ಮುಂಬೈ ನಲ್ಲಿ ಸಾಕಷ್ಟು ಸದ್ದು ಮಾಡಿದ್ದ ನಟಿ ಲೈಲಾ ಖಾನ್ ಮರ್ಡರ್ ಮಿಸ್ಟರಿ ಕಡೆಗೂ ಬಯಲಾಗಿದೆ. ಮಲತಂದೆಯಿಂದಲೇ ಆಕೆ ಕೊಲೆ ಆಗಿರೋದು ದೃಢಪಟ್ಟಿದೆ.ಜಗ್ಗೇಶ್ ಅಭಿನಯದ ಕನ್ನಡದ ʼಮೇಕಪ್ʼ ಸೇರಿದಂತೆ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದ ಲೈಲಾ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈ ಸೆಷನ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣದಲ್ಲಿ ಮಲತಂದೆ ಪರ್ವೀನ್ ತಾಕ್ ದೋಷಿ ಎಂದು ಪ್ರಕಟಿಸಿದೆ. 2011ರ ಫೆಬ್ರವರಿಯಲ್ಲಿ ಮುಂಬೈಯ ಇಗ್ತಪುರಿಯಲ್ಲಿರುವ ಬಂಗಲೆಯಲ್ಲಿ ನಟಿ ಲೈಲಾ ಖಾನ್ ಹಾಗೂ ಆಕೆಯ ತಾಯಿ ಸೆಲೀನಾ ಹಾಗೂ ನಾಲ್ವರು ಒಡಹುಟ್ಟಿದವರು ಸೇರಿ ಒಟ್ಟು 6 ಮಂದಿಯನ್ನು ಪರ್ವೀನ್ ತಾಕ್ ಬರ್ಬರವಾಗಿ ಹತ್ಯೆ ಮಾಡಿದ್ದ
2011ರಲ್ಲಿ ಲೈಲಾ ಖಾನ್, ಆಕೆಯ ತಾಯಿ ಸೆಲೀನಾ ಮತ್ತು ಲೈಲಾ ಖಾನ್ ಒಡಹುಟ್ಟಿದವರಾದ ಆಮಿನಾ, ಅವಳಿಗಳಾದ ಝಾರ ಮತ್ತು ಇಮ್ರಾನ್, ಕಸಿನ್ ರೇಷ್ಮಾ ನಾಪತ್ತೆಯಾಗಿದ್ದಾರೆಂದು ಲೈಲಾ ಖಾನ್ ತಂದೆ ನಾದಿರ್ ಪಟೇಲ್ ಪೊಲೀಸರಿಗೆ ದೂರು ನೀಡಿದ್ದರು.
ಅದರಂತೆ ತನಿಖೆ ಆರಂಭವಾಗಿತ್ತು. ತನಿಖೆ ಭಾಗವಾಗಿ ನಾಸಿಕ್ ಬಳಿಯ ಇಗ್ತಪುರಿಯಲ್ಲಿರುವ ಕುಟುಂಬದ ತೋಟದ ಮನೆ ಪರಿಶೀಲಿಸಲು ಅಧಿಕಾರಿಗಳು ನಿರ್ಧರಿಸಿದ್ದರು. ಆ ಬಂಗಲೆ ಬೆಂಕಿಯಲ್ಲಿ ಭಾಗಶಃ ಹಾನಿಯಾಗಿತ್ತು. ಅಲ್ಲದೆ ಲೈಲಾ ಖಾನ್ ಅವರ ಮೊಬೈಲ್ ನಾಪತ್ತೆಯಾಗುವ ವೇಳೆ ನಾಸಿಕ್ನಲ್ಲೇ ಇತ್ತು ಎನ್ನುವುದು ಕಂಡು ಬಂದಿತ್ತು. ಇದೇ ವೇಳೆ ಲೈಲಾ ಖಾನ್ಗೆ ಸೇರಿದ ವಾಹನ ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾಗಿತ್ತು. ಪರ್ವೀನ್ ತಾಕ್ ಮೂಲತಃ ಕಾಶ್ಮೀರದವನು. ಹೀಗಾಗಿ ಪೊಲೀಸರಿಗೆ ಆತನ ಮೇಲೆ ಸಂಶಯ ಬಲವಾಗಿತ್ತು. ಬಳಿಕ ಆತನನ್ನು ಬಂಧಿಸಲಾಯಿತು. ಈ ವೇಳೆ ಆತ ಆಸ್ತಿ ವಿಚಾರದಲ್ಲಿ ಕೊಲೆ ಮಾಡಿರುವ ಸಂಗತಿ ಹೊರ ಬಿದ್ದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸೆಲೀನಾ ಅವರ ಇಬ್ಬರು ಮಾಜಿ ಪತಿಯರು ಸೇರಿದಂತೆ ಸುಮಾರು 40 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು.