ಕೊರೋನಾ ಹೊಡೆತಕ್ಕೆ ದಿಕ್ಕಾಪಾಲಾಗಿದ್ದ ಹೋಟೆಲ್, ರೆಸ್ಟೋರೆಂಟ್, ಬಾರ್, ರೆಸಾರ್ಟ್ ಗಳಿಗೆ ಈಗ ಸರ್ಕಾರ ಸಿಹಿ ಸುದ್ದಿಯೊಂದು ಕೊಟ್ಟಿದೆ. ಕೊರೋನಾ ಲಾಕ್ ಡೌನ್ ನಿಂದ ಕಂಗಾಲಾಗಿ ಹೋಗಿದ್ದ ಈ ಕ್ಷೇತ್ರ ಕೋಟಿ ಕೋಟಿ ನಷ್ಟ ಎದುರಿಸಿತ್ತು. ಇದೀಗ ಕೊರೋನಾ ಕಾಲದ ಸಂಕಟ ಮರೆಯಲು ಸರ್ಕಾರದಿಂದಲೇ ಈ ಕ್ಷೇತ್ರಕ್ಕೆ ಬಂಪರ್ ರಿಯಾಯಿತಿ ಸಿಕ್ಕಿದೆ.
ಕೊರೋನಾ, ಲಾಕ್ ಡೌನ್ ನೆಪದಲ್ಲಿ 50% ಆಸ್ತಿ ತೆರಿಗೆಯಲ್ಲಿ ರಿಯಾಯಿತಿ.!!
ಕೊರೋನಾ ಹಿಂಡಿ ಹಿಪ್ಪೆ ಮಾಡಿ ಹಾಕಿದ ಪೈಕಿ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಉದ್ಯಮಿಗಳೂ ಕೂಡ ಒಬ್ರು. ಸತತವಾಗಿ ಮುಚ್ಚಲಾಗಿದ್ದ ಹಿನ್ನೆಲೆ ವ್ಯಾಪಾರವೆಲ್ಲ ಸಂಪೂರ್ಣ ಹಳ್ಳ ಹಿಡಿದು ಹೋಗಿತ್ತು. ಕೆಲವರು ಹೋಟೆಲ್, ರೆಸ್ಟೋರೆಂಟ್ ಗಳನ್ನೆಲ್ಲಾ ಮುಚ್ಚಿ ಕೋಟಿ ಕೋಟಿ ಲೆಕ್ಕದಲ್ಲಿ ಕೈ ಸುಟ್ಟುಕೊಂಡಿದ್ದರು. ಈ ಪೈಕಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಒಂದಿಡೀ ಬದುಕಿನ ಸಂಪಾದನೆಯನ್ನೆಲ್ಲಾ ಈ ಕ್ಷೇತ್ರಕ್ಕೆ ಸುರಿದು ಭರವಸೆಯ ದಿನಗಳನ್ನು ಎದುರು ನೋಡುತ್ತಿದ್ದರು. ಆದರೆ ಕೊರೋನಾ ದಾಳಿ ಎಲ್ಲವನ್ನೂ ಕೆಡಿಸಿ, ಹಾಳುಗೆಡವಿತ್ತು. ಆದರೆ ಇದೀಗ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಮುಂತಾದ ಕ್ಷೇತ್ರಕ್ಕೆ ಆಸ್ತಿ ತೆರಿಗೆಯಲ್ಲಿ 50%ರಷ್ಟು ರಿಯಾಯಿತಿ ನೀಡಿದೆ.
ಸರ್ಕಾರದ ನಿರ್ಧಾರವನ್ನು ಒಕ್ಕೊರಲಿನಿಂದ ಸ್ವಾಗತಿಸಿದ ಉದ್ಯಮಿಗಳು.!!
ಈ ಬಗ್ಗೆ ಆದೇಶ ಹೊರಡಿಸಿರುವ ಸರ್ಕಾರ ಆಸ್ತಿ ತೆರಿಗೆಯಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿಲಾಗುವುದು ಎಂದು ಘೋಷಿಸಿಕೊಂಡಿದೆ. 2021-22ನೇ ಹಣಕಾಸು ವರ್ಷದಲ್ಲಿ ವಿನಾಯಿತಿ ನೀಡಿ, ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್‌ಗಳಿಗೆ ಅನ್ವಯವಾಗುವಂತೆ ಆದೇಶಿಸಿದೆ. ಸರ್ಕಾರದ ಈ ನಡೆಯನ್ನು ಎಲ್ಲಾ ಉದ್ಯಮಿಗಳನ್ನು ಒಕ್ಕೊರಲಿನಿಂದ ಸ್ವಾಗತಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್, ಕೊರೋನಾ ಕಾಲದಲ್ಲಿ ಹೋಟೆಲ್ ಉದ್ಯಮ ನೆಲಕ್ಕಚ್ಚಿತ್ತು. ಹಲವರು ಉದ್ಯಮದಿಂದ ಬದುಕನ್ನೇ ಕಳೆದುಕೊಂಡಿದ್ದಾರೆ. ಈಗ ಸರ್ಕಾರ ತೆಗೆದುಕೊಂಡ ಈ ನಿರ್ಧಾರ ಸ್ವಾಗತಾರ್ಹ ಎಂದಿದ್ದಾರೆ.

ಆಸ್ತಿ ತೆರಿಗೆ ವಿನಾಯಿತಿಗಾಗಿ ಉದ್ಯಮಿಗಳಿಂದ ಅರ್ಜಿ ಆಹ್ವಾನ.!!
ಇನ್ನು ಸರ್ಕಾರ ಕೊಟ್ಟಿರುವ ಈ ರಿಯಾಯಿತಿ ಪಡೆದುಕೊಳ್ಳಬೇಕಾದರೆ ಉದ್ಯಮಿಗಳು ಸ್ವತಃ ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಅಗತ್ಯವಿದೆ. ಹೀಗೆ ಬರುವಂತ ಅರ್ಜಿಗಳನ್ನು ಪರಿಶೀಲನೆ ನಡೆಸಲು ಪ್ರತ್ಯೇಕವಾದ ಸಮಿತಿಯನ್ನೂ ರಚಿಸಲಿದೆ. ಈ ಸಮಿತಿಯಲ್ಲಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ, ಕಂದಾಯ ಇಲಾಖೆಯ ವಿಶೇಷ ಆಯುಕ್ತ, ಬೆಸ್ಕಾಂನ ಹಣಕಾಸು ವಿಭಾಗದ ನಿರ್ದೇಶಕ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ ಕಾರ್ಯದರ್ಶಿ ಸೇರಿದ ಸಮಿತಿಯನ್ನು ರಚಿಸಿ ಪರಿಶೀಲಿಸಲು ಆದೇಶಿಸಿದೆ. ಈ ಅರ್ಜಿಯನ್ನು ವರ್ಗವಾರು ಕಂದಾಯ ನಿರೀಕ್ಷಕರು ಪರಿಶೀಲಿಸಿ ಈ ಸಮಿತಿಯ ಮುಂದಿಡಬೇಕು. ಆದರೆ ರಿಯಾಯಿತಿ ನೀಡುವ ಅಧಿಕಾರವನ್ನು ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ನೀಡಲಾಗಿದೆ.
ಒಟ್ಟಾರೆ ಕೊರೋನಾ, ಲಾಕ್ ಡೌನ್ ನಿಂದಾಗಿ ಕಂಗೆಟ್ಟು ಹೋಗಿದ್ದ ಹೋಟೆಲ್, ರೆಸ್ಟೋರೆಂಟ್ ಹಾಗೂ ರೆಸಾರ್ಟ್ ಸೇರಿದಂತೆ ಇದೇ ಕ್ಷೇತ್ರಕ್ಕೆ ಇನ್ನಿತರ ಉದ್ಯಮಗಳು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದೆ. ಕೊರೋನಾ ಹೊಡೆತದಿಂದ ಚೇತರಿಸಿಕೊಳ್ಳಲು ಬೆಲೆ ಏರಿಕೆಯನ್ನೂ ಇತ್ತೀಚೆಗೆ ಹೋಟೆಲ್‌ಗಳಲ್ಲಿ ಮಾಡಲಾಗಿತ್ತು. ಇದೀಗ ಆಸ್ತಿ ತೆರಿಯಲ್ಲಿ ವಿನಾಯ್ತಿ ನೀಡಿರುವ ಹಿನ್ನೆಲೆ ಏರಿಕೆ ಮಾಡಲಾದ ದರವನ್ನು ಇಳಿಸುವ ಯೋಚನೆಯೂ ಹೋಟೆಲ್ ಉದ್ಯಮಿಗಳಿದೆ.