ಕಳೆದ ವರ್ಷದ ಜನವರಿ 26ರಂದು ದೆಹಲಿಯಲ್ಲಿ ನಡೆದ ರೈತ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದಿದ್ದು ಅದರ ಹಿಂದೆ ಬೆಂಗಳೂರಿನ ವಿದ್ಯಾರ್ಥಿನಿ ದಿಶಾ ರವಿ ಇದ್ದರು ಎಂದು ಆರೋಪಿಸಿ ಫೆಬ್ರವರಿ 13ರಂದು ದೆಹಲಿ ಪೊಲೀಸರು ದೇಶದ್ರೋಹ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಿ ಬಂಧಿಸಿದ್ದರು. ಪೊಲೀಸರ ಈ ನಡೆಯ ವಿರುದ್ಧ ವಿಶ್ವಾದ್ಯಂತ ಪರಿಸರ ಕಾರ್ಯಕರ್ತರು, ಹೋರಾಟಗಾರರು ಧ್ವನಿ ಎತ್ತಿದ್ದರು. ಇದೀಗ ಆರೋಪ ಸಾಬೀತುಪಡಿಸಲು ಸಾಕ್ಷ್ಯಗಳಿಲ್ಲದೆ ದೆಹಲಿ ಪೊಲೀಸರು ಇಡೀ ಪ್ರಕರಣವನ್ನು ಮುಚ್ಚಲಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರ ಮತ್ತದರ ಸಚಿವಾಲಯಗಳು ಮೊದಲಿನಿಂದಲೂ ರೈತ ಪ್ರತಿಭಟನೆಗಳ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಇದೆ ಎಂದು ಪ್ರತಿಪಾದಿಸುತ್ತಾ ಬಂದಿದೆ. ಅಂತರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥಂಬರ್ಗ್ ಭಾರತದ ರೈತರನ್ನು ಬೆಂಬಲಿಸಿ ಹಂಚಿಕೊಂಡಿದ್ದ ಟೂಲ್ಕಿಟ್ನ್ನು ಸಂಪಾದಿಸಿದ್ದು ದಿಶಾ ಎನ್ನುವುದು ಪೊಲೀಸರ ಆರೋಪ. ದಿಶಾ ರವಿ ಅವರು ‘ಟೂಲ್ಕಿಟ್’ನ ‘ರೂಪಿಸುವಿಕೆ ಮತ್ತು ಪ್ರಚಾರ ಪಡಿಸುವಿಕೆ’ಯ ‘ಪ್ರಮುಖ ಪಿತೂರಿ’ ಎಂದು ಹೇಳಿದ್ದ ದೆಹಲಿ ಪೊಲೀಸರು ಇದೇ ಉದ್ದೇಶಕ್ಕಾಗಿ ಒಂದು ವಾಟ್ಸಪ್ ಗುಂಪನ್ನೂ ರಚಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಒಂಭತ್ತು ತಿಂಗಳುಗಳೇ ಕಳೆದರೂ ಪೊಲೀಸರಿಗೆ ತಮ್ಮ ಆರೋಪಗಳಿಗೆ ಪೂರಕವಾಗಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ.
ಆಕೆಯ ಬಂಧನವು ರೈತರ ಪ್ರತಿಭಟನೆ ಮತ್ತು ಅದನ್ನು ಬೆಂಬಲಿಸುವವರನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನವಾಗಿ ವ್ಯಾಪಕವಾಗಿ ಟೀಕಿಸಲ್ಪಟ್ಟಿತು ಮತ್ತು ಅಂತರರಾಷ್ಟ್ರೀಯ ಖಂಡನೆಗೆ ಒಳಗಾಗಿತ್ತು. ಆಕೆಗೆ ಜಾಮೀನು ನೀಡುವಾಗ, ದೆಹಲಿ ನ್ಯಾಯಾಲಯವು ದಿಶಾ ರವಿ ವಿರುದ್ಧ ಪೋಲೀಸ್ ಕ್ರಮವು ‘ದುರ್ಬಲ’ ಸಾಕ್ಷ್ಯವನ್ನು ಆಧರಿಸಿದೆ ಎಂದು ಹೇಳಿತ್ತು.
