರಿಗೆ ಪರಿಹಾರ ಒದಗಿಸುವ ಬಗ್ಗೆಯೂ ಸರ್ಕಾರ ಕೆಲಸ ಮಾಡುತ್ತಿದೆ” ಎಂದು ಹೇಳಿದ್ದಾರೆ. “ಅಂತಹ ನಷ್ಟದ ಹೊರತಾಗಿಯೂ, ಒಟ್ಟು ಉತ್ಪಾದನೆಯ ಮೇಲೆ ಈ ಹಾನಿಯು ಪರಿಣಾಮ ಬೀರುವುದಿಲ್ಲ ಎಂದು ನಾವು ನಂಬುತ್ತೇವೆ. ಈ ವರ್ಷ 12 ಲಕ್ಷ ಟನ್ ರಾಗಿ ಉತ್ಪಾದನೆಯ ನಿರೀಕ್ಷೆಯಲ್ಲಿದ್ದೇವೆ. ಕಳೆದ ವರ್ಷ 4.75 ಲಕ್ಷ ಟನ್ ಸಂಗ್ರಹಿಸಿದ್ದೆವು. ನಾವು ಈ ವರ್ಷ ಪಡಿತರಕ್ಕಾಗಿ ರಾಗಿ ಸಂಗ್ರಹಣೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ” ಎಂದು ಅವರು ಹೇಳಿದ್ದಾರೆ. ಅಲ್ಲದೆ ರೈತರಿಗೆ ವಿಮಾ ಕಂಪನಿಗಳಿಂದ ಬೆಳೆ ನಷ್ಟದ ವಿಮಾ ಮೊತ್ತವನ್ನು ತ್ವರಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.