ಆದರೆ ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಲಿಸ್ತಾನ ಪರ ಸಂಘಟನೆಯಾದ ಪಿಎಫ್ಜೆ ಸದಸ್ಯರೊಂದಿಗೆ ಜನವರಿ 26ಕ್ಕೂ ಮೊದಲು ದಿಶಾ ಝೂಮ್ ಕರೆಯಲ್ಲಿ ಮಾತನಾಡಿದ್ದಾರೆ ಎನ್ನುವುದು ಪೊಲೀಸರ ಆರೋಪ. ಈ ಬಗ್ಗೆ ಝೂಮ್ ಗೆ ಸೈಬರ್ ಸೆಲ್ ಪತ್ರ ಬರೆದಿದ್ದರೂ ಅವರಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ತನಿಖಾಧಿಕಾರಿಗಳು ‘ಟೂಲ್ಕಿಟ್’ ಡಾಕ್ಯುಮೆಂಟ್ ಕುರಿತು ಮಾಹಿತಿಗಾಗಿ ಗೂಗಲ್ ಅನ್ನು ಸಂಪರ್ಕಿಸಿದಾಗಲೂ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿಯಾಗಿದೆ.
ತನಿಖಾಧಿಕಾರಿಗಳು ದಿಶಾ ರವಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ ನಂತರವೂ ಅವರನ್ನು ತನಿಖೆಗೊಳಪಡಿಸಿದ್ದಾರೆಂದು ತಿಳಿದು ಬಂದಿದೆ, ಆದರೆ ಜನವರಿ 26 ರ ಹಿಂಸಾಚಾರದ ಹಿಂದಿನ ‘ಅಪರಾಧ ಪಿತೂರಿ’ ಯಲ್ಲಿ ಆಕೆಯನ್ನು ನಿರ್ಣಾಯಕ ಆರೋಪಿ ಎಂದು ಗುರುತಿಸುವಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎನ್ನಲಾಗಿದೆ. ಪ್ರಸ್ತುತ ಸನ್ನಿವೇಶವನ್ನು ಪೊಲೀಸರು ಪ್ರಕರಣದ ಕುರಿತು ಚಾರ್ಜ್ ಶೀಟ್ ಸಲ್ಲಿಸದೆ ಇಡೀ ಪ್ರಕರಣವನ್ನು ಮುಕ್ತಾಯಗೊಳಿಸುವ ಯೋಚನೆಯಲ್ಲಿದ್ದಾರೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆ ವರದಿ ಮಾಡಿದೆ.
ದಿಶಾ ರವಿ ಅವರು ಒಟ್ಟು 10 ದಿನಗಳ ಕಾಲ ಪೊಲೀಸ್ ಮತ್ತು ನ್ಯಾಯಾಂಗ ಬಂಧನದಲ್ಲಿದ್ದರು. ಇದೇ ಸಮಯದಲ್ಲಿ ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು ಆಕೆಯ ಹವಾಮಾನ ಚಟುವಟಿಕೆಗಳನ್ನು ಅನುಮಾನಿಸಿ ‘ಟೂಲ್ಕಿಟ್’ ಪದವನ್ನು ಜನಪ್ರಿಯಗೊಳಿಸಿದ್ದವು. ಸಣ್ಣ ಗ ಸ @“ನನ್ನ ಬಂಧನದ ನಂತರ ಭಾರತದ ಮಾಧ್ಯಮಗಳು ನನ್ನ ಸ್ವಾಯತ್ತತೆಯನ್ನು ಉಲ್ಲಂಘಿಸಿರುವುದು ಆಶ್ಚರ್ಯವೇನಲ್ಲ. ನನ್ನ ಛಾಯಾಚಿತ್ರಗಳನ್ನು ಎಲ್ಲಾ ಸುದ್ದಿಗಳಲ್ಲಿ ಹರಡಲಾಯಿತು. ನನ್ನ ಹೋರಾಟಗಳನ್ನು ಅಪರಾಧ ಎಂದು ಘೋಷಿಸಲಾಯಿತು. ಆದರೆ ಇವೆಲ್ಲವೂ ಆದದ್ದು TRP ಗಳನ್ನು ಹುಡುಕುವವರ ಪರದೆಯ ಮೇಲೆ, ನ್ಯಾಯಾಲಯದಲ್ಲಿ ಅಲ್ಲ ” ಎಂದು ದಿಶಾ ರವಿ ಹೇಳಿದ್ದು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.